ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಜಾ ರಾಮಣ್ಣ

ವಿಕಿಸೋರ್ಸ್ದಿಂದ

ರಾಜಾ ರಾಮಣ್ಣ 1925- . ಭಾರತದ ಪ್ರಸಿದ್ದ ನ್ಯೂಕ್ಲಿಯರ್ ವಿಜ್ಞಾನಿ. 1974 ಮೇ 18 ರಂದು ರಾಜಸ್ಥಾನದ ಪೊಕ್ರನ್ ಮರುಭೂಮಿಯಲ್ಲಿ ಭಾರತ ನಡೆಸಿದ ನ್ಯೂಕ್ಲಿಯರ್ ಸಾಧನದ ನೆಲದಡಿಯ ಪರೀಕ್ಷಾರ್ಥ ಪ್ರಯೋಗದ ಸ್ಫೋಟನೆಯ ನೇತಾರರ ಪೈಕಿ ಒಬ್ಬರು. ಜನಸಿದ್ದು (1925 ಜನವರಿ 28) ಕರ್ನಾಟಕ ರಾಜ್ಯದ ತುಮಕೂರಿನಲ್ಲಿ.

  	ಮೈಸೂರಿನ ಗುಡ್‍ಷಫರ್ಡ್ ಕಾನ್ವೆಂಟ್, ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಮತ್ತು ಸೇಂಟ್ ಜೋಸೆಫ್ಸ್ ಕಾಲೇಜುಗಳಲ್ಲಿ ಇವರ ಮೊದಲ ವ್ಯಾಸಂಗ ನಡೆಯಿತು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎಸ್.ಸಿ. (ಆನರ್ಸ್) ಪದವಿಯನ್ನೂ (1945) ಮುಂದೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿಯನ್ನೂ (1948) ಪಡೆದರು.
   	1949 ರಲ್ಲಿ ಇವರು ಮುಂಬಯಿಯ ತಾತಾ ವಿಜ್ಞಾನ ಕೇಂದ್ರವನ್ನು ಸೇರಿ ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.  1953 ರಲ್ಲಿ ಇವರು ಟ್ರಾಂಬೆಯ ಪರಮಾಣು ಶಕ್ತಿ ಕೇಂದ್ರದ ನ್ಯೂಕ್ಲಿಯರ್ ಭೌತವಿಜ್ಞನ ವಿಭಾಗದ ಮುಖ್ಯಸ್ಥರಾಗಿ ನಿಯೋಜಿತರಾದರು.  1962 ರಲ್ಲಿ ಭೌತವಿಜ್ಞಾನದ ರೂವಾರಿ ಎನಿಸಿದ್ದ ಹೋಮಿ ಜಹಾಂಗೀರ್ ಭಾಭಾ ಅವರ ನಿಧನದ ಬಳಿಕ ಇವರು 1972 ರಲ್ಲಿ ಭಾಭಾ ಪರಮಾಣು ಸಂಶೋಧನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.  ಇದರ ಜೊತೆಗೆ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಮತ್ತು ಹೈದರಾಬಾದಿನ ಎಲೆಕ್ಟ್ರಾನಿಕ್ ಕಾರ್ಪೋರೇಷನ್ನಿನ ಅಧ್ಯಕ್ಷರೂ ಆಗಿದ್ದರು.  ಇವರು 1983-87 ರ ಅವಧಿಯಲ್ಲಿ ಭಾರತದ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರೂ ಆಗಿದ್ದರು.
   	ಟ್ರಾಂಬೆಯಲ್ಲಿ ಪರಮಾಣು ಶಕ್ತಿ ಕೇಂದ್ರ ಪ್ರಾರಂಭವಾದಾಗಿನಿಂದ ಅದರ ಎಲ್ಲ ಚಟುವಟಿಕೆಗಳಲ್ಲೂ ರಾಜಾ ರಾಮಣ್ಣ ಪಾಲುಗೊಂಡಿದ್ದಾರೆ.  ಅಪ್ಸರ, ಸೈರಸ್ ಮತ್ತು ಪೂರ್ಣಿಮ-ಈ ರಿಯಾಕ್ಟರುಗಳ ವಿನ್ಯಾಸ ಮತ್ತು ರಚನೆಯಲ್ಲಿ ಇವರು ವಹಿಸಿದ ಪಾತ್ರ ಮಹತ್ತ್ವಪೂರ್ಣವಾದ್ದು.  ವಾನ್ ಡಿ ಗ್ರಾಫ್ ವೇಗೋತ್ಕರ್ಷಕ, ಕಲ್ಕತ್ತದಲ್ಲಿಯ ವ್ಯತ್ಯಸ್ಥಶಕ್ತಿ ಸೈಕ್ಲೋಟ್ರಾನ್ ಮತ್ತು ಕಲ್ಪಾಕಮ್‍ನಲ್ಲಿಯ ಸಂಶೋಧನೆಯ ರಿಯಾಕ್ಟರುಗಳು ಇವರ ಅದಮ್ಯ ನಾಯಕತ್ವಕ್ಕೆ ಸಾಕ್ಷಿಗಳಾಗಿವೆ.
   	ನ್ಯೂಟ್ರಾನ್ ಉಷ್ಣೀಕರಣ, ಮಂದಶಕ್ತಿ ನ್ಯೂಕ್ಲಿಯ ಕ್ರಿಯೆಗಳು, ವಿದಳನ -ಹೀಗೆ ಹಲವು ಪ್ರಕಾರಗಳಲ್ಲಿ ರಾಮಣ್ಣ ಉನ್ನತ ಸಂಶೋಧನೆಗಳನ್ನು ನಡೆಸಿದ್ದಾರೆ.  ಇವರು ವಿಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿರುವ ಕೆಲಸಕ್ಕಾಗಿ ಇವರಿಗೆ ಅನೇಕ ಬಹುಮಾನಗಳೂ ಫೆಲೋಷಿಪ್‍ಗಳೂ ಸಂದಾಯವಾಗಿವೆ.  ಇವರು ಪ್ರಕಟಿಸಿರುವ ಪ್ರೌಢಲೇಖನಗಳ ಸಂಖ್ಯೆ ಎಂಬತ್ತನ್ನುಮೀರಿವೆ.  ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಇವರು ಪಾಲುಗೊಂಡಿದ್ದಾರೆ.  1963 ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಸುವರ್ಣ ಅಧಿವೇಶನದಲ್ಲಿ ಭೌತವಿಜ್ಞಾನ ವಿಭಾಗದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು.  ಅದೇ ವರ್ಷ ಇವರಿಗೆ ಪ್ರತಿಷ್ಠಿತ ಶಾಂತಿಸ್ವರೂಪ ಭಟ್ನಾಗರ್ ಪಾರಿತೋಷಕವೂ ಲಭಿಸಿತು.  ಇವರ ಸಂಘಟನಾ ಸಾಮಥ್ರ್ಯವನ್ನು ಗುರುತಿಸಿ ಭಾರತ ಸರ್ಕಾರ ಇವರನ್ನು ಭಾರತದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರನ್ನಾಗಿಯೂ ಡಿಫೆನ್ಸ್ ರಿಸರ್ಚ್ ಡೆವಲಪ್‍ಮೆಂಟ್ ಆರ್ಗನೈೀಷಸೆನ್ ಸಂಸ್ಥೆಯ ಮಹಾನಿರ್ದೇಶಕರನ್ನಾಗಿಯೂ ಬಳಿಕ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಯನ್ನಾಗಿಯೂ ನೇಮಿಸಿತು.  ವಿಜ್ಞಾನರಂಗದಲ್ಲಿ ಇವರು ಸಾಧಿಸಿರುವ ಹಿರಿಮೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ 1968 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
  	ರಾಜಾ ರಾಮಣ್ಣ ಭೌತವಿಜ್ಞಾನದಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದರೂ ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಪರಿಶ್ರಮವಿದೆ.  ಇವರು ಉತ್ತಮ ಪಿಯಾನೋ ವಾದಕರೂ ಹೌದು.  ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿ ತಳೆದಿದ್ದಾರೆ.
  1990 ರಲ್ಲಿ ವೃತ್ತಿನಿರತ ಮಹಾವಿಜ್ಞಾನದಲ್ಲಿ ಎನಿಸಿದ್ಧ ಇವರು ಭಾರತದ ರಕ್ಷಣಾ ಸಚಿವಾಲಯದಲ್ಲಿ ರಾಜ್ಯಸಚಿವರಾಗಿ ನೇಮಕಗೊಂಡರು.  1993 ರಲ್ಲಿ ಇವರಿಗೆ ವಿಶ್ವಭಾರತಿ ವಿಶ್ವವಿದ್ಯಾನಿಲಯ ದೇಶಿಕೋತ್ತಮ ಗೌರವ ಪದವಿಯನ್ನು ನೀಡಿ ಗೌರವಿಸಿದೆ.  ಭಾರತದ ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟೋರೇಟ್ ಪದವಿಗಳನ್ನು ಇತ್ತು ಗೌರವ ತೋರಿವೆ.  ಈಗ (1998) ಇವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.