ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಮಫಲ

ವಿಕಿಸೋರ್ಸ್ದಿಂದ

ರಾಮಫಲ ಅನೋನೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಹಣ್ಣಿನ ಮರ. ಸೀತಾಫಲ, ಹನುಮಾನ್ ಫಲ ಮುಂತಾದ ಸಸ್ಯಗಳಿಗೆ ಹತ್ತಿರದ ಸಂಬಂಧಿ. ಅನೋನಾ ರೆಟಕ್ಯುಲೇಟ ಇದರ ವೈಜ್ಞಾನಿಕ ಹೆಸರು. ಇಂಗ್ಲಿಷ್‍ನಲ್ಲಿ ಇದನ್ನು ಬುಲಕ್ಸ್ ಹಾರ್ಟ್ ಎಂದು ಕರೆಯುವುದಿದೆ.

ಇದು ಮೂಲತಃ ಉಷ್ಣವಲಯದ ಅಮೆರಿಕದ ಸಸ್ಯ. ಇದೊಂದು ಪರ್ಣಜಾತಿ ಅಥವಾ ಅರ್ಧಪರ್ಣಜಾತಿ ಮರ. ವೆಸ್ಟ್ ಇಂಡೀಸ್ ಮತ್ತು ಭಾರತಗಳಲ್ಲೂ ವ್ಯಾಪಕವಾಗಿ ಬೆಳೆಯುತ್ತದೆ. ಇದು 6-10 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಕಾಂಡ ಗಟ್ಟಿಯಾಗಿದೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಬಲಿತ ರೆಂಬೆಯ ಕಕ್ಷದಲ್ಲಿ 2-4 ಹೂಗಳು ಪುಟ್ಟಗೊಂಚಲಿನ ರೂಪದಲ್ಲಿ ಅರಳುವುವು. ಹೂ ಬಿಡುವ ಶ್ರಾಯ ಫೆಬ್ರವರಿ-ಮಾರ್ಚ್ ತಿಂಗಳುಗಳು. ಹಣ್ಣು, ಮಾಸಲು ಬಣ್ಣದ್ದು. ಹೆಚ್ಚು ಕಡಿಮೆ ಮನುಷ್ಯನ ಹೃದಯದ ಆಕಾರದಲ್ಲಿದೆ. ಹಣ್ಣಿನ ಒಳಗೆ ತಿರುಳು ಹೆಚ್ಚಾಗಿರುತ್ತದೆ. ರಾಮಫಲ ಒಂದು ಸಮೂಹ ಫಲ; ಹಲವಾರು ಬೆರಿಗಳು ಕೂಡಿಕೊಂಡು, ಮೃದುವಾದ ಹೂಗೊಂಚಲಿನ ಪೀಠದೊಂದಿಗೆ ಸೇರಿಕೊಂಡು ಮಾಂಸಲವಾದ ತಿರುಳಿನಿಂದ ಕೂಡಿದ ರಚನೆ; ತಿರುಳಿನಲ್ಲಿ ಸಕ್ಕರೆ, ಪಿಷ್ಠ ಅಧಿಕ ಪ್ರಮಾಣದಲ್ಲಿವೆ. ಹಣ್ಣಿನ ಮೇಲಿನ ಸಿಪ್ಪೆ ಬಲೆಬಲೆಯಂತೆ ಹುರುಪೆಯುಳ್ಳದ್ದಾಗಿರುತ್ತದೆ. ತಿರುಳಿನಲ್ಲಿ ಹುದುಗಿದಂತೆ ಅನೇಕ ಬೀಜಗಳಿರುತ್ತವೆ. ಹಣ್ಣು ಮಾಗಿದಾಗ ತಿನ್ನಬಹುದು. ರುಚಿ ಅಷ್ಟಾಗಿರದು.

ರಾಮಫಲವನ್ನು ಬೀಜದಿಂದ ಅಭಿವೃದ್ಧಿ ಮಾಡುತ್ತಾರೆ. ಇದು ಎಲ್ಲ ಬಗೆಯ ಮಣ್ಣುಗಳಲ್ಲೂ ಹುಲುಸಾಗಿ ಬೆಳೆಯಬಲ್ಲುದು. ಇದರ ತೊಗಟೆಯಲ್ಲಿ ಅನೋನೇನ್ ಎಂಬ ಆಲ್ಕಲಾಯ್ಡ್ ಇದೆ : ಇದು ತುಂಬ ಶಕ್ತಿಶಾಲಿ ಪ್ರತಿಬಂಧಕ (ಅಸ್ಟ್ರಿಂಜೆಂಟ್) ಎನಿಸಿದೆ. ಅನೇಕ ತರದ ಖಾಯಿಲೆಗಳನ್ನು ತಡೆಗಟ್ಟುವ ಸಾಮಥ್ರ್ಯ ಈ ಪ್ರತಿಬಂಧಕಕ್ಕೆ ಇದೆ. ಪಕ್ವವಾಗದ ಮತ್ತು ಒಣಗಿದ ಹಣ್ಣು ಆಮಶಂಕೆ ಬೇಧಿ ನಿವಾರಣೆಗೆ ಒಳ್ಳೆಯ ಮದ್ದು ಮತ್ತು ಜಂತುನಾಶಕವೂ ಹೌದು. ಬೀಜದ ಪೊಪ್ಪು ಬಹಳ ವಿಷಭರಿತವಾದುದು.

ರಾಮಫಲವನ್ನು ಉದ್ಯಾನಗಳಲ್ಲಿ, ಶಾಲೆ, ಕಛೇರಿ ಮತ್ತು ಬಂಗಲೆಯ ಆವರಣಗಳಲ್ಲಿ ಬೆಳೆಸುತ್ತಾರೆ. ರೈತಾಪಿಜನ ತೋಪುಗಳಲ್ಲಿ, ಹೊಲಗದ್ದೆಗಳ ಅಂಚಿನಲ್ಲಿ ಮತ್ತು ಮನೆಯ ಹಿತ್ತಲುಗಳಲ್ಲಿ ಬೆಳೆಸುತ್ತಾರೆ. ರಾಮಫಲದ ಇನ್ನೊಂದು ಹತ್ತಿರ ಸಂಬಂಧಿ ಮುಳ್ಳುರಾಮಫಲ.

 (ಎಸ್‍ಐ.ಎಚ್.; ಕೆ.ಬಿ.ಎಸ್.)