ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾರ್ಕ್ವಲ್

ವಿಕಿಸೋರ್ಸ್ದಿಂದ

ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ. ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾದ ಈ ಹೆಸರನ್ನು ಅನ್ವಯಿಸುವುದುಂಟು. ಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ. ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಫ್ರೌಢಾವಸ್ಥೆ ತಲುಪುತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮಥ್ರ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು.

ರಾರ್ಕ್ವಲ್‍ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ 9-20 ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾಶ್ರ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ 8 ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ. ಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ.

ಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ 10-12 ತಿಂಗಳು; 31/2 - 4 ವರ್ಷಗಳಲ್ಲಿ ಮರಿಗಳು ಫ್ರೌಢಾವಸ್ಥೆ ತಲುಪುತ್ತವೆ.

ಸಿಬಾಲ್ಡಸ್ ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು 30ಮೀ. ಉದ್ದವೂ 110 ಟನ್ ಭಾರವೂ ಇರುತ್ತದೆ.