ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಷ್ಟ್ರೀಯ ಪ್ರಯೋಗಾಲಯಗಳು

ವಿಕಿಸೋರ್ಸ್ದಿಂದ

ರಾಷ್ಟ್ರೀಯ ಪ್ರಯೋಗಾಲಯಗಳು - ಭಾರತ ಸರ್ಕಾರದ ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಲಿ ಔದ್ಯೋಗಿಕ ಪ್ರಗತಿಗೆ ಅಗತ್ಯವಾದ ಸಂಶೋಧನೆ ಮತ್ತು ಮಾದರಿಗಳ ನಿರ್ಮಾಣ ಕಾರ್ಯಗಳನ್ನು ನಡೆಸಲು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಹಲವಾರು ಪ್ರಯೋಗಾಲಯ ಗಳನ್ನೂ ಸಂಸ್ಥೆ ಮತ್ತು ವಸ್ತುಸಂಗ್ರಹಾಲಯಗಳನ್ನೂ ಸ್ಥಾಪಿಸಿದೆ. ಆ ಶ್ರೇಣಿಯ ಕೆಲವು ಸಂಸ್ಥೆಗಳು ಇವು: ಬೋಸ್ ಇನ್‍ಸ್ಟಿಟ್ಯೂಟ್, ಕೊಲ್ಕೊತ, ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಆರ್ಗನೈಜೇಷನ್, ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಬೆಂಗಳೂರು, ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ (ಐಎಸ್‍ಆರ್‍ಓ-ಇಸ್ರೊ) ಬೆಂಗಳೂರು, ಬೆಂಗಳೂರು, ಕೊಲ್ಕೊತ, ದೆಹಲಿಗಳಲ್ಲಿರುವ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್ (ಐಎಸ್‍ಐ), ಇಂದಿರಾಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ (ಐಜಿಸಿಎಆರ್), ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್‍ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‍ಸಿಎಎಸ್), ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ, ರೂರ್ಕಿ (ಎನ್‍ಐಎಚ್), ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಬೆಂಗಳೂರು (ಆರ್‍ಆರ್‍ಐ), ಸತ್ಯೇಂದ್ರನಾಥ್ ಬೋಸ್ ನ್ಯಾಷನಲ್ ಸೆಂಟರ್ ಫಾರ್ ಬೇಸಿಕ್ ಸೈನ್ಸಸ್, ಕೊಲ್ಕೊತ (ಎನ್‍ಸಿಬಿಎಸ್), ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಬೆಂಗಳೂರು (ಟಿಐಎಫ್‍ಆರ್), ಬಟಾನಿಕಲ್ ಸರ್ವೆ ಆಫ್ ಇಂಡಿಯ (ಬಿಎಸ್‍ಐ), ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಲಂಧರ್, ಜಿಯಾಲಾಜಿ ಕಲ್ ಸರ್ವೆ ಆಫ್ ಇಂಡಿಯ, ಇನ್‍ಫರ್ಮೇಷನ್ ಟೆಕ್ನಾಲಜಿ ಅಂಡ್ ಬಯೊಟೆಕ್ನಾಲಜಿ ಡಿಪಾರ್ಟ್‍ಮೆಂಟ್, ಕರ್ನಾಟಕ, ಮೋತಿಲಾಲ್ ನೆಹರೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಲಹಾಬಾದ್ (ಎಂಎನ್ ಎನ್‍ಐಟಿ), ಕರ್ನಾಟಕ, ಕಲ್ಲಿಕೋಟೆ, ದುರ್ಗಾಪುರಗಳಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೂರತ್ (ಎಸ್‍ವಿಎಸ್ ಐಟಿ), ವಿಶ್ವೇಶ್ವರಯ್ಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿ, ಮೈಸೂರು, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (ಐಎಎಸ್), ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್, (ಬಿಎಆರ್‍ಸಿ) ಮುಂಬಯಿ, ಕೌನ್ಸಿಲ್ ಆಫ್ ಸೈನ್ಸ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್), ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್), ಇಂಡಿಯನ್ ರೇರ್ ಅತ್ರ್ಸ್ ಲಿಮಿಟೆಡ್ (ಐಆರ್‍ಇಎಲ್), ಇನ್‍ಸ್ಟಿಟ್ಯೂಟ್ ಆಫ್ ಮ್ಯಾಥಮೆ ಟಿಕಲ್ ಸೈನ್ಸಸ್. ಇವುಗಳ ಪೈಕಿ ಕರ್ನಾಟಕದಲ್ಲಿರುವ ಎರಡು ಪ್ರಯೋ ಗಾಲಯಗಳು ಹಾಗೂ ಒಂದು ವಸ್ತುಸಂಗ್ರಹಾಲಯ ಇವುಗಳ ಕಾರ್ಯ ಚಟುವಟಿಕೆಗಳನ್ನು ವಿವರಿಸಲಾಗಿದೆ.

1. ರಾಷ್ಟ್ರೀಯ ವಾಯುಯಾನ ಸಂಶೋಧನ ಪ್ರಯೋಗಾಲಯ : ಇದು ಬೆಂಗಳೂರಿನಲ್ಲಿ 1959ರಲ್ಲಿ ಸ್ಥಾಪನೆಯಾಯಿತು. ಭಾರತದಲ್ಲಿ ಆಧುನಿಕ ರೀತಿಯ ವಿಮಾನ ತಯಾರಿಕೆಯ ಉದ್ಯೋಗ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮೂಲರೂಪದ ವಿಮಾನವಿನ್ಯಾಸಗಳಿಗೆ ನೆರವಾಗುವ ಸಂಶೋಧನೆ ಮತ್ತು ನಿರ್ಮಾಣ ಕಾರ್ಯಗಳನ್ನು ನಡೆಸುವುದು ಇದರ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಗಾಗಿ ಸಂಸ್ಥೆ ಆರು ವಿಭಾಗಗಳನ್ನು ಒಳಗೊಂಡಿದೆ. ವಾಯುಯಾನವಿಜ್ಞಾನ, ಮುನ್ನೂಕುವ ಶಕ್ತಿ, ಸಂರಚನಾ ವಿಜ್ಞಾನ, ಸಾಮಗ್ರಿ (ವಸ್ತು-ಮೆಟೀರಿಯಲ್) ವಿಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳನ್ನಾಗಿ ವಿಂಗಡಿಸಿಕೊಂಡು ಸಂಶೋಧನೆ ಮತ್ತು ಮಾದರಿ ನಿರ್ಮಾಣಗಳನ್ನು ನಡೆಸುತ್ತಿದೆ.

1967ರಲ್ಲಿ ಈ ಪ್ರಯೋಗಾಲಯ ನಾಲ್ಕಡಿ ತ್ರಿಸೂತ್ರಿ ವಾಯುಸುರಂಗದ (ಟ್ರೈಸೊನಿಕ್ ವಿಂಡ್ ಟನಲ್) ವಿನ್ಯಾಸ, ಕಟ್ಟಡ, ಕಾರ್ಯಾರಂಭ ನಿಷ್ಕøಷ್ಟತೆಯ ಕ್ರಮಾಂಕ ನಿರ್ಣಯ-ಈ ಸಂಕೀರ್ಣ ಯೋಜನೆಯನ್ನು ಹಾಕಿಕೊಂಡು ಅದರ ಸಂಶೋಧನೆ ಮತ್ತು ನಿರ್ಮಾಣ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿತು. ಈ ವಾಯುಸುರಂಗವನ್ನು ಈಚೆಗೆ ವಿಮಾನ ನಮೂನೆಗಳ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕ್ಷಿಪಣಿಗಳ ಮತ್ತು ಅಂತರಿಕ್ಷ ಉಡಾವಣೆಯ ವಾಹನಗಳ ಮಾದರಿಗಳ ಪರೀಕ್ಷೆಯಲ್ಲೂ ಬಳಕೆಗೆ ಬರುತ್ತಿದೆ. ಹಿಂದೆ ವಿದೇಶೀ ವಾಯುಸುರಂಗದ ಮೂಲಕ ನಡೆಸುತ್ತಿದ್ದ ಪ್ರತಿಯೊಂದು ಪರೀಕ್ಷಾ ಚಾಲನಕ್ಕೂ ಒಂದು ಸಹಸ್ರ ಡಾಲರುಗಳಷ್ಟು ಖರ್ಚಾಗುತ್ತಿತ್ತು. ಈಚೆಗೆ ಇಂಥ 3,000ಕ್ಕೂ ಹೆಚ್ಚು ಪರೀಕ್ಷಾ ಚಾಲನೆಗಳು (ಟೆಸ್ಟ್‍ರನ್) ನಡೆದಿದ್ದು ಕೋಟಿಗಟ್ಟಲೆ ವಿದೇಶೀ ಹಣದ ಉಳಿತಾಯವಾಗಿದೆ.

1966ರಲ್ಲಿ ಪ್ರಯೋಗಾಲಯ ದೇಶೀಯವಾಗಿ, ಶುದ್ಧ ಮತ್ತು ಆನ್ವಯಿಕ ವಾಯುಯಾನ ವಿಜ್ಞಾನ ಸಂಶೋಧನೆಗಳಿಗೆ ಬೇಕಾಗುವ ಒಂದಡಿ ತ್ರಿಸೂತ್ರಿ ವಾಯುಸುರಂಗವನ್ನು ನಿಯೋಜಿಸಿ, ನಿರ್ಮಿಸಿ ಬಳಸುತ್ತಿದೆ.

ಇದರ ಸಾಮಗ್ರಿ ವಿಜ್ಞಾನ ವಿಭಾಗ ನಿಷ್ಕøಷ್ಟತೆಯ ಲೋಹ ಛಾಪಾಯಂತ್ರಗಳ ರಚನೆಗೆ ಬೇಕಾಗುವ ಕಿಡಿ-ಸವೆತದ ಯಂತ್ರ ಮತ್ತು ಒತ್ತಡ-ಪಾತ್ರೆಯ ಉದ್ಯೋಗ ವಿಜ್ಞಾನಕ್ಕೆ ಬೇಕಾಗುವ ತಂತುಗಳ ಸುತ್ತುವ ಯಂತ್ರಗಳನ್ನು ನೂತನವಾಗಿ ರಚಿಸಿಕೊಟ್ಟಿದೆ. ವಿಮಾನ ಚಾಲಕಯಂತ್ರದ ಫಲಕಗಳನ್ನು (ಬ್ಲೇಡ್) ಶೀಘ್ರವಾಗಿ ತಯಾರಿಸಲು ನೆರವಾಗುವ ವಿದ್ಯುದ್ರಾಸಾಯನಿಕ ರೇಖಾಂಕನ ಯಂತ್ರದ ತಯಾರಿಕೆಯಲ್ಲಿ ಈಗ ತೊಡಗಿದೆ. ತಂತುಗಾಜಿನ (ಫೈಬರ್ ಗ್ಲಾಸ್) ಪ್ರೇರಕ ಗ್ರಾಹಕಗಳು, ಆಡುಬೆಣೆಯುಂಗುರಗಳು (ಪಿಸ್ಟನ್ ರಿಂಗ್), ಕ್ಷಿಪಣಿಯ ಗಾಧಮಾಪಕ ನಾಸಿಕಾಶಂಖುಗಳು (ಸೌಂಡಿಂಗ್ ರಾಕೆಟ್ ನೋಸ್ ಕೋನ್), ಉನ್ನತ ವಿದ್ಯುತ್ಪ್ರವಾಹದ ನಿರೋಧಕಗಳು (ಪೃಥಕ್ಕಾರಿ) (ಹೈವೋಲ್ಟೇಜ್ ಇನ್ಸುಲೇಟರ್) ಮುಂತಾದವನ್ನೂ ತಯಾರಿಸಿದೆ. ಭಾರತದ ಪವನಶಾಸ್ತ್ರ ಶಾಖೆಗೆ ಇಪ್ಪತ್ತು ಅಡಿ ವ್ಯಾಸದ ರೇಡೋಮುಗಳನ್ನು ನಿರ್ಮಿಸಿ ಕೊಡುತ್ತಿದೆ.

ವಿಮಾನಯಾನದಲ್ಲಿ ವಿಮಾನಭಾಗಗಳು ದುರ್ಬಲವಾಗುವ ಅಂಶ ಒಂದು ತೀವ್ರರೀತಿಯ ಸಮಸ್ಯೆ. ಪ್ರಯೋಗಾಲಯದ ಸಂರಚನಾ ವಿಭಾಗ ವಿಮಾನ ಭಾಗಗಳು ದುರ್ಬಲವಾಗುವ ಕಾಲವನ್ನು ನಿಷ್ಕರ್ಷಿಸುವ ಯಂತ್ರಗಳನ್ನು ತಯಾರಿಸಿರುವುದಲ್ಲದೆ, ವಿಮಾನದ ಒಟ್ಟಾರೆ ಆಯಸ್ಸನ್ನು ನಿರ್ಧರಿಸುವ ಪರೀಕ್ಷಾ ಯಂತ್ರಗಳನ್ನೂ ತಯಾರಿಸಿದೆ. ಈಚೆಗೆ ತೂರು ಹಾಯಿಕೆಯ ಉದ್ಯೋಗ ವಿಜ್ಞಾನದಲ್ಲಿ ಮಾಪನ ಶಿಲ್ಪಕ್ಕೆ ಬೇಕಾದ ಉಪಕರಣಗಳ ತಯಾರಿಕೆಯಲ್ಲಿ ತೊಡಗಿದೆ. ಒತ್ತಡದ ಮತ್ತು ಪಲ್ಲಟದ (ವಿಸ್ಥಾಪನ) ತೂರುಹಾಯ್ಕೆಯಂತ್ರಗಳು (ಟ್ರಾನ್ಸ್‍ಡ್ಯೂಸರ್), ಅದಕ್ಕೆ ಬೇಕಾಗುವ ಪ್ರವರ್ಧಕಗಳು (ಆ್ಯಂಫ್ಲಿಫೈಯರ್), ಕಂಪನಗ್ರಾಹಕಗಳು (ಪಿಕ್ ಅಪ್), ಕಂಪನಮಾಪಕಗಳು (ವೈಬ್ರೇಷನ್ ಮೀಟರ್), ಕಂಪನಗೊಳಿಸುವ ಯಂತ್ರಗಳು, ವಿಕೃತಿ ಮಾಪನ ಸೇತುವೆಗಳು (ಸ್ಟ್ರೈನ್ ಮೆಷರಿಂಗ್ ಬ್ರಿಡ್ಜ್), ತಂತಿಯ ಮತ್ತು ಗಣಗಳ ವಿಕೃತಿ ಮಾಪನ ಸಾಧನಗಳು (ವೈರ್ ಮತ್ತು ಫಾಯಿಲ್ ಮೆಷರಿಂಗ್ ಟೂಲ್ಸ್), ಉಷ್ಣ ಗ್ರಾಹಕಗಳು ಮುಂತಾದವುಗಳ ನಿರ್ಮಾಣದಲ್ಲೂ ತೊಡಗಿದೆ.

ಭಾರತದಲ್ಲಿ ಪ್ರಪ್ರಥಮವಾಗಿ ಎಲೆಕ್ಟ್ರಾನಿಕ್ ಡೆಸ್ಕ್‍ಕ್ಯಾಲ್ಕುಲೇಟರನ್ನು ತಯಾರಿಸುವಲ್ಲಿ ತನ್ನ ಸಂಶೋಧನ ಮತ್ತು ನಿರ್ಮಾಣಗಳಿಂದ ಪ್ರಯೋಗಾಲಯ ನೆರವಾಗಿದೆ. ವಾಯುಯಾನ ಸಂಶೋಧನೆಗಳಲ್ಲಿ ಅಂಕಿ ಅಂಶಗಳನ್ನು ಸಂಗ್ರಹಿಸಿ ರೂಢಿಸಿಕೊಳ್ಳಲು ಬೇಕಾದ ವಿಶಿಷ್ಟ ಗಣಕ ಯಂತ್ರಗಳನ್ನೂ ತಯಾರಿಸಿಕೊಂಡಿದೆ. ಕಾರ್ಖಾನೆ ಕಾರ್ಯಾಲಯಗಳ ಬಳಕೆಗೆ ಬೇಕಾಗುವ ಹತ್ತು ಲಕ್ಷ ರೂಪಾಯಿಗಳ ಬೆಲೆಯ ಗಣಕ ಯಂತ್ರಗಳನ್ನೂ ರಚಿಸಿ ಒದಗಿಸಿದೆ.

ಈ ಪ್ರಯೋಗಾಲಯ ತನ್ನ ಸಂಶೋಧನೆ ಮತ್ತು ನಿರ್ಮಾಣಗಳ ಮೂಲಕ ವಿದೇಶೀ ತಂತ್ರಜ್ಞಾನದ ಅನಿವಾರ್ಯವನ್ನು ನಿವಾರಿಸಿರುವು ದಲ್ಲದೆ ಆಮದು ಪ್ರತಿ ವಸ್ತುಗಳನ್ನು ತಯಾರಿಸಿ ತಾಂತ್ರಿಕ ಕ್ಷೇತ್ರದಲ್ಲಿ ಸ್ವಾವಲಂಬನೆಯ ಸ್ಥಾಪನೆಗೆ ನಿರ್ದಿಷ್ಟವಾಗಿ ನೆರವಾಗುತ್ತಿದೆ. (ನೋಡಿ- ರಾಷ್ಟ್ರೀಯ-ವೈಮಾಂತರಿಕ್ಷ-ಪ್ರಯೋಗಶಾಲೆಗಳು,-ಬೆಂಗಳೂರು)

2. ಕೇಂದ್ರೀಯ ಆಹಾರ ಸಂಶೋಧನಾಲಯ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್) : ಭಾರತ ಸರ್ಕಾರದ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಮಂಡಲಿಯ ಅಂಗವಾಗಿ 1950ರ ಅಕ್ಟೋಬರಿನಲ್ಲಿ ಮೈಸೂರು ನಗರದ ರಾಜಕುಮಾರಿ ಚೆಲುವಾಂಬಾ ಅರಮನೆಯ ವಿಶಾಲ ಮೈದಾನದಲ್ಲಿ ಆಹಾರ ರಂಗಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಕೈಗೊಳ್ಳಲು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಉತ್ಪಾದನೆಯ ಹಂತದಿಂದ ಸೇವಿಸುವವರೆಗಿನ ವಿವಿಧ ಮಟ್ಟಗಳಲ್ಲಿ ಆಹಾರವನ್ನು ಸಂರಕ್ಷಿಸಿ ಲಾಭದಾಯಕವಾಗಿ ಬಳಸುವ ವಿಧಾನಗಳಲ್ಲಿ ಸಂಶೋಧನೆ ನಡೆಸಿ ರಾಷ್ಟ್ರದ ಆಹಾರ ಸಮಸ್ಯೆಗೆ ಪರಿಹಾರ ದೊರಕಿಸುವ ಕಾರ್ಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಬಂದಿರುವ ಈ ಸಂಸ್ಥೆ ಚಿನ್ನದ ಹಬ್ಬವನ್ನು ಆಚರಿಸಿದೆ. ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ, ಎಣ್ಣೆ ಹಿಂಡಿಯಿಂದ ಪೌಷ್ಟಿಕಾಂಶಗಳ ತಯಾರಿಕೆ, ಸದ್ಯದಲ್ಲಿ ಬಳಕೆಯಲ್ಲಿರುವ ಆಹಾರ ಸಾಮಗ್ರಿಗಳಿಂದ ನೂತನ ಆಹಾರ ವಸ್ತುಗಳನ್ನು ತಯಾರಿಸಿ ಬಳಸುವ ವಿಧಾನಗಳ ಸಂಶೋಧನೆ, ಆಹಾರ ತಯಾರಿಕೆಯ ಉದ್ಯಮಗಳಿಗೆ ತಾಂತ್ರಿಕ ನೆರವು ನೀಡುವುದು, ಆಹಾರೋದ್ಯಮದ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಿಕೊಡುವುದು, ಆಹಾರ ಸಿದ್ಧವಸ್ತುಗಳ ಗುಣನಿಯಂತ್ರಣ ಮಾಡುವುದು ಇವೇ ಮುಂತಾದ ಕ್ಷೇತ್ರಗಳಲ್ಲಿ ಇದು ಸಲ್ಲಿಸಿರುವ ಸಾರ್ಥಕ ಸೇವೆಯ ಫಲವಾಗಿ ರಾಷ್ಟ್ರ ತನ್ನ ಆಹಾರ ಕ್ಷೇತ್ರದ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿದೆ.

ಆಹಾರ ವಸ್ತುಗಳ ಸಂರಕ್ಷಣೆ : ಭಾರತದಲ್ಲಿ ಕೀಟಾದಿಗಳ ಕಾಟದಿಂದಲೂ ಸಂಗ್ರಹಣೆಯ ನ್ಯೂನತೆಗಳಿಂದಲೂ ಗಣನೀಯ ಪ್ರಮಾಣದಲ್ಲಿ ಆಹಾರ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಿ ರಾಷ್ಟ್ರದ ಆಹಾರ ಸಮಸ್ಯೆಯ ಸಂಕಟವನ್ನು ಪರಿಹರಿಸಲು ಈ ಸಂಸ್ಥೆ ಕೀಟನಿಯಂತ್ರಣಕ್ಕೂ ಆಹಾರ ಸಂಗ್ರಹಣಕ್ಕೂ ಪರಿಣಾಮಕಾರಿ ವಿಧಾನಗಳನ್ನು ಕಂಡುಹಿಡಿದು ಪ್ರಚಾರಕ್ಕೆ ತಂದಿದೆ. ದೊಡ್ಡ ಪ್ರಮಾಣದಲ್ಲಿ ಉಗ್ರಾಣಗಳಲ್ಲಿ ಆಹಾರವನ್ನು ಸಂಗ್ರಹಿಸಿ ರಕ್ಷಿಸಿಡಲು ನೆರವಾಗುವಂತೆ ಇದು ಸಂಶೋಧಿಸಿರುವ ಪ್ರಧೂಪನ (ಹೊಗೆಯಾಡಿಸುವ) ವಿಧಾನ ತುಂಬ ಪರಿಣಾಮಕಾರಿಯೆನಿಸಿದೆ. ಗೃಹಬಳಕೆಗಾಗಿ ಸಣ್ಣಪ್ರಮಾಣದಲ್ಲಿ ರಕ್ಷಿಸಿಡಲು ನೆರವಾಗುವಂತೆ ಅಲ್ಪ ಬೆಲೆಯ ಪ್ರಧೂಪನ ಗುಳಿಗೆಗಳನ್ನು ತಯಾರಿಸಿದೆ. ಒಂದು ಗುಳಿಗೆಯಿಂದ ಒಂದು ಮೂಟೆ ಧಾನ್ಯ ಅಥವಾ ಬಿತ್ತನೆಯ ಬೀಜವನ್ನು ಸಂಸ್ಕರಿಸಿ, ಸಂರಕ್ಷಿಸಿ ಇಡಬಹುದು. ಕೀಟನಾಶಕವಾಗಿ ಇದು ತಯಾರಿಸಿರುವ ಲಿಂಡೇನ್ ಎಂಬ ರಾಸಾಯನಿಕ ವಸ್ತು ಈಗ ಎಲ್ಲೆಲ್ಲೂ ಬಳಕೆಗೆ ಬರುತ್ತಿದೆ. ಇದರ ತಯಾರಿಕೆಯಲ್ಲಿ ದೊರಕಿರುವ ಎಕ್ಸ್‍ಫ್ಯಾಕ್ಟರ್ ಎಂಬ ಉಪ-ಉತ್ಪನ್ನ ಗೆದ್ದಲು ಮುಂತಾದ ಕೀಟನಾಶಕ್ಕೆ ಪರಿಣಾಮಕಾರಿ ಯೆನಿಸಿದೆ. ಈಗ ತಮಿಳುನಾಡಿನ ಹಾಗೂ ಗುಜರಾತಿನ ಸಂಸ್ಥೆಗಳು ಲಿಂಡೇನನ್ನು ತಯಾರಿಸಿ ಮಾರಾಟಕ್ಕೆ ಒದಗಿಸುತ್ತಿವೆ. ಗಿರಣಿಗಳಲ್ಲಿ ಅಕ್ಕಿ ತಯಾರಿಕೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಹೊಸತಂತ್ರವನ್ನು ರೂಪಿಸಿದೆ. ಕುಸುಬಲು ಅಕ್ಕಿ ಮಾಡಲು ನಾಲ್ಕೈದು ದಿನಗಳ ತನಕ ಹಬೆಗೊಡ್ಡುವ ಬದಲು ಕೇವಲ ಕೆಲವೇ ಗಂಟೆಗಳಲ್ಲಿ ಈ ಕಾರ್ಯ ಸಾಧಿಸುವ ನೂತನ ವಿಧಾನವನ್ನು ಅನುಷ್ಠಾನಕ್ಕೆ ತಂದಿದೆ. ಹೊಸ ಅಕ್ಕಿಯನ್ನು ಬಳಸಿದಾಗ ಉಂಟಾಗುವ ಕೆಲವು ತೊಂದರೆಗಳನ್ನು ತಪ್ಪಿಸಿ ಹಬೆಯಾಡಿಸಿ ಹಳೆಯ ಅಕ್ಕಿಯ ಗುಣಧರ್ಮಗಳನ್ನು ಹೊಂದಿರುವಂತೆ ಮಾಡುವ ವಿಧಾನವನ್ನು ಕಂಡುಹಿಡಿದು ಗ್ರಾಹಕರಿಗೆ ಉಪಕಾರ ಮಾಡಿದೆ. ಅಕ್ಕಿತೌಡಿನಿಂದ ಖಾದ್ಯತೈಲ : ಭಾರತದಲ್ಲಿ ಬತ್ತದ ತೌಡು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಅದರ ಬಹುಭಾಗ ಇಂಧನದ ರೂಪದಲ್ಲಿ ವ್ಯಯವಾಗುತ್ತಿತ್ತು. ಆದರೆ ಅದರಲ್ಲಿ ಪುಷ್ಟಿಕರವಾದ ಖಾದ್ಯತೈಲ ಅಡಗಿದೆ. ಈ ಸಂಸ್ಥೆ ಅದರಿಂದ ಎಣ್ಣೆಯನ್ನು ತೆಗೆಯುವ ವಿಧಾನವನ್ನು ಕಂಡುಹಿಡಿದಿದೆ. ಈಚೆಗೆ ತೌಡಿನಿಂದ ಎಣ್ಣೆಯನ್ನು ಹಿಂಡುವ ಕಾರ್ಖಾನೆಗಳನ್ನು ಸ್ಥಾಪಿಸಲು ನೆರವು ನೀಡಿ ವ್ಯರ್ಥವಾಗುತ್ತಿದ್ದ ಲಕ್ಷಾಂತರ ಟನ್ ತೌಡು ಉಪಯುಕ್ತ ಆಹಾರವಾಗಲು ಸಹಾಯಮಾಡಿದೆ.

ತರಕಾರಿ, ಹಣ್ಣು ಮುಂತಾದವುಗಳ ಸಂಸ್ಕರಣ : ಭಾರತದಲ್ಲಿ ವಿವಿಧ ತರಕಾರಿಗಳು ಹೇರಳವಾಗಿ ಬೆಳೆದರೂ ಕೆಲವೇ ದಿನಗಳಲ್ಲಿ ಕೆಟ್ಟುಹೋಗು ತ್ತವೆ. ಒಂದು ನಿರ್ದಿಷ್ಟ ಕಾಲದಲ್ಲಿ ದೊರೆಯುವ ತರಕಾರಿಯನ್ನು ದೀರ್ಘಕಾಲ ಇಟ್ಟು ಬಳಸಲು ಅನುಕೂಲವಾಗುವಂತೆ ನೂತನ ಸಂಸ್ಕರಣ ವಿಧಾನಗಳನ್ನು ಈ ಸಂಸ್ಥೆ ರೂಪಿಸಿದೆ. ಹಾಗೆಯೇ ದೇಶದಲ್ಲಿ ಅನೇಕ ಜಾತಿಯ ಖಾದ್ಯ ಹಣ್ಣು ಹಂಪಲುಗಳು ವರ್ಷದ ವಿವಿಧ ಕಾಲದಲ್ಲಿ ದೊರಕುತ್ತವೆ. ಹಿಂದೆ ಅವನ್ನೆಲ್ಲ ಅದೇ ಕಾಲದಲ್ಲಿ ಉಪಯೋಗಿಸ ಬೇಕಾಗಿತ್ತು. ಈಚೆಗೆ ಅವನ್ನು ಹಲವಾರು ತಿಂಗಳು ರಕ್ಷಿಸಿಡುವ ವಿಧಾನಗಳನ್ನು ಕಂಡುಹಿಡಿದು ಅದಕ್ಕಾಗಿ ಭಾರಿ ಕಾರ್ಖಾನೆಗಳನ್ನು ಸ್ಥಾಪಿಸಲು ನೆರವು ನೀಡಿದೆ. ಬಾಳೆಹಣ್ಣು ಬೇಕಾದ ಹಾಗೆ ದೇಶದಲ್ಲಿ ಬೆಳೆದರೂ ರಫ್ತು ಮಾಡಲು ಬರುತ್ತಿರಲಿಲ್ಲ. ಸಂಶೋಧನಾಲಯ ಅದಕ್ಕೆ ಬೂಷ್ಟು ಹಿಡಿದು ಕೆಡದಂಥ ರೀತಿಯಲ್ಲಿ ಸಂರಕ್ಷಿಸಿ ರಫ್ತುಮಾಡಲು ನೆರವಾಗುವಂಥ ಬೂಷ್ಟು ನಿರೋಧಕಗಳನ್ನೂ ತಯಾರಿಸಿದೆ. ಅದರಿಂದ ಈಗ ಬಾಳೆಹಣ್ಣು ಅನ್ಯದೇಶಗಳಿಗೆ ರಫ್ತಾಗುತ್ತಿದ್ದು ವಿದೇಶೀ ವಿನಿಮಯ ಗಳಿಸುತ್ತಿದೆ. ಕೆಲವು ಹಣ್ಣುಗಳಿಂದ ಪಾನೀಯಗಳನ್ನೂ ಪುಡಿಮಿಠಾಯಿಯನ್ನೂ ತಯಾರಿಸುವ ವಿಧಾನವನ್ನು ಕಾರ್ಖಾನೆಗಳಿಗೆ ರೂಪಿಸಿಕೊಟ್ಟಿದೆ. ಪಪಾಯಿ ಹಣ್ಣಿನಿಂದ ಪೆಕ್ಟಿನ್ ಮತ್ತು ಪಪಾಯಿನ್ ಎಂಬ ವಸ್ತುಗಳನ್ನೂ ನಿಂಬೆಹಣ್ಣಿನಿಂದ ಪೆಕ್ವಿನ, ನಿಂಬೆಎಣ್ಣೆ, ಕ್ಯಾಲ್ಸಿಯಂ ಸಿಟ್ರೇಟ್ ಮುಂತಾದ ಉಪಯುಕ್ತ ಆಹಾರಾಂಶಗಳನ್ನು ತಯಾರಿಸಿದೆ. ಅದನ್ನು ಮಹಾರಾಷ್ಟ್ರದ ಕಾರ್ಖಾನೆ ಇಂದು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ತಂದಿದೆ. ಅದು ಕಂಡುಹಿಡಿದ ಹುಣಿಸೆಹಣ್ಣಿನ ರಸವೂ ಈಗ ಮಾರಾಟಕ್ಕೆ ಬಂದಿದೆ.

ಭಾರತದಲ್ಲಿ ಬೆಳೆಯುವ ಹಲವಾರು ಸಂಬಾರ ಪದಾರ್ಥಗಳಿಗೆ ಅನ್ಯದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದರೂ ಅಲ್ಲಿನವರ ರುಚಿಗೊಪ್ಪು ವಂತೆ ಸಂಸ್ಕರಿಸುವ ವಿಧಾನ ಪ್ರಚಾರದಲ್ಲಿರಲಿಲ್ಲ. ಆಹಾರ ಸಂಶೋಧ ನಾಲಯ ಆ ಕ್ಷೇತ್ರದಲ್ಲೂ ಸಂಶೋಧನೆ ನಡೆಸಿದೆ. ಕಪ್ಪುಮೆಣಸಿನ ಸಿಪ್ಪೆಯನ್ನು ತೆಗೆದು ಸ್ವಚ್ಛ ಬಿಳಿಮೆಣಸು ಮಾಡುವ ಯಂತ್ರವನ್ನೂ ಹಸಿರು ಮೆಣಸನ್ನು ನಿದ್ರ್ರವಗೊಳಿಸುವ ವಿಧಾನವನ್ನೂ ಕಂಡುಹಿಡಿದಿದೆ. ಕೆಲವು ಸಂಬಾರ ವಸ್ತುಗಳ ಎಣ್ಣೆಯನ್ನು ತಯಾರಿಸುವ ವಿಧಾನವನ್ನೂ ಕಂಡುಹಿಡಿದಿದೆ. ಇದರಿಂದ ಮೇಲೆ ಸಂಸ್ಕರಿಸಿದ ಸಂಬಾರ ವಸ್ತುಗಳ ರಫ್ತು ಹೆಚ್ಚಿ ವಿದೇಶೀ ವಿನಿಮಯ ಲಭ್ಯವಾಗುತ್ತಿದೆ.

ಶಾಖಾಹಾರದ ಕ್ಷೇತ್ರದಲ್ಲಿ : ಮಾಂಸಾಹಾರಕ್ಕೆ ಸಂಬಂಧಿಸಿದಂತೆಯೂ ಸಂಸ್ಥೆ ಹಲವು ಮೌಲಿಕ ಸಂಶೋಧನೆಗಳನ್ನು ನಡೆಸಿದೆ. ಮಾಂಸ ಮತ್ತು ಮೊಟ್ಟೆ ಹೆಚ್ಚು ಕಾಲ ಕೆಡದಂತೆ ರಕ್ಷಿಸಿಡುವ ವಿಧಾನವನ್ನು ರೂಪಿಸಿರುವುದರ ಜೊತೆಗೆ ಮಾಂಸ, ತರಕಾರಿ, ಸಂಬಾರವಸ್ತು-ಇವುಗಳ ಸಂಯೋಜನೆಯಿಂದ ಬಹು ರುಚಿಕರವಾದ ಆಹಾರವಸ್ತುಗಳನ್ನು ತಯಾರಿಸಿದೆ. ಕೋಳಿಮೊಟ್ಟೆಯಿಂದ ಶೀಘ್ರ(ದಿಢೀರ್) ಬಳಕೆಗೆ ಬರುವ ಒಂದು ರೀತಿಯ ಪುಡಿಯನ್ನು ತಯಾರಿಸಿದೆ.

ಸಸಾರಜನಕಾದಿ ಪುಷ್ಟಿಕರವಾದ ಆಹಾರ : ದ್ವಿದಳಧಾನ್ಯಗಳು ಹಾಗೂ ಕೆಲವು ಎಣ್ಣೆಬೀಜಗಳು ಪ್ರಮುಖ ಪುಷ್ಟಿದಾಯಕ ಆಹಾರ ವಸ್ತುಗಳು. ಆಹಾರ ಸಂಶೋಧನಾಲಯ ದ್ವಿದಳ ಧಾನ್ಯಗಳನ್ನು ಒಡೆದು ಒಪ್ಪವಾಗಿ ಬೇಳೆಮಾಡುವ ನೂತನ ಯಂತ್ರಗಳನ್ನು ತಯಾರಿಸಿದೆ. ಕೆಲವು ಅನುಪಯುಕ್ತ ಎಣ್ಣೆಬೀಜಗಳಿಂದ ಪುಷ್ಟಿಕರವಾದ ಆಹಾರವಸ್ತುಗಳನ್ನು ತಯಾರಿಸಿದೆ. ಹೀಗೆ ತಯಾರಿಸಿದ ಆಹಾರ ಈಗಾಗಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರಾಂಶ ಕಾರ್ಯಕ್ರಮದಲ್ಲಿ ಬಳಕೆಯಾಗುತ್ತಿದೆ. ಗೋದಿಹಿಟ್ಟು, ಕಡಲೆಹಿಟ್ಟು, ಕಡಲೆಕಾಯಿಹಿಟ್ಟು ಮತ್ತು ಬೆಲ್ಲಇವುಗಳಿಂದ ತಯಾರಿಸಿದ ಬಹುರುಚಿಕರವಾದ ತಿಂಡಿ ಆ ಕಾರ್ಯಕ್ರಮದಲ್ಲಿ ಬಳಕೆಯಲ್ಲಿದೆ.

ಈ ಸಂಸ್ಥೆ ತಯಾರಿಸಿರುವ ವಿವಿಧೋದ್ದೇಶ ಆಹಾರ ಈಗಾಗಲೆ ವಾಣಿಜ್ಯ ವಸ್ತುವಾಗಿ ಬಳಕೆಗೆ ಬಂದಿದೆ. ಮೈಸೂರಿನಲ್ಲೂ ಉತ್ತರ ಪ್ರದೇಶದ ಕೋಟ ದ್ವಾರದಲ್ಲೂ ಅದನ್ನು ತಯಾರಿಸುವ ಕಾರ್ಖಾನೆಗಳು ಆರಂಭವಾಗಿವೆ.

ಗುಜರಾತಿನ ಆನಂದ್‍ನಲ್ಲಿ ತಯಾರಾಗುತ್ತಿರುವ ಅಮೂಲ್ ಸ್ಪ್ರೇ ಮತ್ತು ಅಮೂಲ್ ಆಹಾರ ವಸ್ತುಗಳು ಎಳೆಯಮಕ್ಕಳಿಗೂ ಬೆಳೆದ ಐದು ವರ್ಷದ ವಯಸ್ಸಿನ ಮಕ್ಕಳಿಗೂ ಉಪಯುಕ್ತ ಆಹಾರವಾಗಿದ್ದು ದೇಶಾದ್ಯಂತ ಪ್ರಚಾರದಲ್ಲಿದೆ. ಇದನ್ನು ಕಂಡುಹಿಡಿದು ಆ ಸಂಸ್ಥೆಯನ್ನು ಸ್ಥಾಪಿಸಲು ಈ ಸಂಶೋಧನಾಲಯ ಮುಖ್ಯಪಾತ್ರವಹಿಸಿತ್ತು. ಕಡಲೆಕಾಯಿ ಹಿಂಡಿಯಿಂದ ಪ್ರೋಟೀನ್ ತಯಾರಿಸುವ ವಿಧಾನವನ್ನು ಈ ಸಂಸ್ಥೆ ಈಚೆಗೆ ಕಂಡುಹಿಡಿದಿದೆ. ಅದರಿಂದ ತಯಾರಾಗುವ ಮಿಲ್ಟೋನ್ ಎಂಬ ಪೇಯ ಈ ಸಂಸ್ಥೆಗೆ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿಕೊಟ್ಟಿದೆ. ಈಗ ಇದನ್ನು ಬೆಂಗಳೂರಿನ ಡೈರಿಯಲ್ಲಿ ತಯಾರಿಸಲಾಗು ತ್ತಿದೆ. ಇದು ಕಂಡುಹಿಡಿದ ವಿಧಾನಗಳು ಉದ್ಯಮ ಕ್ಷೇತ್ರದಲ್ಲಿ ಬಳಕೆಗೆ ಬಂದ ಮೇಲೆ ದುಗ್ಧಾಹಾರಕ್ಕಾಗಿ ವ್ಯಯವಾಗುತ್ತಿದ್ದ ಕೋಟ್ಯಂತರ ರೂಪಾಯಿಗಳ ವಿದೇಶೀ ವಿನಿಮಯವನ್ನು ಉಳಿಸಿದಂತಾಗಿದೆ.

ಇಡ್ಲಿ, ದೋಸೆ, ವಡೆ, ರಸಂ, ಸಾಂಬಾರ್, ಚಕ್ಕುಲಿ, ಮುಚ್ಚೋರೆ, ಗುಲಾಬ್ ಜಾಮೂನ್, ಜಿಲೇಬಿ ಮುಂತಾದವನ್ನು ಶೀಘ್ರವಾಗಿ ತಯಾರಿಸಲು ಅನುಕೂಲಿಸುವ ಪುಡಿಗಳನ್ನೂ ಈ ಸಂಸ್ಥೆ ಕಂಡುಹಿಡಿದಿದೆ. ಅವನ್ನು ಮಾರಾಟಕ್ಕೆ ಸಿದ್ಧಪಡಿಸುವ ಸಂಸ್ಥೆಗಳಿಗೂ ನೆರವು ನೀಡಿದೆ.

ತಂತ್ರಜ್ಞಾನದ ಬಿಡುಗಡೆ : ಸಾಮಾನ್ಯವಾಗಿ ಯಾವ ಸಂಶೋಧನೆಯೇ ಆಗಲಿ ಅದು ಜೀವನಕ್ಷೇತ್ರದಲ್ಲಿ ಆನ್ವಯಿಕ ಮೌಲ್ಯವನ್ನು ಪಡೆದಾಗಲೆ ಅದರ ಪ್ರಾಮುಖ್ಯ ಹೆಚ್ಚಾಗುವುದು. ಆಹಾರ ಸಂಶೋಧನಾಲಯ ಈಗಾಗಲೆ ರೂಪಿಸಿರುವ ಅನೇಕ ತಯಾರಿಕಾ ವಿಧಾನಗಳಲ್ಲಿ ಕೆಲವನ್ನು ಸು. 300 ಉದ್ಯಮಗಳಿಗೆ ಬಿಡುಗಡೆ ಮಾಡಿದೆ.

3 ಸರ್ ಎಂ. ವಿಶ್ವೇಶ್ವರಯ್ಯ ಔದ್ಯೋಗಿಕ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ : ಭಾರತ ಸರ್ಕಾರದ ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಲಿ ಆರಂಭಿಸಿದ ಎರಡು ವಸ್ತುಸಂಗ್ರಹಾಲಯಗಳಲ್ಲಿ ಒಂದು. ಇದು ಬೆಂಗಳೂರಿನಲ್ಲಿದೆ. 1962ರಲ್ಲಿ ಇದನ್ನು ಮಂಡಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಇದರ ಪ್ರಧಾನ ಉದ್ದೇಶಗಳು ಹೀಗಿವೆ: 1. ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯೋಗ ಈ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಪ್ರತಿನಿಧಿಸುವಂಥ ಚಾರಿತ್ರಿಕ ವಸ್ತುಗಳ ಸಂಗ್ರಹ, ರಕ್ಷಣೆ ಮತ್ತು ಪಾಲನೆ. 2. ಉದ್ಯೋಗ ಮತ್ತು ಮಾನವ ಕಲ್ಯಾಣ ಕಾರ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಬೆಳೆವಣಿಗೆಯನ್ನು ಸೂಚಿಸುವುದು. 3. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಉಪಯೋಗಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವುದು. 4. ಶಾಲಾಕಾಲೇಜುಗಳಲ್ಲಿ ನೀಡಿರುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾ ಗುವಂತೆ ಪ್ರಸಾರ ವ್ಯವಸ್ಥೆ ಮಾಡುವುದು. 5. ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡಲು ವೈಜ್ಞಾನಿಕ ಪಾಠೋಪಕರಣಗಳನ್ನು ಉತ್ತಮಪಡಿಸುವುದಕ್ಕೂ ಬಳಸುವುದಕ್ಕೂ ಅಧ್ಯಾಪಕರಿಗೆ ತರಬೇತು ನೀಡುವುದು. 6. ಶಾಲಾಕಾಲೇಜುಗಳಲ್ಲೂ ಇತರ ಸಂಸ್ಥೆಗಳಲ್ಲೂ ವಿಜ್ಞಾನ ವಸ್ತು ಸಂಗ್ರಹಾಲಯಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲಗಳನ್ನು ಒದಗಿ ಸುವುದು ಮತ್ತು ವಸ್ತುಸಂಗ್ರಹಾಲಯದ ಕಾರ್ಯಸಿಬ್ಬಂದಿಗೆ ತರಬೇತು ನೀಡುವುದು. 7. ಭಾರತಕ್ಕೆ ಸಂಬಂಧಿಸಿದಂತೆ ವಿಜ್ಞಾನ ಮತ್ತು ತಂತ್ರಶಾಸ್ತ್ರದ ಇತಿಹಾಸವನ್ನು ಕುರಿತಂತೆ ಸಂಶೋಧನೆ ನಡೆಸುವುದು. 8. ವಿಜ್ಞಾನ ಶಿಕ್ಷಣವನ್ನು ಉತ್ತಮಪಡಿಸಲು ಆ ಕಾರ್ಯಕ್ಕೆ ಬೇಕಾದ ಸಲಕರಣೆಗಳನ್ನು ಪೀಠೋಪಕರಣಗಳನ್ನು ನಿಯೋಜಿಸಿ ತಯಾರಿಸುವುದು. ಈ ಸಂಗ್ರಹಾಲಯದಲ್ಲಿ ನಾಲ್ಕು ವ್ಯವಸ್ಥಾವೇದಿಕೆಗಳಿವೆ (ಗ್ಯಾಲರಿ): 1 ಎಲೆಕ್ಟ್ರೋಟೆಕ್ನಿಕ್, 2 ಮೋಟೀವ್ ಪವರ್, 3 ಪಾಪ್ಯುಲರ್ ಸೈನ್ಸ್, 4 ಟಿಂಬರ್ ಅಂಡ್ ಪೇಪರ್. ಈ ಸಂಸ್ಥೆ ಸಂಚಾರ ಸಂಗ್ರಹಾಲಯವನ್ನು ವ್ಯವಸ್ಥೆಗೊಳಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಏರ್ಪಡಿಸುತ್ತದೆ.

ಮೇಲಿನ ಉದ್ದೇಶಗಳಿಗನುಗುಣವಾಗಿ ಈ ಸಂಗ್ರಹಾಲಯ ಕರ್ನಾಟಕದ ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಜನಸಾಮಾನ್ಯರಿಗೂ ವಿಜ್ಞಾನದ ಪ್ರಗತಿಯ ಬಗ್ಗೆ ಪರಿಚಯ ಮಾಡಿಕೊಡುತ್ತಿದೆ. ಶಾಲಾಕಾಲೇಜುಗಳಲ್ಲಿ ವಿಜ್ಞಾನಶಿಕ್ಷಣವನ್ನು ಸಂವರ್ಧಿಸಲು ಈ ಸಂಗ್ರಹಾಲಯ ಕಾರ್ಯಕ್ರಮ ಗಳನ್ನು ಹಾಕಿಕೊಂಡಿದೆ.

ತಾಂತ್ರಿಕ ಸೇವಾ ವ್ಯವಸ್ಥೆ : ಸರ್ಕಾರದ ಮತ್ತು ಖಾಸಗಿ ತಯಾರಿಕಾ ಸಂಸ್ಥೆಗಳಿಂದ ಬರುವ ಕೇಳಿಕೆಗಳನ್ನನುಸರಿಸಿ ಪ್ರತಿವರ್ಷ 3,000-4,000 ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರವೊದಗಿಸುತ್ತಿರುವ ಈ ಸಂಸ್ಥೆ ವಿವಿಧ ಆಹಾರಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ನಡೆಸಿ ವರದಿಗಳನ್ನು ಪ್ರಕಟಿಸಿದೆ.

ತರಪೇತು ವ್ಯವಸ್ಥೆ : ಸರ್ಕಾರದ ಮತ್ತು ಖಾಸಗಿ ತಯಾರಿಕಾ ಕೇಂದ್ರದಲ್ಲಿ ತೊಡಗಿರುವ ಉದ್ಯಮಗಳ ಆವಶ್ಯಕತೆಯನ್ನು ಪೂರೈಸಲು ಸಂಸ್ಥೆ ಒಂದು ತರಪೇತು ಕೇಂದ್ರವನ್ನೂ ನಡೆಸುತ್ತಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಹಾಗೂ ಆಗ್ನೇಯ ಏಷ್ಯ ರಾಷ್ಟ್ರಗಳಿಂದ ವರ್ಷಂಪ್ರತಿ ಅನೇಕರು ಬಂದು ತಾಂತ್ರಿಕ ತರಪೇತು ಪಡೆದು ಹೋಗುತ್ತಿದ್ದಾರೆ. ಈ ಸಂಸ್ಥೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಂಶೋಧನ ಕೇಂದ್ರಗಳನ್ನೂ ಪ್ರಯೋಗಾಲಯಗಳನ್ನೂ ಹೊಂದಿದೆ. ತಿರುಚ್ಚೂರು, ನಾಗಪುರ, ಲಕ್ನೊ, ಮುಂಬಯಿ, ಮಂಗಳೂರು, ಶ್ರೀಲಂಕ, ಜಮ್ಮು, ಟಾವಿ, ಕಡಪ-ಈ ಸ್ಥಳಗಳಲ್ಲಿ ಪ್ರಾದೇಶಿಕ ಹಣ್ಣು ಮತ್ತು ತರಕಾರಿ ಸಂರಕ್ಷಣ ಕೇಂದ್ರಗಳನ್ನು ನಡೆಸುತ್ತಿದೆ.

(ನೋಡಿ- ವಸ್ತುಸಂಗ್ರಹಾಲಯಗಳು) (ನೋಡಿ- ಕೇಂದ್ರೀಯ-ಪ್ರಯೋಗಾಲಯಗಳು)

  (ಎನ್.ಎಸ್.ವಿ.)