ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೀಯ

ವಿಕಿಸೋರ್ಸ್ದಿಂದ

ರೀಯ - ರ್ಯಾಟಿಟ್ ಉಪವರ್ಗ, ರೀಯಫಾರ್ಮೀಸ್ ಗಣ, ರೀಡೀ ಕುಟುಂಬದ ದಕ್ಷಿಣ ಅಮೆರಿಕವಾಸೀ ಹಾರಲಾರದ ಪಕ್ಷಿಗಳ ಸರ್ವನಾಮ. ಎರಡು ಮುಖ್ಯ ಪ್ರಭೇದಗಳು: ಈಶಾನ್ಯ ಬ್ರೆಜಿಲ್‍ನಿಂದ ಅರ್ಜೆಂಟಿನವರೆಗಿನ ಬಯಲು ಪ್ರದೇಶವಾಸೀ ಸಾಮಾನ್ಯ ರೀಯ (ರೀಯ ಅಮೆರಿಕಾನ) ಮತ್ತು ಪೆರುವಿನಿಂದ ದಕ್ಷಿಣಕ್ಕೆ ಪೆಟಗೋನಿಯವರೆಗಿನ ಭೂಪ್ರದೇಶವಾಸೀ ಡಾರ್ವಿನ್‍ನ ರೀಯ (ಟೆರೋಕ್ನೆಮಿಯ ಪೆನ್ನೇಟ).

ಇವು ತಮ್ಮ ಸಮೀಪ ಬಂಧುಗಳಾದ ಈಮ್ಯೂ ಮತ್ತು ಉಷ್ಟ್ರಪಕ್ಷಿಗಳಿಗಿಂತ ಗಾತ್ರದಲ್ಲಿ ಸಣ್ಣವು. ಮೂರು ಬೆರಳುಗಳಿರುವ ಉದ್ದನೆಯ ಕಾಲುಗಳು, ಸುಂದರ ಗರಿಗಳ ಅಭಾವ, ಹೆಚ್ಚುಕಡಿಮೆ ಕಂದು ಬಣ್ಣ-ಇವು ರೀಯ ಪಕ್ಷಿಗಳ ವೈಶಿಷ್ಟ್ಯಗಳು. ಸಾಪೇಕ್ಷವಾಗಿ ದೊಡ್ಡಗಾತ್ರದ (ಸು. 120 ಸೆಂಮೀ ಎತ್ತರ, 20 ಕಿಗ್ರಾಮ್ ತೂಕ) ಸಾಮಾನ್ಯ ರೀಯದ ದೇಹದ ಮೇಲ್ಭಾಗ ಬೂದು, ಕೆಳಭಾಗ ಮಾಸಲುಬಿಳಿ. ಬಿಳಿತುದಿಯ ಕಂದು ಗರಿಗಳು ಸಣ್ಣ ಗಾತ್ರದ ಡಾರ್ವಿನ್‍ನ ರೀಯದ ವೈಶಿಷ್ಟ್ಯ.

ಹುಲ್ಲುಗಾವಲುಗಳಲ್ಲಿ ಸಂಚರಿಸುವ ಜಿಂಕೆ ಮತ್ತು ಗ್ವಾನಾಕೋಗಳ ಗುಂಪುಗಳ ಸಾಹಚರ್ಯದಲ್ಲಿ ಸರಾಸರಿ 6 ರೀಯ ಪಕ್ಷಿಗಳ ಚಿಕ್ಕಗುಂಪು ಗಳು ಇರುವುದು ಸಾಮಾನ್ಯ. ಇವು ಸರ್ವಭಕ್ಷಿಗಳು. ಒಂದು ಗಂಡು ಅನೇಕ ಹೆಣ್ಣುಪಕ್ಷಿಗಳೊಂದಿಗೆ ಕೂಡುತ್ತದೆ. ನೆಲದಲ್ಲಿ ಚಿಕ್ಕ ಕುಳಿ ತೋಡಿ ಒಣಎಲೆ ಹಾಗೂ ಹುಲ್ಲಿನ ಅಸ್ತರಿ ಹಾಕಿ ಗೂಡು ಕಟ್ಟುವ, ಹೆಣ್ಣು ಒಂದುಬಾರಿಗೆ ಇಡುವ ಸು. 50 ಮೊಟ್ಟೆಗಳಿಗೆ ಕಾವು ಕೊಡುವ, ಸು. 6 ವಾರಗಳ ಬಳಿಕ ಹೊರಬರುವ ಅಸಹಾಯಕ ಮರಿಗಳನ್ನು ಮತ್ತೂ 6 ವಾರ ಕಾಲ ಸಂರಕ್ಷಿಸುವ ಜವಾಬ್ದಾರಿಗಳನ್ನೂ ಗಂಡು ಪಕ್ಷಿಗಳು ನಿಭಾಯಿಸುತ್ತವೆ.

 (ಎಚ್.ಎನ್.ವೈ.)