ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರುದರ್ಫರ್ಡ್, ಅರ್ನೆಸ್ಟ್‌

ವಿಕಿಸೋರ್ಸ್ದಿಂದ

ರುದರ್ಫರ್ಡ್, ಅರ್ನೆಸ್ಟ್ 1871-1937. ನ್ಯೂಝೀಲೆಂಡ್-ಬ್ರಿಟಿಷ್ ಭೌತವಿಜ್ಞಾನಿ, ಬೈಜಿಕ ಭೌತವಿಜ್ಞಾನದ ಪಿತ ಮತ್ತು ನೊಬೆಲ್ ಪ್ರಶಸ್ತಿ (ರಸಾಯನ ವಿಜ್ಞಾನ) ಪುರಸ್ಕøತ (1908). ಇವನ ಆರಂಭದ ಸಂಶೋಧನ ವಲಯಗಳು ಉಚ್ಚ ಆವೃತ್ತಿ ವಿಸರ್ಜನೆಗಳ ಮೂಲಕ ಕಬ್ಬಿಣದ ಕಾಂತೀಕರಣ (1894, ಮ್ಯಾಗ್ನೆಟೈಸೇಶನ್ ಆಫ್ ಐರನ್ ಬೈ ಹೈ ಫ್ರೀಕ್ವೆನ್ಸಿ ಡಿಸ್ಚಾರ್ಜಸ್) ಮತ್ತು ಕಾಂತೀಯ ಸ್ನಿಗ್ಧತೆ (1896, ಮ್ಯಾಗ್ನೆಟಿಕ್ ವಿಸ್ಕಾಸಿಟಿ). ವಿದ್ಯಾರ್ಥಿ ವೇತನ ಪಡೆದು ಕ್ಯಾವೆಂಡಿಶ್ ಲ್ಯಾಬೊರೇಟರಿ ಟ್ರಿನಿಟಿ ಕಾಲೇಜ್ ಕೇಂಬ್ರಿಜ್ಜಿಗೆ ಪ್ರವೇಶಗಳಿಸಿದ (1895). ಅಲ್ಲಿ ಮೊದಲ ಬಾರಿಗೆ ಯಶಸ್ವೀ ನಿಸ್ತಂತು ಪ್ರೇಷಣೆ (ವೈರ್‍ಲೆಸ್ ಟ್ರಾನ್ಸ್‍ಮಿಶನ್) ಸಾಧಿಸಿದ-3.2 ಕಿಮೀಗಳಿ ಗಿಂತಲೂ ಹೆಚ್ಚು ದೂರಕ್ಕೆ. ಜೆ.ಜೆ. ತಾಮ್ಸನ್‍ನ (1856-1940) ಭವ್ಯ ಧುರೀಣತ್ವದಲ್ಲಿ ಮೂಲಭೂತ ಸಂಶೋಧನೆ ಮಾಡಿ ಈತ ಯುರೇನಿಯಮ್ ಸೂಸುವ ವಿಕಿರಣದಲ್ಲಿ ಮೂರು ಬಗೆಗಳಿರುವುದನ್ನು ಆವಿಷ್ಕರಿಸಿದ. ಇಂದಿನ ಪರಿಭಾಷೆಯಲ್ಲಿ ಇವು ಆಲ್ಫ ಕಣಗಳು, ಬೀಟ ಕಣಗಳು ಮತ್ತು ಗ್ಯಾಮ ತರಂಗಗಳು. ಮುಂದೆ ಮಾಕ್‍ಗಿಲ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಕೆನಡ ದೇಶಕ್ಕೆ ತೆರಳಿದ (1898). ಅಲ್ಲಿ ಫ್ರೆಡರಿಕ್ ಸಾಡಿ (1877-1965) ಎಂಬ ಸಹೋದ್ಯೋಗಿ ಜೊತೆ ಸಂಶೋಧನೆಗೈದು ಯುರೇನಿಯಮ್ ವಿತರಿಸುವ ಅತಿ ತೀವ್ರ ಉಷ್ಣ ಶಕ್ತಿಯ ಕಾರಣವಾಗಿ ಸಂಭವಿಸುವ ಪರಮಾಣವಿಕ ವಿಘಟನೆ ಕುರಿತ ಸಿದ್ಧಾಂತ ಮಂಡಿಸಿದ. 1907ರಲ್ಲಿ ಮ್ಯಾಂಚೆಸ್ಟರಿಗೆ ಬಂದ. ಇಲ್ಲಿ ಈತ ಸಂಶೋಧನೆಯ ಮೂಲಕ ಆಲ್ಫಕಣಗಳು ಎರಡು ಮಡಿ ಅಯಾನೀಕೃತ ಹೀಲಿಯಮ್ ಅಯಾನುಗಳೆಂದು ರುಜುವಾತಿಸಿದ. ಈ ಅಯಾನುಗಳನ್ನು ಈತ ವಾಸ್ತವವಾಗಿ ಎಣಿಸಿ ನೋಡಿದ್ದ! ಇದರ ಸಲುವಾಗಿ ಈತ ಜರ್ಮನ್ ಭೌತವಿಜ್ಞಾನಿ ಹ್ಯಾನ್ಸ್‍ಗೀಗರ್ (1882-1945) ಸಹಯೋಗದಲ್ಲಿ ಹೊಸತೊಂದು ಸಾಧನವನ್ನು ಉಪಜ್ಞಿಸಿದ.

ಈ ಸಂಶೋಧನೆ ಪರಮಾಣು ಬಗೆಗಿನ ಪರಿಕಲ್ಪನೆಯನ್ನು ಕ್ರಾಂತಿಕಾರಿಯಾಗಿ ಮಾರ್ಪಡಿಸಿತು: ಪರಮಾಣುವೊಂದು ಸೂಕ್ಷ್ಮಾತಿಸೂಕ್ಷ್ಮ ವಿಶ್ವ, ಇದರ ರಾಶಿ ಪೂರ್ತಿ ಬೀಜದಲ್ಲೇ ಸಾಂದ್ರೀಕರಿಸಿದೆ, ಇದನ್ನು ಸುತ್ತುವರಿದು ಎಲೆಕ್ಟ್ರಾನ್ ಗ್ರಹಗಳು ಪರಿಭ್ರಮಿಸುತ್ತಿವೆ. ಸಂಕ್ಷೇಪವಾಗಿ ಹೇಳುವುದಾದರೆ ಪರಮಾಣುವೊಂದು ಅತಿ ಸಂಕೋಚಿತ ಸೌರವ್ಯೂಹ. ಈ ಚಿಂತನೆಗೆ ಈತನ ಯುವ ಸಹಾಯಕ ನೀಲ್ಸ್ ಬೋರ್ (1882-1962) ಸಕಲ ಸಿದ್ಧಾಂತವನ್ನು (ಕ್ವಾಂಟಮ್‍ತಿಯರಿ) ಅನ್ವಯಿಸಿದ. ಹೀಗೆ ಮೈದಳೆಯಿತು ರುದರ್ಫರ್ಡ್-ಬೋರ್ ಪರಮಾಣು ಪರಿಕಲ್ಪನೆ. ಮೊದಲನೆಯ ಮಹಾಯುದ್ಧದ ವೇಳೆ (1914-18) ಈತ ಬ್ರಿಟಿಷ್ ನೌಕಾದಳದ ಸಲುವಾಗಿ ಜಲಾಂತರ್ಗಾಮೀ ನೌಕೆಗಳನ್ನು ಪತ್ತೆ ಹಚ್ಚುವ ತಂತ್ರ ಸಂಶೋಧನೆಯಲ್ಲಿ ನಿರತನಾದ.

ವಾಯುಮಂಡಲದಲ್ಲಿರುವ ನೈಟ್ರೊಜನನ್ನು ಆಲ್ಫ ಕಣಗಳ ಸಂತತ ತಾಡನೆಗಳಿಗೆ ಒಡ್ಡಿದಾಗ ಅದು (ನೈಟ್ರೊಜನ್) ಪರಮಾಣವಿಕ ಪರಿವರ್ತನೆಗೆ ಒಳಗಾಗುತ್ತದೆ ಮತ್ತು ಆಗ ಹೈಡ್ರೊಜನ್ನಿನ ಒಂದು ಬೀಜ ವಿಮೋಚಿತವಾಗುವುದೆಂಬ ತಥ್ಯವನ್ನು ಹಲವಾರು ಪ್ರಯೋಗಗಳನ್ನು ಮಾಡಿ ಆವಿಷ್ಕರಿಸಿದ(1919). ಅದೇ ವರ್ಷ ಇವನಿಗೆ ಕೇಂಬ್ರಿಜ್ಜಿನಲ್ಲಿ ಆ ಮೊದಲು ತಾಮ್ಸನ್ ಅಲಂಕರಿಸಿದ್ದ ಕ್ಯಾವೆಂಡಿಶ್ ಪ್ರಾಧ್ಯಾಪಕ ಹುದ್ದೆ ದೊರೆಯಿತು. ನ್ಯೂಟ್ರಾನ್ ಕಣದ ಅಸ್ತಿತ್ತ್ವವನ್ನು ಸೈದ್ಧಾಂತಿಕ ವೇಗದಿಂದ ಮುನ್ನಡಿಸಿದ (1920). ಇವನ ಸಹೋದ್ಯೋಗಿ ಜೇಮ್ಸ್ ಚಾಡ್‍ವಿಕ್ (1891-1974) ನ್ಯೂಟ್ರಾನಿನ ಭೌತಅಸ್ತಿತ್ವವನ್ನು ದೃಢೀಕರಿಸಿದ (1932). ಈತ 1925-30ರ ತನಕ ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ. (ಬಿ.ಎಸ್.ಎಂ.)