ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೆಡ್ವುಡ್

ವಿಕಿಸೋರ್ಸ್ದಿಂದ

ರೆಡ್‍ವುಡ್ ಶಂಕುಧಾರಿ ಜಾತಿಯ ಸೈಪ್ರೆಸ್ ಕುಟುಂಬದ (ಟ್ಯಾಕ್ಸೊಡೈಯೇಸೀ) ನಿತ್ಯಹಸುರು ವೃಕ್ಷಗಳ ಸಾಮಾನ್ಯ ಸರ್ವನಾಮ. ವೈಜ್ಞಾನಿಕ ಸರ್ವನಾಮ: ಸಿಕ್ವೊಯಿಯ. ದೈತ್ಯಗಾತ್ರದ ಸಿಕ್ವೊಯಿಯ ಡೆಂಡ್ರಾನ್ ಜೈಜೇಂಟಿಯಮ್, ಕ್ಯಾಲಿಫೋರ್ನಿಯದ ಸಿಕ್ವೊಯಿಯ ಸೆಂಪರ್ವಿರೆನ್ಸ್ ಎಂಬ ಎರಡು ಪ್ರಭೇದಗಳುಂಟು. ಎರಡನೆಯದರ ಪೂರ್ವಜ ಎಂದು ಪರಿಗಣಿಸುವ ಮೆಟಸಿಕ್ವೊಯಿಯಗ್ಲಿಪ್ಟೊಸ್ಟ್ರೊ ಬಾಯ್ಡಿಸ್ (ಡಾನ್ ರೆಡ್‍ವುಡ್) ವೃಕ್ಷ ಮತ್ತು ಟ್ಯಾಕ್ಸೋಡಿಯಮ್ ಡಿಸ್ಟಿಶಮ್ (ಬಾಲ್ಡ್ ರೆಡ್‍ವುಡ್) ಇವುಗಳ ಸಮೀಪದ ಬಂಧುಗಳು.

ತಳದಲ್ಲಿ ಆನಿಕೆ ನೆರವಿನಿಂದ ನಿಂತಿರುವ ಕೆಂಪುಕಂದು ಬಣ್ಣದ ಕಂಬದಂತೆ ಕಾಣುವ ಕಾಂಡ, ಕನಿಷ್ಠ 30 ಮೀ ಎತ್ತರ, ಶಂಕುವಿನ ಆಕಾರ, ಸೂಜಿಯಂಥ ಎಲೆಗಳು, ಚಿಕ್ಕ ದೀರ್ಘವೃತ್ತಾಕಾರದ ಶಂಕುಗಳು ಈ ವೃಕ್ಷಗಳ ವೈಶಿಷ್ಟ್ಯಗಳು.

ಒಂದು ಕಾಲದಲ್ಲಿ ಉತ್ತರದ ಸಮಶೀತೋಷ್ಣವಲಯಾದ್ಯಂತ ಇದ್ದ ಇವುಗಳ ಸಂಖ್ಯಾಬಲ ಕ್ಷೀಣಿಸತೊಡಗಿತು. ಕಳೆದ ಹಿಮಾನಿಯುಗದಲ್ಲಿ ಈ ಯುಗಾಂತ್ಯದ ವೇಳೆಗೆ ಉಳಿದದ್ದು ಮೂರು ಪ್ರಭೇದಗಳು ಮಾತ್ರ - ದೈತ್ಯ ಸಿಕ್ವೊಯಿಯ, ಕ್ಯಾಲಿಫೋರ್ನಿಯದ ಕರಾವಳಿ ರೆಡ್‍ವುಡ್ ಮತ್ತು ನೈರುತ್ಯ ಚೀನದ ಡಾನ್ ರೆಡ್‍ವುಡ್. ಅರಿಜೋನದ ಕಾಡುಗಳಲ್ಲಿ ವಿಲುಪ್ತ ಸಿಕ್ವೊಯಿಯ ಪ್ರಭೇದಗಳ ಅಶ್ಮೀಭವಿತ (ಪೆಟ್ರಿಫೈಡ್) ಪಳಿಯುಳಿಕೆಗಳಿವೆ(ಫಾಸಿಲ್). ಜುರಾಸಿಕ್ ಅವಧಿಯ ಪಳಿಯುಳಿಕೆಗಳೂ ದೊರೆತಿವೆ.

ದೈತ್ಯ ಸಿಕ್ವೊಯಿಯ: ಸಿಯೆರ ನೆವಾಡದಲ್ಲಿ ಸಮುದ್ರಮಟ್ಟದಿಂದ 900-2440 ಮೀ ಎತ್ತರದಲ್ಲಿರುವ ಸು. 300 ಕಿಮೀ ಉದ್ದದ ಕಿರಿದಗಲದ ಪಶ್ಚಿಮ ಇಳಿಜಾರು ಪ್ರದೇಶದಲ್ಲಿ ಇವು ಬೆಳೆಯುತ್ತವೆ. ಇವುಗಳ ಕನಿಷ್ಠ ಎತ್ತರ 46 ಮೀ, ಗರಿಷ್ಠ ವ್ಯಾಸ 9 ಮೀ. ಸಿಕ್ವೊಯಿಯ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜನರಲ್ ಶೆರ್ಮನ್ ಹೆಸರಿನ ವೃಕ್ಷ ಅತ್ಯಂತ ದೊಡ್ಡದು. ಇದರ ಎತ್ತರ 84 ಮೀ, ವ್ಯಾಸ 11 ಮೀ, ಅಂದಾಜು ತೂಕ 1950 ಟನ್. ಇಲ್ಲಿ 4000 ವರ್ಷ ವಯಸ್ಸಿನ ವೃಕ್ಷಗಳಿವೆ. ಕೊಂಬೆಗಳ ಅತಿ ಸಮೀಪದಲ್ಲಿರುವ ಹುರುಪೆಯಂತೆ ಕಾಣುವ ಎಲೆಗಳು; ಸ್ಪಂಜಿನಂಥ ಅರೆಗೊಳವಿಯಾಕಾರದ ಗಾಡಿಯುಕ್ತ (ಫ್ಲೂಟೆಡ್) ತೊಗಟೆ ಈ ವೃಕ್ಷದ ವೈಶಿಷ್ಟ್ಯಗಳು. ಕೆಲವದರ ತೊಗಟೆ 60 ಸೆಮೀ ದಪ್ಪವಿರುವುದುಂಟು. ಇದರ ದಾರು(ವುಡ್) ಹಗುರ, ಒರಟು ಮತ್ತು ಕೀಟ ಹಾಗೂ ಬೆಂಕಿ ನಿರೋಧಕ.

ಕರಾವಳಿ ರೆಡ್‍ವುಡ್: ಇವು ದಕ್ಷಿಣ ಓರೆಗಾನ್‍ನಿಂದ ಮಧ್ಯ ಕ್ಯಾಲಿಫೋರ್ನಿಯ ವರೆಗಿನ ಪೆಸಿಫಿಕ್ ಸಾಗರದ ಕರಾವಳಿಯಲ್ಲಿ ಬೆಳೆಯುತ್ತವೆ. ಸುಮಾರು 30ರಿಂದ 112 ಮೀ ಎತ್ತರ, 7.5 ಮೀ ವ್ಯಾಸದ ಕಾಂಡವುಳ್ಳ ಇವುಗಳ ಜೀವಿತಾವಧಿ ಸುಮಾರು 2500 ವರ್ಷಗಳು. ದೈತ್ಯ ಸಿಕ್ವೊಯಿಯಕ್ಕಿಂತ ಮೊನಚು ಮತ್ತು ನೀಲಿಛಾಯೆ ಯುಕ್ತ ಎಲೆಗಳು, ನಯ ಮತ್ತು ಗಟ್ಟಿಯಾದ ದಾರು ಈ ವೃಕ್ಷಗಳ ವೈಶಿಷ್ಟ್ಯ. ಚೌಬೀನೆಗಾಗಿ (ಟಿಂಬರ್) ಕಡಿದ ಬಳಿಕ ಉಳಿಯುವ ಬೊಡ್ಡೆ ಪುನಃ ಚಿಗುರಿ ಸುಮಾರು 40 ವರ್ಷಗಳ ಅನಂತರ ಮರಳಿ ಚೌಬೀನೆ ನೀಡುವಷ್ಟು ಬೆಳೆಯುತ್ತದೆ. ಡಾನ್ ರೆಡ್‍ವುಡ್: ಕರಾವಳಿ ರೆಡ್‍ವುಡ್‍ನ ಪೂರ್ವಜ ಎಂದು ಭಾವಿಸಲಾಗಿರುವ ಈ ಪರ್ಣಪಾತಿ (ಡೆಸಿಡ್ಯುಅಸ್) ವೃಕ್ಷಗಳ ಸರಾಸರಿ ಎತ್ತರ 30 ಮೀ, ವ್ಯಾಸ 1.8 ಮೀ. ತೆಳು ಎದುರುಬದಿರಾಗಿ ಬೆಳೆಯುವ ಕೊಂಬೆಗಳು ಮತ್ತು ಚಪ್ಪಟೆ ಎಲೆಗಳು ಇವುಗಳ ಇತರ ವೈಶಿಷ್ಟ್ಯಗಳು.

(ಟಿ.ಎಮ್.ಆರ್.)