ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಡಿಯೊಲೇರಿಯ

ವಿಕಿಸೋರ್ಸ್ದಿಂದ

ರೇಡಿಯೊಲೇರಿಯ ಸಾಗರಿಕ ಮಿಥ್ಯಪಾದಿ ಆದಿಜೀವಿಗಳ (ಮರೀನ್ ರೈಸೊಪಾಡ್ ಪ್ರೋಟೊಜೋವ) ಒಂದು ಗುಂಪು. ಪರ್ಯಾಯ ಪದ: ರೇಡಿಯೊಲೇರಿಡ. ಅನೇಕ ಪ್ರಭೇದಗಳಿವೆ. ಒಳ ಮತ್ತು ಹೊರ ಕೋಶದ್ರವ್ಯವನ್ನು ಪ್ರತ್ಯೇಕಿಸುವ (ಸೈಟೊಪ್ಲಾಸಮ್) ಕೇಂದ್ರೀಯ ಸಂಪುಟ (ಕ್ಯಾಪ್ಸೂಲ್) ಇರುವುದು ಈ ಏಕಕೋಶಗಳ ವೈಶಿಷ್ಟ್ಯ. ಈ ಜೀವಿಗಳ ಪೈಕಿ ಆಕ್ಟಿನೊಪೈಲಿನಕ್ಕೆ ನೈಜ ಹೊರಬೆಳೆತ ಪಾದಗಳೂ (ಆಕ್ಸೊ ಪೋಡಿಯ) ಅರೀಯ (ರೇಡಿಯಲ್) ಅಂತರ್ವೇಶಿತ ಕಂಕಾಲ ಸರಳುಗಳುಳ್ಳ (ರೇಡಿಯಲ್ಲಿ ಪೆನಿಟ್ರೇಟಿಂಗ್ ರಾಡ್ಸ್) ತೆಳು ಕೇಂದ್ರೀಯ ಸಂಪುಟವೂ ಇವೆ. ಕಂಕಾಲ ಸರಳುಗಳ ಪ್ರಧಾನ ಘಟಕ ಸ್ಟ್ರಾನ್ಶಿಯಮ್ ಸಲ್ಫೇಟ್. ಮಿಕ್ಕವಕ್ಕೆ ದಪ್ಪನೆಯ ಸರಂಧ್ರ ಸಂಪುಟವಿದೆ.

ಸಾಮಾನ್ಯವಾಗಿ ಕೇಂದ್ರೀಯ ಸಂಪುಟದ ಹೊರಗೆ ಇರುವ ಸಿಲಿಕ ಸಹಿತ ಬಹಿರ್ಕಂಕಾಲ ರೇಡಿಯೊಲೇರಿಯಗಳ ಇನ್ನೊಂದು ವೈಶಿಷ್ಟ್ಯ. ಗೋಳೀಯ ಸಮ್ಮಿತಿಯುಳ್ಳ ಕಂಕಾಲದಲ್ಲಿ ಆಹಾರ ಹಿಡಿ ಯಲೋಸುಗ ಮಿಥ್ಯಪಾದಗಳನ್ನು ಹೊರಚಾಚಲು ಅನುಕೂಲವಾದ ರಂಧ್ರಗಳು ಇವೆ. ಅನೇಕ ಜೀವಿಗಳಲ್ಲಿ ಬಹಿರ್ಮುಖೀ ಮುಳ್ಳುಗಳೂ (ಸ್ಪೈನ್ಸ್) ಇವೆ. ಎಂದೇ, ಇವು ಕಿರಣಪಾದಿ (ಆಕ್ಟಿನೊಪಾಡ್) ಉಪವರ್ಗದವು. ಕೆಲವಕ್ಕೆ ಜೆಲಟಿನ್ ಕವಚವೂ ಉಂಟು. ಈ ಮೇಲ್ನೀರು ಜೀವಿಗಳು ತೇಲಲು ಅನುಕೂಲಿಸುವ ಕುಹರಯುಕ್ತ ಕೋಶದ್ರವ್ಯ ಇದೆ. ರೇಡಿಯೊಲೇರಿಯಗಳು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಸಮೃದ್ಧವಾಗಿವೆ. ಜೀವಿಗಳು ಸತ್ತ ಬಳಿಕ ಸಾಗರತಳದಲ್ಲಿ ಉಂಟಾಗುವ ಕಂಕಾಲಸಂಚಯವೇ ರೇಡಿಯೊಲೇರಿಯನ್ ಊeóï. ಜಲಜಶಿಲೆಗಳು ಈ ಸಂಚಯಗಳ ಮೇಲೆ ರೂಪುಗೊಳ್ಳುತ್ತವೆ. ಎಂದೇ ಇವಕ್ಕೆ ಭೂವೈಜ್ಞಾನಿಕ ಮಹತ್ತ್ವ ಇದೆ. (ಎಸ್.ಬಿ.ಎಮ್.)