ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇ ಮೀನುಗಳು

ವಿಕಿಸೋರ್ಸ್ದಿಂದ

ರೇ ಮೀನುಗಳು - ಕಾಂಡ್ರಿಕ್‍ತ್ಯಸ್ ವರ್ಗ, ಎಲ್ಯಾಸ್ಮೊಬ್ರಾಂಕಿ ಉಪವರ್ಗದ ಮೃದ್ವಸ್ಥಿ ಮೀನುಗಳ ಪೈಕಿ ರಾಜಿಫಾರ್ಮಿಸ್ ಅಥವಾ ಬ್ಯಾಟಾಯ್ಡಿಯೈ ಗಣಕ್ಕೆ ಸೇರಿದ ಮೀನುಗಳಿಗಿರುವ ಸಾಮನ್ಯ ಹೆಸರು. ಇವುಗಳಲ್ಲಿ ಸುಮಾರು 425 ಪ್ರಭೇದಗಳಿವೆ.

ಉದರಭಾಗದತ್ತ ಬೆನ್ನಿನ ಭಾಗವನ್ನು ಅದುಮಿದಂತೆ ತೋರುವ ಅಗಲವಾದ ಚಪ್ಪಟೆ ದೇಹ, ಮುಂಡದ ಇಕ್ಕೆಲಗಳಲ್ಲಿ ಬಾಲದಿಂದ ತಲೆಯವರೆಗೆ ವಿಸ್ತರಿಸಿರುವ ಎದೆಭಾಗದ (ಪೆಕ್ಟೊರಲ್) ದೊಡ್ಡ ಈಜುರೆಕ್ಕೆಗಳು ಮತ್ತು ವಜ್ರಾಕೃತಿಯನ್ನು ಸರಿಸುಮಾರಾಗಿ ಹೋಲುವ ದೇಹವಿನ್ಯಾಸ-ಇವು ರೇ ಮೀನುಗಳ ವೈಶಿಷ್ಟ್ಯಗಳು. ಪ್ರತಿಯೊಂದು ಪ್ರಭೇದಕ್ಕೂ ಅದರದೇ ಆದ ವೈಶಿಷ್ಟ್ಯವಿದೆ. ದೊಡ್ಡ ಸ್ಪೈರಕಲ್‍ಗಳು (ತಿಮಿಂಗಿಲಗಳ ಊದುರಂಧ್ರದಂಥ ರಚನೆ) ಮತ್ತು ಕಣ್ಣುಗಳು ಬೆನ್ನಿನ ಪಾಶ್ರ್ವದಲ್ಲೂ ಕಿರಿದಾದ ಬಾಯಿ ಮತ್ತು ಕಿವಿರು ಸೀಳಿಕೆಗಳು ಉದರಪಾಶ್ರ್ವದಲ್ಲೂ ಇವೆ. ವಸ್ತಿಕುಹರದ (ಪೆಲ್ವಿಕ್) ರೆಕ್ಕೆಗಳು ಸಾಪೇಕ್ಷವಾಗಿ ಚಿಕ್ಕವು. ಗುದದ್ವಾರ ಸಮೀಪದ (ಏನಲ್) ರೆಕ್ಕೆಗಳು ಇಲ್ಲ. ಬಾಲದ ಭಾಗ ಸಪುರ ಚಾವಟಿಯಂತಿದೆ. ಎದೆಭಾಗದ ಈಜುರೆಕ್ಕೆಗಳ ನೆರವಿನಿಂದ ನಿಧಾನವಾಗಿ ಚಲಿಸುವ ಇವಕ್ಕೆ ಬಾಲವೇ ಚುಕ್ಕಾಣಿ. ಮೃದ್ವಂಗಿ (ಮಾಲಸ್ಕ್) ಮತ್ತು ಚಿಪ್ಪುಪ್ರಾಣಿಗಳು (ಕ್ರಸ್ಟೇಷನ್ಸ್) ಆಹಾರ. ಈ ಆಹಾರ ಸೇವನೆಗೆ ಅಗತ್ಯವಾದ ಮೊಂಡುಹಲ್ಲುಗಳು ಬಾಯಿಯಲ್ಲಿವೆ. ಬಣ್ಣಬದಲಿಸಿ ಕಪಟರೂಪ ಧರಿಸುತ್ತವೆ. ಆಂತರಿಕ ನಿಷೇಚನೆಯ ಮೂಲಕ ಸಂತಾನೋತ್ಪತ್ತಿ. ಇದಕ್ಕೆ ಅಗತ್ಯವಾದ ಸಂರಚನೆ ಗಂಡು ಮೀನುಗಳ ವಸ್ತಿಕುಹರದ ರೆಕ್ಕೆಗಳಲ್ಲಿವೆ. ಮೊಟ್ಟೆ ಇಡುವ ಮತ್ತು ಹೆಣ್ಣಿನ ದೇಹದಲ್ಲಿಯೇ ಮೊಟ್ಟೆಯನ್ನು ಮರಿಮಾಡುವ - ಈ ಎರಡೂ ಬಗೆಯ ಪ್ರಭೇದಗಳಿವೆ.

ಅನೇಕ ರೇಮೀನು ಪ್ರಭೇದಗಳ ವಾಸ ತೀರಕ್ಕೆ ಸಮೀಪದ ಸಾಗರದ ತಳಭಾಗದಲ್ಲಿ. ಸುಮಾರು 3000 ಮೀ ಆಳದಲ್ಲಿ ವಾಸಿಸುವವೂ ಇವೆ. ಅಮೆಜಾನ್ ನದಿಯ ಸಿಹಿನೀರಿನಲ್ಲಿ ವಾಸಿಸುವ ಒಂದು ಜಾತಿಯೂ ಇದೆ. ಸಾಗರ ತಳದ ಮಣ್ಣಿನಲ್ಲಿ ಅಡಗಿದ್ದು ಸಮೀಪಿಸಿದ ಭೋಜನೀಯ ಜೀವಿಗಳನ್ನು ಬಲಿ ತೆಗೆದುಕೊಳ್ಳುವ ಪ್ರಭೇದಗಳ ಸಂಖ್ಯೆ ಹೆಚ್ಚು.

ಸಾಗರದ ಮೇಲ್ಭಾಗದಲ್ಲಿ ವಾಸಿಸುವ ಗ್ರೇಟ್ ಮ್ಯಾಂಟ ರೇ, ಬಾಲದ ತುದಿಯ ಚುಚ್ಚುಮುಳ್ಳಿನ ಮೂಲಕ ಶತ್ರುದೇಹಕ್ಕೆ ಮಾರಕ ವಿಷ ಹುಗಿಸಬಲ್ಲ ಸ್ಟಿಂಗ್ ರೇ, ತೀವ್ರ ವಿದ್ಯುದಾಘಾತ ನೀಡುವ ಟಾರ್ಪೀಡೊ ರೇ ಮಾನವನಿಗೆ ಹೆಚ್ಚು ಪರಿಚಿತ. ಕಡಿಮೆ ಚಪ್ಪಟೆ ವಿನ್ಯಾಸದ ಗಿಟಾರ್ ಮೀನು ಮತ್ತು ಗರಗಸ ಮೀನು ರೇಮೀನುಗಳೇ. ದೈತ್ಯ ಡೆವಿಲ್ ರೇ ಮೀನು (ಮಾಂಟಾ ಬೈರಾಸ್ಟ್ರಿಸ್) 22 ಅಡಿ ಅಗಲ (ರೆಕ್ಕೆಗಳ ತುದಿಯಿಂದ ತುದಿಯವರೆಗೆ) ಇದ್ದು ಸುಮಾರು 3500 ಪೌಂಡ್ ತೂಕಿರುತ್ತದೆ.

(ನೋಡಿ- ಮೀನು) (ನೋಡಿ- ವಿದ್ಯುತ್-ಮೀನುಗಳು) (ಪಿ.ಆರ್.ಎನ್.)