ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಗ

ವಿಕಿಸೋರ್ಸ್ದಿಂದ

ರೋಗ - ಯಾವುದಾದರೊಂದು ಪೆಟ್ಟು ಇಲ್ಲವೆ ಗಾಯದಿಂದ ಪ್ರಚೋದನೆಗೊಂಡಿರುವ, ಉಪಕೋಶೀಯ ಮಟ್ಟದಲ್ಲಿ ಸಂಭವಿಸುವ, ಗಾಸಿಗೆ ಈಡಾಗಿರುವ ಜೀವಿಯ (ಮನುಷ್ಯ ಇಲ್ಲವೆ ಪ್ರಾಣಿ) ವ್ಯತ್ಯಸ್ತರಚನೆಯಲ್ಲೊ ಕಾರ್ಯದಲ್ಲೊ ಸಾಮಾನ್ಯವಾಗಿ ಪ್ರಕಟಗೊಳ್ಳುವ ಪ್ರತಿಸ್ಪಂದನ (ಡಿಸೀಸ್). ಕಾಯಿಲೆ, ಅಸ್ವಸ್ಥತೆ, ವ್ಯಾಧಿ, ಅನಾರೋಗ್ಯ ಮುಂತಾದವು ಪರ್ಯಾಯ ಪದಗಳು. ಆನುವಂಶೀಯತೆ, ಸೋಂಕು, ಆಹಾರ ಇಲ್ಲವೆ ಪರಿಸರದ ಪರಿಣಾಮದಿಂದ ಉಂಟಾಗುವ, ದೋಷಯುಕ್ತ ಕ್ರಿಯೆಯಿಂದ ಕೂಡಿದ ದೇಹದ ಅಂಗ, ಅಂಗಭಾಗ, ರಚನೆ ಅಥವಾ ವ್ಯವಸ್ಥೆಯ ಒಂದು ಪ್ರಕಟಿತ ಲಕ್ಷಣವಿದು. ರೋಗಗಳಿಗೆ ಇರುವ ಮೂಲಕಾರಣಗಳೂ ಜೀವಕೋಶದ ಒಳಗೇ ನಡೆಯುವ ಜೀವರಾಸಾಯನಿಕ ಮತ್ತು ಜೀವಭೌತಪ್ರತಿಕ್ರಿಯೆಗಳನ್ನು ಆಧರಿಸಿವೆ ಎಂಬುದು ಈಗಾಗಲೇ ನಡೆದಿರುವ ಸೂಕ್ಷ್ಮಸಂವೇದೀ ಶೋಧನೆ ಗಳಿಂದಲೂ ಅಭಿವರ್ಧನೆಗಳಿಂದಲೂ ಸ್ಪಷ್ಟವಾಗಿದೆ. ಈ ಪ್ರತಿಕ್ರಿಯೆಗಳನ್ನು ವರ್ಗೀಕರಿಸಲಾಗಿದ್ದು ಕ್ರಮೇಣ ಅವುಗಳ ಕ್ರಿಯಾತಂತ್ರವನ್ನು ತಿಳಿದು ಕೊಳ್ಳುವ ಪ್ರಯತ್ನಗಳೂ ನಡೆದಿವೆ.

ಜೀವಿಯೊಂದರಲ್ಲಿಯ ಕ್ರಿಯಾತ್ಮಕ ಸಮತೋಲನ ಮತ್ತು ಅದು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಮನಿಲುವೆ (ಹೋಮಿಯೋಸ್ಟೇಟಿಸ್)ಎಂದು ಹೆಸರು. ಇಲ್ಲಿ ಒಂದು ಪ್ರಸಾಮಾನ್ಯ ಪರಿಮಿತಿ ಉಂಟು. ಈ ಪರಿಮಿತಿಯ ಆಚೀಚೆಗೆ ಜೀವ ಕೋಶಗಳು ದಬ್ಬಲ್ಪಟ್ಟಾಗ ಅವುಗಳ ರಚನೆಯಲ್ಲಿ ಇಲ್ಲವೆ ಕಾರ್ಯದಲ್ಲಿ ಚ್ಯುತಿ ಏರ್ಪಡಬಹುದು. ಇಂಥ ಚ್ಯುತಿÂಗಳು ವಿಪರ್ಯಯಶೀಲವೋ (ರಿವರ್ಸಿ ಬಲ್) ಅವಿಪರ್ಯಯ ಶೀಲವೋ (ಇರ್ರಿವರ್ಸಿಬಲ್) ಆಗಿರಬಹುದು. ಎರಡನೆಯ ಬಗೆಯದ್ದಾದರೆ ಆ ಕೋಶಗಳು ಮಡಿಯುತ್ತವೆ. ಹೀಗಾಗಿ ವ್ಯತ್ಯಸ್ತ ಅಂಗಾಂಶಗಳು, ಅಂಗಗಳು ಮತ್ತು ಈ ಕಾರಣದಿಂದಾಗಿ ಜೀವಿಗಳಲ್ಲಿ ಉಪಕೋಶೀಯ ಬದಲಾವಣೆಗಳು ಅನುರಣಿಸಿ ಅಸ್ವಾಸ್ಥ್ಯ ತಲೆದೋರುತ್ತದೆ.

ಸಾಮಾನ್ಯವಾಗಿ ರೋಗಪ್ರಕ್ರಿಯೆಯ ಪ್ರಕಟಿತರೂಪ ಎಂದರೆ ಸುಸ್ತು, ನೋವು ಮತ್ತು ಆಯಾಸ. ಇವೇ ರೋಗದ ಅನುಭವಜನ್ಯ ಲಕ್ಷಣಗಳು. ಇವುಗಳ ಪರಿಣಾಮವಾಗಿ ಜ್ವರ, ರಕ್ತದೊತ್ತಡ, ಉಸಿರಾಟದ ದರದಲ್ಲಿ ಬದಲಾವಣೆಗಳು ತಲೆದೋರುತ್ತವೆ. ದೇಹದ ಅಂಗಗಳಿಗೋ ಅಂಗಭಾಗ ಗಳಿಗೋ ಬೇರೆ ಬೇರೆ ಲಕ್ಷಣಗಳನ್ನು ತೋರ್ಪಡಿಸುವ ಸ್ಥಿತಿ ಏರ್ಪಟ್ಟು ದೇಹ ರೋಗಪೀಡಿತವಾಗುತ್ತದೆ. ರೋಗಗಳ ಪ್ರಕಟಿತ ಲಕ್ಷಣಗಳನ್ನು ಆಧರಿಸಿ ರೋಗಗಳನ್ನು ವರ್ಗೀಕರಿಸುವುದಿದೆ. ಹೀಗೆ ವಿಂಗಡಿಸಬೇಕಾದರೆ ತೊಂದರೆಗಳು ಯಾವ ಯಾವ ಅಂಗಗಳಿಂದ ಉತ್ಪತ್ತಿಯಾಗುತ್ತಿರುವುವೋ ಆಯಾ ಅಂಗಗಳ ಕಾರ್ಯರೀತಿಗಳನ್ನು ಬೇರೆ ಬೇರೆ ದರ್ಜೆಗಳಾಗಿ ವಿಂಗಡಿಸಬೇಕಾಗುತ್ತದೆ. ದೇಹಾಂತರ್ಗತವಾದ ವಿಷಕ್ರಿಮಿಗಳಿಂದ ಉದ್ಭವಿಸುವ ಎಲ್ಲ ರೋಗಗಳ ಶುಶ್ರೂಷೆಗೆ ಬಳಕೆಯಾಗುವ ನಾನಾ ಬಗೆಯ ಔಷಧಿಗಳನ್ನು ಇಂದಿನ ಚಿಂತನೆ ಪ್ರಕಾರ ರಾಸಾಯನಿಕಗಳ ಗುಂಪಿಗೆ ಸೇರಿಸಿದೆ. ಔಷಧಿಗಳ ಸೇವನೆಯಿಂದ ರೋಗಗಳು ಬಲುಮಟ್ಟಿಗೆ ಪೂರ್ಣವಾಗಿ ಗುಣವಾಗುತ್ತವೆ. ಇನ್ನೂ ಕೆಲವು ರೋಗಗಳು ಪೂರ್ಣ ಗುಣವಾಗದಿದ್ದರೂ ಅವುಗಳ ತ್ರಾಸ ಬಲುಮಟ್ಟಿಗಾದರೂ ತಗ್ಗುತ್ತದೆ. ರೋಗಕಾರಕ ಕ್ರಿಮಿಗಳನ್ನು ನಾಶಗೊಳಿಸಿ ರೋಗನಿವಾರಣೆ ಮಾಡಲು ಬಳಸುವ ಔಷಧಿಗಳನ್ನು ಪ್ರಯೋಗಿಸುವ ಚಿಕಿತ್ಸೆಗೆ ರಾಸಾಯನಿಕ ಚಿಕಿತ್ಸೆ (ಕೀಮೋತೆರಪಿ) ಎಂದು ಹೆಸರು.

ದೇಹ ಒಂದು ಅಖಂಡ ವ್ಯವಸ್ಥೆ ಆಗಿದ್ದು ಅದರ ಯಾವುದೇ ಭಾಗ ರೋಗಗ್ರಸ್ತವಾದರೆ ಇಡೀ ದೇಹವೇ ಪ್ರತಿಕ್ರಿಯಿಸುತ್ತದೆ. ಅಧ್ಯಯನ ಮತ್ತು ಚಿಕಿತ್ಸೆ ಸಲುವಾಗಿ ರೋಗಗಳನ್ನು ಈ ಮುಂದಿನಂತೆ ವರ್ಗೀ ಕರಿಸಿದೆ: ಜೀರ್ಣನಾಳದ ರೋಗಗಳು, ಯಕೃತ್ತಿನ ರೋಗಗಳು, ಮೂತ್ರ ಪಿಂಡಗಳ ರೋಗಗಳು ಫುಪ್ಫುಸಗಳ ರೋಗಗಳು, ಹೃದಯ ಮತ್ತು ರಕ್ತನಾಳಗಳ ರೋಗಗಳು, ನರಸಂಬಂಧೀ ರೋಗಗಳು, ಅಂತರಸ್ಸ್ರಾವಕ ಗ್ರಂಥಿಗಳ ರೋಗಗಳು, ಹೈಪೋ ತೆಲಮಸ್ ಸಂಬಂಧೀ ರೋಗಗಳು, ಅಸ್ಥಿ ಸಂಬಂಧೀ ವ್ಯಾಧಿಗಳು, ನ್ಯೂನಪೋಷಣೆಯ ಕಾರಣವಾಗಿ ಬರುವವು, ಸೋಂಕುರೋಗಗಳು, ಮನೋವ್ಯಾಧಿಗಳು ಇತ್ಯಾದಿ.

ಪ್ರತಿಯೊಂದು ರೋಗವನ್ನು ಅದರ ಲಕ್ಷಣಗಳ ಪ್ರಕಾರ ಅಭ್ಯಸಿಸಿ ಸಮಗ್ರ ದೇಹದ ಸ್ವಾಸ್ಥ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ಚಿಕಿತ್ಸಿಸಬೇಕು. ರೋಗ ನಿದಾನಕ್ಕೆ ವರ್ತಮಾನ ದಿನಗಳಲ್ಲಿ ತಂತ್ರವಿದ್ಯೆಯ ಬಳಕೆ ವ್ಯಾಪಕವಾಗಿ ಚಲಾವಣೆಗೆ ಬಂದಿದೆ: ರಕ್ತ, ಉಗುಳು, ಮೂತ್ರ, ಮಲ ಮುಂತಾದವುಗಳ ಪರೀಕ್ಷೆ, ಇಸಿಜಿ, ಇಇಜಿ ಮುಂತಾದ ತಪಾಸಣೆಗಳೂ ಎಕ್ಸ್-ಕಿರಣ ಛಾಯಚಿತ್ರ ಇತ್ಯಾದಿ. ಇನ್ನೂ ಒಂದೊಂದು ವ್ಯವಸ್ಥೆಯಲ್ಲಿಯೂ (ಎಲೋಪತಿ, ಹೋಮಿಯೋಪತಿ, ಆಯುರ್ವೇದ, ಯುನಾನಿ ಇತ್ಯಾದಿ) ಹೇರಳ ಸಂಖ್ಯೆಯಲ್ಲಿ ಔಷಧಿಗಳು ಲಭ್ಯವಿವೆ.