ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಗ ಕಾರಣವಿಜ್ಞಾನ

ವಿಕಿಸೋರ್ಸ್ದಿಂದ

ರೋಗ ಕಾರಣವಿಜ್ಞಾನ ರೋಗಮೂಲ ಕುರಿತ ಅಧ್ಯಯನ (ಏಟಿಯಾಲಜಿ). ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ರೋಗರಹಿತ ವಾಗಿರುವ ಸ್ಥಿತಿಯೇ ಆರೋಗ್ಯ. ಇದನ್ನು ಕಾಪಾಡಲು ರೋಗಪ್ರಾರಂಭ ಹಂತದಲ್ಲಿಯೇ ಅದರ ಲಕ್ಷಣಗಳನ್ನು ಅವಲೋಕಿಸಿ, ಕಾರಣಗಳನ್ನು ಅರ್ಥಮಾಡಿಕೊಂಡು, ಕೆಲವು ತಪಾಸಣೆಗಳನ್ನು ನಡೆಸಿ, ಚಿಕಿತ್ಸಾಕ್ರಮಗ ಳನ್ನು ರೂಪಿಸಬೇಕಾಗುತ್ತದೆ. ರೋಗಗಳು ಶೀಘ್ರವಾಗಿಯೂ ಸಂಪೂರ್ಣ ವಾಗಿಯೂ ವಾಸಿಯಾಗುವುದು ಬಲು ಮುಖ್ಯ. ಏಕೆಂದರೆ, ದಿನಕಳೆದಂತೆ ಅವು ವರ್ಧಿಸಿ, ದೇಹದ ವಿವಿಧ ಅಂಗೋಪಾಂಗಗಳಿಗೆ ಹರಡಿ ಹಾನಿಮಾ ಡುವುದಷ್ಟೇ ಅಲ್ಲದೆ, ರೋಗದ ಚಿಹ್ನೆಗಳನ್ನು ಬದಲಾಯಿಸುತ್ತಲೂ ಇರುವುವು. ಭಾಗಶಃ ವಾಸಿಯಾದ ಕಾಯಿಲೆ ಮರುಕಳಿಸುವ ಸಾಧ್ಯತೆಯೂ ಉಂಟು. ಇದರಿಂದ ಕಾಯಿಲೆಯ ತೀವ್ರತೆ ಹೆಚ್ಚಿ, ಸಾವು ನೋವು ಸಂಭವಿಸುವುದು ಮಾತ್ರವಲ್ಲದೆ, ಕೌಟುಂಬಿಕ ಆರ್ಥಿಕ ವ್ಯವಸ್ಥೆಯ ಮೇಲೂ ಬಹಳಷ್ಟು ಪರಿಣಾಮಬೀರುತ್ತದೆ.

ವೈದ್ಯರು ಕಾಯಿಲೆಯ ವಿಶ್ಲೇಷಣೆಯನ್ನು ಹಲವು ಪ್ರಮುಖ ಹಂತಗಳಲ್ಲಿ ಮಾಡುತ್ತಾರೆ. ಮೊದಲನೆಯದು ರೋಗದ ಚರಿತ್ರೆ. ಪ್ರಾರಂಭವಾದ ಬಗೆ, ಚಿಹ್ನೆಗಳು, ಗಂಟೆ/ದಿನಗಳಲ್ಲಿ ಉಂಟಾದ ವ್ಯತ್ಯಾಸಗಳು, ಹೊಸ ತಿರುವುಗಳು, ರೋಗಿಯ ಪ್ರಕಾರ ರೋಗಕ್ಕೆ ಕಾರಣಗಳು, ಪರಿಸರದೊಡನೆ ಸಂಬಂಧ, ದೇಹದ ಬೇರೆಬೇರೆ ಭಾಗಗಳಲ್ಲಿ ಆಗಿರುವ ವ್ಯತ್ಯಯಗಳು, ಹಿಂದೆ ಇದೇ ರೀತಿಯ ಲಕ್ಷಣಗಳು ಕಂಡುಬಂದದ್ದು, ಕುಟುಂಬದ ಸದಸ್ಯರಿಗೆ ಮತ್ತು ಇತರರಿಗೆ ಈ ರೋಗಕ್ಕೆ ಸಂಬಂಧಿಸಿದ ಚಿಹ್ನೆಗಳು ಇದ್ದು ಅವುಗಳ ಬಗ್ಗೆ ಯಾವುದಾದರೂ ಪರೀಕ್ಷೆ ಮಾಡಿಸಿದ್ದರೆ ಆ ಮಾಹಿತಿಗಳನ್ನು ಸಂಗ್ರಹಿಸಿ ಕೂಲಂಕಷವಾಗಿ ವಿಶ್ಲೇಷಣೆ ಮಾಡಲಾಗುತ್ತದೆ. ಮುಂದಿನ ಹಂತ ಚಿಕಿತ್ಸಾಕ್ರಮ.

ಪ್ರತಿಯೊಂದು ಕಾಯಿಲೆಯೂ ತನ್ನದೇ ಆದ ರೋಗ ನಿದಾನವನ್ನು ಅನುಸರಿಸುತ್ತದೆ. ಪ್ರಾರಂಭದ ಬಗೆ, ರೋಗ ಯಾವ ಯಾವ ಅಂಗಗಳಿಗೆ ಸಂಬಂಧಿಸಿದ್ದು ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. ರೋಗಿಯ ಸಂಪೂರ್ಣ ಪರೀಕ್ಷೆಯಿಂದ ರೋಗದ ಗತಿ, ತೀವ್ರತೆ, ವಿಧಗಳ ಬಗ್ಗೆ ವಿಷಯ ತಿಳಿಯುತ್ತದೆ. ಅದಕ್ಕೆ ತಕ್ಕಂತೆ, ಪ್ರಯೋಗಾಲಯ ಗಳಲ್ಲಿ ರಕ್ತ, ಮಲಮೂತ್ರ, ಕಫ ಪರೀಕ್ಷೆ, ಎಕ್ಸ್‍ಕಿರಣ ಛಾಯಾಚಿತ್ರ, ಅಲ್ಟ್ರಾಸೌಂಡ್, ಸಿ.ಟಿ. ಸ್ಕ್ಯಾನ್, ದೇಹದ ವಿವಿಧ ದ್ರವಗಳ ಪರೀಕ್ಷೆ ಮುಂತಾದ ತಪಾಸಣೆಗಳ ಮೂಲಕ ರೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಇವೆಲ್ಲವನ್ನೂ ವಿಶ್ಲೇಷಿಸಿದಾಗ ರೋಗ ಕುರಿತಂತೆ ನಿಖರವಾದ ಒಂದು ಚಿತ್ರಣ ಮೂಡುತ್ತದೆ. ಇವೆಲ್ಲವನ್ನೂ ಆಧರಿಸಿ ಯುಕ್ತ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ರೋಗಲಕ್ಷಣ ಮತ್ತು ಪ್ರಯೋಗಾಲಯದ ಪರೀಕ್ಷಾ ವರದಿಗಳ ತಪಾಸಣೆ ಯಿಂದ ರೋಗಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾದರೂ ಕೆಲವು ಸಲ ವಿಭಿನ್ನ ಲಕ್ಷಣಗಳಿಂದ ಮತ್ತು ಪರೀಕ್ಷೆಯಲ್ಲಿ ಖಡಾಖಂಡಿತವಲ್ಲದ ವರದಿಯಿಂದ ಹಾಗೂ ಚಿಕಿತ್ಸೆ ಪ್ರಾರಂಭವಾಗಿದ್ದರೆ ಔಷಧಗಳ ಪರಿಣಾಮಗಳಿಂದ ರೋಗದ ಪತ್ತೆಕಾರ್ಯ ಕಷ್ಟವಾಗುತ್ತದೆ. ಪೂರ್ಣ ಗುಣವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಬಲು ಮುಖ್ಯ, ಏಕೆಂದರೆ ರೋಗ ಮತ್ತೆ ಉಲ್ಬಣಗೊಳ್ಳುವ ಅಥವಾ ಸ್ವಲ್ಪ ಕಾಲಾನಂತರ ಮರುಕಳಿಸುವ ಸಾಧ್ಯತೆ ಇರಬಹುದು. (ಎಸ್.ಎನ್.ಎಮ್.)