ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೋಡ್ಸ್‌ ಹುಲ್ಲು

ವಿಕಿಸೋರ್ಸ್ದಿಂದ

ರೋಡ್ಸ್ ಹುಲ್ಲು ಪೋಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಹುಲ್ಲು. ಕ್ಲೋರಿಸ್ ಗಯಾನ ಇದರ ವೈಜ್ಞಾನಿಕ ಹೆಸರು. ದಕ್ಷಿಣ ಆಫ್ರಿಕ ಇದರ ತವರು. ಭಾರತದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತಿದ್ದು ದನಗಳಿಗೆ ಒಳ್ಳೆಯ ಮೇವಾಗಿ ಪ್ರಸಿದ್ಧವಾಗಿದೆ. ಇದು 1-1.5ಮೀ ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯ. ಉಷ್ಣತೆ ಮತ್ತು ಆದ್ರ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. ಇದನ್ನು ಬೇರು ತುಂಡುಗಳಿಂದ ವೃದ್ಧಿಸಲಾಗುತ್ತದೆ. ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಸಬಹುದಾದರೂ ಚಳಿಗಾಲ ಇದರ ಬೆಳೆವಣಿಗೆಗೆ ಹೆಚ್ಚು ಅನುಕೂಲ. ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ವರ್ಷಕ್ಕೆ 7-8 ಬಾರಿ ಇದನ್ನು ಕಟಾಯಿಸಬಹುದು.