ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರ್ಯಾಕೂನ್

ವಿಕಿಸೋರ್ಸ್ದಿಂದ

ರ್ಯಾಕೂನ್ ಉತ್ತರ ಅಮೆರಿಕದಲ್ಲಿ ಕಾಣದೊರೆಯುವ ಮಾಂಸಾ ಹಾರಿ ಸ್ತನಿ. ಕಾರ್ನಿವೊರ ಗಣದ ಪ್ರೋಸೈಯಾನಿಡೀ ಕುಟುಂಬಕ್ಕೆ ಸೇರಿದೆ. ಪ್ರೋಸೈಯಾನ್ ಜಾತಿಯ ಸುಮಾರು 7 ಪ್ರಭೇದಗಳಿಗೆ ಸಾಮಾನ್ಯವಾಗಿ ಈ ಹೆಸರು ಅನ್ವಯವಾಗುವುದಾದರೂ ಪ್ರಮುಖವಾಗಿ ಈ ಹೆಸರಿನಿಂದ ಪ್ರಸಿದ್ಧವಾಗಿರುವುದು ಪ್ರೋಸೈಯಾನ್ ಲೋಟೊರ್ ಎಂಬುದು ಮಾತ್ರ.

ದೇಹದ ಉದ್ದ ಸುಮಾರು 40-60 ಸೆಂಮೀ. ಭುಜದ ಬಳಿಯ ಎತ್ತರ 20-30 ಸೆಂಮೀ. ತೂಕ 1.5-2.5 ಕೆಜಿ. ಮೈಬಣ್ಣ ಬೂದು. 20-40 ಸೆಂಮೀ ಉದ್ದದ ಬಾಲವುಂಟು. ಮೈಮೇಲೂ ಬಾಲದಲ್ಲೂ ಹುಲುಸಾದ, ಮೃದುವಾದ ತುಪ್ಪಳಿನಂಥ ಕೂದಲುಗಳಿವೆ. ಬಾಲದಲ್ಲಿ ಕಪ್ಪುಬಣ್ಣದ 5-10 ಪಟ್ಟೆಗಳಿವೆ. ಮುಸುಡಿ ನಾಯಿಮುಸುಡಿಯಂತೆ ಮುಂಚಾಚಿದೆ. ಮುಖದ ಮೇಲೆ ಕಪ್ಪುಬಣ್ಣದ ಅಡ್ಡ ಪಟ್ಟೆಯುಂಟು ಕಾಲುಗಳಲ್ಲಿ ಉದ್ದ ಬೆರಳುಗಳೂ ಚೂಪು ನಖಗಳೂ ಇವೆ. ಕೈಗಳನ್ನು ಕೋತಿಗಳು ಬಳಸುವಂತೆಯೇ ಬಲುಸಮರ್ಥವಾಗಿ ಬಳಸಬಲ್ಲುದು.

ರ್ಯಾಕೂನ್ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರದ ಪೊಟರೆಗ ಳಲ್ಲೊ ಕಲ್ಲುಬಂಡೆಗಳ ಸಂದುಗಳಲ್ಲೊ ಮಲಗಿದ್ದು ರಾತ್ರಿವೇಳೆ ಬೇಟೆ ಅರಸಿ ಹೊರಡುತ್ತದೆ. ಮರ ಹತ್ತುವುದರಲ್ಲಿ ಅಂತೆಯೇ ನೀರಿನ ಮೇಲೆ ಈಸುವುದರಲ್ಲಿ ನಿಷ್ಣಾತ. ಇದು ಎಲ್ಲ ಬಗೆಯ ಆಹಾರವನ್ನು ತಿನ್ನುತ್ತದಾದರೂ ಜಲಜೀವಿಗಳಾದ ಕಪ್ಪೆ, ಮೀನು, ಸಣ್ಣಪುಟ್ಟ ನೆಲಪ್ರಾಣಿ ಗಳನ್ನೂ ಇಷ್ಟಪಡುತ್ತದೆ. ಹಲವಾರು ಬಗೆಯ ಕಾಯಿ, ಬೀಜ, ಕಾಳುಗಳನ್ನೂ ತಿನ್ನುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನಗಳ ದಕ್ಷಿಣ ಪ್ರಾಂತ್ಯಗಳಲ್ಲಿ ಕಾಣಸಿಗುವ ರ್ಯಾಕೂನ್ ವರ್ಷವಿಡೀ ಚಟುವಟಿಕೆಯಿಂದ ಇರುತ್ತದೆ ಆದರೆ ಉತ್ತರ ಭಾಗದಲ್ಲಿ ಜೀವಿಸುವ ರ್ಯಾಕೂನ್ ಜಾತಿ ಚಳಿಗಾಲದಲ್ಲಿ ಶಿಶಿರ ನಿದ್ರಾವಶವಾಗುತ್ತದೆ.

ಇದರ ಸಂತಾನವೃದ್ಧಿಯ ಕಾಲ ಜನವರಿಯಿಂದ ಜೂನ್. ಗರ್ಭಾ ವಸ್ಥೆಯ ಅವಧಿ ಸುಮಾರು 65 ದಿವಸಗಳು. ಒಂದು ಸೂಲಿಗೆ 1-7 ಮರಿ ಹುಟ್ಟುತ್ತವೆ. ಮರಿಗಳು ಸುಮಾರು 10 ವಾರಗಳ ಕಾಲ ತಾಯಿಯೊಡನೆಯೇ ಇದ್ದು ನಿಧಾನವಾಗಿ, ಅಂದರೆ ಒಂದು ವರ್ಷ ವಯಸ್ಸಿನವಾಗುವ ವೇಳೆಗೆ ಸ್ವತಂತ್ರವಾಗಿ ಜೀವಿಸತೊಡಗುತ್ತವೆ. ರ್ಯಾಕೂನಿನ ಆಯುಸ್ಸು ಸುಮಾರು 10-15 ವರ್ಷಗಳು.