ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಕ್ಷ್ಮಣಸ್ವಾಮಿ ಮೊದಲಿಯಾರ್, ಆರ್ಕಾಟ್

ವಿಕಿಸೋರ್ಸ್ದಿಂದ

1887-1974. ಸುಪ್ರಸಿದ್ಧ ವೈದ್ಯರು ಹಾಗೂ ಖ್ಯಾತ ಶಿಕ್ಷಣ ತಜ್ಞರು. ಇವರು ಆಂಧ್ರಪ್ರದೇಶದ ಕರ್ನೂಲಿನಲ್ಲಿ 1887 ಅಕ್ಟೋಬರ್ 14ರಂದು ಜನಿಸಿದರು. ತಂದೆ ಕುಪ್ಪುಸ್ವಾಮಿ ಮೊದಲಿಯಾರ್, ಅಣ್ಣ ಮೈಸೂರಿನ ಕೊನೆಯ ದಿವಾನರಾಗಿದ್ದ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್. ಇವರು ಅವಳಿ-ಜವಳಿ ಮಕ್ಕಳು. ಇವರು ಮದರಾಸಿನ ಕ್ರಿಶ್ಚನ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ವೈದ್ಯ ಪದವಿ ಪಡೆದರು. ಅನಂತರ ಕಲಿತ ಕಾಲೇಜಿನಲ್ಲೇ ಪ್ರಾಧ್ಯಾಪಕರಾಗಿ(1934-42), ಕಾಲೇಜಿನ ಪ್ರಾಂಶುಪಾಲರಾಗಿ(1939-42) ಕಾರ್ಯನಿರ್ವಹಿಸಿದರು. ಮದರಾಸು ವೈದ್ಯಕೀಯ ಕಾಲೇಜು ಆ ಕಾಲದಲ್ಲಿ ಬ್ರಿಟಿಷರ ಮೀಸಲು ಕ್ಷೇತ್ರವಾಗಿತ್ತು. ಬ್ರಿಟಿಷ್ ವೈದ್ಯರು ಮಾತ್ರ ಪ್ರಾಂಶುಪಾಲರಾಗಲು ಅರ್ಹರೆಂಬ ಅಭಿಪ್ರಾಯ ಆಗಿನದು. ಮೊದಲಿಯಾರರು ಆ ಸಂಸ್ಥೆಯ ಪ್ರಪ್ರಥಮ ಭಾರತೀಯ ಪ್ರಾಂಶುಪಾಲರಾಗಿ ನೇಮಕಗೊಂಡು ದಾಖಲೆ ಸ್ಥಾಪಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿಯೂ ಭಾರತೀಯರು ಬ್ರಿಟಿಷರಿಗೆ ಹೆಗಲೆಣೆ ಎಂಬ ಅಂಶವನ್ನು ತೋರಿಸಿಕೊಟ್ಟರು.

ಮದರಾಸಿನ ಎಗ್ಮೋರಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯಾಧಿಕಾರಿಯಾಗಿ ಇವರು ಮಾಡಿದ ಸೇವೆ ಆ ಆಸ್ಪತ್ರೆಯ ಇತಿಹಾಸ ದಲ್ಲಿಯೇ ಗಮನಾರ್ಹವಾದುದು. ಏಷ್ಯದ ಉತ್ತಮ ಆಸ್ಪತ್ರೆಗಳಲ್ಲೊಂದೆಂದು ಅದು ಖ್ಯಾತಿಗಳಿಸುವುದಕ್ಕೆ ಇವರೇ ಕಾರಣ. ಇವರು ರಚಿಸಿದ ಸೂಲಗಿತ್ತಿಯರ ದೀಪಿಕೆ, ಶಿಶುಗಳ ಜನನ ಪೂರ್ವ ಮತ್ತು ಜನನೋತ್ತರ ಮರಣ, ಹೆರಿಗೆಯ ಬಗ್ಗೆ ಪ್ರಾಯೋಗಿಕ ತರಬೇತಿ ಗ್ರಂಥಗಳು-ಇವು ಇವರ ವಿದ್ವತ್ತಿಗೆ ಸಾಕ್ಷಿಯಾಗಿವೆ.

ಮದರಾಸು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ (1925) ಇವರು ಕೈಗೊಂಡ ಸುಧಾರಣೆ ಹಾಗೂ ದಕ್ಷ ಆಡಳಿತದಿಂದ ಜನರ ಮೆಚ್ಚಿಗೆ ಪಡೆದರು. ಅನಂತರ ಆ ವಿಶ್ವವಿದ್ಯಾಲಯದ ಕುಲಪತಿಯಾದರು. ದಕ್ಷ ಆಡಳಿತದ ಮೂಲಕ ವಿಶ್ವವಿದ್ಯಾಲಯದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸಿದರು. ಶಿಕ್ಷಣ ಸಂಬಂಧವಾದ ಯಾವುದೇ ಸಮಸ್ಯೆಯನ್ನೂ ಶಿಕ್ಷಕರ ದೃಷ್ಟಿಯಿಂದಲೇ ವಿವೇಚಿಸುವುದು ಇವರ ಕಾರ್ಯನೀತಿಯಾಗಿತ್ತು. ಶಿಕ್ಷಣಕ್ಕೆ ರಾಜಕೀಯ ಬೆರೆಸುವಿಕೆಯನ್ನು ಇವರು ಕಟುವಾಗಿ ವಿರೋಧಿಸಿದರು. ವೈದ್ಯರಾಗಿ, ಶಿಕ್ಷಕರಾಗಿ ವಿಕಾಸಗೊಂಡ ಇವರದು ಚಿಕಿತ್ಸಕ ಮನೋಭಾವ. ಶಿಕ್ಷಕರ ಕಷ್ಟಸುಖಗಳ ಬಗೆಗಿನ ಅರಿವು, ಸಹಾನುಭೂತಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಕೊನೆಯವರೆಗೂ ಗೌರವ ಉಳಿಸಿಕೊಳ್ಳಲು ಕಾರಣವಾದ ಸಂಗತಿಗಳಾಗಿದ್ದುವು.

ಬ್ರಿಟಿಷ್ ಆಡಳಿತದ ಶಿಸ್ತಿನ ಪರಿಸರದಲ್ಲಿ ಬೆಳೆದು ಬಂದ ಇವರಿಗೆ ಇಂಗ್ಲಿಷಿನ ಬಗ್ಗೆ ವಿಶೇಷ ವ್ಯಾಮೋಹವಿತ್ತು. ಜ್ಞಾನ ವಿಜ್ಞಾನಗಳಿಗೆ ಇಂಗ್ಲಿಷ್ ಭಾಷೆಯೇ ಹೆಬ್ಬಾಗಿಲು ಎಂಬುದು ಇವರ ದೃಷ್ಟಿಯಾಗಿತ್ತು. ಇಂಗ್ಲಿಷ್ ಮಾಧ್ಯಮದ ಬಗೆಗೆ ಇವರಿಗೆ ಅಚಲ ವಿಶ್ವಾಸವಿತ್ತು.

ಇವರು ಅನೇಕ ಅಧಿಕಾರಸ್ಥಾನದಲ್ಲಿ, ಅನೇಕ ಕ್ಷೇತ್ರಗಳಲ್ಲಿ ದುಡಿದರು. ಭಾರತೀಯ ವಿಶ್ವವಿದ್ಯಾಲಯಗಳ ಪಂಚವಾರ್ಷಿಕ ಅಧಿವೇಶನಗಳಲ್ಲಿ ಮದರಾಸು ವಿಶ್ವವಿದ್ಯಾಲಯವನ್ನು ಸದಾಪ್ರತಿನಿಧಿಸುತ್ತಿದ್ದರು. ಅಂತರ ವಿಶ್ವವಿದ್ಯಾಲಯ ಮಂಡಳಿ(1949), ಭಾರತೀಯ ತಾಂತ್ರಿಕ ಸಂಸ್ಥೆಯ ಆಡಳಿತ ಮಂಡಳಿ, ಕಾಮನ್‍ವೆಲ್ತ್ ವಿಶ್ವವಿದ್ಯಾಲಯಗಳ ಸಮ್ಮೇಳನದ ಆಡಳಿತ ಮಂಡಳಿ ಮುಂತಾದ ಹಲವು ಸಂಸ್ಥೆ ಸಮಿತಿಗಳ ಸದಸ್ಯರಾಗಿ, ಭಾರತೀಯ ವಿಜ್ಞಾನ ಕಾಂಗ್ರೆಸಿನ ಅಧ್ಯಕ್ಷರಾಗಿ(1959)-ಇವರು ಕಾರ್ಯ ನಿರ್ವಹಿಸಿದರು. ಅನೇಕ ಗೌರವ ಮತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್ ಓ) ಭಾರತೀಯ ನಿಯೋಗಕ್ಕೆ ಸದಸ್ಯರಾಗಿದ್ದ ಇವರು ವಿಶ್ವಸಂಸ್ಥೆಯ ಶಿಕ್ಷಣ ಮತ್ತು ವಿಜ್ಞಾನ ಸಂಘಟನೆಯ ಆಡಳಿತ ಮಂಡಳಿಯ (ಯುನೆಸ್ಕೊ) ಅಧ್ಯಕ್ಷರೂ ಆಗಿದ್ದರು(1961). ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮದರಾಸಿನ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕಗೊಂಡಿದ್ದರು. ಎಂ.ಡಿ.(1922), ಎಲ್‍ಎಲ್.ಡಿ., ಡಿ.ಸಿ.ಎಲ್., ಡಿ.ಎಸ್‍ಸಿ., ಡಿ.ಲಿಟ್., ಎಫ್.ಆರ್.ಸಿ.ಓ.ಜಿ. (1930), ಎಫ್.ಎ.ಸಿ.ಎಸ್.(1940), ಎಫ್.ಆರ್.ಸಿ.ಪಿ.(ಎಡಿನ್‍ಬರೋ 1966), ಪದ್ಮಭೂಷಣ(1954), ಪದ್ಮವಿಭೂಷಣ(1970), ಲಿಯಾನ್ ಬರ್ನಾರ್ಡ್ ಪ್ರತಿಷ್ಠಾನದ ಪದಕ(1970) ಮುಂತಾದ ಪದವಿ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ರತ್ನಾಬಾಯಿ ಇವರ ಪತ್ನಿ(1916). ಈ ದಂಪತಿಗಳಿಗೆ ಮೂವರು ಗಂಡು ಮಕ್ಕಳೂ ಒಬ್ಬ ಮಗಳೂ ಇದ್ದರು. ಇವರು 1974ರಂದು ನಿಧನ ಹೊಂದಿದರು.

(ವಿ.ಜಿ.ಕೆ.)