ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಾವಂಚ

ವಿಕಿಸೋರ್ಸ್ದಿಂದ

ಪೊಯೇಸೀ ಅಥವಾ ಗ್ರಾಮಿನೇ ಕುಟುಂಬದ ವೆಟಿಮೀರಿಯ ಜಿಜನೊಯಿಡಿಸ್ ಎಂಬ ಉಪಯುಕ್ತ ಗಿಡ. ಸಸ್ಯ ಮೈದಾನ, ಗುಡ್ಡಪ್ರದೇಶಗಳಲ್ಲಿ ಮತ್ತು ನದಿ ದಡದಲ್ಲಿ ಸಹಜವಾಗಿ ಬೆಳೆಯುತ್ತದೆ. ಸಮುದ್ರಮಟ್ಟಕ್ಕಿಂತ ಸು. 1200 ಮೀ ಎತ್ತರದವರೆಗೆ ಮತ್ತು ವರ್ಷಕ್ಕೆ 100-200 ಸೆಂಮೀ ಮಳೆ ಸುರಿವ ಪ್ರದೇಶಗಳಲ್ಲಿ ಇವನ್ನು ಬೆಳೆಸಬಹುದು. ಇದೊಂದು ಬಹುವಾರ್ಷಿಕ ಸಸ್ಯ. ದುಂಡಗಿರುವ ಕಾಂಡ ಭೂಮಿಯಲ್ಲಿ ಹುದುಗಿರುತ್ತದೆ. ಎಲೆಗಳ ಉದ್ದ 1.5-2 ಮೀ, ಅಗಲ 1-20 ಸೆಂಮೀ. ಸಸ್ಯದ ಬೇರುಗಳು ಮೃದು. ಸುವಾಸನೆಉಂಟು. ಬಣ್ಣ ತಿಳಿಹಳದಿ, ಹಳದಿ, ಕಂದು ಅಥವಾ ತಿಳಿಗೆಂಪು. ಸಂಕೀರ್ಣ ಪುಷ್ಪಗುಚ್ಛ (ಪ್ಯಾನಿಕಲ್). ಇದರ ಉದ್ದ 15-40 ಸೆಂಮೀ. ಹೂಗಳಿಗೆ ಸ್ಪೈಕ್‍ಲೆಟ್‍ಗಳು (ಕಿರುಹೂಗಳು) ಎಂದು ಹೆಸರು. ಇವುಗಳಿಗೆ ತಿಳಿಹಸುರು ಅಥವಾ ನೇರಿಳೆ ಬಣ್ಣ ಲೇಪಿಸಿದಂತಿರುವುವು. ಗಿಡಬೆಳೆದು ಒಂದು ವರ್ಷದ ಬಳಿಕ ಬೇರುಗಳನ್ನು ಮೊನಚಾದ ಚಾಕಿನಿಂದ ಬೇರ್ಪಡಿಸಲಾಗುತ್ತದೆ. ತಾಜಾ ಬೇರುಗಳಿಂದ ಅಥವಾ ಗಾಳಿಯಲ್ಲಿ ಒಣಗಿಸಿದವುಗಳಿಂದ ಎಣ್ಣೆಯನ್ನು ಬಟ್ಟಿಯಿಳಿಸಲಾಗುವುದು. ಇದು ಸುವಾಸನಾ ಯುಕ್ತವಾಗಿರುತ್ತದೆ. ಉತ್ತರ ಭಾರತದಲ್ಲಿ ಬೆಳೆಸಿದ ಸಸ್ಯಗಳಿಂದ ತಯಾರಿಸಿದ ಎಣ್ಣೆಯಲ್ಲಿ ವಾಮಾವರ್ತಕ (ಲಿವೋರೊಟೇಟರಿ), ದಕ್ಷಿಣ ಭಾರತದ್ದು ದಕ್ಷಿಣಾವರ್ತಕ (ಡೆಕ್ಸ್‍ಟ್ರೊರೊಟೇಟರಿ). ಲಾವಂಚದ ಎಣ್ಣೆಯನ್ನು ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಶ್ರೀಲಂಕಾದ ಚಹಾ ತೋಟಗಳಲ್ಲಿ ಲಾವಂಚ ಹುಲ್ಲನ್ನು ಮಣ್ಣು ಸವೆತ ನಿಯಂತ್ರಿಸಲು ಬೆಳೆಸುತ್ತಾರೆ. ಚಾಪೆ, ಬುಟ್ಟಿ, ಪರದೆಗಳನ್ನು ಹೆಣೆಯಲು ಕೂಡ ಉಪಯೋಗವಾಗುತ್ತದೆ. ಬೇರುಗಳಿಂದ ಹೆಣೆದ ಬೀಸಣಿಗೆಗಳ ಮೇಲೆ ನೀರು ಚಿಮುಕಿಸಿ, ಗಾಳಿ ಹಾಕುವ ರೂಢಿ ಹಿಂದಿನ ಶತಮಾನಗಳಲ್ಲಿ ಬಳಕೆಯಲ್ಲಿತ್ತು. ಮೊಗಲ್‍ದೊರೆಗಳ ಕಾಲದಲ್ಲಿ ಇವು ಉಪಯೋಗದಲ್ಲಿದ್ದುವು. ಅಂಥ ಬೀಸಣಿಗೆಯಿಂದ ಬಂದ ಗಾಳಿ ಸುವಾಸನಾಭರಿತವಾಗಿರುತ್ತದೆ. ಬೇರುಗಳಿಂದ ಬೇರ್ಪಡಿಸಿರುವ ಜಿಜಿನಾಲ್ ಮತ್ತು ಎಪಿಜಿಜಿನಾಲ್ ಎಂಬ ಟರ್ಪಿನಾಯ್ಡುಗಳು ಸೊಳ್ಳೆಗಳನ್ನು ದೂರವಿಡುತ್ತದೆ. (ಟಿ.ಎಮ್.ಆರ್.)