ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಿತಿಯಮ್

ವಿಕಿಸೋರ್ಸ್ದಿಂದ

ಆಧುನಿಕ ಆವರ್ತಕೋಷ್ಟಕದ 1ಎ ಗುಂಪಿನ 2ನೆಯ ಆವರ್ತದ ಮೊದಲನೆಯ ಧಾತು. ಪ್ರತೀಕ Li, ಪರಮಾಣುಸಂಖ್ಯೆ 3, ಪರಮಾಣುರಾಶಿ 6.939, ಬೆಳ್ಳಿಬಿಳುಪಿನ ಅತ್ಯಂತ ಹಗುರವಾದ ಏಕವೇಲೆನ್ಸೀಯ ಕ್ಷಾರೀಯಲೋಹ. ಕುದಿಬಿಂದು 179° ಸೆ, ದ್ರವನಬಿಂದು 1317° ಸೆ, ಸಾಪೇಕ್ಷಸಾಂದ್ರತೆ 0.534, ಎಲೆಕ್ಡ್ರಾನ್ ವಿನ್ಯಾಸ 1s22s1. ಯೋಹನ್ ಆಗಸ್ಟ್ ಅಫ್ರ್ವೆಡ್‍ಸನ್ ಎಂಬಾತನಿಂದ 1817ರಲ್ಲಿ ಶಿಲಾರೂಪದ ಖನಿಜ ಪೆಟಲೈಟ್ ವಿಶ್ಲೇಷಣೆ ಮುಖೇನ ಆವಿಷ್ಕಾರ. ಶಿಲಾಮಯ ಎಂಬ ಅರ್ಥದ ಗ್ರೀಕ್‍ಪದ ಲಿತಿಯೋಸ್‍ನಿಂದ ಈ ಹೆಸರು. ದ್ರವ ಲಿತಿಯಮ್ ಕ್ಲೋರೈಡಿನ ವಿದ್ಯುದ್ವಿಭಜನೆಯಿಂದ ಅಲ್ಪ ಪ್ರಮಾಣದಲ್ಲಿ ಶುದ್ಧ ಲಿತಿಯಮನ್ನು ಪಡೆದ ಖ್ಯಾತಿ ಡೇವಿಗೆ (1778-1829) ಸಲ್ಲುತ್ತದೆ.

ಭೂಮಿಯ ಚಿಪ್ಪಿನಲ್ಲಿ ದೊರೆಯುವ ಧಾತುಗಳ ಪೈಕಿ ಸಮೃದ್ಧಿಯ ದೃಷ್ಟಿಕೋನದಿಂದ ಇದರ ಸ್ಥಾನ 35. ಶುದ್ಧರೂಪದಲ್ಲಿ ಇದು ನಿಸರ್ಗದಲ್ಲಿ ದೊರಕುವುದಿಲ್ಲವಾದರೂ ಅಲ್ಯುಮಿನೊಸಿಲಿಕೇಟುಗಳ ರೂಪದಲ್ಲಿ ಸ್ಪಾಡ್ಯುಮಿನ್, ಲೆಪಿಡೊಲೈಟ್, ಆಂಬ್ಲಿಗೋನೈಟ್ ಮತ್ತು ಪೆಟಲೈಟ್ ಖನಿಜಗಳಲ್ಲಿ ಲಾಭದಾಯಕವಾಗಿ ಆಹರಿಸುವಷ್ಟು ಪ್ರಮಾಣದಲ್ಲಿ ಲಭ್ಯ. ಖನಿಜ ಚಿಲುಮೆಗಳು, ಸಮುದ್ರನೀರು, ಬಿಟ್ಯುಮೆನ್‍ಯುಕ್ತ ಕಲ್ಲಿದ್ದಲು, ಮಣ್ಣು, ಪ್ರಾಣಿ ಮತ್ತು ಸಸ್ಯ ಊತಕಗಳು ಇವುಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿದೆ. ಗ್ರಾಫೈಟ್ ಆನೋಡ್ ಹಾಗೂ ಉಕ್ಕಿನ ಕ್ಯಾತೋಡ್ ಬಳಸಿ ಲಿತಿಯಮ್ ಕ್ಲೋರೈಡ್ ಮತ್ತು ಪೊಟ್ಯಾಸಿಯಮ್ ಕ್ಲೋರೈಡುಗಳ ದ್ರವಿತ ಮಿಶ್ರಣದ ವಿದ್ಯುದ್ವಿಭಜನೆಯಿಂದ ಇದನ್ನು ಉತ್ಪಾದಿಸಲಾಗುತ್ತಿದೆ.

ಈ ತನ್ಯಲೋಹಕ್ಕೆ ಕಾಯಕೇಂದ್ರಿತ ಘನಸ್ಫಟಿಕೀಯ ಸಂರಚನೆ ಇದೆ. ಇದು ಸೀಸಕ್ಕಿಂತ ಮೃದುವಾಗಿದ್ದರೂ ಇತರ ಕ್ಷಾರೀಯ ಲೋಹ ಗಳಿಗಿಂತ ಗಡಸು. ಜ್ವಾಲೆಗೆ ಕೆಂಪು ಬಣ್ಣ ನೀಡುವ ಲಿತಿಯಮ್, ನೀರಿನಲ್ಲಿ ತೇಲುತ್ತ ಅದರೊಂದಿಗೆ ವರ್ತಿಸಿ ಲಿತಿಯಮ್ ಹೈಡ್ರಾಕ್ಸೈಡ್ ಮತ್ತು ಹೈಡ್ರ್ರೊಜನ್‍ಗಳನ್ನು ಉತ್ಪಾದಿಸುತ್ತದೆ. ವಾಯುವಿನಲ್ಲಿರುವ ತೇವಾಂಶದೊಂದಿಗೆ ವರ್ತಿಸಿ ಕ್ಷಯಿಸುವುದರಿಂದ ನ್ಯಾಫ್ತದ್ರವದಲ್ಲಿ ಅಥವಾ ಪೆಟ್ರೊಲೇಟಮ್ ಲೇಪಿಸಿ ಇದನ್ನು ದಾಸ್ತಾನಿಸಲಾಗುತ್ತದೆ. ಲಿತಿಯಮ್-7 (92.5%), ಲಿತಿಯಮ್-6 (7.5%) ಇವು ಲಿತಿಯಮ್‍ನ ಸ್ವಾಭಾವಿಕ ಸಮಸ್ಥಾನಿಗಳು. 1 ಸೆಕೆಂಡಿಗಿಂತ ಕಡಿಮೆ ಅರ್ಧಾಯುವುಳ್ಳ 5 ವಿಕಿರಣಪಟು ಸಮಸ್ಥಾನಿಗಳನ್ನು (ಲಿತಿಯಮ್-5, ಲಿತಿಯಮ್-8, ಲಿತಿಯಮ್-9, ಲಿತಿಯಮ್-10, ಲಿತಿಯಮ್-11) ತಯಾರಿಸಲಾ ಗಿದೆ. ಲಿತಿಯಮ್-6ನ್ನು ಮಂದಗತಿ ನ್ಯೂಟ್ರಾನ್‍ಗಳಿಂದ ತಾಡಿಸಿದರೆ ಹೀಲಿಯಮ್ ಮತ್ತು ಟ್ರೈಟಿಯಮ್ ದೊರೆಯುತ್ತವೆ. ಅಲ್ಪ ಪ್ರಮಾಣದಲ್ಲಿ ಲಿತಿಯಮ್ ಬೆರೆಸುವುದರಿಂದ ಅಲ್ಯೂಮಿನಿಯಮ್, ಸೀಸಗಳಂಥ ಮೃದು ಲೋಹಗಳು ಗಡಸಾಗುತ್ತವೆ. ತನ್ನ ಮೂರು ಎಲೆಕ್ಟ್ರಾನುಗಳ ಪೈಕಿ ಒಂದನ್ನು ಸುಲಭವಾಗಿ ಕಳೆದುಕೊಂಡು Li+ ಕ್ಯಾಟಯಾನ್ ಇರುವ ಸಂಯುಕ್ತಗಳನ್ನು ರೂಪಿಸಬಲ್ಲ ಸಕ್ರಿಯ ಧಾತು ಲಿತಿಯಮ್. ಇದರ ಸಂಯುಕ್ತಗಳಿಗೂ ಇತರ ಕ್ಷಾರೀಯ ಲೋಹಗಳ ಅದೇ ರೀತಿಯ ಸಂಯುಕ್ತಗಳಿಗೂ ದ್ರಾವ್ಯತೆ ಅಥವಾ ವಿಲೇಯತೆಯಲ್ಲಿ (ಸಾಲ್ಯುಬಿಲಿಟಿ) ಗಮನಾರ್ಹ ವ್ಯತ್ಯಾಸ ಇದೆ.

ಲಿತಿಯಮ್ ಮತ್ತು ಅದರ ಸಂಯುಕ್ತಗಳ ಅನ್ವಯಗಳು ಅನೇಕ. ಉದಾ: ಡಿಆಕ್ಸಿಡೀಕಾರಕವಾಗಿ ಮತ್ತು ನಾನ್-ಫೆರ್ರಸ್ ಎರಕಗಳ ತಯಾರಿಕೆಯಲ್ಲಿ ಅನಪೇಕ್ಷಿತ ಅನಿಲಗಳನ್ನು ನಿವಾರಿಸಲು ಲಿತಿಯಮ್‍ನ, ಕೆಲವು ಕುಲುಮೆಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್ ಹಕ್ಕಳೆ (ಸ್ಕೇಲ್) ಕಟ್ಟದಂತೆ ತಡೆಯಲು ಲಿತಿಯಮ್ ಬಾಷ್ಪದ ಬಳಕೆ ಇದೆ. ಆಕಾಶನೌಕೆ ಮತ್ತು ಜಲಾಂತರ್ಗಾಮಿಗಳ ಗಾಳಿಯಾಟವ್ಯವಸ್ಥೆಯಲ್ಲಿ ಕಾರ್ಬನ್‍ಡೈಆಕ್ಸೈಡ್ ಬಂಧನಕ್ಕೆ ಲಿತಿಯಮ್ ಹೈಡಾಕ್ಸೈಡ್, ಜೀವರಕ್ಷಕ ದೋಣಿಗಳನ್ನು ಉಬ್ಬಿಸಲು ಲಿತಿಯಮ್ ಹೈಡ್ರೈಡ್, ಹೈಡ್ರೊಜನ್ ಬಾಂಬು ತಯಾರಿಸಲು ಡ್ಯೂಟೀರಿಯಮ್‍ಗೆ ಸಮಾನವಾದ ಲಿತಿಯಮ್ ಸಂಯುಕ್ತವೊಂದನ್ನು, ಉನ್ಮಾದ-ಖಿನ್ನತೆ ಬುದ್ಧಿವಿಕಲ್ಪ (ಮ್ಯಾನಿಕ್-ಡಿಪ್ರೆಸ್ಯೂ ಸೈಕಾಸಿಸ್) ಚಿಕಿತ್ಸೆಯಲ್ಲಿ ಲಿತಿಯಮ್ ಕಾರ್ಬೊನೇಟ್, ಸಂಶ್ಲೇಷಿತ ರಬ್ಬರ್ ಉತ್ಪಾದನೆಯಲ್ಲಿ ಬ್ಯುಟೈಲ್ಲಿತಿಯಮ್, ವಾಯುವಿ ನಲ್ಲಿರುವ ತೇವಾಂಶ ಹೀರಬಲ್ಲ ಸಾಂದ್ರೀಕೃತ ಲವಣದ್ರಾವಣ ತಯಾರಿಸಲು ಲಿತಿಯಮ್‍ನ ಕ್ಲೋರೈಡ್ ಮತ್ತು ಬ್ರೋಮೈಡ್, ಎನ್ಯಾಮಲ್ ಮತ್ತು ಗಾಜು ತಯಾರಿಕೆಯಲ್ಲಿ ಲಿತಿಯಮ್ ಫ್ಲೋರೈಡ್ ಬಳಕೆಯಾಗುತ್ತಿದೆ.

(ಎಚ್.ಜಿ.ಎಸ್.)