ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲಿಸ್ಟರ್, ಜೋಸೆಫ್

ವಿಕಿಸೋರ್ಸ್ದಿಂದ

1827-1912. ಬ್ರಿಟಿಷ್ ಶಸ್ತ್ರವೈದ್ಯ, ವೈದ್ಯಕೀಯ ವಿಜ್ಞಾನಿ, ಶಸ್ತ್ರಕ್ರಿಯೆಗೆ ಮುನ್ನ ಎಲ್ಲ ಸಂಬಂಧಿತ ಸಲಕರಣೆಗಳನ್ನು ಮತ್ತು ವ್ಯಕ್ತಿಗಳ ಕೈಗಳನ್ನು ಪೂತಿನಾಶಕಗಳಿಂದ ತೊಳೆಯುವ ಸಂಪ್ರದಾಯ ಹುಟ್ಟುಹಾಕುವುದರ ಮೂಲಕ ಶಸ್ತ್ರಕ್ರಿಯಾ ಮಂದಿರದಲ್ಲಾಗುವ ಸೋಂಕುಗಳಿಂದ ಮರಣಿಸುವವರ ಸಂಖ್ಯೆ ಕಡಿಮೆ ಮಾಡಿದವ. ಈತ ಆವಿಷ್ಕರಿಸಿದ ಪೂತಿನಾಶಕಗಳ ಬಳಕೆ ಆಧಾರಿತ ವಿಧಾನ ಈಗ ಆಚರಣೆಯಲ್ಲಿ ಇಲ್ಲದಿದ್ದರೂ ಶಸ್ತ್ರಕ್ರಿಯೆ ಯಿಂದ ಆಗುವ ಗಾಯದ ಮೂಲಕ ಬ್ಯಾಕ್ಟೀರಿಯ ಪ್ರವೇಶ ತಡೆಗಟ್ಟಬೇಕೆಂಬ ತತ್ತ್ವ ಇಂದೂ ಶಸ್ತ್ರಕ್ರಿಯೆಗಳ ಮೂಲತತ್ತ್ವವಾಗಿ ಉಳಿದಿದೆ.

ಈತ ಅವರ್ಣಕ ಸೂಕ್ಷ್ಮ ದರ್ಶಕದ ಉಪಜ್ಞೆಗೆ ಕಾರಣನಾದ ಕ್ವೇಕರ್ ಜೋಸೆಫ್ ಜ್ಯಾಕ್‍ಸನ್ ಲಿಸ್ಟರ್‍ನ ದ್ವಿತೀಯ ಪುತ್ರ. ಪ್ರಕೃತಿಚರಿತ್ರೆ ಮತ್ತು ವಿಜ್ಞಾನ ಶಿಕ್ಷಣಕ್ಕೆ ಪ್ರಾಧಾನ್ಯವೀಯು ತ್ತಿದ್ದ ಕ್ವೇಕರ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಪ್ರಕೃತಿ ಚರಿತ್ರೆ ಮತ್ತು ಸೂಕ್ಷ್ಮದರ್ಶ ಕದ ಬಳಕೆಯಲ್ಲಿ ತಂದೆಯಿಂದಲೇ ಶಿಕ್ಷಣ. 16ನೆಯ ವಯಸ್ಸಿನಲ್ಲಿಯೇ ತೌಲನಿಕ ಅಂಗರಚನಾ ವಿಜ್ಞಾನದಲ್ಲಿ ಆಸಕ್ತನಾಗಿದ್ದ ಈತ ಶಸ್ತ್ರವೈದ್ಯನಾಗಲೋಸುಗ ಲಂಡನ್‍ನ ಯೂನಿವರ್ಸಿಟಿ ಕಾಲೇಜಿನಲ್ಲಿ ವೈದ್ಯವಿಜ್ಞಾನ ವಿದ್ಯಾರ್ಥಿಯಾಗಿ ದಾಖಲಾದ (1848). ಅನಂತರ ಸ್ನಾತಕ ಪದವಿ ಗಳಿಕೆ (1852), ಅದೇ ವರ್ಷ ಯೂನಿವರ್ಸಿಟಿ ಕಾಲೇಜ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್‍ನ ಫೆಲೊ ಆಗುವ ಅವಕಾಶ ಲಭ್ಯ. ಆ ಕಾಲದ ಖ್ಯಾತ ಶಸ್ತ್ರಕ್ರಿಯಾಶಿಕ್ಷಕ ಜೇಮ್ಸ್ ಸೈಮ್‍ನ ಸಹಾಯಕನಾಗಿ ವೃತ್ತಿಜೀವನಾರಂಭ. ಎಡಿನ್‍ಬರೊ ರಾಯಲ್ ಇನ್‍ಫರ್ಮರಿಯ ಶಸ್ತ್ರವೈದ್ಯನ ಹುದ್ದೆ ಸ್ವೀಕಾರ (1856). ಗ್ಲಾಸ್ಗೊ ರಾಯಲ್ ಇನ್‍ಫರ್ಮರಿಯಲ್ಲಿ ನೂತನ ಶಸ್ತ್ರಕ್ರಿಯಾವಿಭಾಗದ ಉಸ್ತುವಾರಿ ಜವಾಬ್ದಾರಿಯುಳ್ಳ ಶಸ್ತ್ರವೈದ್ಯನಾಗಿ ನೇಮಕಾತಿ (1861). ಅಂಗಛೇದನೆ ಗೊಳಗಾದವರ ಪೈಕಿ ಸೇ.45-50 ರೋಗಿಗಳು ಪೂತಿಯಿಂದ (ಸೆಪ್ಸಿಸ್) ಮರಣಿಸುತ್ತಿದ್ದುದನ್ನು ಗಮನಿಸಿದ ಈತ ಅದನ್ನು ತಡೆಗಟ್ಟುವ ಸಲುವಾಗಿ ಪ್ರಯೋಗನಿರತನಾದ.

ರೋಗಿಗಳಿಗೆ ವಾಯವಿನಿಂದ ನೇರವಾಗಿ ಸೋಂಕು ತಗಲುತ್ತಿದೆ ಎಂಬ ಪ್ರಚಲಿತ ನಂಬಿಕೆಯನ್ನು ಒಪ್ಪದ ಈತ ವಾಯುವಿನಲ್ಲಿರುವ ಪರಾಗದಂಥ ದೂಳು ಸೋಂಕಿಗೆ ಕಾರಣ ಎಂದು ಪ್ರಕಲ್ಪಿಸಿದ. ಸೂಕ್ಷ್ಮಜೀವಿಗಳ ಕುರಿತು ಲೂಯಿ ಪಾಸ್ಚರ್‍ನ (1822-95) ಸಂಶೋಧನೆ ಗಳಿಂದ ಪ್ರಭಾವಿತನಾದ (1865) ಈತ ವಾಯುವಿನಲ್ಲಿರುವ ರೋಗಾಣುಗಳಿಂದ ಪೂತಿಬಾಧೆ ಉಂಟಾಗುತ್ತಿದೆ ಎಂದು ನಂಬಿದ. ಶಸ್ತ್ರಕ್ರಿಯೆಯಿಂದಾಗುವ ಗಾಯಕ್ಕೂ ವಾಯುವಿಗೂ ನಡುವೆ ಪೂತಿನಾಶಕ ತಡೆಗೋಡೆ ನಿರ್ಮಿಸಿದರೆ ಸಮಸ್ಯೆ ಪರಿಹಾರವಾದೀತೆಂದು ಊಹಿಸಿದ. ಶಸ್ತ್ರಕ್ರಿಯೆಗೆ ಮುನ್ನ ಕೈ ಮತ್ತು ಸಲಕರಣೆಗಳನ್ನು ಸುಲಭಲಭ್ಯ ಪೂತಿನಾಶಕ ಕಾರ್ಬಾಲಿಕ್ ಆಮ್ಲದಿಂದ ತೊಳೆದು ನೋಡಿದ. ಮರಣದರ ಸೇ. 15ಕ್ಕೆ ಇಳಿಯಿತು. ಈತನ ಆವಿಷ್ಕಾರ ಅಪಾರ ಜನಮನ್ನಣೆ ಗಳಿಸಿದರೂ ವೃತ್ತಿಬಾಂಧವರ ಮನ್ನಣೆ ಗಳಿಸಲು ಆತ ಅನೇಕ ವರ್ಷ ಶ್ರಮಿಸಬೇಕಾಯಿತು. ಕೊನೆಗೂ ಆತನ ಆವಿಷ್ಕಾರ ಸರ್ವಮಾನ್ಯವಾಗಿ ಅನೇಕ ಗೌರವ ಪ್ರಶಸ್ತಿಗಳನ್ನು ತಂದುಕೊಟ್ಟಿತು.

(ಎಸ್.ಎನ್.ಎಮ್.)