ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೀಲಾವತಿ ದೇವದಾಸ್

ವಿಕಿಸೋರ್ಸ್ದಿಂದ

1930ರ ಮಾರ್ಚ್ ಮೂವತ್ತರಂದು ಜನಿಸಿದ ಡಾ|| ಲೀಲಾವತಿ ದೇವದಾಸ್‍ರವರದು ಬಹುಮುಖ ಪ್ರತಿಭೆ. ಮೈಸೂರು ವಿ.ವಿ.ಯ. ಎಂ.ಬಿ.ಬಿ.ಎಸ್. ಪರಿಕ್ಷೆಯಲ್ಲಿ ಸರ್ಜರಿಯಲ್ಲಿ ಸುವರ್ಣಪದಕ ಗಳಿಸಿದ ಇವರು ಎಂ.ಎಸ್. ಮತ್ತು ಎಫ್.ಐ.ಸಿ.ಎಸ್. ಪದವಿ ಹೊಂದಿದ್ದಾರೆ. ಗಾಂಧಿ ಸ್ಮಾರಕ ಕುಷ್ಠನಿವಾರಣಾ ನಿಧಿಯಲ್ಲಿ ಎರಡು ವರ್ಷ (ವಾರ್ಧ ಸೇವಾಗ್ರಾಮ) ಕಾರ್ಯ ನಿರ್ವಹಣೆ ಮಾಡಿದ ಇವರು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸಹಾಯಕ ಸರ್ಜನ್, ಸರ್ಜನ್, ಜಿಲ್ಲಾ ಸರ್ಜನ್, ವಿಭಾಗೀಯ ಜಂಟಿ ನಿರ್ದೇಶಕ ಮತ್ತು ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತೆಯಾದ ಇವರು ಸುಮಾರು 80,000ಕ್ಕೂ ಮಿಕ್ಕಿ ಉದರದರ್ಶಕ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಕನ್ನಡದಲ್ಲಿ ಇವರ 26 ಪುಸ್ತಕಗಳು ಪ್ರಕಟಗೊಂಡಿವೆ. ಸರಳವಾಗಿ, ತಿಳಿಗನ್ನಡದಲ್ಲಿ ಬರೆಯುವಲ್ಲಿ ಸಿದ್ಧಹಸ್ತರಾದ ಇವರ ಮುಖ್ಯವಾದ ಪುಸ್ತಕಗಳೆಂದರೆ "ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೋ", "ಆಸ್ಪತ್ರೆಯಲ್ಲಿ ಹಾಸ್ಯ", "ನಾನು ಗೌರಿಯ ಗರ್ಭಕೋಶ", "ಹಳಿ ತಪ್ಪಿದ ಹೆರಿಗೆ", "ಪವಿತ್ರಗಾಡಿನಲ್ಲಿ ಪ್ರವಾಸ". ಇವರಿಗೆ "ಅತ್ತಿಮಬ್ಬೆ ಪ್ರತಿಷ್ಠಾಪನದ ಪ್ರಶಸ್ತಿ", ಸಮೋದಿಕಾ ಪ್ರಶಸ್ತಿ, ಜಾನ್ ಹ್ಯಾಂಡ್ಸ್ ಪ್ರಶಸ್ತಿ, ವೈದ್ಯ ಸಾಹಿತ್ಯ ಶ್ರೀ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಮುಂತಾದವುಗಳು ಲಭಿಸಿವೆ. ಡಾ|| ಲೀಲಾವತಿ ದೇವದಾಸ್‍ರವರು ವೈದ್ಯರಾಗಿ ವೈದ್ಯಸಾಹಿತಿಯಾಗಿ ಮಾತ್ರವಲ್ಲದೇ ಉತ್ತಮ ಸಂಘಟಕರಾಗಿಯೂ ಹೆಸರು ಪಡೆದಿದ್ದಾರೆ. ಕನ್ನಡ ವೈದ್ಯಸಾಹಿತ್ಯ, ವಾತ್ಸಲ್ಯ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. 74ರ ವಯಸ್ಸಿನಲ್ಲಿಯೂ ಸದಾ ಚಟುವಟಿಕೆಯ ಬುಗ್ಗೆಯಂತಿರುವ ಇವರು ಅಮೆರಿಕಾ, ಇಂಗ್ಲೆಡ್, ಆಸ್ಟ್ರೇಲಿಯಾ, ನೇಪಾಳ, ಶ್ರೀಲಂಕಾ, ಯೂರೋಪ್, ಈಜಿಪ್ಟ್, ಇಸ್ರೇಲ್ ಮುಂತಾದೆಡೆ ಸಂಚರಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ.

(ಡಾ. ವಸುಂಧರಾ ಭೂಪತಿ)