ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೆಪಿಡೋಸೈರನ್

ವಿಕಿಸೋರ್ಸ್ದಿಂದ

ದಕ್ಷಿಣ ಅಮೆರಿಕದ ಕೆಲವೆಡೆ ಸಿಹಿನೀರಿನ ಮೂಲಗಳಲ್ಲಿ ವಾಸಿಸುವ ಫುಪ್ಫುಸ ಮೀನು. ಲೆಪಿಡೋಸೈರನ್ ಪ್ಯಾರಾಡೋಕ್ಸಾ, ಅಮೇಜಾನ್ ಮತ್ತು ಅದರ ಉಪನದಿಗಳಲ್ಲಿ ಸಿಗುವ ಪ್ರ್ರಭೇದ. ಪರುಗ್ವೆಯ ಚಾಕೋ ನದಿ ಮತ್ತು ಅದರ ಸುತ್ತುಮುತ್ತಲಿನ ಆಳವಿಲ್ಲದ ಮಣ್ಣು ಮಿಶ್ರಿತ ನೀರಿನ ಮೂಲಗಳಲ್ಲಿ ಇದರ ಸಂಖ್ಯೆ ಜಾಸ್ತಿ. ಅಲ್ಲಿಯ ಜನರು ಇದನ್ನು ಒಮ್ಮೊಮ್ಮೆ ಆಹಾರವಾಗಿ ಸೇವಿಸುವು ದುಂಟು.

ರೂಪದಲ್ಲಿ ಇದು ಈಲ್ ಮೀನುಗಳನ್ನು ಹೋಲುತ್ತದೆ. ಡಿಪ್ನೊಯಿ ಉಪವರ್ಗಕ್ಕೆ ಸೇರಿದೆ. ಡಿಪ್ನಿಯೂಮ ಸರಣಿಯ ಲೆಪಿಡೋಸೈರನಿಡೇ ಇದರ ಕುಟುಂಬ. ಸುಮಾರು 2 ಮೀ. ಉದ್ದ ಕೂಡ ಬೆಳೆಯುತ್ತದೆ. ಈ ಹೊಟ್ಟೆಬಾಕ ಮಾಂಸಾಹಾರಿಗೆ ಆಹಾರ ಮೀನು, ಮೃದ್ವಂಗಿಗಳು, ಕಠಿಣ ಚರ್ಮಿಗಳು ಹಾಗೂ ಕೆಲವೊಮ್ಮೆ ಸಸ್ಯಗಳು ಕೂಡ.

ಲೆಪಿಡೋಸೈರನ್‍ನ ಚರ್ಮದ ಮೇಲೆಲ್ಲ ಬಲು ಸಣ್ಣದಾದ ಚಕ್ರಜ ಶಲ್ಕಗಳಿವೆ. ಗಿಡ್ಡ ಹಾಗೂ ಕಿರಿದಾದ ಒಂದೊಂದು ಜೊತೆ ಭುಜದ ರೆಕ್ಕೆಗಳು, ಸೊಂಟದ ಈಜು ರೆಕ್ಕೆಗಳು ಮತ್ತು ಬಾಲದ ಈಜು ರೆಕ್ಕೆ ಈ ಮೀನಿಗೆ ಈಸಲು ನೆರವಾಗುತ್ತವೆ. ಕೆಲವು ಮೂಳೆ ಮೀನುಗಳಲ್ಲಿರು ವಂತೆ ಬಾಲದ ಈಜು ರೆಕ್ಕೆ ಅರ್ಧಚಂದ್ರಾಕಾರದಲ್ಲಿದೆ. ಸ್ಪರ್ಶ ಸಂವೇದ ನೆಯಲ್ಲಿ ಜೋಡಿ ರೆಕ್ಕೆಗಳ ತುದಿ ಸಹಾಯಕ. ದೃಷ್ಟಿ ಕೊಂಚ ಮಂದವಾಗಿ ದ್ದರೂ ವಾಸನೆ ಗ್ರಹಿಕೆ ಮತ್ತು ರುಚಿ ಸಂವೇದನೆ ಅತ್ಯುತ್ತಮವಾಗಿವೆ. ದೇಹದ ಎರಡೂ ಬದಿಗಳಲ್ಲಿರುವ ಪಾಶ್ರ್ವಸಂವೇದನಾ ವ್ಯವಸ್ಥೆ ನೀರಿನ ಲ್ಲಾಗುವ ಉಷ್ಣತೆ, ಒತ್ತಡ ಇತ್ಯಾದಿಗಳ ಅತಿ ಸೂಕ್ಷ್ಮ ಬದಲಾವಣೆಗಳನ್ನೂ ಗ್ರಹಿಸಬಲ್ಲದು.

ಎಲ್ಲ ಮೀನುಗಳಂತೆ ಲೆಪಿಡೋಸೈರನ್‍ನಲ್ಲೂ ಉಸಿರಾಟ ಕಿವಿರುಗಳ ಮೂಲಕ ನಡೆಯುತ್ತದೆ. ಇವುಗಳಿಗೆ ಮೇಲು ಮುಚ್ಚಳ ಉಂಟು. ಕಿವಿರುಗಳ ಜೊತೆಗೆ ಎರಡು ಫುಪ್ಫುಸಗಳೂ ಇವೆ. ಇವು ಜೀರ್ಣಾಂಗ ವ್ಯೂಹದ ಮೇಲ್ಭಾಗದಲ್ಲಿದ್ದು ಅನ್ನನಾಳದ ಕೆಳಭಾಗದಲ್ಲಿ ತೆರೆದುಕೊಳ್ಳು ತ್ತದೆ. ಇತರ ಭೂಚರಿಗಳಲ್ಲಿರುವಂತೆ ಫುಪ್ಫುಸಗಳಲ್ಲಿ ಅಸಂಖ್ಯಾತ ಆಲ್ವಿಯೋಲೈಗಳಿವೆ. ಉಸಿರಾಟದ ವೇಳೆ ಈ ಮೀನು ನೀರಿನ ಮೇಲ್ಭಾಗಕ್ಕೆ ಈಸುತ್ತ ನೀರಿನ ಮಟ್ಟಕ್ಕೆ ತನ್ನ ಮೂಲೆಯನ್ನು ತಾಗಿಸಿ, ಅಗಲವಾಗಿ ಬಾಯಿ ಕಳೆದು, ಗಾಳಿ ಎಳೆದುಕೊಳ್ಳುತ್ತದೆ. ಇದು ಕೊಯೆನಾ ಎಂಬ ರಂಧ್ರ್ರದ ಮೂಲಕ ನಾಸಿಕಕವಾಟ ಸೇರಿ, ಅಲ್ಲಿಂದ ಫುಪ್ಫುಸದೊಳಕ್ಕೆ ಹೋಗುತ್ತದೆ. ಗಾಳಿಯನ್ನು ಒಳಗೆಳೆದುಕೊಳ್ಳುವ ಸಮಯದಲ್ಲಿ ವಿಚಿತ್ರ ಶಬ್ದ ಹೊರಡುತ್ತದೆ.

ಹೃದಯದಲ್ಲಿ ಅಸಮರ್ಪಕವಾಗಿ ವಿಭಾಗವಾಗಿರುವ ತಲಾ ಒಂದು ಹೃತ್ಕರ್ಣ ಹಾಗೂ ಹೃತ್ಕುಕ್ಷಿ ಇವೆ. ಮೂತ್ರಪಿಂಡಗಳು ಉದ್ದವಾಗಿದ್ದು ಒಂದೊಂದರಿಂದಲೂ ಸುಮಾರು 2 ಮೀ. ಉದ್ದವಿರುವ ಮೂತ್ರನಾಳಗಳು ಹೊರಡುತ್ತವೆ.

ಸಂತಾನೋತ್ಪತ್ತಿಯ ವೇಳೆ ಲೆಪಿಡೋಸೈರನ್ ಲಿಂಗ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ. ಗಂಡು ಮೀನಿನ ಸೊಂಟದ ಈಸು ರೆಕ್ಕೆಗಳ ಮೇಲೆ ಕುಚ್ಚಿನಂಥ ಶಾಖೆಗಳು ಕಾಣಿಸುತ್ತವೆ. ಅವುಗಳಲ್ಲಿರುವ ಸೂಕ್ಷ್ಮ ರಕ್ತನಾಳಗಳು ರಕ್ತದಲ್ಲಿರುವ ಆಮ್ಲಜನಕವನ್ನು ನೀರಿಗೆ ಬಿಡುಗಡೆ ಮಾಡಿ ತನ್ಮೂಲಕ ಬೆಳೆಯುತ್ತಿರುವ ಮರಿಗಳ ಉಸಿರಾಟಕ್ಕೆ ಸಹಾಯ ಮಾಡುತ್ತವೆ. ಗಂಡು ಮತ್ತು ಹೆಣ್ಣು ಮೀನುಗಳೆರಡೂ ಸೇರಿ ಮಣ್ಣಿನಲ್ಲಿ ಲಂಬವಾದ ಗೂಡನ್ನು ತೋಡುತ್ತವೆ. ಕೆಳಗೆ ಇಳಿದಂತೆ ಈ ಗೂಡು ಕ್ರಮೇಣ ಮಣ್ಣಿನ ಮಟ್ಟಕ್ಕೆ ಸಮಾಂತರವಾಗುತ್ತದೆ. ಹೆಣ್ಣು ಮೀನು ಸುಮಾರು 5000 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳನ್ನೂ ಮುಂದಕ್ಕೆ ಮರಿಗಳನ್ನೂ ಕಾಪಾಡುವ ಜವಾಬ್ದಾರಿ ಗಂಡಿನದು. ಸಣ್ಣ ಮರಿಗಳು ಗೋಡೆಯ ಮೇಲೆ ತೆವಳಿಕೊಂಡು ಗೂಡಿನ ಮೇಲ್ಭಾಗದಲ್ಲಿ ತಲೆ ಮೇಲಾಗಿ ಸುಮಾರು ಒಂದರಿಂದ ಎರಡು ತಿಂಗಳು ಲಂಬವಾಗಿ ಜೋತುಬಿದ್ದು ಕೊಂಡಿರುತ್ತವೆ. ಬೆಳೆವಣಿಗೆಯ ಮೊದಲೆರಡು ತಿಂಗಳು ನಾಲ್ಕು ಜೊತೆ ಹೊರಕಿವಿರುಗಳ ಮುಖಾಂತರ ಉಸಿರಾಟ ನಡೆಯುತ್ತದೆ. ಕ್ರಮೇಣ ಅವು ನಶಿಸಿ ಒಳಕಿವಿರು ಮತ್ತು ಶ್ವಾಸಕೋಶಗಳು ಉಸಿರಾಟದಲ್ಲಿ ಭಾಗವಹಿಸುತ್ತವೆ.

ಬರಗಾಲ ಮತ್ತು ಬೇಸಗೆಯಲ್ಲಿ ನದಿಯ ನೀರು ಬತ್ತಿದಾಗ ಲೆಪಿಡೋಸೈರನ್ ಮಣ್ಣಿನೊಳಗೆ ಬಿಲ ಕೊರೆದು ಪುನಃ ನೀರಿನ ಮಟ್ಟ ಏರುವ ತನಕವೂ ಅದರಲ್ಲಿಯೇ ತನ್ನ ಬದುಕನ್ನು ಕಳೆಯುತ್ತದೆ. ಇದನ್ನು ‘ಗ್ರೀಷ್ಮ ನಿದ್ರೆ’ ಅಥವಾ ‘ಗ್ರೀಷ್ಮ ನಿಶ್ಚೇಷ್ಟತೆ’ ಎನ್ನುತ್ತಾರೆ. ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಆಹಾರವನ್ನೇ ಈ ಶ್ರಾಯದಲ್ಲಿ ದೇಹದ ಜೈವಿಕ ಕ್ರಿಯೆಗಳಿಗೆ ಉಪಯೋಗಿಸಿಕೊಳ್ಳುತ್ತದೆ. ಸಹಜ ವಾಗಿಯೇ ದೇಹತೂಕದಲ್ಲಾಗುವ ಕ್ಷೀಣತೆಯನ್ನು ಗ್ರೀಷ್ಮ ನಿದ್ರೆ ಕಳೆದ ಎರಡು ತಿಂಗಳೊಳಗೆ ಸರಿದೂಗಿಸಿಕೊಳ್ಳುತ್ತದೆ. ‘ಅಮೆರಿಕದ ಫುಪ್ಫುಸ ಮೀನು’ ಎಂದೇ ಪ್ರಸಿದ್ಧವಾಗಿರುವ ಲೆಪಿಡೋಸೈರನ್‍ನ ಸಂಖ್ಯೆ ಈಗ ತೀರ ಕಡಿಮೆಯಾಗಿದೆ. ಮೀನು ಹಾಗೂ ಉಭಯ ಜೀವಿಗಳೆರಡರ ಲಕ್ಷಣಗಳೂ ಇದಕ್ಕಿವೆ ಎಂದೇ ಇದಕ್ಕೆ ಪ್ರಾಣಿ ಸಾಮ್ರಾಜ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಇದೆ.

(ಎ.ಎಸ್.ಎಚ್.)