ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೊರೆಂಟ್ಸ್‌, ಹೆನ್ರಿಕ್ ಆಂಟೋನ್

ವಿಕಿಸೋರ್ಸ್ದಿಂದ

ಲೊರೆಂಟ್ಸ್, ಹೆನ್ರಿಕ್ ಆಂಟೋನ್ 1853-1928. ಡಚ್ (ನೆದರ್ಲೆಂಡ್ಸ್) ಭೌತವಿಜ್ಞಾನಿ. ಶಿಷ್ಯ ಪೀಟರ್ ಝೀಮಾನ್ (1865-1943) ಜೊತೆಗೆ ಕಾಂತೀಯ ಝೀಮಾನ್ ಪರಿಣಾಮ ಸಂಬಂಧೀ ನೊಬೆಲ್ ಪ್ರಶಸ್ತಿ ಪುರಸ್ಕøತ (1902). ಗಣಿತೀಯ ಭೌತವಿಜ್ಞಾನದಲ್ಲಿ ಇಂದು ಈತನ ಹೆಸರಿಗಿರುವ ಮಹತ್ತರ ಪ್ರಸ್ತುತತೆಗೆ ಪ್ರಪಂಚದಲ್ಲಿನ ದೇಶ-ಕಾಲ (ಸ್ಪೇಸ್-ಟೈಮ್) ಕುರಿತಾಗಿ ಈತ ನಿರೂಪಿಸಿದ ಕೆಲವೊಂದು ಮೂಲಭೂತ ಪರಿವರ್ತನಸಮೀಕರಣಗಳೇ ಪ್ರಮುಖ ಕಾರಣ. ಲೊರೆಂಟ್ಸ್ ಎಂದು ಪ್ರಸಿದ್ಧವಾಗಿರುವ ಈ ಸೂತ್ರಗಳು 1904ರ ವೇಳೆಗೆ ಅಂತಿಮವಾಗಿ ಲಭ್ಯವಾದುವು. 1905ರಲ್ಲಿ ಆಲ್ರ್ಬಟ್ ಐನ್‍ಸ್ಟೈನ್ (1879-1955) ಆವಿಷ್ಕರಿಸಿದ ವಿಶೇಷ ಸಾಪೇಕ್ಷತಾ ಸಿದ್ಧಾಂತಕ್ಕೆ ಸಹ ಲೊರೆಂಟ್ಸ್ ಪರಿವರ್ತನೆಗಳು ಸುಭದ್ರ ಬುನಾದಿಯನ್ನು ಒದಗಿಸುತ್ತವೆ. ಆದರೆ ಆ ಪೂರ್ವದಲ್ಲಿ ಸ್ವತಃ ಲೊರೆಂಟ್ಸ್ ಗ್ರಹಿಸಿದ್ದು ತನ್ನ ಗಣಿತಸೂತ್ರಗಳ ಮೇಲ್ನೋಟದ ಅರ್ಥ ಮಾತ್ರ. ಕ್ರಾಂತಿಕಾರಕವಾದ ಅವುಗಳ ನಿಗೂಢ ಒಳಹೊಳಹುಗಳ ಬಗ್ಗೆ ಎಚ್ಚೆತ್ತುಕೊಳ್ಳುವುದು ಅಂದಿನ ಸನ್ನಿವೇಶದಲ್ಲಿ ಬಹುತೇಕ ಭೌತವಿಜ್ಞಾನಿಗಳಿಗೆ ಶಕ್ಯವಿರಲಿಲ್ಲ. ಹೀಗಿದ್ದಾಗ್ಗೂ ಮೈಕೆಲ್‍ಸನ್-ಮಾರ್ಲೇ ಪ್ರಯೋಗದ (1887) ಅನಿರೀಕ್ಷಿತ ಶೂನ್ಯ ಫಲಿತಾಂಶವನ್ನು ತನ್ನ ದೇಶ-ಕಾಲ ಪರಿವರ್ತನೆಗಳ ಮೂಲಕ ಸಾಪೇಕ್ಷತಾಪೂರ್ವ ಪರಿಕಲ್ಪನೆಗಳ ಕರಡು ಚೌಕಟ್ಟಿನಲ್ಲೇ ವಿವರಿಸುವಲ್ಲಿ ಈತ ತಕ್ಕಮಟ್ಟಿಗೆ ಸಫಲನಾದ. ಯಾವುದೇ ಕಾಯದ ಉದ್ದ ಅದರ ಚಲನೆಯ ದಿಕ್ಕಿನಲ್ಲಿ ಸಂಕೋಚನಗೊಂಡಿರುತ್ತದೆ ಎಂಬುದು ಈ ವಿವರಣೆಯ ಪ್ರಧಾನ ಅಂಶ. ಐರ್ಲೆಂಡಿನ ಜಾರ್ಜ್ ಫ್ರಾನ್ಸಿಸ್ ಪಿಟ್ಸ್‍ಗೆರಾಲ್ಡ್ (1851-1901) ಕೂಡ ಇದೇ ಅಭಿಮತವನ್ನು ವ್ಯಕ್ತಪಡಿಸಿದ್ದುದರಿಂದ (1895) ಚರಕಾಯಗಳ ಉದ್ದಸಂಕೋಚನೆಯ ಕಲ್ಪಿತ ವಿದ್ಯಮಾನಕ್ಕೆ ಫಿಟ್ಸ್‍ಗೆರಾಲ್ಡ್-ಲೊರೆಂಟ್ಸ್ ಸಂಕೋಚನೆ ಎಂಬ ಹೆಸರು ಪ್ರಾಪ್ತವಾಗಿದೆ.

ಉದ್ದಸಂಕೋಚನೆಯ ಜೊತೆಗೆ ಇನ್ನೊಂದು ಚಿಂತನೆಯನ್ನು ಸಹ ಲೊರೆಂಟ್ಸ್ ಮಂಡಿಸಿದರು. ಇದರಂತೆ ಚರಕಾಯವೊಂದರ ಬೇರೆಬೇರೆ ನಿವೇಶನಗಳಲ್ಲಿ ಅನ್ವಯವಾಗುವ ಸ್ಥಳೀಯ ಕಾಲಗಳು (ಲೋಕಲ್ ಟೈಮ್ಸ್) ಬೇರೆಬೇರೆ ಆಗಿರಬೇಕಾಗುತ್ತದೆ. ಎಲ್ಲ ಶಿಷ್ಟ ಪರಾಮರ್ಶನ ಚೌಕಟ್ಟುಗಳಲ್ಲೂ ಮ್ಯಾಕ್ಸ್‍ವೆಲ್ ವಿದ್ಯುತ್ಕಾಂತೀಯ ಸಮೀಕರಣಗಳು ಒಂದೇ ರೂಪದಲ್ಲಿ ಅಭಿವ್ಯಕ್ತಿಗೊಳ್ಳಬೇಕಿದ್ದರೆ ಇಂಥ ಸ್ಥಳೀಯ ಕಾಲಗಳ ಕಲ್ಪನೆ ಅವಶ್ಯ. 

ವಿದ್ಯುತ್ಕಾಂತ ವಿಕಿರಣಗಳ ವಿಚಾರವಂತೂ ವಾಸ್ತವವಾಗಿ ಈತನ ಬದುಕಿನ ಪ್ರಪ್ರಥಮವೂ ಚಿರಪ್ರಧಾನವೂ ಆದ ಸಂಶೋಧನಾ ವಸ್ತು. ಈ ವಿಕಿರಣಗಳ ತರಂಗರೂಪಿ ಅಸ್ತಿತ್ವವನ್ನು 1873ರ ವೇಳೆಗೆ ಸ್ಕಾಟ್ಲೆಂಡಿನ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‍ವೆಲ್ (1831-1879) ಸೈದ್ಧಾಂತಿಕವಾಗಿ ಸಮರ್ಥಿಸಿಕೊಟ್ಟು ಬೆಳಕು ಕೂಡ ಒಂದು ವಿದ್ಯುತ್ಕಾತ ವಿಕಿರಣವೇ ಆಗಿರಬೇಕೆಂಬ ಆಲೋಚನೆಯನ್ನು ಹುಟ್ಟುಹಾಕಿದ್ದ. ಡಾಕ್ಟೊರೇಟ್ ಪದವಿಗಾಗಿ ವಿದ್ಯಾರ್ಥಿ ಲೊರೆಂಟ್ಸ್ (1875) ಸಲ್ಲಿಸಿದ ಪ್ರಬಂಧವಾದರೂ ಪ್ರಾರಂಭಗೊಂಡಿದ್ದುದು ವಿದ್ಯುತ್ಕಾಂತ ತರಂಗಗಳ ಪ್ರತಿಫಲನ ಹಾಗೂ ವಕ್ರೀಭವನ ವಿದ್ಯಮಾನಗಳ ಬಗ್ಗೆ ಮ್ಯಾಕ್ಸ್‍ವೆಲ್ ನೀಡಿದ್ದ ವಿವರಣೆಗಳಲ್ಲಿ ಹೆಚ್ಚುವರಿಯಾಗಿ ಅಳವಡಿಸಬಹುದಿದ್ದ ಕೆಲವೊಂದು ಸುಧಾರಣೆಗಳ ಪ್ರಸ್ತಾವದಿಂದಲೇ. ಅಲ್ಲಿಂದ ವೃತ್ತಿಜೀವನದಲ್ಲಿ ಮುನ್ನಡೆದ ಲೊರೆಂಟ್ಸ್ ಬೆಳಕಿನ ವಿದ್ಯುತ್ಕಾಂತೀಯ ಸ್ವರೂಪದ ಬಗ್ಗೆ ಗಾಢ ಚಿಂತನೆಗಳನ್ನು ಮಂಡಿಸಿ ಆ ಮೂಲಕ ಭೌತವಿಜ್ಞಾನದ ಅಸಾಧಾರಣ ಪ್ರಗತಿಗೆ ಕಾರಣೀಭೂತನಾದ. ಬೆಳಕು ನಿಜಕ್ಕೂ ವಿದ್ಯುತ್ಕಾಂತ ತರಂಗ ಎಂದಾದರೆ ಮ್ಯಾಕ್ಸ್‍ವೆಲ್ ಸಿದ್ಧಾಂತದ ಪ್ರಕಾರ ಆ ತರಂಗ ಉದ್ಭವವಾಗಲು ಯಾವುದಾದರೂ ವಿದ್ಯುದಾವೇಶ (ಎಲೆಕ್ಟ್ರಿಕ್ ಚಾರ್ಜ್) ಕಂಪಿಸಿರ ಬೇಕಾಗುತ್ತದೆ. ಹಾಗೆ ಕಂಪಿಸುವ ಆವೇಶ ಯಾವುದು ಮತ್ತು ಅದು ಎಲ್ಲಿರುತ್ತದೆ? ಅಂದಿನ ದಿನಗಳಲ್ಲಿ ಪರಮಾಣುಗಳ ರಚನೆಯ ಬಗ್ಗೆ ಏನೂ ತಿಳಿದೇ ಇರಲಿಲ್ಲ. ಆದಾಗ್ಗೂ ಪರಮಾಣುಗಳಲ್ಲಿ ವಿದ್ಯುದಾ ವೇಶಯುಕ್ತ ಕಣಗಳು ಹುದುಗಿರಬೇಕೆಂದೂ (ಮುಂದೆ ಇವನ್ನು ಎಲೆಕ್ಟ್ರಾನುಗಳೆಂದು ಕರೆಯಲಾಯಿತು) ಆ ಕಣಗಳ ಕಂಪನದಿಂದ ಬೆಳಕಿನ ತರಂಗಗಳು ಹೊರಹೊಮ್ಮುತ್ತಿರಬೇಕೆಂದೂ ಈತ ತರ್ಕಿಸಿದ. ಸದರಿ ತರ್ಕ ನಿಜವಾದರೆ ಬೆಳಕಿನ ಆಕರವನ್ನು ಒಂದು ಪ್ರಬಲ ಕಾಂತಕ್ಷೇತ್ರದಲ್ಲಿಟ್ಟಾಗ ಅದರಲ್ಲಿಯ ವಿದ್ಯುದಾವೇಶಯುಕ್ತ ಕಣಗಳ ಕಂಪನಶೈಲಿ ವ್ಯತ್ಯಸ್ತವಾಗಿ ತತ್ಫಲಿತ ಅಲೆಯುದ್ದಗಳ ವಿತರಣೆಯಲ್ಲಿ ತುಸು ಭಿನ್ನತೆ ಕಂಡುಬರಬೇಕಾಗುತ್ತದೆ ಎಂದು ಸಹ ಈತ ಪ್ರತಿಪಾದಿಸಿದ. ತರುವಾಯ ಶಿಷ್ಯ ಝೀಮಾನ್ ಕೈಗೊಂಡ ಪ್ರಯೋಗಗ ಳಿಂದ (1896) ಈ ಪ್ರತಿಪಾದನೆಯ ಸತ್ಯತೆ ರುಜುವಾತುಪಟ್ಟು ಗುರು ಶಿಷ್ಯರಿಬ್ಬರೂ ಜಂಟಿಯಾಗಿ ನೊಬೆಲ್ ಪ್ರಶಸ್ತಿಗೆ ಭಾಜನರಾದರು. 

1878ರಿಂದ 1912ರವರೆಗೆ ಲೈಡೆನ್ ವಿಶ್ವವಿದ್ಯಾಲಯದಲ್ಲಿ ಈತ ಪೂರ್ಣ ಪ್ರಮಾಣದ ಪ್ರಾಧ್ಯಾಪಕನಾಗಿದ್ದ. ಬಳಿಕ ಅವರು ಹಾರ್ಲೆಮ್‍ನ ಟೇಲರ್ ಇನ್‍ಸ್ಟಿಟ್ಯೂಟಿನಲ್ಲಿ ಸಂಶೋಧನಾ ನಿರ್ದೇಶಕನಾಗಿಯೂ ಲೈಡೆನ್ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ.

(ಎಸ್.ಆರ್.ಎಮ್.)