ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೋಳೆಸರ

ವಿಕಿಸೋರ್ಸ್ದಿಂದ

ಅಲೊಯೇಸೀ ಅಥವಾ ಲಿಲಿಯೇಸೀ ಕುಟುಂಬದ ಅಲೊಬಾರ್‍ಬಡೆನ್ಸ್ ಪ್ರಭೇದದ ಔಷಧೀಯ ಸಸ್ಯ. ಇದಕ್ಕೆ ಅಲೋವೀರ ಎಂಬ ಹೆಸರೂ ಇದೆ. ಎರಡು ಉಪವಿಧಗಳಿವೆ: ಚೆನೆನ್ಸಿಸ್ ಬಗೆಯದರಲ್ಲಿ ಮುಳ್ಳುಗಳು ಮೊಂಡಾಗಿರುತ್ತವೆ, ಲಿಟ್ಟೊರ್ಯಾಲಿಸ್ ಬಗೆಯದರಲ್ಲಿ ಎಲೆಗಳು ಸಣ್ಣದಾಗಿರುತ್ತವೆ. ಅಂಚು ಬಾಚಿ ಹಲ್ಲುಗಳಂತಿರುವುದು. ಸಸ್ಯದ ಕಾಂಡದ ಉದ್ದ 0.15-0.6 ಮೀ. ಎಲೆಗಳು ದಪ್ಪವಾಗಿದ್ದು ಅಚ್ಚಹಸುರಾಗಿರುತ್ತದೆ. 35-40 ಸೆಂಮೀ. ಉದ್ದ ಮತ್ತು 10-12 ಸೆಂಮೀ. ಅಗಲ. ಕಾಂಡದ ತುದಿಯಲ್ಲಿ ಎಲೆಗಳು ಗುಂಪಾಗಿರುತ್ತವೆ. ಇವುಗಳಲ್ಲಿ ಲೋಳೆಯಂಥ ವಸ್ತುವಿರುವುದರಿಂದ ಲೋಳೆಸರ ಎಂಬ ಹೆಸರು ಬಂದಿದೆ. ಇದರ ಮೂಲಸ್ಥಾನ ಆಫ್ರಿಕ, ಕೆನರಿ, ದ್ವೀಪಗಳು ಮತ್ತು ಸ್ಪೇನ್. ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಎಲ್ಲ ಪರಿಸರಗಳಲ್ಲಿ ಬೆಳೆಯುತ್ತದೆ. ಮರಿ ಸಸ್ಯಗಳನ್ನು ಬೇರ್ಪಡಿಸಿ, ಸಸ್ಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಉಪಯೋಗ: ಹಸಿವು ಉಂಟುಮಾಡಲು, ಹೊಟ್ಟೆ ನೋವು ಶಮನಿಸಲು, ಭೇದಿಮಾಡಿಸಲು ಮತ್ತು ಹೆಂಗಸರಲ್ಲಿ ಋತುಚಕ್ರ ನಿಯಂತ್ರಿಸಲು ಉಪಯೋಗಿಸುತ್ತಾರೆ. ಎಲೆಗಳಿಂದ ಅನೇಕ ಶಾಂಪೂಗಳನ್ನೂ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನೂ ತಯಾರಿಸುತ್ತಾರೆ. ಎಲೆಗಳಿಂದ ತಯಾರಿಸಿದ ಬಾರ್‍ಬೆಲಿಯಾನ್ ಎಂಬ ಜೀವನಿರೋಧಕವನ್ನು ಕ್ಷಯರೋಗಕಾರಕ ಬ್ಯಾಕ್ಟೀರಿಯಗಳನ್ನು ನಾಶಮಾಡಲು ಬಳಸಲಾಗುತ್ತದೆ. ಸೂರ್ಯನ ಶಾಖದಿಂದ ಚರ್ಮದ ಸುಟ್ಟಗಾಯಗಳನ್ನು ವಾಸಿ ಮಾಡಲು ಇದರ ಲೋಳೆಯನ್ನು ಬಳಸುತ್ತಾರೆ.

(ಟಿ.ಎಮ್.ಆರ್.)