ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಮನಕಾರಿ

ವಿಕಿಸೋರ್ಸ್ದಿಂದ

ವಮನಕಾರಿ - ವಾಂತಿಯನ್ನು ಪ್ರೇರಿಸುವ ಬಾಹ್ಯಕಾರಕ (ಎಮೆಟಿಕ್). ವಮನ ಎಂದರೆ ವಾಂತಿ. ವಮನಕಾರಿಗಳಲ್ಲಿ ಎರಡು ಬಗೆಗಳಿವೆ: ಜಠರದ ಮೇಲೆ ವರ್ತಿಸಿ ವಾಂತಿಮಾಡಿಸುವವು, ಮಿದುಳಿನಲ್ಲಿರುವ ವಮನ ಕೇಂದ್ರವನ್ನು ಪ್ರಚೋದಿಸಿ ವಾಂತಿ ಬರಿಸುವವು.

ಮೊದಲನೆಯ ಬಗೆಗೆ ನಿದರ್ಶನಗಳು: 1. ಊಟದ ಉಪ್ಪನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು; 2. ಮೈಲತುತ್ತ ಸೇವನೆ; 3. ಸಾಸಿವೆ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಮಿಶ್ರಿಸಿ ಕುಡಿಯುವುದು. ಈ ವಮನಕಾರಿ ಪದಾರ್ಥಗಳಿಗೆ ಜಠರದ ಲೋಳೆಪೊರೆ ಯಿಂದ ನೀರು ಹೀರುವ ಗುಣವಿದೆ. ಹೀಗೆ ಹೀರಲ್ಪಟ್ಟಾಗ ವಾಂತಿ ಪ್ರೇರಿಸಲ್ಪಡುತ್ತದೆ.

ಬೇರೆ ಕೆಲವು ವಮನಕಾರಿಗಳು ತಮ್ಮವೇ ಆದ ರಸಗಳಿಂದ ಜಠರವನ್ನು ಕೆರಳಿಸಿ ವಾಂತಿಯಾಗುವಂತೆ ಮಾಡುವುವು. ಇನ್ನು ಕೆಲವು ವಮನಕಾರಿಗಳು ಕಡಿಮೆ ಪ್ರಮಾಣದಲ್ಲಿ ತಮ್ಮ ಕಾರ್ಯ ನಡೆಸಿ ಶ್ವಾಸಕೋಶಗಳ ಮೇಲೆ ಪ್ರಭಾವ ಬೀರಿ ಅಲ್ಲಿ ಶೇಖರಗೊಂಡ ಕಫವನ್ನು ಸಡಿಲುಗಳಿಸಿ ವಾಂತಿಯಾಗುವಂತೆ ಮಾಡಿ ಅದನ್ನು ಉಚ್ಚಾಟಿಸುವುವು. ವಿಶೇಷವಾಗಿ ಈ ಸಮಸ್ಯೆ ಚಿಕ್ಕಮಕ್ಕಳನ್ನು ಬಾಧಿಸುತ್ತದೆ. ಮಕ್ಕಳಿಗೆ ಕೆಮ್ಮುವುದು ಸಾಧ್ಯವಾಗದಿದ್ದಾಗ ಕೆಮ್ಮಿದಂತೆ ಮಾಡಿ ಬಂದ ಕಫವನ್ನು ನುಂಗಿ ಬಿಡುತ್ತವೆ. ನುಂಗಿದ ಈ ಕಫ ಜಠರದಲ್ಲಿ ಶೇಖರಗೊಂಡಿರುತ್ತದೆ. ಇಂಥ ಕಫ ಹೊರತರಲು ವಮನಕಾರಿ ಪದಾರ್ಥಗಳನ್ನು ಬಳಸಲಾಗುತ್ತದೆ.

ವ್ಯಕ್ತಿ ನುಂಗಿದ ವಿಷ ಇನ್ನೂ ಜಠರದಲ್ಲಿದೆ ಎಂದು ಅನಿಸಿದರೆ ಎರಡನೆಯ ಬಗೆಯ ವಮನಕಾರಿಗಳನ್ನು ಬಳಸಲಾಗುವುದು. ಕೆಲವು ವಿಷಗಳಿಗೆ ನುಂಗಿದೊಡನೆ ತಮ್ಮ ಸಂಪರ್ಕಕ್ಕೆ ಬರುವ ಎಲ್ಲ ಅಂಗಾಂಶಗ ಳನ್ನೂ ಪಚನಗೊಳಿಸುವ ಶಕ್ತಿ ಇರುವುದು. ಇಂಥ ಪ್ರಸಂಗದಲ್ಲಿ ವಮನಕಾರಿಗಳನ್ನು ಬಳಸಕೂಡದು. ಸೇವಿಸಿದ ಪದಾರ್ಥಗಳು ಗಂಟಲಲ್ಲಿ ಅಥವಾ ಅನ್ನನಾಳದಲ್ಲಿ ಸಿಲುಕಿದ್ದಾಗ ಅವನ್ನು ಹೊರತೆಗೆಯಲು ವಮನಕಾರಿಗಳನ್ನು ಉಪಯೋಗಿಸಲಾಗುವುದು.

ತೀವ್ರ ಹೃದಯರೋಗಿಗಳು, ಹೆಚ್ಚಿದ ರಕ್ತದೊತ್ತಡ ಇರುವವರು, ರಕ್ತ ಕಾರುತ್ತಿರುವ ಕ್ಷಯರೋಗಿಗಳು, ಗರ್ಭಿಣಿಯರು ಮೊದಲಾದ ಕೂರುರೋಗಿಗಳಿಗೆ ವಮನಕಾರಿಗಳನ್ನು ಕೊಡಬಾರದು. (ಜಿ.ಆರ್.ಸಿ.)