ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವರ್ಟೀಸೆಲ

ವಿಕಿಸೋರ್ಸ್ದಿಂದ

ವರ್ಟೀಸೆಲ - ಸಿಹಿನೀರಿನಲ್ಲಿ ವಾಸಿಸುವ ಗಂಟೆ ಆಕಾರದ ಸೂಕ್ಷ್ಮ ಜೀವಿ. ಏಕಕೋಶ ಜೀವಿಗಳಾದ ಪ್ರೊಟೊಜೊವಾದ ಸಿಲಿಯೇಟಾ ವರ್ಗಕ್ಕೆ ಸೇರುತ್ತದೆ. ಜೈವಿಕ ಸಮೃದ್ಧಿಯಿಂದ ಕೂಡಿದ ಸಿಹಿನೀರಿನಲ್ಲಿ ವಾಸ. ಇದು ಗಂಟೆಯಂತಿದ್ದು ಬುಡದಲ್ಲಿರುವ ನೀಳ ಕಾಂಡದ ಮೂಲಕ ನೀರಿನ ಗಿಡಗಂಟಿಗಳಿಗೆ ಅಂಟಿಕೊಂಡಿರುತ್ತದೆ. ಸ್ತಬ್ಧನೀರಿನಲ್ಲಿ ಇದು ತನ್ನ ಗಂಟೆಯ ಅಂಚಿನ ಸುತ್ತಲೂ ಇರುವ ಶಿಲಿಕಾಂಗಗಳಿಂದ ಅತಿ ಪುಟ್ಟ ಸುಳಿಗಳನ್ನು ನಿರಂತರವಾಗಿ ಸೃಷ್ಟಿಸುತ್ತದೆ. ಹಾಗಾಗಿ ಇದಕ್ಕೆ ವರ್ಟೀಸೆಲ ಎಂಬ ಹೆಸರು ಬಂದಿದೆ. ಆಗಾಗ ಇದರ ಕಾಂಡವನ್ನು ಜಗ್ಗಿದಂತಾಗಿ ಅದು ಬಳ್ಳಿ ಆಕಾರ ತಳೆಯುತ್ತದೆ. ಅದೇ ಕಾಲಕ್ಕೆ ಗಂಟೆ ಸಂಕೋಚನಗೊಂಡು ಮುಷ್ಟಿಯಂತಾಗಿ ಬುಡಕ್ಕೆ ಸೆಳೆದು ಕೊಳ್ಳುತ್ತದೆ. ಸ್ವಲ್ಪ ವೇಳೆಯ ಬಳಿಕ ಕಾಂಡ ಹಿಗ್ಗಿ ನೀಳವಾಗಿ, ಗಂಟೆ ವ್ಯಾಕೋಚನಗೊಂಡು ವರ್ಟೀಸೆಲ ಪುನಃ ನೀರಿನಲ್ಲಿ ಸುಳಿಗಳನ್ನು ಸೃಷ್ಟಿಸಲು ಆರಂಭಿಸುತ್ತದೆ.

ಒಂದೇ ಕೋಶದಿಂದಾದ ವರ್ಟೀಸೆಲ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಇದರ ರಚನೆ ಸಂಕೀರ್ಣವಾಗಿದೆ. ಇದರ ಪುಟ್ಟ ದೇಹವನ್ನು ಪೆಲಿಕಲ್ ಎಂಬ ಜೀವಂತ ಪೊರೆ ಬಿಗಿಯಾಗಿ ಆವರಿಸಿರುತ್ತದೆ. ಇದರ ಕೆಳಗೆ ದೃಢತೆ ನೀಡಲು ಅಡ್ಡಪಟ್ಟಿಗಳಿರುತ್ತವೆ. ವಿಶಾಲವಾಗಿರುವ ಗಂಟೆಯ ಬಾಯಿಯನ್ನು ತೆಳು ಬಿಲ್ಲೆಯಂತಿರುವ ಒಂದು ಪೊರೆ ಮುಚ್ಚಿದೆ. ಇದಕ್ಕೆ ಪೆರಿಸ್ಟೋಮ್ ಎಂದು ಹೆಸರು. ಇದರ ಅಂಚಿನಲ್ಲಿ ಮೂರು ಸುರುಳಿಗಳಲ್ಲಿ ಸಮಾಂತರವಾಗಿ ವ್ಯವಸ್ಥೆಯಾಗಿರುವ ಶಿಲಿಕಾಂಗಗಳಿವೆ. ಇವುಗಳಲ್ಲಿ, ಅಂಚಿನಲ್ಲಿರುವ ಒಂದು ಸುರುಳಿ ಶೆಲ್ಫ್‍ನಂತೆ ಬಾಹ್ಯಕ್ಕೆ ಬಾಗಿಕೊಂಡಿದ್ದರೆ, ಉಳಿದೆರಡು ಸುರುಳಿಗಳು ಇದರಿಂದ ಬೇರ್ಪಟ್ಟಿದ್ದು ಒಳ ಪರಿಧಿಯಲ್ಲಿ ನಿಕಟವಾಗಿ ವ್ಯವಸ್ಥೆ ಗೊಂಡಿರುತ್ತವೆ. ಪೆರಿಸ್ಟೋಮಿನ ಒಂದು ತುದಿಯಲ್ಲಿ ಇವುಗಳ ನಡುವೆ ಅಂತರ ಹೆಚ್ಚಿದ್ದು ಇಲ್ಲಿ ವೆಸ್ಟ್‍ಬ್ಯುಲ್ ಎಂಬ ರಂಧ್ರವಿದೆ. ಇದು ಶಂಕುವಿನಾಕಾರದ ಪೆರಿಸ್ಟೋಮಿನ ನಳಿಕೆಗೆ ಮುಂದುವರಿಯುತ್ತದೆ. ನಳಿಕೆಯ ಬುಡದಲ್ಲಿ ಕೋಶದ ಬಾಯಿ ಕಾಣುತ್ತದೆ. ವರ್ಟೀಸೆಲ ಸೃಷ್ಟಿಸುವ ನೀರಿನ ಸುಳಿಗಳು ಇಲ್ಲಿಗೆ ಆಹಾರದ ಕಣಗಳನ್ನೂ ಸಾಗಿಸುತ್ತವೆ. (ಟಿ.ಯು.)