ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಲ್ಟ್‌, ಜಾರ್ಜ್

ವಿಕಿಸೋರ್ಸ್ದಿಂದ

ವಾಲ್ಟ್, ಜಾರ್ಜ್ 1906-97. ಅಮೆರಿಕದ ಜೀವರಸಾಯನವಿಜ್ಞಾನಿ. ಶರೀರವಿಜ್ಞಾನದಲ್ಲಿ ಪ್ರಗಲ್ಭ ಸಂಶೋಧನೆ ನಡೆಸಿದಾತ. ಈತನ ತಂದೆ ತಾಯಿಯರು ಅಮೆರಿಕಕ್ಕೆ ವಲಸೆ ಬಂದವರು. ಪ್ರಾಥಮಿಕ ವಿದ್ಯಾಭ್ಯಾಸ ಬ್ರೂಕ್ಲಿನ್‍ನಲ್ಲಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಬಿ.ಎಸ್ಸಿ. ಪದವಿ (1927). ಕೊಲಂಬಿಯ ವಿಶ್ವವಿದ್ಯಾಲಯದಿಂದ ಪ್ರಾಣಿವಿಜ್ಞಾನದಲ್ಲಿ ಪಿಎಚ್.ಡಿ. (1932), ಮುಂದೆ ಜರ್ಮನಿಯಲ್ಲಿ ಆಟ್ಟೊ ವಾರ್‍ಬರ್ಗ್ (1883-1970) ಎಂಬ ಜೀವರಸಾಯನವಿಜ್ಞಾನಿಯ ಪ್ರಯೋಗಶಾಲೆಯಲ್ಲಿ ಸಂಶೋಧನೆ ಯಲ್ಲಿ ನಿರತ. ಅಲ್ಲಿಯೇ ಈತ ಮಾನವನೇತ್ರದ ಅಕ್ಷಿಪಟದಲ್ಲಿ ಜೀವಸತ್ತ್ವ ಎ ಇದೆಯೆಂದು ಗುರುತಿಸಿದ್ದು. ಆಗತಾನೆ ಜ್ಯೂರಿಚ್‍ನ ಪಾಲ್ ಕಾರ್ರೆರ್ (1889-1971) ಎಂಬಾತನ ಪ್ರಯೋಗಶಾಲೆಯಲ್ಲಿ ಜೀವಸತ್ತ್ವ ಎಯ ಶೋಧವಾಗಿತ್ತು. ಆದ್ದರಿಂದ ಈತ ತನ್ನ ಸಂಶೋಧನೆಯನ್ನು ಮುಂದುವರಿಸಲು ಜ್ಯೂರಿಚ್ ಸೇರಿದ. ಮಾನವನ ದೃಷ್ಟಿದೋಷಗಳಿಗೆ ಜೀವಸತ್ತ್ವ ಎಯ ಕೊರತೆ ಕಾರಣವೆಂಬುದು ಈತನ ಪ್ರಮುಖ ಸಂಶೋಧನೆ. ದೇಶ ವಿದೇಶಗಳಿಂದ, ಹಲವು ವಿಶ್ವವಿದ್ಯಾಲಯಗಳಿಂದ ಪ್ರಾಪ್ತವಾದ ಗೌರವ ಡಾಕ್ಟೊರೇಟ್‍ಗಳ ಸಂಖ್ಯೆ ಅಪಾರ. ನೊಬೆಲ್ ಪ್ರಶಸ್ತಿ (1967), ಲಾಸ್ಕರ್ ಪ್ರಶಸ್ತಿ ಮುಂತಾದವು ಲಭ್ಯವಾದವು. ಈತನ ಪತ್ನಿ ರೂಥ್ ಹಬ್ಬರ್ಡ್ ಕೂಡ ಪತಿಯ ಸಂಶೋಧನೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗಿಯಾಗಿದ್ದಳು. ಈತ 1997ರಲ್ಲಿ ನಿಧನನಾದ. (ಎಚ್.ಜಿ.ಎಸ್.)

  *