ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಕಿರಣ ಮತ್ತು ಆರೋಗ್ಯ

ವಿಕಿಸೋರ್ಸ್ದಿಂದ

ವಿಕಿರಣ ಮತ್ತು ಆರೋಗ್ಯ - ವಿಕಿರಣದಿಂದ (ರೇಡಿಯೇಶನ್) ಆರೋ ಗ್ಯದ (ಹೆಲ್ತ್) ಮೇಲಾಗುವ ಪರಿಣಾಮಗಳ ಅಧ್ಯಯನ. ಸೌರವಿಕಿರಣ (ಸೋಲಾರ್ ರೇಡಿಯೇಶನ್) ನಮ್ಮೆಲ್ಲರನ್ನೂ ಆವರಿಸಿರುವುದು ಸರಿಯಷ್ಟೆ. ಇದರಲ್ಲಿಯ ಅತಿನೇರಿಳೆವಿಭಾಗ (ಅಲ್ಟ್ರಾವಯೊಲೆಟ್) ಚರ್ಮದ ಮೇಲೆ ಬಿದ್ದಾಗ ರಕ್ತದಲ್ಲಿ ಜೀವಸತ್ತ್ವ ಡಿ ಸಂಶ್ಲೇಷಿತವಾಗುತ್ತದೆ. ಆದರೆ ಸೂರ್ಯನನ್ನು ನೇರವಾಗಿ ದಿಟ್ಟಿಸಿದಾಗ, ಅದೂ ಪೂರ್ಣಸೂರ್ಯಗ್ರಹಣ ಸಂದರ್ಭದಲ್ಲಿ ಹೀಗೆ ಮಾಡಲು ಸಾಕಷ್ಟು ಆಕರ್ಷಣೆ ಇದ್ದಾಗ, ಕಣ್ಣುಗಳು ಕುರುಡಾಗುವ ಅಪಾಯವಿದೆ. ಬಿಸಿಲಿಗೆ ಮೈಯೊಡ್ಡಿದಾಗ ಚರ್ಮ ಕೆಂಪಾಗಿ ಕ್ರಮೇಣ ಕಂದು ಬಣ್ಣ ತಳೆಯುವುದು. ಮತ್ತೆ ಸುಟ್ಟಗಾಯ, ಹೊಪ್ಪಳೆ, ಬಿಸಿಲುಗಂದೆ ಮುಂತಾದವು ತಲೆದೋರುತ್ತವೆ. ಮುಂದೆ ಕ್ಯಾನ್ಸರ್ ರೋಗವೂ ತಾಗಬಹುದು.

ದೇಹವನ್ನು ಪದೇ ಪದೇ ಎಕ್ಸ್‍ಕಿರಣ ತಪಾಸಣೆಗಳಿಗೆ ಒಡ್ಡುವುದು ಖಂಡಿತ ಅಪಾಯಕಾರಿ. ಭ್ರೂಣಪರೀಕ್ಷೆ ಮಾಡಲು ಎಕ್ಸ್‍ಕಿರಣ ಚಿತ್ರ ತೆಗೆಯುವುದು ವಾಡಿಕೆ. ಇಲ್ಲೆಲ್ಲ ದೇಹಕೋಶಗಳು ವಿಕಿರಣದ ನೇರ ದಾಳಿಗೋ ಘಾತಕ್ಕೋ ಈಡಾಗುತ್ತವೆ. ಇದು ಅನೇಕ ಬಗೆಯ ರೋಗ ಗಳಿಗೂ ಅಂಗವಿಕಲಶಿಶುಜನನಕ್ಕೂ ಕಾರಣವಾಗಬಹುದು. ಪರಮಾಣು ಸ್ಥಾವರಗಳಲ್ಲಿ ಕೆಲಸ ಮಾಡುವವರು ಮತ್ತು ಪರಮಾಣು ಬಾಂಬ್ ಸ್ಫೋಟನ ಕೇಂದ್ರದ ಬಳಿ ಇರುವವರು ವಿಕಿರಣದ ನೇರ ಹೊಡೆತಕ್ಕೆ ಈಡಾಗುತ್ತಾರೆ. ಇಂಥವರು ರಕ್ತಕ್ಯಾನ್ಸರಿನಿಂದ (ಲ್ಯೂಕೀಮಿಯ) ನರಳುವುದು ವಿರಳವಲ್ಲ. ರೇಡಿಯೊ ಸಮಸ್ಥಾನಿಗಳ ಜೊತೆ ವ್ಯವಹರಿಸುವವರು ವಿಕಿರಣದ ಬಾಧೆಗೆ ಬಲಿಯಾಗದಂತೆ ಯುಕ್ತ ಮುನ್ನೆಚ್ಚರಿಕೆ ವಹಿಸಬೇಕು.

ಪರಮಾಣು ಸ್ಫೋಟದಿಂದ ಹೊಮ್ಮುವ ವಿಕಿರಣ ಮನುಷ್ಯನಲ್ಲಿ ಉಂಟುಮಾಡುವ ರೋಗಲಕ್ಷಣಗಳನ್ನು ಮೂರು ಪ್ರಧಾನ ವರ್ಗಗಳಲ್ಲಿ ಅಳವಡಿಸಲಾಗಿದೆ: 1. ತೀವ್ರವಿಕಿರಣ ಗಾಸಿ, 2. ತೀವ್ರ ಸ್ಥಳಿಕ ಗಾಸಿ, 3. ವಿಳಂಬಕಾಲಿಕ ದುಷ್ಪರಿಣಾಮಗಳು.

1. ತೀವ್ರವಿಕಿರಣಗಾಸಿಯ ಕಾರಣವಾಗಿ ರಕ್ತ, ಜಠರ, ಕರುಳು, ನರಮಂಡಲ ಹಾಗೂ ಹೃದಯ ಸಂಬಂಧೀ ರೋಗಗಳು ಕಂಡುಬರುತ್ತವೆ.

ರಕ್ತಸಂಬಂಧೀ ರೋಗಲಕ್ಷಣಗಳು 1-3 ವಾರಗಳವರೆಗೆ ಸುಪ್ತವಾಗಿದ್ದು ಮತ್ತೆ ಉದ್ರೇಕಿಸುತ್ತವೆ. ಆಗ ಜ್ವರ ಮತ್ತು ಚರ್ಮದಲ್ಲಿ ಹಾಗೂ ದೇಹದ್ವಾರಗಳಿಂದ ರಕ್ತಸ್ರಾವವಾಗುತ್ತದೆ. ಆಯಾಸ, ತೂಕನಷ್ಟ ಮುಂತಾದವು ಇತರ ಲಕ್ಷಣಗಳು. ಪೂರ್ತಿ ಶಮನವಾಗಲು ಹಲವಾರು ತಿಂಗಳುಗಳೇ ಬೇಕಾಗಬಹುದು.

ಜಠರ ಮತ್ತು ಕರುಳುಸಂಬಂಧೀ ಲಕ್ಷಣಗಳು: ವಿಕಿರಣ ತಾಡನೆಯಾದ ಕೆಲವೇ ಗಂಟೆಗಳಲ್ಲಿ ಅಗ್ನಿಮಾಂದ್ಯ (ಹಸಿವಾಗದಿರುವಿಕೆ), ವಾಕರಿಕೆ, ವಾಂತಿ, ಭೇದಿ ಮುಂತಾದವು ಕಾಣಿಸಿಕೊಳ್ಳುತ್ತವೆ. ತತ್‍ಕ್ಷಣ ಚಿಕಿತ್ಸೆ ನೀಡಿದರೆ ಸುಮಾರು 48 ಗಂಟೆಗಳಲ್ಲಿ ಶಮನವಾಗಬಹುದು. ಇಲ್ಲ ವಾದರೆ ಮರಣ ಖಾತ್ರಿ. ಇನ್ನು ನರಮಂಡಲ ಮತ್ತು ಹೃದಯಗಳಿಗೆ ಗಾಸಿ ತಟ್ಟಿದರೆ ವಮನ, ಅತಿಸಾರಗಳು ಉಲ್ಬಣಿಸಬಹುದು. ಜೊತೆಗೆ ರಕ್ತದೊತ್ತಡ ತೀವ್ರಗೊಂಡು ಆಘಾತ ಬಡಿಯಬಹುದು. ಕೇವಲ 24-48 ಗಂಟೆಗಳ ಒಳಗೆ ಈ ಎಲ್ಲ ದುಷ್ಪರಿಣಾಮಗಳೂ ಪ್ರಕಟವಾಗಿ ವ್ಯಕ್ತಿ ಮರಣಿಸುತ್ತಾನೆ.

2. ಸ್ಥಳಿಕವಾಗಿ ಚರ್ಮ ಕೆಂಪಾಗಿ ಕೂದಲು ಉದುರಿ ಹೊರಚರ್ಮ ಗಾಸಿಗೊಳ್ಳಬಹುದು. ಅಧಿಕ ವಿಕಿರಣಶಕ್ತಿಯ ಪರಿಣಾಮವಾಗಿ ಕೂದಲು ಶಾಶ್ವತವಾಗಿ ನಷ್ಟವಾಗಬಹುದು. ಚರ್ಮ ಪೂರ್ತಿ ಸುಟ್ಟಂತಾಗಿ ವ್ಯಕ್ತಿ ಅನೇಕ ಸೋಂಕು ರೋಗಗಳಿಗೆ ಬಲಿ ಆಗುವುದುಂಟು. ನಿರಂತರ ಅಸ್ವಾಸ್ಥ್ಯ ಈತನ ಶಾಶ್ವತ ಸಂಗಾತಿ.

3. ವಿಕಿರಣಶಕ್ತಿಗೆ ಮೈಯೊಡ್ಡಿದ ಕೆಲವು ತಿಂಗಳು ಅಥವಾ ವರ್ಷಗಳ ಮೇಲೆ ಕೆಲವು ರೋಗಗಳು ಕಾಣಿಸಿಕೊಳ್ಳಬಹುದು: ಫಲವಂತಿಕೆ ನಷ್ಟ, ಸಂತಾನಶಕ್ತಿಯಲ್ಲಿ ಇಳಿಕೆ, ಕಣ್ಪೊರೆ, ಚರ್ಮಬಿರಿತ, ಕೀಲುನೋವು ಮುಂತಾದವು. ಕ್ಯಾನ್ಸರ್ ಸಂಬಂಧೀ ಕಾಯಿಲೆಗಳು ಸುಮಾರು 4-7 ವರ್ಷಗಳಲ್ಲಿ ತಲೆದೋರುತ್ತವೆ. ಥೈರಾಯಿಡ್, ಲಾಲಾರಸಗ್ರಂಥಿ, ಶ್ವಾಸಕೋಶ, ಮೂಳೆ, ಯಕೃತ್ತು, ಗುಲ್ಮ ಮತ್ತು ಸ್ತನ ಇವುಗಳ ಕ್ಯಾನ್ಸರ್ ರೋಗಗಳು.

ಅಯಾನೀಕರಣ ವಿಕಿರಣವನ್ನು ಸೂಸುವ ಯಂತ್ರಗಳನ್ನು ಉಪಯೋಗಿ ಸುವ ಕೆಲಸಗಾರರು ತಮ್ಮ ದೇಹಗಳಲ್ಲಿ ಸೇರಿರಬಹುದಾದ ವಿಕಿರಣದ ಗುಟ್ಟಿಯನ್ನು (ಡೋಸ್) ಅಳೆಯಲು ಅವರ ಉಡಿಗೆಗೆ ಮಾಪನ ಮೀಟರನ್ನು ಲಗತ್ತಿಸಿರುತ್ತಾರೆ. ಇದನ್ನು ಪ್ರತಿ ತಿಂಗಳೂ ಪ್ರಯೋಗಶಾಲೆಗೆ ಕಳಿಸಿ ದೇಹ ಸೇರಿರುವ ವಿಕಿರಣದ ಪ್ರಮಾಣವನ್ನು ತಿಳಿದು ಯುಕ್ತ ಕ್ರಮ ಕೈಗೊಳ್ಳಬೇಕು.

ವಿಕಿರಣದಿಂದಾಗುವ ಪ್ರಯೋಜನಗಳು: ರೋಗಗಳನ್ನು ಪತ್ತೆಹಚ್ಚಲು ವಿಕಿರಣಪಟು ಪರಮಾಣುಗಳು ಬಲು ಸಹಕಾರಿ. ಅನೇಕ ರೋಗಗಳ ಚಿಕಿತ್ಸೆಗೆ ವಿಕಿರಣವನ್ನೂ ವಿಕಿರಣಪಟು ಪರಮಾಣುಗಳನ್ನೂ ಬಳಸಲಾಗುತ್ತದೆ. ಉದಾಹರಣೆಗೆ ರೇಡಿಯೊಕ್ರೋಮಿಯಮನ್ನು ಹಿಮೊಲಿಟಿಕ್ ಅನಿಮಿಯದಲ್ಲಿ, ರೇಡಿಯೊ ಅಯೊಡೀನನ್ನು ಹೈಪರ್ ಥೈರಾಯಿಡ್ ಗ್ರಂಥಿ, ರೇಡಿಯೊ ಫಾಸ್ಫರಸನ್ನು ಪಾಲಿಸೈಥೀಮಿಯ ಕಾಯಿಲೆಯಲ್ಲಿ ಬಳಸಬಹುದು. ಮೊಬೈಲ್ ದೂರವಾಣಿ ಬಳಕೆಯಿಂದ ತಲೆನೋವು, ಮಿದುಳಿನ ಅರ್ಬುದರೋಗಗಳುಂಟಾಗಬಹುದೆಂಬ ಪ್ರತೀತಿ ಹಬ್ಬಿದೆ. ಆದರೆ ಸದ್ಯದ ವೈಜ್ಞಾನಿಕ ಸಾಹಿತ್ಯದಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಸಾಕ್ಷಿ ಇರುವುದಿಲ್ಲ.

ಲೇಸರ್ ಸೂಚಿ (ತೀಕ್ಷ್ಣ ಬೆಳಕಿನ ದಂಡ) ನೇರ ದುಷ್ಪರಿಣಾಮಕಾರಿ ಯಲ್ಲವಾದರೂ ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದರೆ ಅಪಘಾತ ಉಂಟಾಗ ಬಹುದು. ಅಲ್ಲದೇ ಒಂದು ವೇಳೆ, ಈ ಬೆಳಕನ್ನು ನೆಟ್ಟ ದೃಷ್ಟಿಯಿಂದ ನೋಡಿದಲ್ಲಿ ಕಣ್ಣಿಗೆ ಅಪಾಯವಾಗಬಹುದು. ಇದರ ಅರಿವಿಲ್ಲದ ಚಿಕ್ಕ ಮಕ್ಕಳ ಕೈಗೆ ಲೇಸರ್ ಸೂಚಿ ಎಟುಕದಂತೆ ಇರಿಸಬೇಕು. (ಜಿ.ಎ.ಜಿ.)

  *