ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿದ್ಯುತ್ ಮೀನುಗಳು

ವಿಕಿಸೋರ್ಸ್ದಿಂದ

ವಿದ್ಯುತ್ ಮೀನುಗಳು - ವಿದ್ಯುತ್ ಉತ್ಪಾದಿಸುವ ಅಂಗವನ್ನುಳ್ಳ ನೂರಾರು ಜಾತಿಯ ಮೀನುಗಳಿವೆ. ಹೆಚ್ಚು ಪ್ರಖರವಾದ ವಿದ್ಯುತ್ ಸಂಚಲನವನ್ನು ಉತ್ಪಾದಿಸುವ ಕೆಲವೇ ಜಾತಿಯ ಮೀನುಗಳು ಇವೆ. ಇವುಗಳಲ್ಲಿ ಪ್ರಮುಖವಾದವು ಸಮುದ್ರವಾಸಿ ಟಾರ್ಪಡಿನಿಡೆ ಕುಟುಂಬಕ್ಕೆ ಸೇರಿದ ಎಲೆಕ್ಟ್ರಿಕ್ ರೇ (ಟಾರ್ಪೆಡೊ) ಮೀನುಗಳು, ಸಿಹಿ ನೀರಿನಲ್ಲಿ ವಾಸಿಸುವ ದಕ್ಷಿಣ ಅಮೆರಿಕದ ಎಲೆಕ್ಟ್ರಿಕ್ ಈಲ್ (ಎಲೆಕ್ಟ್ರೋಫೋರಸ್) ಮತ್ತು ಆಫ್ರಿಕಾದ ಎಲೆಕ್ಟ್ರಿಕ್ ಕ್ಯಾಟ್ ಫಿಶ್ (ಮಾಲಾಪ್ಟೆರುರಸ್) ಜಾತಿಯ ಮೀನುಗಳು.

ಇವುಗಳ ವಿದ್ಯತ್ ಅಂಗಗಳು ಕಾರ್ಯಪ್ರವೃತ್ತಿಯಾದಾಗ ಮೀನಿನ ಸುತ್ತ ವಿದ್ಯುತ್ ಕಾಂತೀಯ ಕ್ಷೇತ್ರ ನಿರ್ಮಾಣವಾಗಿ ಅವುಗಳ ಬಳಿ ಸುಳಿಯುವ ಇತರೆ ಮನುಗಳನ್ನು ನಿಶ್ಚೇತಗೊಳಿಸಿ ಅವುಗಳನ್ನು ಹಿಡಿದು ತಿನ್ನುತ್ತವೆ. ಅಲ್ಲದೆ ಈ ಮೀನುಗಳು ಸಾಮಾನ್ಯವಾಗಿ ಬೆಳಕಿಲ್ಲದ ಆಳ ಪ್ರದೇಶದಲ್ಲಿ ಮಡ್ಡಿ ನೀರಿನಲ್ಲಿರುವುದರಿಂದ, ಕಣ್ಣುಗಳು ದುರ್ಬಲವಾಗಿರುವುದರಿಂದ ಈ ವಿದ್ಯುತ್ ಕ್ಷೇತ್ರವನ್ನು ತಮ್ಮ ಚಲನವಲನಗಳಿಗೆ, ತನ್ನದೇ ಜಾತಿಯ ಮೀನುಗಳೊಂದಿಗೆ ಸಂಪರ್ಕಕ್ಕಾಗಿ ಬಳಸಿಕೊಳ್ಳುತ್ತವೆ.

ಎಲೆಕ್ಟ್ರಿಕ್ ರೇ ಮೀನುಗಳಿಗೆ ಮೇಲಿನಿಂದ ಕೆಳಕ್ಕೆ ಚಪ್ಪಟೆಯಾದ ದುಂಡಾದ ಡಿಸ್ಕ್ ಆಕಾರದಲ್ಲಿರುವ ದೇಹ ಮತ್ತು ಚೆನ್ನಾಗಿ ಬೆಳೆದಿರುವ ಬಾಲ ಮತ್ತು ಬಾಲದ ರೆಕ್ಕೆ ಇರುತ್ತದೆ. ಸಣ್ಣ ಕಣ್ಣುಗಳಿರುತ್ತವೆ. ಕೆಲವು ಜಾತಿಯವು ಸಂಪೂರ್ಣ ಕುರುಡಾಗಿರುತ್ತವೆ. ಇತರೆ ರೇ ಗಳಿಗಿರುವಂತೆ ಇವಕ್ಕೆ ವಿಷಪೂರಿತ ಮುಳ್ಳಿರುವುದಿಲ್ಲ. ಎರಡು ಸಣ್ಣ ಬೆನ್ನಿನ ಈಜು ರೆಕ್ಕೆಗಳಿವೆ. ಮೇಲ್ಭಾಗದ ಇಕ್ಕೆಲಗಳಲ್ಲಿ ವಿದ್ಯತ್ ಉತ್ಪಾದಿಸುವ ಅಂಗಗಳಿವೆ. ಇತರೆ ರೇ ಮೀನುಗಳಂತೆ ಇವೂ ಜರಾಯುಜಗಳು. ಮೊಟ್ಟೆಗಳು ಹೆಣ್ಣು ಮೀನಿನಲ್ಲಿದ್ದು ಮರಿಗಳಾಗಿ ಹೊರಬರುತ್ತವೆ. ಟಾರ್ಪೆಡೋ ನೊಬಿಲಿಯಾನಾ ಅತ್ಯಂತ ದೊಡ್ಡ ಎಲಕ್ಟ್ರಿಕ್ ರೇ ಮೀನು. ಇದು ಸುಮಾರು 6 ಅಡಿಗಳವರೆಗೆ ಬೆಳೆಯುತ್ತದೆ. ಈ ಮೀನುಗಳಿಗೆ ವಾಣಿಜ್ಯ ಪ್ರಾಮುಖ್ಯತೆಯಿಲ್ಲ. ಆದರೆ ಇವುಗಳಲ್ಲಿ ವಿದ್ಯತ್ ಅಂಗಗಳಿರುವ ಕಾರಣದಿಂದ ವೈಜ್ಞಾನಿಕವಾಗಿ ಹೆಚ್ಚು ಪ್ರಮುಖವಾಗಿವೆ.

                    							      (ಬಿ.ಎಚ್.ಎಂ.)

(ಪರಿಷ್ಕರಣೆ: ಟಿ.ಎಸ್.ವಿಶ್ವನಾಥ್)

  *