ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಲ್ಹೆಲ್ಮ್‌ ಕಾನ್ರಾಡ್, ರಂಟ್ಜನ್

ವಿಕಿಸೋರ್ಸ್ದಿಂದ

ವಿಲ್‍ಹೆಲ್ಮ್ ಕಾನ್ರಾಡ್, ರಂಟ್‍ಜನ್

	1845-1923. ಜರ್ಮನ್ ಭೌತವಿಜ್ಞಾನಿ. ರ್ಹೀನಿಶ್ ಪ್ರಷ್ಯದ ಲೆನ್ನೆಪ್‍ನಲ್ಲಿ 1845 ಮಾರ್ಚ್ 27ರಂದು ಜನಿಸಿದ. ಹಾಲೆಂಡ್ ಮತ್ತು ಸ್ವಿಟ್ಜರ್‍ಲೆಂಡ್‍ಗಳಲ್ಲಿ ವಿದ್ಯಾಭ್ಯಾಸ; ಜೂರಿಚ್‍ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕ ಪದವಿ ಗಳಿಕೆ. ಜರ್ಮನ್ ಭೌತವಿಜ್ಞಾನಿ ಆಗಸ್ಟ್ ಅಡಾಲ್ಫ್ ಎಡ್ವರ್ಡ್ ಎಬರ್‍ಹಾರ್ಡ್ ಕೂಂಟ್‍ನ(1839-94) ಪ್ರಭಾವದಿಂದ ಭೌತವಿಜ್ಞಾನ ಅಧ್ಯಯನವನ್ನು ವೃತ್ತಿಯಾಗಿ ಆಯ್ಕೆ; ಡಾಕ್ಟೊರೇಟ್ ಪದವಿ ಗಳಿಕೆ (1869). ಕೂಂಟ್‍ನ ಸಹಾಯಕನಾಗಿ ವೃತ್ತಿಪ್ರವೇಶ. ಸ್ಟ್ರಾಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಅನುಭವ ಗಳಿಕೆ (1876). ಕೂಂಟ್‍ನ ಒಡನಾಡಿಯಾಗಿ ಜರ್ಮನಿಗೆ ಪ್ರಯಾಣ. ಅನುಕ್ರಮವಾಗಿ ಗಿಸ್ಸೆನ್(1879), ವೂರ್ಝ್ ಬರ್ಗ್(1888) ಮತ್ತು ಮ್ಯೂನಿಚ್(1899-1919) ವಿಶ್ವವಿದ್ಯಾಲಯಗಳಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕ ವೃತ್ತಿ. ಎಕ್ಸ್-ಕಿರಣಗಳು ಎಂದು ಈತನೇ ನಾಮಕರಣ ಮಾಡಿದ ವಿದ್ಯುತ್ಕಾಂತ ಕಿರಣಗಳ ಆವಿಷ್ಕಾರಕ್ಕಾಗಿ (1895) ಇವನಿಗೆ ಮತ್ತು ಫಿಲಿಪ್ ಎಡ್ವರ್ಡ್ ಆ್ಯಂಟನ್ ವಾನ್ ಲೆನಾರ್ಡ್ (ಹಂಗೇರಿಯನ್-ಜರ್ಮನ್ ಭೌತವಿಜ್ಞಾನಿ, 1862-1947) ಜಂಟಿಯಾಗಿ ರಮ್‍ಫರ್ಡ್ ಪದಕ ಪ್ರದಾನ (1896). ನೊಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷವೇ ಭೌತವಿಜ್ಞಾನದ ಪ್ರಶಸ್ತಿ ನೀಡಿಕೆಯ ಪುರಸ್ಕಾರ (1901). ಬವೇರಿಯ ರಾಜ ನೀಡಿದ ಫಾನ್ ಬಿರುದನ್ನು ತಿರಸ್ಕರಿಸಿದ್ದು ಹಾಗೂ ಆವಿಷ್ಕಾರಕ್ಕೆ ಏಕಸ್ವ (ಪೇಟೆಂಟ್) ಪಡೆದು ಆರ್ಥಿಕ ಲಾಭ ಗಳಿಸಲು ನಿರಾಕರಿಸಿದ್ದು ಈತನ ನಿಸ್ವಾರ್ಥತೆಯ ಸೂಚಕಗಳು. ಸ್ಫಟಿಕಗಳ ಉಷ್ಣವಾಹಕತೆ, ಅನಿಲಗಳ ವಿಶಿಷ್ಟ ಉಷ್ಣ ಮತ್ತು ಪರಾವೈದ್ಯುತಗಳಲ್ಲಿ (ಡೈಎಲೆಕ್ಟ್ರಿಕ್) ಉತ್ಪತ್ತಿಯಾಗುವ ಕಾಂತೀಯ ಪರಿಣಾಮಗಳು-ಈ ಕ್ಷೇತ್ರಗಳಲ್ಲಿಯೂ ಈತ ಮಹತ್ತ್ವದ ಕೊಡುಗೆಗಳಿವೆ. ಒಂದನೆಯ ಮಹಾಯುದ್ಧಾನಂತರದ ಜರ್ಮನಿಯನ್ನು ಕಾಡಿದ ಹಣದುಬ್ಬರದ ಪರಿಣಾಮವಾಗಿ ಈತ ಕೂಡ ಆರ್ಥಿಕವಾಗಿ ದುರ್ಬಲನಾದ. 1923 ಫೆಬ್ರವರಿ 10ರಂದು ಮ್ಯೂನಿಚ್‍ನಲ್ಲಿ ನಿಧನನಾದ.

ಸಮರ್ಥ ಅಧ್ಯಾಪಕ ಸ್ತರದಿಂದ ಈತನನ್ನು ಮೇಲೆತ್ತಿ ಮನುಕುಲದ ಮನಸ್ಸಿನಲ್ಲಿ ಚಿರಸ್ಥಾಯಿ ಯಾಗಿಸಿದ ವಿದ್ಯಮಾನ ಜರಗಿದ್ದು 1895ರ ಶರತ್ಕಾಲ ದಲ್ಲಿ. ಆಗ ಈತ ವೂರ್ಝ್ ಬರ್ಗ್ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ. ಕ್ಯಾಥೋಡ್ ಕಿರಣಗಳಿಗೆ ಸಂಬಂಧಿಸಿದಂತೆ ಲೆನಾರ್ಡ್ ಮತ್ತು ಸರ್ ವಿಲಿಯಮ್ ಕ್ರೂಕ್ಸ್ (ಬ್ರಿಟಿಷ್ ಭೌತವಿಜ್ಞಾನಿ, 1832-1919) ಮಾಡಿದ್ದ ಪ್ರಯೋಗಗಳನ್ನು ಈತ ಪುನಃ ಮಾಡುತ್ತಿದ್ದ. ಕಾರಣ: ನಿರ್ದಿಷ್ಟ ರಾಸಾಯನಿಕಗಳಲ್ಲಿ ಕ್ಯಾಥೋಡ್ ಕಿರಣಗಳು ಉಂಟು ಮಾಡುತ್ತಿದ್ದ ದೀಪ್ತಿ ಇವನ ಕುತೂಹಲ ಕೆರಳಿಸಿತ್ತು. ಕತ್ತಲು ಕೋಣೆ ಯಲ್ಲಿ ಕ್ಯಾಥೋಡ್ ಕಿರಣ ನಳಿಗೆಗೆ ತೆಳು ಕಪ್ಪುರಟ್ಟಿನ ಆವರಣ ಹಾಕಿದ (1895 ನವೆಂಬರ್ 5). ನಳಿಗೆಯನ್ನು ಅದು ಉತ್ಸರ್ಜಿಸದೆ ಇದ್ದ ಬೆಳಕಿನ ಕ್ಷಣಿಕಪ್ರಕಾಶವೊಂದು ಅವನ ಗಮನ ಸೆಳೆಯಿತು-ಕೊಂಚ ದೂರದಲ್ಲಿದ್ದ ಪ್ಲಾಟಿನೊಸಯನೈಡ್‍ಲೇಪಿತ ಕಾಗದದ ಹಾಳೆ ಯೊಂದು ಕ್ಯಾಥೋಡ್ ಕಿರಣ ತಟ್ಟದೆ ಇದ್ದರೂ ಪ್ರಕಾಶಿಸುತ್ತಿತ್ತು: ನಳಿಗೆಯನ್ನು ನಿಷ್ಕ್ರಿಯಗೊಳಿಸಿದ, ಪ್ರಕಾಶ ಮಾಯವಾಯಿತು. ನಳಿಗೆ ಕ್ರಿಯಾಶೀಲವಾಗಿದ್ದಾಗ ಮಾತ್ರ ಹಾಳೆ ಪ್ರಕಾಶಿಸುತ್ತದೆ ಎಂಬುದನ್ನು ಖಚಿತ ಪಡಿಸಿಕೊಂಡ. ಪಕ್ಕದ ಕೋಣೆಗೆ ಹಾಳೆಯನ್ನು ಮಾತ್ರ ಒಯ್ದು ಕಿಟಕಿ, ಬಾಗಿಲುಗಳನ್ನು ಮುಚ್ಚಿದಾಗಲೂ ವಿದ್ಯಮಾನ ಪುನರಾವೃತ್ತಿ ಆಯಿತು. ತಡೆಗಳ ಮೂಲಕ ಹಾಯಬಲ್ಲ ಅಗೋಚರ ವಿಕಿರಣವನ್ನು ನಳಿಗೆ ಉತ್ಸರ್ಜಿಸುತ್ತಿರಬೇಕೆಂದು ಅನುಮಾನಿಸಿದ. ಕಾಗದ ಹಾಗೂ ಲೋಹದ ವಿಭಿನ್ನ ದಪ್ಪದ ಹಾಳೆಗಳನ್ನು ಬಳಸಿ ಪ್ರಯೋಗ ಪುನರಾವರ್ತಿಸಿ ತನ್ನ ಅನುಮಾನ ಸರಿ ಎಂಬುದನ್ನು ಖಚಿತ ಪಡಿಸಿಕೊಂಡ. ಸ್ವಭಾವದ ಮಾಹಿತಿ ಇಲ್ಲದ ಈ ಅಜ್ಞಾತ ವಿಕಿರಣಕ್ಕೆ ಗಣಿತದ ಪರಿಭಾಷೆಯಲ್ಲಿ ಎಕ್ಸ್-ಕಿರಣ ಎಂದು ನಾಮಕರಣ ಮಾಡಿದ. ಈ ವಿಕಿರಣದ ಸ್ವಭಾವ ಈಗ ತಿಳಿದಿದ್ದರೂ ಹೆಸರನ್ನು ಬದಲಿಸಿಲ್ಲ. ಏಳು ವಾರಗಳ ಕಾಲ ಸತತವಾಗಿ ಅನೇಕ ಪ್ರಯೋಗಗಳನ್ನು ಮಾಡಿದ. ಈ ಅವಧಿಯಲ್ಲಿ ಎಕ್ಸ್-ಕಿರಣದ ಅನಿಲಗಳನ್ನು ಅಯಾನೀಕರಿಸುವ ಸಾಮಥ್ರ್ಯ, ಕಾಂತೀಯ ಅಥವಾ ವೈದ್ಯುತ ಕ್ಷೇತ್ರಕ್ಕೆ ಅನುಕ್ರಿಯಿಸದಿರುವಿಕೆ ಮುಂತಾದ ಎಲ್ಲ ಮೂಲ ಲಕ್ಷಣಗಳನ್ನೂ ಆವಿಷ್ಕರಿಸಿದ. ಅನಂತರ, ತನ್ನ ಆವಿಷ್ಕಾರದ ಸಂಪೂರ್ಣ ವರದಿಯನ್ನು ಪ್ರಕಟಿಸಿದ (1895 ಡಿಸೆಂಬರ್ 28). ಆವಿಷ್ಕಾರದ ಕುರಿತು ರಂಟ್‍ಜನ್ ಮಾಡಿದ ಮೊದಲನೆಯ ಸಾರ್ವಜನಿಕ ಭಾಷಣದ (1896 ಜನವರಿ 23) ಅವಧಿಯಲ್ಲಿ ತೆಗೆದ ಸ್ವಪ್ರೇರಿತ ಶ್ರೋತೃವಿನ ಹಸ್ತದ ಎಕ್ಸ್-ಕಿರಣ ಫೋಟೊಗ್ರಾಫ್ ವೈದ್ಯಕೀಯ ಕ್ಷೇತ್ರದಲ್ಲಿ ಕಿರಣದ ವ್ಯಾಪಕ ಬಳಕೆಗೆ ನಾಂದಿಯಾಯಿತು. ಎಕ್ಸ್-ಕಿರಣ ಗುಟ್ಟಿಯ (ಡೋಸೇಜ್) ಏಕಮಾನಕ್ಕೆ ರಂಟ್‍ಜನ್ ಎಂದು ಹೆಸರಿಸಲಾಯಿತು.

ಎಕ್ಸ್-ಕಿರಣಕ್ಕೆ ಅತಿ ಒಡ್ಡುವಿಕೆ ಅಪಾಯಕಾರಿ, ಕ್ಯಾನ್ಸರ್ ರೋಗಜನಕ ಮುಂತಾದ ಅರಿವು ಮೂಡಿದ್ದು ಅನೇಕರು ಈ ಕಾರಣದಿಂದ ಮರಣಿಸಿದ ಬಳಿಕ ವಿಕಿರಣಸಂಬಂಧಿತ ಅಧ್ಯಯನಗಳಿಗೆ ವಿಶೇಷ ಚಾಲನೆ ನೀಡಿದ ಈ ಆವಿಷ್ಕಾರ ಭೌತವಿಜ್ಞಾನದ ಅನೇಕ ಹಳೆಯ ಪರಿಕಲ್ಪನೆಗಳನ್ನು ಸಂಪೂರ್ಣವಾಗಿ ಬದಲಿಸಿ ಹೊಸ ಆವಿಷ್ಕಾರಗಳಿಗೆ ನಾಂದಿಯಾಯಿತು. *

  *