ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೃಶ್ಚಿಕ ರಾಶಿ

ವಿಕಿಸೋರ್ಸ್ದಿಂದ

ವೃಶ್ಚಿಕ ರಾಶಿ ಸೂರ್ಯ, ಚಂದ್ರ ಮತ್ತು ಗ್ರಹಗಳ ಕಕ್ಷೆಗಳ ಸೀಮಿತವಾಗಿರುವಂತೆ ಭಾಸವಾಗುವ 12 ನಕ್ಷತ್ರ ಪುಂಜಗಳ (ಇವುಗಳಿಗೆ ರಾಶಿಗಳೆಂದು ಹೆಸರು) ಇಕ್ಕಟ್ಟು ಪಟ್ಟಿಯಲ್ಲಿ ಕಾಣುವ ಮತ್ತು ಹೆಸರಿಗೂ ಆಕಾರಕ್ಕೂ ಸಾಮ್ಯವಿರುವ ನಕ್ಷತ್ರರಾಶಿ (ಸ್ಕಾರ್ಪಿಯನ್). ಈ ಇಕ್ಕಟ್ಟು ಪಟ್ಟಿಯ ಹೆಸರು ರಾಶಿಚಕ್ರ. ಮೇಷದಿಂದ ತೊಡಗುವ ರಾಶಿಚಕ್ರದಲ್ಲಿ 7ನೆಯದು ವೃಶ್ಚಿಕ. ಇದರ ವಿಶಾಲ ಆಕಾರವನ್ನು ಲೇಪಿಸುವ ಸುಮಾರು 12-13 ನಕ್ಷತ್ರಗಳ ಪೈಕಿ ಎದ್ದುಕಾಣುವುದು ಜ್ಯೇಷ್ಠಾ (ಅಂಟಾರೆಸ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್). ಚೇಳಿನ (ವೃಶ್ಚಿಕ) ತಲೆಭಾಗದ (ಅಂದರೆ ಪಶ್ಚಿಮ ಕಡೆಗಿರುವ) ಸುಮಾರು 3 ನಕ್ಷತ್ರಗಳ ಬಾಗು ರೇಖೆಗೆ ಅನೂರಾಧಾ (ಅಕೃಬ್) ಎಂದೂ ಕೊಂಡಿಬಾಲಭಾಗದ ಸುಮಾರು 5 ನಕ್ಷತ್ರಗಳಿಗೆ ಒಟ್ಟಾಗಿ ಮೂಲಾ (ಶೌಲಾ) ಎಂದು ಹೆಸರು.

ಜ್ಯೇಷ್ಠಾ ನಮ್ಮಿಂದ 330 ಜ್ಯೋತಿರ್ವರ್ಷ ದೂರದಲ್ಲಿದೆ. ಇದೊಂದು ರಕ್ತ ಅತಿದೈತ್ಯ ತಾರೆ. ಸೌರವ್ಯಾಸದ 300 ಮಡಿ ಇದೆ ಇದರ ವ್ಯಾಸ! ಉಜ್ಜ್ವಲತಾಂಕ 0.9-1.1ರ ನಡುವೆ ವ್ಯತ್ಯಯವಾಗುತ್ತದೆ. ಇದಕ್ಕೊಂದು ಉಜ್ಜ್ವಲತಾಂಕ 6 ಇರುವ ಸಂಗಾತಿ ನಕ್ಷತ್ರವೂ ಇದೆ. (ಸಿ.ಎನ್.ಎಸ್.)

  *