ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೈಲ್ಡ್‌, ಆಸ್ಕರ್

ವಿಕಿಸೋರ್ಸ್ದಿಂದ

ವೈಲ್ಡ್, ಆಸ್ಕರ್ 1854-1900. ಐರಿಷ್ ಕವಿ, ಉತ್ತಮ ವಾಗ್ಮಿ ಹಾಗೂ ನಾಟಕಕಾರ. ಐರ್ಲೆಂಡಿನ ಡಬ್ಲಿನ್‍ನಲ್ಲಿ 1854ರಲ್ಲಿ ಜನಿಸಿದ. ಆಸ್ಕರ್ ಫಿಂಗಲ್ ಓ ಫ್ಲಾಹರ್ಟಿ ವಿಲ್ಸ್‍ವೈಲ್ಡ್ ಎಂಬುದು ಇವನ ಪೂರ್ಣ ಹೆಸರು. ವಾಗ್ಮಿತೆ ಹಾಗೂ ಪಾಂಡಿತ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಂಬಲದಿಂದ ಐರ್ಲೆಂಡನ್ನು ಬಿಟ್ಟು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಸೇರಿದ. ಜೀವನ ಹಾಗೂ ಕಲೆಗಳ ವಿಚಾರದಲ್ಲಿ ಪಾಂಡಿತ್ಯ ಅಗಾಧ ವಾಗಿದ್ದ ಕಾರಣ ಬಹಳ ಬೇಗ ಪ್ರಸಿದ್ಧಿಗೆ ಬಂದ. ದ ಹ್ಯಾಪಿ ಪ್ರಿನ್ಸ್ ಅಂಡ್ ¥sóÉೀರಿ ಟೇಲ್ಸ್ (1888) ಕೃತಿಯಲ್ಲಿ ಇವನ ನಿಜವಾದ ಸೃಜನಾತ್ಮಕ ಪ್ರತಿಭೆ ದರ್ಶನವಾಗುತ್ತದೆ.

ಪಿಕ್ಚರ್ ಆಫ್ ಡೋರಿಯನ್ ಗ್ರೇ (1890) ಇವನ ಏಕಮಾತ್ರ ಕಾದಂಬರಿ. ನೀತಿ ಪ್ರಧಾನವಾದ್ದು. ಒಂದು ದೈವಿಕ ವ್ಯಕ್ತಿತ್ವದ ವಿನಾಶಕಾರಿ ಪ್ರವೃತ್ತಿಯನ್ನು ಇಲ್ಲಿ ಚಿತ್ರಿಸಿದ್ದಾನೆ. ಲೇಡಿ ವಿಂಡರ್ಮರ್ಸ್ ಫ್ಯಾನ್ (1892), ಎ ವುಮೆನ್ ಆಫ್ ನೋ ಇಂಪಾರ್ಟೆನ್ಸ್ (1893), ಎನ್ ಐಡಿಯಲ್ ಹಸ್ಬೆಂಡ್ (1895) ಇವನ ಇತರ ಕೃತಿಗಳು. ದ ಇಂಪಾರ್ಟೆನ್ಸ್ ಆ¥sóï ಬೀಯಿಂಗ್ ಅರ್ನೆಸ್ಟ್ (1895) ಇವನ ಅತ್ಯಂತ ಮಹತ್ತ್ವದ ಕೃತಿ. ಇವನ ನಾಟಕಗಳು ಮುಖ್ಯವಾಗಿ ಸಾಮಾಜಿಕ ವಿಡಂಬನೆಗಳಾಗಿವೆ. ದ ಇಂಪಾರ್ಟೆನ್ಸ್ ಆ¥sóï ಬೀಯಿಂಗ್ ಅರ್ನೆಸ್ಟ್ ಕೃತಿಯಲ್ಲಿ ಬ್ರಿಟಿಷ್ ಸಾಮಾಜಿಕ ಬದುಕಿನ ಪೊಳ್ಳುತನ ವನ್ನು ಬಯಲಿಗೆಳೆಯುವ ಪ್ರಯತ್ನವಿದೆ. ಸಾಲೊಮೆ ಇವನ ಫ್ರೆಂಚ್ ಏಕಾಂಕ. ಇದು ಪ್ಯಾರಿಸ್‍ನಲ್ಲಿ ಪ್ರದರ್ಶನಗೊಂಡಿತು. ಈಸ್ತೆಟಿಕ್ ಫಿಲಾಸಫಿ ಎಂಬುದು 1882ರಲ್ಲಿ ಅಮೆರಿಕದಲ್ಲಿ ಸೌಂದರ್ಯ ಮೀಮಾಂಸೆಗೆ ಸಂಬಂಧಿಸಿದಂತೆ ಇವನು ನೀಡಿದ ಭಾಷಣ. ಕಲೆಕ್ಟೆಡ್ ಪೊಯಮ್ಸ್-ಇವನ ಕವನ ಸಂಕಲನ. ಸಲಿಂಗ ರತಿಯ ಸಾಮಾಜಿಕ ಆಪಾದನೆ ಮೇರೆಗೆ ಇವನು ಬಂಧನಕ್ಕೊಳಗಾಗಬೇಕಾಯಿತು. ಆ ಸಂದರ್ಭದಲ್ಲಿ ದ ಬ್ಯಾಲೆಡ್ ಆಫ್ ರೀಡಿಂಗ್ ಗೋಲ್ ಎಂಬ ಕವಿತೆಯನ್ನೂ ಡಿ ಪ್ರೊಫೆಂಡಿಸ್ ಎಂಬ ಆತ್ಮಚರಿತ್ರೆಯನ್ನೂ ಬರೆದ. ಬಂಧನದಿಂದ ಬಿಡುಗಡೆಗೊಂಡ ಅನಂತರ ಇಂಗ್ಲೆಂಡ್ ಬಿಟ್ಟು ಫ್ರಾನ್ಸ್‍ಗೆ ತೆರಳಿದ. ಈತ 1900ರಲ್ಲಿ ನಿಧನನಾದ. (ಜಿ.ಎನ್.ಎಸ್.)

  *