ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಂಕರ್, ಸಿ ಎಸ್

ವಿಕಿಸೋರ್ಸ್ದಿಂದ

ಶಂಕರ್, ಸಿ ಎಸ್

     ಡಾ|| ಪಿ.ಎಸ್.ಶಂಕರ್‍ರವರು ಉತ್ತರ ಕರ್ನಾಟಕದ ಕಲಬುರ್ಗಿಯ ಪ್ರತಿಭಾನ್ವಿತ ವೈದ್ಯಕೀಯ ಪ್ರಾಧ್ಯಾಪಕರು.  1.1.1936ರಲ್ಲಿ ಧಾರವಾಡದ ಹಲಗೇರಿಯಲ್ಲಿ ಜನಿಸಿದ ಡಾ|| ಪಿ.ಎಸ್. ಶಂಕರ್ ಗುಲ್ಬರ್ಗ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿ, ಡೀನ್ ಮತ್ತು ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವರಲ್ಲದೇ ಉತ್ತಮ ಆಡಳಿತಗಾರರೆಂದೂ ಹೆಸರು ಪಡೆದಿದ್ದಾರೆ.  ಗುಲ್ಬರ್ಗ, ಮುಂಬಯಿ ಮತ್ತು ಹೈದರಾಬಾದ್‍ಗಳಲ್ಲಿ ಮೆಡಿಕಲ್ ಕಾಲೇಜುಗಳ ನಿರ್ದೇಶಕರಾಗಿ 42 ವರ್ಷಗಳ ಕಾಲ ಅನುಪಮ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಆರೋಗ್ಯ, ವೈದ್ಯವಿಜ್ಞಾನವನ್ನು ಕುರಿತ ಇವರ ನೂರಕ್ಕೂ ಹೆಚ್ಚು ಪುಸ್ತಕಗಳು ಪ್ರಕಾಶಗೊಂಡಿವೆ.  ಇವರು ರಚಿಸಿರುವ ವೈದ್ಯಕೀಯ ಪುಸ್ತಕಗಳು ಜನಸಾಮಾನ್ಯರಿಗೆ ಮಾತ್ರವಲ್ಲ, ವೈದ್ಯರಿಗೂ ಉಪಯುಕ್ತ ಮಾಹಿತಿ, ಶಿಕ್ಷಣ ನೀಡುವ ಕೃತಿಗಳಾಗಿವೆ.  ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸಿರುವ 'ವೈದ್ಯ ವಿಶ್ವಕೋಶ ದ ಸಂಪಾದಕರಾಗಿರುವ ಡಾ|| ಪಿ.ಎಸ್. ಶಂಕರ್‍ರವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿದ್ಯಾರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.  ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ವೈದ್ಯಕೀಯ ವಿಚಾರಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.  ಅನೇಕ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಇವರ ಶ್ವಾಸಕೋಶ ಕಾಯಿಲೆಗಳ ನಿವಾರಣಾ ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ರಾಷ್ಟ್ರೀಯ ವೈದ್ಯಕೀಯ ಪರೀಕ್ಷೆಗಳ ಸಂಸ್ಥೆಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಡಾ|| ಪಿ.ಎಸ್. ಶಂಕರ್‍ರವರು ಇಂಟರ್‍ನ್ಯಾಷನಲ್ ಅಡ್ವೈಸರ್ಸ್ ಬೋರ್ಡ್ ಆಫ್ ಡೇವಿಡ್‍ಸನ್ಸ್ ಡಿಕ್ಸ್ಟ್‍ಬುಕ್ ಆಫ್ ಮೆಡಿಸನ್‍ನ ಸದಸ್ಯರಾಗಿದ್ದಾರೆ ಮತ್ತು ಇಂಗ್ಲಿಷಿನಲ್ಲ್ಲಿ ಮೆಡಿಕಲ್ ಡಿಕ್ಷನರಿ ರಚಿಸಿದ್ದಾರೆ.					

(ಡಾ. ವಸುಂಧರಾ ಭೂಪತಿ)