ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಕ್ತಿ ಸಂರಕ್ಷಣೆ

ವಿಕಿಸೋರ್ಸ್ದಿಂದ

ಶಕ್ತಿ ಸಂರಕ್ಷಣೆ ಸಂವೃತ ವ್ಯವಸ್ಥೆಯಲ್ಲಿ ಕಾಯಗಳು ಅಥವಾ ಕಣಗಳು ಪರಸ್ಪರ ವರ್ತಿಸುತ್ತಿದ್ದರೂ ಅವುಗಳ ಒಟ್ಟು ಶಕ್ತಿ ಸ್ಥಿರವಾಗಿರು ತ್ತದೆ ಎಂಬ ಭೌತಶಾಸ್ತ್ರೀಯ ತತ್ತ್ವ (ಕನ್ಸರ್ವೇಶನ್ ಆಫ್ ಎನರ್ಜಿ). ಶಕ್ತಿಯನ್ನು ರೂಪಾಂತರಿಸಬಹುದೇ ವಿನಾ ಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ, ನಿಸರ್ಗದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದರೂ ಒಟ್ಟು ಶಕ್ತಿ ಬದಲಾಗುವುದಿಲ್ಲ ಎಂಬ ನಿರೂಪಣೆಗಳೂ ಇವೆ. ಸಂರಕ್ಷಣೆಗೆ ಸಂಬಂಧಿಸಿದ ಮೂಲಭೂತ ತತ್ತ್ವಗಳ ಪೈಕಿ ಒಂದು (ಇತರ ಉದಾ: ರಾಶಿ ಸಂರಕ್ಷಣೆ, ಸಂವೇಗ ಸಂರಕ್ಷಣೆ, ವಿದ್ಯುದಾವೇಶ ಸಂರಕ್ಷಣೆ).

ಒಟ್ಟಾರೆ ನಿಸರ್ಗಕ್ಕಷ್ಟೇ ಅಲ್ಲದೆ ಅದರಲ್ಲಿರುವ ಸಂವೃತ (ಕ್ಲೋಸ್ಡ್) ಅಥವಾ ಪ್ರತ್ಯೇಕಿತ (ಐಸೊಲೇಟೆಡ್) ಸಂವೃತ ವ್ಯವಸ್ಥೆಗಳಿಗೂ ಇದು ಅನ್ವಯಿಸುತ್ತದೆ. ಹೊರಗಿನಿಂದ ಶಕ್ತಿ ಸೇರಿಸಲಾಗದ ಹಾಗೂ ಶಕ್ತಿಯನ್ನು ಹೊರತೆಗೆಯಲಾಗದ ರೀತಿಯಲ್ಲಿ ವ್ಯಾಖ್ಯಾನಿಸಬಹುದಾದ ಗಡಿಗಳಿರುವ ವ್ಯವಸ್ಥೆಯೇ ಸಂವೃತ ವ್ಯವಸ್ಥೆ. ಇದರಲ್ಲಿ ಯಾವುದೇ ತೆರನಾದ ಪ್ರಕ್ರಿಯೆಗಳು ಜರಗಿದರೂ ಅದರಲ್ಲಿರುವ ಒಟ್ಟು ಶಕ್ತಿ ಬದಲಾಗುವುದಿಲ್ಲ. ಸಂವೃತ ವ್ಯವಸ್ಥೆಗೆ ವಿಶ್ವದ ಇತರ ಭಾಗಗಳೊಂದಿಗೆ ಯಾವುದೇ ಅಂತರಕ್ರಿಯೆ ಇರುವುದಿಲ್ಲ ಎಂಬುದು ಅಧ್ಯಾಹಾರ. ಯಾವುದೇ ವ್ಯವಸ್ಥೆ ಯಲ್ಲಿರುವ ಒಟ್ಟು ಶಕ್ತಿಯನ್ನು ಬೇರೆಬೇರೆ ಕಾಲದಲ್ಲಿ ಅಳೆದಾಗ ಅದು ಒಂದೇ ಆಗಿರದಿದ್ದರೆ ಆ ಅವಧಿಯಲ್ಲಿ ಶಕ್ತಿ ಸೇರ್ಪಡೆಯಾಗಿದೆ ಅಥವಾ ಹೊರಹೋಗಿದೆ ಎಂದರ್ಥ. ಈ ತತ್ತ್ವದ ಸಾರ್ವತ್ರೀಕೃತ ರೂಪವೇ ಉಷ್ಣಗತಿವಿಜ್ಞಾನದ 1ನೆಯ ನಿಯಮ

ಯಾಂತ್ರಿಕ ಶಕ್ತಿ (ಅರ್ಥಾತ್ ಚಲನ ಮತ್ತು ವಿಭವ ಶಕ್ತಿ), ಉಷ್ಣ ಶಕ್ತಿ, ಬೈಜಿಕ ಶಕ್ತಿ, ಧ್ವನಿ ಶಕ್ತಿ, ಬೆಳಕು ಶಕ್ತಿ, ರಾಸಾಯನಿಕ ಶಕ್ತಿ ಇವೆಲ್ಲ ಶಕ್ತಿಯ ರೂಪಗಳು. ವಿದ್ಯುತ್ ಬಲ್ಬ್, ಕಾರ್ ಎಂಜಿನ್, ಬೈಸಿಕಲ್, ಡೈನಮೊ ಮುಂತಾದವು ಶಕ್ತಿಯನ್ನು ರೂಪಾಂತರಿಸುತ್ತವೆಯೇ ವಿನಾ ಸೃಷ್ಟಿಸುವುದಿಲ್ಲ. ಶಕ್ತಿ ನಷ್ಟವಾಯಿತು ಎಂದರೆ ಶಕ್ತಿ ನಿರುಪಯುಕ್ತ ಅಥವಾ ಅನಪೇಕ್ಷಿತ ರೂಪ ತಳೆಯಿತು ಎಂದರ್ಥ.

ರಾಶಿ ಮತ್ತು ಶಕ್ತಿಯ ನಡುವಿನ ಸಂಬಂಧವನ್ನು ಐನ್‍ಸ್ಪೈನ್ ಆವಿಷ್ಕರಿಸಿದ ಬಳಿಕ ಈ ತತ್ತ್ವದ ವ್ಯಾಪ್ತಿಯಲ್ಲಿ ರಾಶಿಯನ್ನೂ ಸೇರಿಸಿ ರಾಶಿ-ಶಕ್ತಿ ಸಂರಕ್ಷಣೆ ಎಂದು ಉಲ್ಲೇಖಿಸಲಾಗುತ್ತಿದೆ.

 *