ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶತಾವರೀ

ವಿಕಿಸೋರ್ಸ್ದಿಂದ

ಶತಾವರೀ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸರ್ವಋತು ಗಿಡ. ಆಸ್ಪರೇಗಸ್ ರೆಸಿಮೋಸಸ್ ಇದರ ಶಾಸ್ತ್ರೀಯ ನಾಮ. ಶತಮೂಲಿ, ಮುಕ್ಕುಲ, ಹಲವು ಮಕ್ಕಳ ತಾಯಿ ಎಂಬ ಹೆಸರುಗಳೂ ಇವೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಬೆಳೆಯುವ ಈ ಬಳ್ಳಿಯಲ್ಲಿ ಆಸ್ಪರೇಗಸ್ ರೆಸಿಮೋಸಿಸ್, ಆಸ್ಪರೇಗಸ್ ಅಡೆಸ್ಕಾಡರ್ಸ್, ಆಸ್ಪರೇಗಸ್ ಪೆಸಿನೇಟಿಸ್ ಎಂಬ ಮೂರು ಪ್ರಭೇದಗಳಿವೆ.

ಶತಾವರೀ ಬೇರುಗಳಿಗೆ ಕೊಳವೆ ಆಕಾರವಿದೆ. ಬಣ್ಣ ಬೂದು. ಬೇರುಗಳ ಉದ್ದ 15-45 ಸೆಂಮೀ. ಬೇರು, ಎಲೆ, ಮಾಗಿದ ಹಣ್ಣು ಮತ್ತು ಬೀಜಗಳು ವಿವಿಧ ಬಗೆಯಲ್ಲಿ ಉಪಯೋಗವಾಗುತ್ತವೆ. ಗಿಡದಲ್ಲಿ ಆಸ್ಪರ್‍ಜಿನ್ ಆಲ್ಬ್ಯುಮಿನ್, ಲೋಳೆಸರ, ಸೆಲ್ಯೂಲೋಸ್‍ಗಳು ಇರುತ್ತವೆ. ಬೇರುಪುಡಿಯಲ್ಲಿ ಸಾಕರೀನ್ ಇದೆ. ಗಿಡದಲ್ಲಿ ರಾಳಸಕ್ಕರೆ, ಗೋಂದು, ಆಲ್ಬ್ಯುಮಿನ್, ಕ್ಲೋರೈಡ್, ಅಸಿಟೇಟ್, ಫಾಸ್ಫೇಟ್‍ಗಳು, ಪೆÇಟಾಸಿಯಮ್ ಮತ್ತು ಟೆರೋಸಿನ್ ಇವೆ. ಸಸ್ಯಗಳ ಎಲೆ, ತೊಗಟೆ, ಹೂ ಮುಂತಾದವುಗಳಿಂದ ಸುವಾಸನೆಯುಳ್ಳ ಅವಿಶೀಲ ತೈಲವೂ ಬೀಜಗಳಿಂದ ಸಾರತೈಲವೂ ಸಿಕ್ಕುತ್ತವೆ. ಈ ಸಸ್ಯದಲ್ಲಿ ಶತಾವರಿನ್ ಎಂಬ ಔಷಧೀಯ ಗುಣವುಳ್ಳ ಸಸ್ಯಕ್ಷಾರವಿದೆ. ಇದಕ್ಕೆ ಮೂತ್ರವರ್ಧಕ ಹಾಗೂ ಕ್ಷೀರವರ್ಧಕ, ಉಪಶಮನಕಾರಿ, ತಂಪುಕಾರಿ, ಸುಖರೇಚಕಕಾರಿ ಗುಣಗಳಿವೆ. ಬೇರು ಪುಡಿಯನ್ನು ಕಷಾಯ ರೂಪದಲ್ಲಿ ಅಥವಾ ಲೇಹ್ಯರೂಪದಲ್ಲಿ ಸೇವಿಸಬಹುದು.

       		  (ಟಿ.ಎಮ್.ಆರ್.)