ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಬ್ದ

ವಿಕಿಸೋರ್ಸ್ದಿಂದ

ಶಬ್ದ ಸ್ಥಿತಿಸ್ಥಾಪಕ ಮಾಧ್ಯಮದಲ್ಲಿ ನೀಳ-ಅಲೆ (ಲಾಂಜಿಟ್ಯೂಡಿನಲ್ ವೇವ್) ರೂಪದಲ್ಲಿ ಪ್ರಸರಿಸಬಲ್ಲ ಯಾಂತ್ರಿಕ ಕ್ಷೋಭೆ (ಸೌಂಡ್). ಪರ್ಯಾಯ ಪದ: ಧ್ವನಿ. ಯುಕ್ತ ಸಾಧನಗಳಿಂದ ಪತ್ತೆಹಚ್ಚಬಹುದಾದ ಸಂಮರ್ದ, ಕಣದ ಸ್ಥಾನ ಮುಂತಾದ ಮಾಧ್ಯಮಲಕ್ಷಣಗಳಲ್ಲಿ ಆಗುವ ಬದಲಾವಣೆಗಳೇ ಕ್ಷೋಭೆ (ಡಿಸ್ಟರ್ಬೆನ್ಸ್). ಕಂಪಿಸುತ್ತಿರುವ ಕಾಯಗಳ ಸೃಷ್ಟಿ, ಯಾಂತ್ರಿಕ ಕ್ಷೋಭೆ. ಇಲ್ಲಿ ಘನ, ದ್ರವ ಅಥವಾ ಅನಿಲವೇ ಮಾಧ್ಯಮ. ಪುನರಾವರ್ತಿಸುವ ಅಧಿಕ ಮತ್ತು ಕಡಿಮೆ ಸಂಮರ್ದ ಪ್ರದೇಶಗಳ, ಅರ್ಥಾತ್ ಸಂಪೀಡನ ಮತ್ತು ವಿರಳೀಕರಣಗಳ ಪ್ರರೂಪ ಪ್ರಸಾರದಂತೆ ತೋರುವುದರಿಂದ ಧ್ವನಿತರಂಗಗಳನ್ನು ಸಂಮರ್ದ-ತರಂಗಗಳು ಎಂದೂ ಪರಿಗಣಿಸಬಹುದು. ಶ್ರವಣಾತೀತ ಧ್ವನಿಯೂ ಇರುವುದರಿಂದ ಶ್ರವಣಸಂವೇದನೆ ಉತ್ಪಾದಿಸುವ ಯಾಂತ್ರಿಕ ಕ್ಷೋಭೆಯೇ ಧ್ವನಿ ಎಂಬ ಜನಪ್ರಿಯ ವ್ಯಾಖ್ಯಾನಕ್ಕೆ ವೈಜ್ಞಾನಿಕ ಮನ್ನಣೆ ಇಲ್ಲ. ಪ್ರತಿಫಲನ, ವಕ್ರೀಭವನ, ವಿವರ್ತನೆ, ಚದರಿಕೆ, ವ್ಯತಿಕರಣ, ಡಾಪ್ಲರ್ ಪರಿಣಾಮ ಮುಂತಾದವುಗಳ ನಿಯಮಗಳು ಧ್ವನಿತರಂಗಗಳಿಗೂ ಅನ್ವಯವಾಗುತ್ತವೆ.

ಮಾಧ್ಯಮದ ಉಷ್ಣತೆ, ಸ್ನಿಗ್ಧತೆ, ಸ್ಥಿತಿಸ್ಥಾಪಕತ್ವ, ಸಾಂದ್ರತೆ ಮುಂತಾದ ವನ್ನು ಧ್ವನಿಯ ವೇಗ ಅವಲಂಬಿಸಿರುವುದರಿಂದ ಅದು ಮಾಧ್ಯಮದಿಂದ ಮಾಧ್ಯಮಕ್ಕೆ ಬದಲಾಗುತ್ತದೆ (ಉದಾ: ಒಣ ವಾಯು 00 ಸೆ ತಾಪ- 331.6 ಮೀ/ಸೆಕೆಂಡ್, 200ಸೆ ತಾಪ-344.6 ಮೀ/ಸೆಕೆಂಡ್, ನೀರು- 1525ಮೀ/ಸೆಕೆಂಡ್, ಉಕ್ಕು-4877 ಮೀ/ಸೆಕೆಂಡ್). ಕ್ಷೋಭೆಯ ಉಗಮ ದಿಂದ ದೂರ ಸರಿದಂತೆಲ್ಲ ಧ್ವನಿಶಕ್ತಿ ನಷ್ಟವಾಗುತ್ತದೆ. ಹವೆ, ಗೋಡೆ ಹಾಗೂ ಮರಗಿಡಗಳಂಥ ತಡೆಗಳು, ಗಾಳಿಯ ವೇಗ ಹಾಗೂ ದಿಕ್ಕು, ಭೂಸ್ವರೂಪ ಮುಂತಾದವು ಬಯಲಿನಲ್ಲಿ ಧ್ವನಿದುರ್ಬಲೀಕರಣದ ಮೇಲೆ ಪ್ರಭಾವ ಬೀರುತ್ತವೆ.

ಶ್ರುತಿ, ಘೋಷ ಅಥವಾ ತೀವ್ರತೆ, ಮತ್ತು ನಾದಗುಣ (ಟಿಂಬರ್), ಸಂಮರ್ದ ಇವುಗಳ ಪರಿಭಾಷೆಯಲ್ಲಿ ಸಂಗೀತಸ್ವರದಂಥ ಸರಳ ಧ್ವನಿಯನ್ನು ವರ್ಣಿಸಬಹುದು. ತರಂಗಗಳನ್ನು ವರ್ಣಿಸಲು ಬಳಸುವ ಆವೃತ್ತಿ, ಪಾರ ಮತ್ತು ಸಂಗತಪ್ರಕೃತಿ ಅಥವಾ ತರಂಗರೂಪ ಪರಿಕಲ್ಪನೆಗಳಿಗೆ ಇವು ಅನುಕ್ರಮವಾಗಿ ಸಂಬಂಧಿಸಿವೆ.

ಏಕಮಾನ ಕಾಲದಲ್ಲಾಗುವ ಕಂಪನಗಳ ಸಂಖ್ಯೆ ಅಥವಾ ನಿಗದಿತ ಕಾಲದಲ್ಲಿ ಜರಗುವ ಕಂಪನಚಕ್ರಗಳ ಸಂಖ್ಯೆಯೇ ಆವೃತ್ತಿ, ಸೈಕಲ್ಸ್ ಪರ್ ಸೆಕೆಂಡ್ (ಸಿಪಿಎಸ್) ಇದರ ಅಳತೆಯ ಏಕಮಾನ. ವ್ಯಾವಹಾರಿಕ ಏಕಮಾನ ಹಟ್ರ್ಸ್ (1ಸಿಪಿಎಸ್=1ಹಟ್ರ್ಸ್). ಸಂಗೀತಸ್ವರದ ಆವೃತ್ತಿ ಮಟ್ಟ ಶ್ರುತಿ. ಆವೃತ್ತಿ ಅಧಿಕವಾಗಿದ್ದರೆ ತಾರಸ್ಥಾಯಿ, ಕಡಿಮೆ ಇದ್ದರೆ ಮಂದ್ರಸ್ಥಾಯಿ. ಮಾನವಶ್ರವ್ಯ ಧ್ವನಿತರಂಗಗಳ ಆವೃತ್ತಿವ್ಯಾಪ್ತಿ ಸುಮಾರು 20-20,000 ಹಟ್ರ್ಸ್. 20 ಹಟ್ರ್ಸ್‍ಗಿಂತ ಕಡಿಮೆ ಆವೃತ್ತಿಯುಳ್ಳ ಧ್ವನಿಯೇ ಅವಶ್ರವಣ ಧ್ವನಿ, 20,000 ಹಟ್ರ್ಸ್‍ಗಿಂತ ಹೆಚ್ಚು ಆವೃತ್ತಿಯುಳ್ಳದ್ದು ಶ್ರವಣಾತೀತ ಧ್ವನಿ. ಪ್ರತಿಯೊಂದು ಪ್ರಾಣಿ ಕುರಿತ ಶ್ರವ್ಯಧ್ವನಿಯ ಆವೃತ್ತಿವ್ಯಾಪ್ತಿಯೂ ಅದ್ವಿತೀಯ. (ಉದಾ: ನಾಯಿ 50-45000 ಹಟ್ರ್ಸ್, ಬೆಕ್ಕು 45-85,000 ಹಟ್ರ್ಸ್, ಆನೆ 5-10,000 ಹಟ್ರ್ಸ್).

ಚಿತ್ರ-1

ಮಾಧ್ಯಮದ ಏಕಮಾನ ಸಲೆಯ ಮೂಲಕ ಏಕಮಾನ ಕಾಲದಲ್ಲಿ ರವಾನೆಯಾಗುವ ಶಕ್ತಿಯೇ ಧ್ವನಿಯ ಘೋಷ ಅಥವಾ ತೀವ್ರತೆ. ಇದನ್ನು ಶಕ್ತಿ/ಕಾಲ/ಕ್ಷೇತ್ರಫಲ ಅಥವಾ ಸಾಮಥ್ರ್ಯ/ಕ್ಷೇತ್ರಫಲ ಎಂದೂ ವ್ಯಾಖ್ಯಾನಿಸಬಹುದು. ಮಾಧ್ಯಮದ ಕಣಗಳ ಕಂಪನಪಾರಕ್ಕೆ ಅನುಪಾತೀ ಯವಾಗಿ ಘೋಷ ಇರುತ್ತದೆ. ವಾಟ್ಸ್/ಮೀಟರ್2 (Wm2) ಘೋಷದ ಅಳತೆಯ ಏಕಮಾನ. ಡೆಸಿಬೆಲ್ (dB) ವ್ಯಾವಹಾರಿಕ ಏಕಮಾನ. ಮನುಷ್ಯ ಪತ್ತೆಹಚ್ಚಬಲ್ಲ ಧ್ವನಿತೀವ್ರತೆಯ ಪ್ರವೇಶಮೌಲ್ಯ 0 dB (0 dB = 1×10-12 W / m2, 10 dB = 1×10-11, 20 dB=1×10-10 W/m2). ಧ್ವನಿ ತೀವ್ರತೆಯನ್ನು ಅಳತೆ ಮಾಡ ತೀವ್ರತೆಯ ಧ್ವನಿ ಮಾನವ ಕರ್ಣಪಟಲ ವನ್ನು ತತ್‍ಕ್ಷಣ ಭೇದಿಸುತ್ತದೆ.

ಧ್ವನಿತರಂಗದ ನಾದ ಉತ್ಪಾದಿಸುವ ಶ್ರವಣಸಂವೇದ ಬಲ್ಲ ಮಾಪಕಗ ಳಿವೆ. ಶ್ರವಣ ಸಂವೇದನೆಯ ಗುಣವೇ ನಾದಗುಣ. ಇದು ಧ್ವನಿತರಂಗ ರೂಪವನ್ನು ಅವಲಂಬಿಸಿದೆ. ಧ್ವನಿತರಂಗರೂಪವು ಅಧಿನಾದಗಳ (ಓವರ್‍ಟೋನ್ಸ್) ಅಥವಾ ಸಂಗತಗಳ (ಹಾರ್ಮಾನಿಕ್ಸ್) ಸಂಖ್ಯೆ, ಅವುಗಳ ಆವೃತ್ತಿಗಳು ಹಾಗೂ ಸಾಪೇಕ್ಷ ತೀವ್ರತೆಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ಧ್ವನಿ ಉತ್ಪಾದಕಕ್ಕೂ ಅದ್ವಿತೀಯ ನಾದಗುಣ ಉಂಟು.

ಧ್ವನಿತರಂಗದ ಪ್ರಸರಿಸುವಿಕೆಯಿಂದಾಗಿ ಮಾಧ್ಯಮದ ಸ್ಥಾಯೀ ಸಂಮರ್ದದಲ್ಲಾಗುವ ಸೂಕ್ಷ್ಮಬದಲಾವಣೆಯೇ ಧ್ವನಿಸಂಮರ್ದ, ಇದರ ಅಳತೆಯ ಏಕಮಾನ ಮೈಕ್ರೊಬಾರ್ (1 ಮೈಕ್ರೊಬಾರ್ = 0.1 ನ್ಯೂಟನ್/ಮೀ2). ಮನೆಯೊಳಗೆ ಹೊರಗಡೆಗಿಂತ ಧ್ವನಿಸಂಮರ್ದ ಹೆಚ್ಚು.

ಧ್ವನಿಯಲ್ಲಿ ವಿಭಿನ್ನ ಆವೃತ್ತಿಗಳು ಅಥವಾ ಸಂಗತಸಂಬಂಧವಿಲ್ಲದ ನಾದಗಳು ಮಿಶ್ರವಾಗಿದ್ದರೆ ಗದ್ದಲ, ಇಲ್ಲದಿದ್ದರೆ ಸಂಗೀತ.