ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಲ್ಯ

ವಿಕಿಸೋರ್ಸ್ದಿಂದ

ಶಲ್ಯ ಮದ್ರದೇಶಾಧಿಪತಿ ಋತಾನರಾಜನ ಮಗ. ದುರ್ಯೋಧನನ ಪಕ್ಷ ಸೇರಿದ ಅತಿರಥ ಮಹಾರಥಿಕರಲ್ಲಿ ಒಬ್ಬ. ಪಾಂಡುರಾಜನ ಹೆಂಡತಿ ಮಾದ್ರಿ ಈತನ ಸಹೋದರಿ. ಈತ ಯುದ್ಧ ವಿದ್ಯೆಯಲ್ಲಿ ನಿಪುಣ. ಮಲ್ಲಯುದ್ಧದಲ್ಲಿ ಈತನಿಗೆ ಸರಿಸಾಟಿಯೆಂದರೆ ಭೀಮ ಒಬ್ಬನೇ. ಈತ ದ್ರೌಪದಿಯ ಸ್ವಯಂವರದ ಕಾಲದಲ್ಲಿ ಅರ್ಜುನ ಮತ್ಸ್ಯಯಂತ್ರ ಭೇದಿಸಿದಾಗ ದುರ್ಯೋಧನಾದಿಗಳೊಡನೆ ಸೇರಿ ಪಾಂಡವರ ಮೇಲೆ ಕಲಹಕ್ಕಿಳಿದ; ಭೀಮನಿಂದ ಪರಾಜಿತನಾದ.

ಪಾಂಡವ ಕೌರವರಿಗೆ ಯುದ್ಧ ನಿಶ್ಚಿತವಾದ ಸಮಯದಲ್ಲಿ ಪಾಂಡವರ ಪಕ್ಷ ಸೇರಬೇಕೆಂದಿದ್ದ ಈತ ದುರ್ಯೋಧನನ ರಾಜವೈಭವಕ್ಕೆ ಮನಸೋತು ಕೌರವ ಪಕ್ಷಕ್ಕೆ ಸೇರಿದ.

ಕುರುಕ್ಷೇತ್ರ ಯುದ್ಧ ಪ್ರಾರಂಭವಾಗಿ ಕೌರವನ ಕಡೆ ಕ್ರಮವಾಗಿ ಭೀಷ್ಮ, ದ್ರೋಣರು ಸೈನ್ಯದ ಮುಖಂಡತ್ವವನ್ನು ವಹಿಸಿದ ಅನಂತರ ಕರ್ಣನ ಸರದಿ ಬಂತು. ಆ ಸಮಯದಲ್ಲಿ ಕರ್ಣನಿಗೆ ಕುಶಲಿಯಾದ ಸಾರಥಿಯೊಬ್ಬನ ಆವಶ್ಯಕತೆ ಇತ್ತು. ಕೊನೆಗೆ ಕೌರವ, ಶಲ್ಯನನ್ನು ಸಂಧಿಸಿ ಕರ್ಣನಿಗೆ ಸಾರಥಿಯಾಗು ಎಂದು ಪ್ರಾರ್ಥಿಸಿದ. ಕರ್ಣನು ಸೂತಪುತ್ರ ನೆಂದು ಆತನಿಗೆ ಸಾರಥಿಯಾಗೆನೆಂದು ಮೊದಲು ತಿರಸ್ಕರಿಸಿದರೂ ಅನಂತರ ಶಲ್ಯ ಸಾರಥ್ಯವಹಿಸಲು ಸಮ್ಮತಿಸಿದ. ತನ್ನ ಮಾತಿನಂತೆ ನಡೆದುಕೊಳ್ಳದಿದ್ದಾಗ ಕರ್ಣನ ಸಾರಥ್ಯವನ್ನು ತ್ಯಜಿಸಿದ. ಕರ್ಣ ಮಡಿದಾಗ ಮುಂದೆ ಸೇನಾಧಿಪತ್ಯವನ್ನು ಯಾರಿಗೆ ಕೊಡಬೇಕೆಂದು ಕೌರವ ಯೋಚನೆಗೀಡಾದಾಗ ಅಶ್ವತ್ಥಾಮನ ಮಾತಿನಂತೆ ಶಲ್ಯನಿಗೆ ಸೇನಾಧಿಪತ್ಯ ವನ್ನು ವಹಿಸಿದ. ಇತ್ತ ಪಾಂಡವರು ಶಿಬಿರದಲ್ಲಿ ಶಲ್ಯನನ್ನು ನಿಗ್ರಹಿಸುವ ಬಗೆಯನ್ನು ಆಲೋಚಿಸುತ್ತಿದ್ದರು. ಭೀಷ್ಮ, ದ್ರೋಣ, ಕರ್ಣರಿಗೆ ಶಲ್ಯ ಒಂದು ಕೈ ಮಿಗಿಲು ಎಂದು ತಿಳಿದಿದ್ದ ಕೃಷ್ಣ ಶಲ್ಯನನ್ನು ಸಂಹರಿಸಲು ಯುಧಿಷ್ಠಿರನೇ ಯೋಗ್ಯನೆಂದು ತೀರ್ಮಾನಿಸಿದ.

ಯುದ್ಧಭೂಮಿಯಲ್ಲಿ ಅಭಿಮನ್ಯುವನ್ನು ಶಲ್ಯ ಎದುರಿಸುವ ಪ್ರಸಂಗ ದಲ್ಲಿ ಅವನ ಮೇಲೆ ಒಂದು ಅಸ್ತ್ರವನ್ನು ಪ್ರಯೋಗಿಸಿದ. ಅಭಿಮನ್ಯು ಅದನ್ನು ತಡೆದು ಶಲ್ಯನ ಕಡೆಗೆ ಎಸೆದಾಗ ಶಲ್ಯನ ಸಾರಥಿ ಸತ್ತ. ಭೀಮನಿಂದ ಶಲ್ಯ ಪರಾಜಿತನಾದರೂ ಪುನಃ ಕೆಲವೇ ಕ್ಷಣದಲ್ಲಿ ಎಚ್ಚೆತ್ತು ಪಾಂಡವರಲ್ಲಿದ್ದ 25 ಚೇದಿ ವೀರರನ್ನು ಸಂಹರಿಸಿದ. ಕೊನೆಗೆ ಧರ್ಮರಾಯ ತನ್ನ ಶಕ್ತ್ಯಾಯುಧ ಬಳಸಿ ಶಲ್ಯನನ್ನು ಕೊಂದ. (ಕೆ.ಆರ್.ಎಸ್.ಜಿ.)