ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಸ್ತ್ರಚಿಕಿತ್ಸೆ

ವಿಕಿಸೋರ್ಸ್ದಿಂದ

ಶಸ್ತ್ರಚಿಕಿತ್ಸೆ ವ್ಯಾಧಿ ಇಲ್ಲವೇ ಗಾಯವನ್ನು ಕರಕೌಶಲ ಮತ್ತು ಉಪಕರಣಗಳಿಂದ ಗುಣಪಡಿಸುವ ಕಲೆ (ಸರ್ಜರಿ). ಸೋಂಕಿನ ನಿವಾರಣೆ, ಕೊಳೆತ ಅಂಗಗಳ ಅಂತೆಯೇ ಅರ್ಬುದರೋಗದ ಗೆಡ್ಡೆಗಳ ತೆಗೆಯುವಿಕೆ, ಛಿದ್ರಗೊಂಡ ಊತಕದ ದುರಸ್ತಿ, ಮುರಿದ ಮೂಳೆಗಳ ಜೋಡಣೆ, ಅಂಗಗಳ ಕಸಿ ಇವೇ ಮುಂತಾದವು ಶಸ್ತ್ರಚಿಕಿತ್ಸಾಕ್ರಮದಲ್ಲಿ ಸೇರಿವೆ. ಸಮಗ್ರವಾಗಿ ಇವೆಲ್ಲವೂ ಸಾಮಾನ್ಯ ಶಸ್ತ್ರಚಿಕಿತ್ಸೆ (ಜನರಲ್ ಸರ್ಜರಿ) ಎಂಬ ಶಿರೋನಾಮದಲ್ಲಿ ಸೇರಿದ್ದು ಪ್ರತ್ಯೇಕವಾಗಿ ಒಂದೊಂದು ಉಪಾಂಗಗಳಾಗಿವೆ.

ಮನುಕುಲದ ಜೊತೆ ಶಸ್ತ್ರಚಿಕಿತ್ಸೆ ಪುರಾಣಕಾಲದಿಂದಲೂ ಬೆಳೆದುಬಂದಿದೆ. ಶಿವಪುರಾಣದಲ್ಲಿ ಗಣಪತಿಯ ಶಿರಶ್ಛೇದನವಾಗಿ ಅದರ ಬದಲಿಗೆ ಒಂದು ಆನೆತಲೆಯನ್ನು ಜೋಡಿಸಿದ ವಿಚಾರ ಅವಲೋಕಿಸಿದರೆ ದೇಹದಲ್ಲಿ ಅಂಗಗಳನ್ನು ನಾಟಿಮಾಡುವ ಅರಿವು ಆಗಲೇ ಇದ್ದ ಹಾಗೆ ತೋರುತ್ತದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಶಸ್ತ್ರವೈದ್ಯದ ಪರಂಪರೆ ಇದೆ. ಸುಶ್ರುತನ (ಕ್ರಿ.ಪೂ.ಸು. 7-6ನೆಯ ಶತಮಾನ- (ನೋಡಿ- ಸುಶ್ರುತ)) ಹೆಸರು ಆಂಗ್ಲ ಪುಸ್ತಕಗಳಲ್ಲಿ ಉಲ್ಲೇಖಗೊಂಡಿದ್ದರೂ ಅವನು ಮಾಡಿದ ಕಿವಿ, ಮೂಗಿನ ಸುರೂಪಿಕ ಶಸ್ತ್ರಕ್ರಿಯೆ (ಪ್ಲಾಸ್ಟಿಕ್ ಸರ್ಜರಿ) ಕುರಿತು ಕೂಡ ಪಾಶ್ಚಾತ್ಯರು ಮಲತಾಯಿ ಧೋರಣೆ ತಳೆದಿರುವುದು ಒಂದು ವಿಪರ್ಯಾಸ. ಸುಶ್ರುತ ನಿರೂಪಿಸಿದ್ದ ಚಾಕು (ಸ್ಕಾಲ್ಪೆಲ್), ಬಿಸ್ಚೂರಿ, ಮೂಳೆ ಹೆಕ್ಕುವ ಇಕ್ಕಳ (ಬೋನ್ ನಿಬ್ಲರ್), ಮೂಳೆ ಕತ್ತರಿಸುವ ಇಕ್ಕಳ, ಟ್ರೊಕಾರ್ ಮತ್ತು ಸೂಜಿಗಳ ಉಪಯೋಗ ಇಂದಿಗೂ ಪ್ರಸ್ತುತ.

ಪಾಶ್ಚಾತ್ಯ ದೇಶಗಳಲ್ಲಿ ಶಸ್ತ್ರಚಿಕಿತ್ಸೆಯ ಕಲೆಯನ್ನು ಅಂಧಕಾರಯುಗದಿಂದ ತೊಡಗಿ ಪುನರುಜ್ಜೀವನ ಕಾಲದ ತನಕವೂ (ಸು. 14ನೆಯ ಶತಮಾನ) ಗುರುತಿಸಬಹುದು. ಶಸ್ತ್ರಚಿಕಿತ್ಸೆ ಹಲವಾರು ವರ್ಷಪರ್ಯಂತ ನಿಗೂಢತೆ, ಭಯ, ಭಕ್ತಿ ಮತ್ತು ಧಾರ್ಮಿಕ ಆಚರಣೆಗಳ ಸಮ್ಮಿಶ್ರಣವಾಗಿತ್ತು. ಶಿಶ್ನದ ಮುಂದೊಗಲಿನ ಸುನತಿ (ಸರ್ಕಮ್‍ಸಿಶನ್) ಮಾಡುವುದು ಆಸ್ತಿಕ್ಯದ ಹಕ್ಕು ಎಂದಾಗಿತ್ತು. ದೆವ್ವ ಬಿಡಿಸುವುದಾಗಿ ತಲೆಬುರುಡೆ ಸೀಳುವುದು ವಾಡಿಕೆಯಾಗಿತ್ತು. ನೋವು, ಕೀವು ಮತ್ತು ಸಾವು ಎಂಬ ಶಬ್ದಗಳು ಶಸ್ತ್ರಚಿಕಿತ್ಸೆಯ ಅಪಭ್ರಂಶಗಳಾಗಿದ್ದುವು. ಎಂದೇ ಈ ಚಿಕಿತ್ಸೆಯ ಬೆಳೆವಣಿಗೆಗೆ ಧರ್ಮ ಗುರುಗಳ ಅಡ್ಡಿ, ಅಡಚಣೆಗಳಿದ್ದುವು. ಹೀಗಾಗಿ ಆ ದೇಶಗಳಲ್ಲಿ ಶಸ್ತ್ರಚಿಕಿತ್ಸೆ ಪ್ರಗತಿ ಕಾಣದೆ ಅದು ಕೇವಲ ಕ್ಷೌರಿಕರ ಹವ್ಯಾಸದ ಕೆಲಸವಾಗಿತ್ತು. ಸೂಕ್ಷ್ಮದರ್ಶಕ, ದೂರದರ್ಶಕ, ಮುದ್ರಣ ಯಂತ್ರಗಳ ಉಪಜ್ಞೆ, ನ್ಯೂಟನ್ ತತ್ತ್ವಗಳ ಘೋಷಣೆ ಮುಂತಾದವು (ಸು. 15-16ನೆಯ ಶತಮಾನಗಳು) ಮಾನವನನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ ಇನ್ನೊಂದು ಕಡೆ 1543ರಲ್ಲಿ ಪಡುವಾ ವಿಶ್ವವಿದ್ಯಾಲಯದ ವೆಸೇಲಿಯಸ್ (1514-64, (ನೋಡಿ- ವೆಸೇಲಿಯಸ್,-ಆ್ಯಂಡ್ರಿಯಾಸ್)) ಎಂಬಾತ ತನ್ನ ಡಿ ಕಾರ್ಪೊರಿಸ್ ಹ್ಯೂಮನಿ ಎಂಬ ಲೇಖನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಪ್ರಾರಂಭಿಸಿದ. ವಿಜ್ಞಾನದ ಆಸರೆಯಲ್ಲಿ ಅಂಗರಚನಾವಿಜ್ಞಾನದ (ಅನಾಟಮಿ) ಬೆಳೆವಣಿಗೆಯಾಯಿತು. ಬಾಹ್ಯಕ್ಕೆ ಕಾಣಿಸದೇ ಇರುವ ರೋಗಗಳ ಕಾರಣವನ್ನು ಬೆನೆವಿನಿ, ಮ್ಯಾಲ್ಪೀಗಿ (1628-94) ಮತ್ತು ವಲ್ಸಾಲ್ವ ಎಂಬವರು ಮರಣೋತ್ತರ ಪರೀಕ್ಷೆಯಿಂದ ಪತ್ತೆಹಚ್ಚಿ ರೋಗವಿಜ್ಞಾನದ (ಪೆತಾಲಜಿ) ಅರಿವನ್ನು ಬೆಳಕಿಗೆ ತಂದರು. 1630ರ ಸುಮಾರಿಗೆ ಡಿ ಮೋಟು ಕಾರ್ಡಿಸ್ ಎಟ್ ಸ್ಯಾಂಗ್ವಿನಿಸ್ ಇನ್ ಅನಿಮಾಲಿಬಸ್ ಎಂಬ ಪ್ರಕಟಣೆಯಿಂದ ವಿಲಿಯಮ್ ಹಾರ್ವೆ (1578-1657, (ನೋಡಿ- ಹಾರ್ವೆ,-ವಿಲಿಯಮ್)) ವೈದ್ಯವಿಜ್ಞಾನದಲ್ಲಿ ಪ್ರಯೋಗಗಳನ್ನು ಬಳಕೆಗೆ ತಂದ. ಮುಂದೆ ಜಾನ್ ಹಂಟರ್ (1728-93, (ನೋಡಿ- ಹಂಟರ್,-ಜಾನ್)) ಇದರ ಉಪಯೋಗವನ್ನು ಶಸ್ತ್ರಚಿಕಿತ್ಸಾವಿಧಾನಗಳಿಗೆ ವಿಸ್ತರಿಸಿದ. ಫ್ರೆಂಚ್ ಸೈನ್ಯದ ಶಸ್ತ್ರತಜ್ಞ ಆ್ಯಂಬ್ರೋಸ್ ಪಾರೆ (1510-90) ತನ್ನ ಅತ್ಯಮೂಲ್ಯ ಅನುಭವಗಳನ್ನು ಆಧರಿಸಿ ರೋಗೋಪಚಾರದಲ್ಲಿ ಶಸ್ತ್ರಚಿಕಿತ್ಸೆಯ ಪಾತ್ರವೇನೆಂಬುದನ್ನು ವಿಮರ್ಶೆ ಮತ್ತು ತರ್ಕಸಹಿತ ವಿವರಿಸಿದ. ಮುಂದಿನ ಶತಮಾನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹ ಬೆಳೆವಣಿಗೆಗಳೇನೂ ಆಗಲಿಲ್ಲ. 19ನೆಯ ಶತಮಾನದಲ್ಲಿ ಅನೇಕ ಮುಖ್ಯ ಸಂಗತಿಗಳು ಬೆಳಕಿಗೆಬಂದುವು. ಇವೆಲ್ಲ ಸಂಗತಿಗಳು ಆಧುನಿಕ ಶಸ್ತ್ರಚಿಕಿತ್ಸಾಕ್ರಮಗಳಿಗೆ ಬುನಾದಿಯಾದುವೆಂಬುದಕ್ಕೆ ಸಂದೇಹವಿಲ್ಲ. ವಿರ್ಚೋವ್ (1821-1902, (ನೋಡಿ- ವಿರ್ಚೊವ್,-ರೂಡೋಲ್ಫ್) ರೋಗ ವಿಜ್ಞಾನದ ತಳಹದಿ ಜೀವಕಣಗಳು ಎಂಬ ವಾದ ಮಂಡಿಸಿದ, ಲೂಯಿ ಪಾಸ್ತರ್ (1822-95) ಪದಾರ್ಥಗಳ ಹುದುಗಿಗೆ ಜೀವಿಗಳೇ ಕಾರಣ ಎಂದು ಸಾಧಿಸಿದ, ತಾಮಸ್ ಕಾಕ್ ಒಂದು ಜೀವಾಣುವಿನಿಂದ ಒಂದು ರೋಗ ಎಂದು ಪ್ರತಿಪಾದಿಸಿದ (1864)-ಇವೇ ಮುಂತಾದವು ಆಧುನಿಕ ಶಸ್ತ್ರಚಿಕಿತ್ಸಾ ವಿಜ್ಞಾನದ ಮುನ್ನಡೆಗೆ ದಿಕ್ಸೂಚಿಗಳಾದುವೆಂದರೆ ತಪ್ಪಾಗಲಾರದು. ಜೀವಾಣುಗಳಿಂದಲೇ ರೋಗದ ಸೋಂಕು ಮತ್ತು ಹರಡುವಿಕೆ ಎಂಬ ಖಚಿತ ತತ್ತ್ವವನ್ನು ಜೋಸೆಫ್ ಲಿಸ್ಟರ್ (1827-1912) ಶೋಧಿಸಿದ (1867). ಪೂತಿನಾಶಕ ಶಸ್ತ್ರಚಿಕಿತ್ಸೆಗೆ ಇದು ಆಧಾರವಾಯಿತು ಮತ್ತು ಆ ತನಕ ಶಸ್ತ್ರಚಿಕಿತ್ಸೆ ಕುರಿತು ಇದ್ದ ಆತಂಕ ನಿವಾರಣೆಯಾಯಿತು. ಇಂದಿಗೂ ಜೋಸೆಫ್ ಲಿಸ್ಟರ್‍ನನ್ನು ಆಧುನಿಕ ಶಸ್ತ್ರಚಿಕಿತ್ಸೆಯ ಪಿತಾಮಹನೆಂದು ಕರೆಯುವುದುಂಟು.

ಶಸ್ತ್ರಚಿಕಿತ್ಸೆ ಮಾಡುವಾಗ ಉಂಟಾಗುತ್ತಿದ್ದ ಅತಿಶಯ ನೋವು ಮತ್ತು ರಕ್ತಸ್ರಾವ ಇವೆರಡರ ಕಾರಣವಾಗಿ ಶಸ್ತ್ರಚಿಕಿತ್ಸೆಯ ಮುನ್ನಡೆ ಕುಂಠಿತವಾಯಿತು. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಗಳಿಂದಾಗಿ 1846ರ ಅಕ್ಟೋಬರ್ 16ರಂದು ಮೆಸಾಚುಸೆಟ್ಸ್ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯ ಹಲ್ಲು ಕೀಳಲು ಪ್ರಪ್ರಥಮವಾಗಿ ಶೀಘ್ರ ಇಮರುವ (ಬಾಷ್ಪಶೀಲ) ದ್ರವ ಈಥರನ್ನು ಅರಿವಳಿಕವಾಗಿ ಬಳಸಲಾಯಿತು. ಇದೊಂದು ಕ್ರಾಂತಿಕಾರಿ ಬೆಳೆವಣಿಗೆ. ಇದೇ ವೇಳೆ ಇಂಗ್ಲೆಂಡಿನ ಏಡಿನ್‍ಬರೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್ ಯಂಗ್ ಸಿಂಪ್ಸನ್ (1811-70) 1853ರಲ್ಲಿ ವಿಕ್ಟೋರಿಯ ರಾಣಿಗೆ ಅರಿವಳಿಕೆಯಾಗಿ ಕ್ಲೋರೊಫಾರ್ಮ್ ಪ್ರಯೋಗಿಸಿದ ಆಧಾರಗಳಿವೆ. ಮುಂದಿನ 75 ವರ್ಷ ಕಾಲ ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆಲ್ಲ ಅರಿವಳಿಕೆಯಾಗಿ ಕ್ಲೋರೊಫಾರ್ಮ್‍ನ್ನು ಉಪಯೋಗಿಸಲಾಯಿತು. ಆದರೆ 1950ರ ಅನಂತರ ಕ್ಲೋರೊಫಾರ್ಮ್ ಮತ್ತು ಈಥರಿನಿಂದ ದೇಹಕ್ಕೆ ಉಂಟಾಗುವ ಹಾನಿಗಳ ಬಗ್ಗೆ ಅರಿವು ಮೂಡಿ ಅವುಗಳ ಉಪಯೋಗ ಕಡಿಮೆಯಾಗಿ ಕ್ಷೇಮಕರವಾದ ನೈಟ್ರಸ್ ಆಕ್ಸೈಡ್ ಅನಿಲದ ಬಳಕೆಯೇ ಹೆಚ್ಚಾಗಿದೆ.

ನೈಟ್ರಸ್ ಆಕ್ಸೈಡ್, ಆಮ್ಲಜನಕಗಳ ಮಿಶ್ರಣ ಮತ್ತು ಸ್ನಾಯುಶಾಮಕ (ಮಸಲ್ ರಿಲ್ಯಾಕ್ಸೆಂಟ್) ವಸ್ತುಗಳ ಬಳಕೆಯಿಂದಾಗಿ ಅರಿವಳಿಕೆಗಳಿಂದಾಗ ಬಹುದಾದ ಹಾನಿಗಳನ್ನು ಇಂದು ಸೇ. 99ಕ್ಕಿಂತ ಹೆಚ್ಚು ನಿವಾರಿಸಲಾಗಿದೆ. ಬೆನ್ನಿನ ಮಧ್ಯದಲ್ಲಿ ಸೂಜಿ ಮೂಲಕ ಬೆನ್ನುಹುರಿನರದ ಸುತ್ತಲೂ ಮದ್ದು ಚುಚ್ಚಿ ದೇಹದ ಕೆಳ ಅರ್ಧಭಾಗವನ್ನು ಮರಗಟ್ಟುವಂತೆ ಮಾಡಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು, ಆದರೆ ಬೆನ್ನೆಲುಬು ಅರಿವಳಿಕೆ (ಸ್ಪೈನಲ್ ಅನೆಸ್ತೇಶಿಯ) ಎಂದು ಹೆಸರಿರುವ ಇದರ ಬಳಕೆ ಮಕ್ಕಳಲ್ಲಿ ನಿಷಿದ್ಧ. ಚಿಕ್ಕಪುಟ್ಟ ಗೆಡ್ಡೆ ಅಥವಾ ಗಂಟುಗಳ ಸುತ್ತಲೂ ಲಿಗ್ನೊಕೇನ್ ಹೈಡ್ರೊಕ್ಲೋರೈಡ್ ಎಂಬ ಚುಚ್ಚುಮದ್ದನ್ನು ಕೊಟ್ಟು ಅವನ್ನು ತೆಗೆಯಬಹುದು. ಇಂಥ ಸ್ಥಳೀಯ ಅರಿವಳಿಕೆಯನ್ನು ಕಿವಿ, ಮೂಗು ಮತ್ತು ಕಣ್ಣುಗಳ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಬಳಸಬಹುದಾಗಿದೆ.

ಕುದಿಯುವ ನೀರಿನಲ್ಲಿ ಉಪಕರಣಗಳನ್ನು ಹಾಕಿ ವಂದ್ಯಕರಿಸುವುದನ್ನು 1886ರಲ್ಲಿ ವಾನ್ ಬರ್ಗ್‍ಮನ್ ಎಂಬಾತನೂ ಶಸ್ತ್ರಚಿಕಿತ್ಸೆ ವೇಳೆ ತೊಡುವ ರಬ್ಬರ್ ಕೈಚೀಲಗಳನ್ನು ಹಾಲ್‍ಸ್ಟೆಡ್ ಎಂಬಾತನೂ ಬಳಕೆಗೆ ತಂದು ಶಸ್ತ್ರಚಿಕಿತ್ಸೆಯಿಂದ ಆಗುತ್ತಿದ್ದ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಇಳಿಸಿದರು. ಇದೇ ವೇಳೆಗೆ ಮಿಕುಲಿಕ್ಜ್ ಮತ್ತು ರೆಡೆಕ್ಕಿ ಎಂಬವರು ಗಾಳಿಯಲ್ಲಿ ಹರಡುವ ರೋಗಾಣುಗಳನ್ನು ಪರೀಕ್ಷಿಸಿ ಅವುಗಳಿಂದ ಉಂಟಾಗುತ್ತಿದ್ದ ಹಾನಿ ತಡೆಯಲು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಫಾರ್ಮಾಲ್ಡಿಹೈಡ್ ಹೊಗೆಯಿಂದ ಶುದ್ಧೀಕರಿಸುವ ವಿಧಾನ ಜಾರಿಗೆ ತಂದರು. ಆ ಕೊಠಡಿಯಲ್ಲಿರುವವರಿಗೆ ಮೊಗವಾಡದ (ಫೇಸ್ ಮಾಸ್ಕ್) ಬಳಕೆಯೂ ಪ್ರಾರಂಭವಾಯಿತು. ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಬಟ್ಟೆ, ಹತ್ತಿ, ಗಾಜ್ ಮತ್ತು ಸ್ಟೇನ್‍ಲೆಸ್ ಸ್ಟೀಲ್ ಉಪಕರಣಗಳನ್ನು ಹೆಚ್ಚು ಒತ್ತಡದ ನೀರಾವಿಯಿಂದ ವಂದ್ಯಕರಿಸ ಬಹುದು. ಇದಕ್ಕೆ ಆಟೊಕ್ಲೇವಿಂಗ್ ಎಂದು ಹೆಸರು. ಈ ವಿಧಾನದಲ್ಲಿ ಹಾಳಾಗುವ ಪ್ಲಾಸ್ಟಿಕ್ ಮತ್ತು ರಬ್ಬರ್ ಸಾಮಗ್ರಿಗಳನ್ನು ಇಥಲೀನ್ ಆಕ್ಸೈಡ್ ಅನಿಲ ಮತ್ತು ಗಾಮಾ ಕಿರಣಗಳಿಂದ ಶುದ್ಧೀಕರಿಸಬಹುದು.

ಶಸ್ತ್ರಚಿಕಿತ್ಸೆಯಲ್ಲಿ ರಕ್ತಸ್ರಾವದ ನಿಗ್ರಹಕ್ಕಾಗಿ ಆ್ಯಂಬ್ರೋಸ್ ಪಾರೆ ಸು. 4 ಶತಮಾನಗಳಿಗೂ ಹಿಂದೆ ದಾರದ ಕುಣಿಕೆ (ಲಿಗೇಚರ್) ಪ್ರಯೋಗಿಸಿದ ಪುರಾವೆ ಇದೆ. 1876ರಲ್ಲಿ ಅಸ್ಟರ್ ಎಂಬ ವೈದ್ಯ ಕ್ರೋಮಿಯಮ್ ಲೇಪಿಸಿದ ಕ್ಯಾಟ್‍ಗಟ್‍ನಿಂದ (ಕುರಿಯ ಕರುಳಿನಿಂದ ಮಾಡಿದ ಹುರಿ) ರಕ್ತನಾಳವನ್ನು ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸಿದ. ಚಿಮುಟಗಳ (ಫೋರ್‍ಸೆಪ್ಸ್) ಉಪಯೋಗ ಪ್ರಾಚೀನಭಾರತದ ಸುಶ್ರುತನ ಕಾಲದಿಂದ ಇದ್ದಿತಾದರೂ 19ನೆಯ ಶತಮಾನದ ಉತ್ತರಾರ್ಧದಲ್ಲಿ ಕೋಖರ್ ಮತ್ತು ಸ್ಪೆನ್ಸರ್ ವೆಲ್ಸ್ ಎಂಬವರು ತಮ್ಮದೇ ಆದ ಅಪಧಮನಿ ಚಿಮುಟಗಳನ್ನು ಬಳಕೆಗೆ ತಂದರು. ರಕ್ತಸ್ರಾವ ನಿಲ್ಲಿಸಲು 20ನೆಯ ಶತಮಾನಾರಂಭದಲ್ಲಿ ಬಳಕೆಗೆ ಬಂದ ಎಲೆಕ್ಟ್ರೊಕಾಟರಿ ಇಂದಿಗೂ ಉಪಯೋಗದಲ್ಲಿದೆ. ಲೇಸರ್ ಕಿರಣಗಳು, ಶೈತ್ಯಜನಕ ಅನಿಲ, ಜೀವಸತ್ತ್ವ-ಕೆ, ಜೆಲ್ ಫೋಮ್ ಮುಂತಾದ ವಸ್ತುಗಳು ರಕ್ತಸ್ರಾವ ನಿಯಂತ್ರಣಕ್ಕಾಗಿ ಉಪಯೋಗದಲ್ಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ರಕ್ತಹೆಪ್ಪುಗಟ್ಟುವ ಅನೇಕ ಅಂಶಗಳಿಂದ ಕೂಡಿದ ಹಸನು ರಕ್ತದ ವರ್ಗಾವಣೆ ರಕ್ತಸ್ರಾವನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ. ಇದಲ್ಲದೆ ಶಸ್ತ್ರಚಿಕಿತ್ಸೆಯ ವೇಳೆ ದೇಹತಾಪ 100-150 ಸೆ.ಗೆ ಇಳಿಸಿ ರಕ್ತಸ್ರಾವವನ್ನು ಕಡಿಮೆ ಮಾಡಬಹುದು. ಇದಕ್ಕೆ ಹೈಪೊಥರ್ಮಿಯ ಎಂದು ಹೆಸರು.

ಶಸ್ತ್ರಚಿಕಿತ್ಸೆ ವೇಳೆ ಹೊಲಿಗೆ ಸಾಮಗ್ರಿಗಳಾದ ಸೂಜಿ ಮತ್ತು ದಾರಗಳು ಅತ್ಯಾವಶ್ಯಕ ಪರಿಕರಗಳು. ಊತಕಗಳನ್ನು ಹೊಲಿಯಲು ಉಪಯೋಗಿಸುವ ಕ್ಯಾಟ್‍ಗಟ್ ಎನ್ನುವುದು ಒಂದು ಅಣಕು ಪದ. ನಿಜಕ್ಕೂ ಇದನ್ನು ತಯಾರಿಸುವುದು ಕುರಿ ಕರುಳಿನ ಪದರದಿಂದ. ಇದಲ್ಲದೆ ಹತ್ತಿಯ ದಾರ, ಸಿಲ್ಕ್ ನೈಲಾನ್ ದಾರಗಳು ಮತ್ತು ಸ್ಟೇನ್‍ಲೆಸ್ ಸ್ಟೀಲ್‍ನ ತೆಳು ಎಳೆಗಳೂ ಬಳಕೆಯಲ್ಲಿವೆ.

ಆಧುನಿಕ ಶಸ್ತ್ರಚಿಕಿತ್ಸೆ: ನೋವು ನಿವಾರಿಸುವ ಸಂವೇದನಹಾರಿಗಳು, ಪೂತಿರೋಧಕ ವಿಧಾನಗಳು, ರಕ್ತಸ್ರಾವದ ಹತೋಟಿ ಕ್ರಮಗಳು ಮತ್ತು 20ನೆಯ ಶತಮಾನದ ಪೂರ್ವಾರ್ಧದ ಪ್ರತಿಜೈವಿಕಗಳು - ಈ ಉಪಜ್ಞೆಗಳಿಂದಾಗಿ ಆಧುನಿಕ ಯುಗದಲ್ಲಿ ಶಸ್ತ್ರಚಿಕಿತ್ಸೆ ಅತ್ಯಂತ ಕ್ಷೇಮಕರವಾಗಿದೆ. ಇದರಿಂದಾಗುವ ಸಾವಿನ ಪ್ರಮಾಣ ಕಡಿಮೆಯಾಗಿ ಅಪೆಂಡಿಕ್ಸ್ ತೆಗೆಯುವಿಕೆ, ಹರ್ನಿಯ ಶಸ್ತ್ರಕ್ರಿಯೆ ಮುಂತಾದವು ಕೇವಲ ಒಂದು ದಿನದ ಚಿಕಿತ್ಸೆಗಳಾಗಿ ಪರಿಣಮಿಸಿವೆ.

ಜೀವವೈದ್ಯಕೀಯ ಎಂಜಿನಿಯರಿಂಗ್‍ನ ಅಪ್ರತಿಮ ಸಾಧನೆಯಿಂದಾಗಿ ಶೈಶವಾವಸ್ಥೆಯಲ್ಲೇ ರೋಗ ಪತ್ತೆಮಾಡಬಲ್ಲ ಅಲ್ಟ್ರಾಸೊನೋಗ್ರಫಿ (ಯುಎಸ್ ಸ್ಕ್ಯಾನ್), ಕಂಪ್ಯೂಟರೈಸ್ಡ್ ಟೊಮೋಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂಆರ್‍ಐ) ಮುಂತಾದ ಸಾಧನಗಳು ತಜ್ಞರಿಗೆ ಲಭ್ಯವಾಗಿ ಶಸ್ತ್ರಚಿಕಿತ್ಸಾನಂತರದ ಸಾವಿನ ಪ್ರಮಾಣ ಗಣನೀಯ ವಾಗಿ ಕಡಿಮೆಯಾಗಿದೆ. ಅನ್ನನಾಳ, ಜಠರ ಮತ್ತು ಕರುಳು ದರ್ಶಕ ವೀಡಿಯೊಯಂತ್ರಗಳ ಮತ್ತು ಕ್ಯಾಪ್ಸೂಲ್ ಎಂಡೊಸ್ಕೋಪಿಗಳ ಉಪಜ್ಞೆ ಯಿಂದ ಸಂಬಂಧಿತ ಅಂಗಗಳ ರೋಗಗಳು ಖಚಿತವಾಗಿ ಪತ್ತೆಯಾಗಿ ಅವುಗಳ ಶಸ್ತ್ರಚಿಕಿತ್ಸೆಗಳೂ ಸಮರ್ಪಕವಾಗಿ ನಡೆಯುವಂತಾಗಿವೆ.

ಇತ್ತೀಚಿನ ಬೆಳೆವಣಿಗೆ ಎಂದರೆ ಉದರದರ್ಶಕದಿಂದ ಮಾಡುವ ಶಸ್ತ್ರಚಿಕಿತ್ಸೆ ಅಥವಾ ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್). ಇದು ರೋಗಿಯ ಹೊಟ್ಟೆ ಮೇಲೆ 1-0.5 ಸೆಂಮೀ ಗಾತ್ರದ 4-6 ರಂಧ್ರಗಳನ್ನು ಮಾಡಿ ಇವುಗಳ ಮೂಲಕ ಉದರದರ್ಶಕ ಮತ್ತು ಇತರ ಉಪಕರಣಗಳನ್ನು ತೂರಿಸಿ ಮಾಡಬಹುದಾದ ಶಸ್ತ್ರಚಿಕಿತ್ಸೆ. ಅನ್ನನಾಳ, ಜಠರ, ಕರುಳು, ಪಿತ್ತಕೋಶ, ಮೂತ್ರಪಿಂಡ ಗರ್ಭಕೋಶ, ಅಂಡಾಶಯಗಳು ಮುಂತಾದ ಅಂಗಗಳ ಶಸ್ತ್ರಚಿಕಿತ್ಸೆಗಳನ್ನು ವಿವೃತ ಕ್ರಮ (ಓಪನ್ ಪ್ರೊಸೀಜರ್) ಅನುಸರಿಸಿ ಮಾತ್ರ ಯಶಸ್ವಿಯಾಗಿ ನಿರ್ವಹಿಸಬಹುದು. ಉದರದರ್ಶಕ ಶಸ್ತ್ರಕ್ರಿಯೆಯಿಂದ ರೋಗಿ ಪಡೆವ ಲಾಭಗಳೆಂದರೆ ಕನಿಷ್ಠ ಆಸ್ಪತ್ರೆ ವಾಸ, ನೋವು ಮತ್ತು ಕೆಲಸದಿಂದ ಕನಿಷ್ಠ ಗೈರುಹಾಜರಿ.

ಮೂಳೆ ಮತ್ತು ಕೀಲುಗಳ ಚಿಕಿತ್ಸೆಯಲ್ಲಿ ಸಾಕಷ್ಟು ಬೆಳೆವಣಿಗೆ ಆಗಿದೆ. ಮುರಿದ ಮೂಳೆಗಳ ಜೋಡಣೆಗಾಗಿ ಬಾಹ್ಯ ಫಿಕ್ಸೇಟರುಗಳು, ಇಂಟರ್‍ಲಾಕಿಂಗ್ ನೆಯ್‍ಲಿಂಗ್, ಡೈನಮಿಕ್ ಹಿಪ್‍ಸ್ಕ್ರೂ ಮತ್ತು ರಷ್ಯದ ಇಲಿಜಾರೋವ್ ವಿಧಾನಗಳು ಬಳಕೆಯಲ್ಲಿವೆ. ಚರ್ಮದಮೇಲೆ ಮಾಡಿದ 1 ಸೆಂಮೀ ಚಿಕ್ಕರಂಧ್ರದಿಂದ ಕೀಲುಗಳ ಒಳಭಾಗವನ್ನು ಪರೀಕ್ಷಿಸಿ, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಇದಕ್ಕೆ ಆರ್ಥೊಸ್ಕೊಪಿ ಎಂದು ಹೆಸರು. ಇದಲ್ಲದೆ ಪೂರ್ಣ ಕೆಟ್ಟಿರುವ ಕೀಲಿನ ಮೂಳೆಗಳ ಜೋಡಣೆಯೂ ಬಳಕೆಯಲ್ಲಿದೆ. ಮಿನಿಮಲ್ ಆ್ಯಕ್ಸೆಸ್ ಸರ್ಜರಿ (ಎಂಎಎಸ್) ಮೂಲಕ ಅಂತರಕಶೇರಿನ ಮೃದ್ವಸ್ಥಿಯ ಜಾರಿಳಿತ ಚಿಕಿತ್ಸೆಮಾಡಿ ಎರಡು ದಿನಗಳಲ್ಲಿ ರೋಗಿ ಗುಣ ಹೊಂದಬಹುದು.

ಅಂಗಗಳ ನಾಟಿ ಮಾಡುವ ಶಸ್ತ್ರಚಿಕಿತ್ಸೆ 1900ರ ದಶಕದಲ್ಲಿ ಪ್ರಾರಂಭವಾಗಿ 1960ರಲ್ಲಿ ಹೃದಯ-ಶ್ವಾಸಕೋಶ (ಹಾರ್ಟ್-ಲಂಗ್) ಯಂತ್ರದ ಅನ್ವೇಷಣೆಯಿಂದ ಇನ್ನಷ್ಟು ಫಲಪ್ರದವಾಗಿದೆ. ಹೃದಯದ ನಾಟಿ ಪ್ರಪ್ರಥಮವಾಗಿ 1967ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಕ್ರಿಶ್ಚಿಯನ್ ಬಾನಾರ್ಡ್ (1922-2001) ಎಂಬವನಿಂದ ನಡೆಯಿತು. ಭಾರತದಲ್ಲಿ ಪಿ.ಕೆ.ಸೆನ್ ಮುಂಬಯಿಯಲ್ಲಿ ಇದರ ಪ್ರಯತ್ನ ನಡೆಸಿದ್ದರು.

ಮೂತ್ರಪಿಂಡಗಳ ನಾಟಿ ಈಗ ಸರ್ವೇಸಾಧಾರಣವಾಗಿ ಹಲವಾರು ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ದೇಹದ ಏಕಾಂಗಗಳಾದ ಪಿತ್ತಜನಕಾಂಗ ಮತ್ತು ಮೇದೋಜೀರಕಾಂಗಗಳ ಬದಲಿ ಜೋಡಣೆ ಇನ್ನಷ್ಟು ಕ್ಲಿಷ್ಟಕರ. ಇದನ್ನು ಪ್ರಪಂಚದ ಕೆಲವೇ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಹೃದಯದ ಕಿರೀಟ ಧಮನಿಗಳ ಹೊರಳು ನಾಟಿ (ಕರೋನರಿ ಬೈಪಾಸ್ ಗ್ರಾಫ್ಟ್) 1960ರಿಂದ ಈಚಿನ ತನಕವೂ ಅವ್ಯಾಹತವಾಗಿ ನಡೆದು, ಕಳೆದ ಒಂದೆರಡು ವರ್ಷಗಳಿಂದ ಇತರ ಪರಿಣಾಮಕಾರಿ ಚಿಕಿತ್ಸೆಗಳಿಂದಾಗಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಂತಿದೆ. ರೋಗಿಯ ರಕ್ತಪರಿಚಲನೆಯನ್ನು ಹೃದಯ-ಶ್ವಾಸಕೋಶ ಯಂತ್ರದ ಮೂಲಕ ಹಾಯಿಸಿ, ಹೃದಯವನ್ನು ತಾತ್ಕಾಲಿಕವಾಗಿ ಸ್ತಂಭಿಸಿ, ವಿವೃತ ಹೃದಯ ಶಸ್ತ್ರಚಿಕಿತ್ಸೆಗಳಾದ ಹೊರಳು ನಾಟಿ (ಬೈಪಾಸ್ ಗ್ರಾಫ್ಟ್) ಅಲ್ಲದೆ, ಕವಾಟಗಳ ಜೋಡಣೆ, ಅಂತರಹೃತ್ಕರ್ಣಗಳ ಮತ್ತು ಅಂತರಹೃತ್ಕುಕ್ಷಿಗಳ ಸೆಪ್ಟಮ್‍ನ ದುರಸ್ತಿ ಮುಂತಾದ ಶಸ್ತ್ರಕ್ರಿಯೆಗಳನ್ನು ಯಶಸ್ವಿಯಾಗಿ ಮಾಡಬಹುದಾಗಿದೆ. ಅತ್ಯಾಧುನಿಕವಾಗಿ ಮೇಲೆ ಹೇಳಿದ ಯಂತ್ರದ ಬಳಕೆ ಇಲ್ಲದೆ, ಮಿಡಿಯುತ್ತಿರುವ ಹೃದಯದ ಮೇಲೆಯೇ ಶಸ್ತ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ ಎದೆಗೂಡನ್ನು ತೆರೆಯದೇ ಚಿಕ್ಕ ಚಿಕ್ಕ ರಂಧ್ರಗಳ ಮೂಲಕ ಥೊರ್ಯಾಕೊಸ್ಕೋಪ್ ಎಂಬ ಉಪಕರಣ ದಿಂದ ಹೊರಳುನಾಟಿ ಶಸ್ತ್ರಕ್ರಿಯೆಯನ್ನು ಕೂಡ ಮಾಡಲಾಗುತ್ತಿದೆ.

ಮೂತ್ರಪಿಂಡಗಳ ಶಸ್ತ್ರಕ್ರಿಯೆಗಳನ್ನು ಇದೇ ರೀತಿ ಚಿಕ್ಕರಂಧ್ರಗಳ ಮೂಲಕ ನಿರ್ವಹಿಸುವ ವ್ಯವಸ್ಥೆ ಕೂಡ ಉಂಟು. ಮೂತ್ರಕೋಶ ಮತ್ತು ಮೂತ್ರನಾಳಗಳ ಅನೇಕ ತೊಂದರೆಗಳನ್ನು ಅಂತರದರ್ಶಕ ಉಪಕರಣದಿಂದ ಶಮನಪಡಿಸಬಹುದಾಗಿದೆ. ಮೂತ್ರಸಂಬಂಧೀ ಕಶ್ಮಲಗಳನ್ನು ತೆಗೆಯಲು ವಿವೃತ ಶಸ್ತ್ರಚಿಕಿತ್ಸೆ ವಿರಳವಾಗುತ್ತಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯ ಇತರ ಉಪಾಂಗಗಳಾದ ರಕ್ತನಾಳಗಳ ಪ್ಲಾಸ್ಟಿಕ್, ಪುನಾರಚನೆ ಮಿದುಳು ಮತ್ತು ನರಗಳ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯುತ ಸಾಧನೆಗಳಾಗಿವೆ.

ರೊಬೋಟಿಕ್ ಶಸ್ತ್ರಚಿಕಿತ್ಸೆ: ಗಣಕಾವಲಂಬಿತ ರೊಬೋಟುಗಳ ಮೂಲಕ ಮಾಡುವ ಈ ವಿಧಾನ ಇನ್ನೂ ಪ್ರಯೋಗಾವಸ್ಥೆಯಲ್ಲಿದೆ. ರೊಬೋಟಿಕ್ ಶಸ್ತ್ರಚಿಕಿತ್ಸೆಯ ಯಶಸ್ಸನ್ನು ಕಾಲವೇ ತೀರ್ಮಾನಿಸ ಬೇಕಾಗಿದೆ. (ಸಿ.ಜಿ.ಎನ್.)