ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಿವನೆ

ವಿಕಿಸೋರ್ಸ್ದಿಂದ

ಶಿವನೆ ವರ್ಬಿನೇಸೀ ಕುಟುಂಬಕ್ಕೆ ಸೇರಿದ ಮಿಲೈನ ಆರ್ಬೊರಿಯ ಪ್ರಭೇದದ ಮರ. ಮಧ್ಯಮ ಗಾತ್ರದ್ದು ಅಸ್ಥಿರಪರ್ಣಿ. ಅಗಲ ಎಲೆಗಳುಳ್ಳ ಹೃದಯಾಕಾರದ ಪರಸ್ಪರ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿದೆ. ತೊಗಟೆ ಎಳೆಬೂದಿ ಬಣ್ಣದ್ದು; ನುಣುಪಾಗಿದೆ. ಒಳಭಾಗ ಹಳದಿ ಬಣ್ಣಕ್ಕಿದೆ. ಭಾರತಾದ್ಯಂತ ಎಲೆಯುದುರುವ ಕಾಡುಗಳಲ್ಲಿ ಕಾಣದೊರೆಯುತ್ತದೆ. ಅನುಕೂಲ ನೆಲೆಗಳಲ್ಲಿ 30ಮೀ ಎತ್ತರಕ್ಕೆ ಬೆಳೆಯುವುದುಂಟು. ಜನವರಿ-ಫೆಬ್ರವರಿಯಲ್ಲಿ ಎಲೆಉದುರಿ ಹೊಸ ಚಿಗುರು ಮಾರ್ಚ್-ಏಪ್ರಿಲ್‍ನಲ್ಲಿ ಬರುವುದು. ಜೊತೆಗೆ ಹೂಗಳು ಮೂಡಿ, ಕಾಯಿಗಳು ಏಪ್ರಿಲ್‍ನಿಂದ ಜುಲೈವರೆಗೂ ಮಾಗುವುವು. ಬಿಸಿಲನ್ನು ಇಷ್ಟಪಡುವ ಮರ. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಎಳೆಯ ಗಿಡಗಳಿಗೆ ಜಿಂಕೆ ದನಜಾನುವಾರುಗಳಿಂದ ಹಾನಿ. ಸ್ವಾಭಾವಿಕ ಪುನರುತ್ಪತ್ತಿ ವಿರಳ. ಬೀಜಬಿತ್ತಿ, ಇಲ್ಲವೆ ಪಾತಿಯ ಸಸಿಗಳನ್ನು ನೆಟ್ಟು ಬೆಳೆಸಬಹುದು. ನೆಡುಕಡ್ಡಿಗಳಿಂದಲೂ ಬೆಳೆಸಲು ಸಾಧ್ಯ. ಚೌಬೀನೆ ಮಾಸಲು ಹಳದಿಬಣ್ಣದ್ದೂ ನಯವಾದದ್ದೂ ಆಗಿದೆ. ಹದಮಾಡಲು ಸ್ವಲ್ಪಕಾಲಬೇಕು. ಬಲಯುತವಾಗಿದ್ದು ಸಾಕಷ್ಟು ಬಾಳಿಕೆ ಬರುವಂಥದು. ಕೆತ್ತನೆ ಕೆಲಸಗಳಿಗೆ ಸುಲಭವಾಗಿ ಒದಗುತ್ತದೆ. ಪೀಠೋಪಕರಣಗಳಿಗೆ, ಪೆಟ್ಟಿಗೆಗಳ ತಯಾರಿಕೆಗೆ, ದೋಣಿ ನಿರ್ಮಾಣಕ್ಕೆ ಮತ್ತಿತರ ಅನೇಕಾನೇಕ ಮನೆಗೆಲಸದ ಉಪಕರಣಗಳಿಗೆ ಉಪಯುಕ್ತವಾದ ಮರ. (ಎ.ಕೆ.ಎಸ್.)