ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಿವಶಕ್ತಿ ಬಳ್ಳಿ

ವಿಕಿಸೋರ್ಸ್ದಿಂದ

ಶಿವಶಕ್ತಿ ಬಳ್ಳಿ ಲಿಲಿಯೇಸೀ ಕುಟುಂಬದ ಗ್ಲೊರಿಯಾಸಾ ಸುಪರಬಾ ಹೆಸರಿನ ಬಹುವಾರ್ಷಿಕ ಸಸ್ಯ. ಇದರಲ್ಲಿ ನೆಲದಲ್ಲಿ ಹುದುಗಿದ ರೈeóÉೂೀಮ್ ಎಂಬ ಕಾಂಡವಿರುತ್ತದೆ. ಇದು ಇಂಗ್ಲಿಷಿನ ವಿ ಅಕ್ಷರವನ್ನು ಹೋಲುತ್ತದೆ. ಭೂಮಿಯ ಮೇಲೆ ಬೆಳೆದಿರುವ ಕಾಂಡ ಸಪೂರವಾಗಿದ್ದು, ಇತರೆ ಸಸ್ಯಗಳ ಅಥವಾ ವಸ್ತುಗಳ ಆಸರೆ ಪಡೆದು ಬೆಳೆಯುವ ಬಳ್ಳಿ. ಎಲೆಯ ತುದಿ ಸುರುಳಿಯಂತಿದ್ದು, ಬೇರೆ ವಸ್ತುಗಳಿಗೆ ಆಸರೆಗಾಗಿ ಸುತ್ತಿ ತಾನು ಬೆಳೆಯುತ್ತದೆ. ಹೂವುಗಳು 8-10 ಸೆಂ.ಮೀ. ಉದ್ದವಿದ್ದು ದಳಗಳು ಹೂವಿನ ಹಿಂಭಾಗಕ್ಕೆ ಉಧ್ರ್ವಮುಖವಾಗಿರುತ್ತವೆ. ಕೇಸರ ಮತ್ತು ಶಲಾಕೆ ಭೂಮಿಯ ಕಡೆಗೆ ಮುಖಮಾಡಿಕೊಂಡಿರುತ್ತವೆ. ದಳದ ಅಂಚು ಅಲೆ ಅಲೆಯಾಗಿರುತ್ತದೆ. ಹೂವು ಅರಳಿದಾಗ ದಳದ ಮಧ್ಯಭಾಗ ಹಳದಿಯಾಗಿದ್ದು ಆದಿ ಮತ್ತು ತುದಿ ಭಾಗಗಳು ಕೆಂಪಗೆ ಇರುತ್ತವೆ.

ಅಪರೂಪವಾಗಿ ಬೆಳೆಯುವ ಈ ಸಸ್ಯವನ್ನು ಭಾರತದ ಎಲ್ಲ ಬಗೆಯ ಅರಣ್ಯ ಪ್ರದೇಶಗಳಲ್ಲಿ ಕಾಣಬಹುದು. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಹ ಬೆಳೆಯುತ್ತದೆಂದು ಹೇಳಲಾಗಿದೆ. ಒಣಗಿಸಿ ತುಂಡರಿಸಿದ ರೈeóÉೂೀಮಗಳು ಘಾಟಿನಿಂದ ಕೂಡಿದ್ದು ಕಹಿಯಾಗಿರುತ್ತದೆ. ಈ ಸಸ್ಯದ ರೈeóÉೂೀಮಿನಿಂದ ಗ್ಲೋರಿಯೋಸಿನ್ ಎಂಬ ಆಲ್ಕಲಾಯ್ಡ್ ತಯಾರಿಸುತ್ತಾರೆ.

ಉಪಯೋಗ: ಆಯುರ್ವೇದ ಶಾಸ್ತ್ರದಲ್ಲಿ ರೈeóÉೂೀಮಿನಿಂದ ತಯಾರಿಸಿದ ಕಣಕವನ್ನು ಗೊನೇರಿಯ, ಕುಷ್ಠರೋಗಗಳಿಗೆ ಬಳಸುತ್ತಾರೆ. ಈ ಕಣಕ ಹಾವು ಕಡಿತ, ಚೇಳು ಕುಟಿಕಿಗೆ ಹೇಳಿ ಮಾಡಿದ ಸಿದ್ಧೌಷಧ. ಹೆರಿಗೆ ನೋವು ಬರಿಸಲು ಸಹ ಕಣಕವನ್ನು ಉಪಯೋಗಿಸುತ್ತಾರೆ. ಇದು ಜೀರ್ಣಕಾರಿಯಾಗಿ, ಜ್ವರ ಶಾಮಕವಾಗಿ ವಾಂತಿ ಮತ್ತು ಭೇದಿ ಮಾಡಿಸಲು ಸಹ ಬಳಕೆಯಾಗುತ್ತದೆ.

ಗ್ಲೋರಿಯೋಸಿನ್‍ನ್ನು, ಕಾಲ್ಚಿಸಿನ್ ಎಂಬ ಆಲ್ಕಲಾಯ್ಡ್ ಬದಲಿಗೆ ಉಪಯೋಗಿಸಬಹುದೆಂದು ಪ್ರಯೋಗಗಳಿಂದ ದೃಢಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ವಿಧಾನಗಳಲ್ಲಿ ಈ ಸಸ್ಯವನ್ನು ಬೆಳೆಸುವ ಪ್ರಯತ್ನ ಸಾಗಿದೆ. ಮಾನವನ ಹಸ್ತಕ್ಷೇಪದಿಂದ ಇದು ವಿನಾಶದ ಅಂಚಿನಲ್ಲಿದೆ.

                           (ಟಿ.ಎಮ್.ಆರ್.)