ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷೆರ್ವೊಟಿನ್

ವಿಕಿಸೋರ್ಸ್ದಿಂದ

ಷೆರ್ವೊಟಿನ್ ಜಿಂಕೆಯಂತಿದ್ದು ಮೊಲದ ಗಾತ್ರವಿರುವ ಪುಟ್ಟ ಜೀವಿ. ಎರಳೆ ಎಂದೂ ಹೆಸರಿದೆ. ಆಡುಭಾಷೆಯಲ್ಲಿ ಕುರೆ, ಕುರಾಂಡಿ ಎಂಬ ಹೆಸರುಗಳೂ ಇವೆ. ಎರಳೆ ಸ್ತನಿ ವರ್ಗದ ಆರ್ಟಿಯೋಡ್ಯಾಕ್ಟೈಲಾ ಸರಣಿಯ ಟ್ರಾಗ್ಯುಲಿಡೇ ಕುಟುಂಬಕ್ಕೆ ಸೇರಿದೆ. ಎರಳೆಗಳಲ್ಲಿ ಒಟ್ಟು 4 ಪ್ರಭೇದಗಳಿವೆ. ಆಫ್ರಿಕದ ಎರಳೆ (ಹೈಮಾಸ್ಕಸ್ ಅಕ್ವಾಟಿಕಸ್) ಘಾನ, ಕಾಂಗೋ ಹಾಗೂ ಗಿನಿಯ ಕಾಡುಗಳಲ್ಲೂ ಚುಕ್ಕೆ ಎರಳೆ (ಟ್ರಾಗ್ಯುಲಸ್ ಮೆಮಿನ) ದಕ್ಷಿಣ ಭಾರತ, ಶ್ರೀಲಂಕಾ ಹಾಗೂ ನೇಪಾಲದಲ್ಲಿಯೂ ಮಲಯದ ಎರಡು ಪ್ರಭೇದಗಳು (ಟ್ರಾಗ್ಯುಲಸ್ ನಾಪು ಹಾಗೂ ಟ್ರಾಗ್ಯುಲಸ್ ಜಪಾನಿಕಸ್) ದಕ್ಷಿಣ ಬರ್ಮ, ಜಾವ, ಸುಮಾತ್ರ, ಇಂಡೊಚೀನದ ಕಾಡುಗಳಲ್ಲಿಯೂ ಕಂಡುಬರುತ್ತವೆ.

ನಮ್ಮಲ್ಲಿ ಕಾಣುವ ಎರಳೆ ಉದ್ದ 40-45 ಸೆಂಮೀ, ಬಾಲ 2.5-5 ಸೆಂಮೀ, ಎತ್ತರ 25-30 ಸೆಂಮೀ, ತೂಕ 2.25-2.7 ಕೆಜಿ. ತುಪ್ಪಳದ ಬಣ್ಣ ಕಂದು, ಪಾಶ್ರ್ವಗಳಲ್ಲಿ ನವುರು ಬಿಳಿ ಬಣ್ಣದ ಅನುನೀಳ ಪಟ್ಟೆಗಳು ಮತ್ತು ಎತ್ತರ ಬೆನ್ನಿನ ಹಿಂಭಾಗದಲ್ಲಿಯೂ ಗಂಟಲಿನ ಕೆಳಗಡೆಯೂ ತಲಾ 3 ಅಡ್ಡ ಪಟ್ಟೆಗಳಿವೆ. ಕಾಲುಗಳು ತೆಳು. ದೇಹದ ಕೆಳಗೆ ಬಿಳಿಯ ತುಪ್ಪಳ. ಎಲ್ಲ ಕಾಲುಗಳಲ್ಲಿಯೂ 4 ಬೆರಳುಗಳು ಇದ್ದು ಪಾಶ್ರ್ವದ ಚಿಕ್ಕ ಕಾಲ್ಬೆರಳುಗಳಲ್ಲಿ ಎಲುಬುಗಳು ಪೂರ್ತಿಯಾಗಿರುತ್ತವೆ.

ಭಾರತದ ಕಾಡುಗಳಲ್ಲಿ ಅಥವಾ ಬಂಡೆ ಹುಲ್ಲುಗಾವಲುಗಳಿರುವ ಕಾಡುಗಳಲ್ಲಿ ಎರಳೆ ವಾಸಿಸುತ್ತದೆ. ಬಂಡೆ ಬಿರುಕುಗಳಲ್ಲಿ ಅಥವಾ ದೊಡ್ಡ ಬಂಡೆಯ ಕೆಳಗೆ ಅಡಗಿಕೊಂಡಿರುತ್ತದೆ. ನಾಯಿ ಬೆನ್ನಟ್ಟಿದಾಗ ತಾನು ನಿಂತಿರುವ ಟೊಳ್ಳಿನಿಂದ ಒಳಗೆ ತೆವಳಿ ಮರೆಯಾಗುತ್ತದೆ. ಮುಂಜಾವಿನಲ್ಲಿ ಅಥವಾ ಇರುಳಿನಲ್ಲಿ ಆಹಾರಕ್ಕಾಗಿ ಹೊರಬರುತ್ತದೆ. ಬೆದರಿದಾಗ ಥಟ್ಟನೆ ಪರಾರಿಯಾಗುತ್ತದೆ. ಗಂಡು ಸಾಮಾನ್ಯವಾಗಿ ಒಂಟಿ. ಸಂತಾನೋತ್ಪತ್ತಿ ಪ್ರಾಯದಲ್ಲಿ ಮಾತ್ರ ಹೆಣ್ಣಿನೊಂದಿಗೆ ಜೊತೆಗೂಡುತ್ತದೆ. ಗರ್ಭಾವಧಿ ಸು. 6 ತಿಂಗಳು. ಹೆಣ್ಣು ಮಳೆಗಾಲದ ಅನಂತರ ಅಥವಾ ಚಳಿಗಾಲದಲ್ಲಿ 2 ಮರಿಗಳಿಗೆ ಜನ್ಮ ನೀಡುತ್ತದೆ. ಸ್ವಭಾವತಃ ಅಂಜುಬುರುಕವಾದ ಈ ಪ್ರಾಣಿಯನ್ನು ಪಳಗಿಸುವುದು ಸುಲಭ.

ಭೂವಿಜ್ಞಾನದ ದೃಷ್ಟಿಯಿಂದ ಷೆರ್ವೊಟಿನ್ ಅತಿ ಪ್ರಾಚೀನ ಪ್ರಾಣಿ. ಸು. 50 ದಶಲಕ್ಷ ವರ್ಷಗಳ ಹಿಂದಿನ ಈಯೊಸೀನ್ ಯುಗದ ಉತ್ತರ ಭಾಗದಲ್ಲಿ ಎರಳೆಗಳು ಜೀವಿಸಿದ್ದುವು. ಆಗ ಯಾವುದೇ ಜಿಂಕೆ ಅಥವಾ ಕೊಂಬುಗಳಿರುವ, ಬೆರಳ ತುದಿಗಳ ಮೇಲೆ ನಡೆಯುವ, ಸ್ತನಿಗಳ ವಿಕಾಸವಾಗಿರಲಿಲ್ಲ. ಆದ್ದರಿಂದ ಎಲ್ಲ ಮೆಲುಕು ಹಾಕುವ ಸ್ತನಿಗಳ ಪೂರ್ವಜರು ಷೆರ್ವೊಟಿನ್‍ಗಳೆಂದು ಊಹಿಸಬಹುದು. (ಟಿ.ಯು.)