ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂನ್ಯಾಸಿ ನಳ್ಳಿ

ವಿಕಿಸೋರ್ಸ್ದಿಂದ

ಸಂನ್ಯಾಸಿ ನಳ್ಳಿ - ಪರಾವಲಂಬಿ ಜೀವನಕ್ಕೆ ಮಾರ್ಪಾಡಾದ ಪ್ಯಾಗುರಿಡೇ ಕುಟುಂಬಕ್ಕೆ ಸೇರಿದ ಒಂದು ನಳ್ಳಿ (ಹರ್ಮಿಟೇಜ್ ಕ್ರ್ಯಾಬ್). ಚಿಪ್ಪಿಲ್ಲದ ದೇಹದ ಹಿಂಭಾಗವನ್ನು ರಕ್ಷಿಸಿಕೊಳ್ಳಲೋಸ್ಕರ ಉದರಪಾದಿ ಗಳ ಖಾಲಿ ಶಂಖಗಳಲ್ಲಿ ಇದರ ನೆಲೆ. ಸಮುದ್ರ ಹಾಗೂ ಮಹಾಸಾಗರದ ತೀರಪ್ರದೇಶಗಳು ವಾಸಸ್ಥಾನ. ನೂರೈವತ್ತಕ್ಕಿಂತಲೂ ಹೆಚ್ಚು ಪ್ರಭೇದ ಗಳಿವೆ. ಉದ್ದ ಕೇವಲ 2.5 ಸೆಂಮೀ.

ಶಂಖದ ಆಕಾರಕ್ಕೆ ತಕ್ಕಂತೆ ಇದರ ಉದರ ಒಳಭಾಗದಲ್ಲಿ ಸುತ್ತಿ ಕೊಂಡಿರುತ್ತದೆ. ಶರೀರದ ಬಲಭಾಗದ ಉಪಾಂಗಗಳು ಹೊರಕ್ಕೆ ಚಾಚಿಕೊಂಡು ಚಲನೆಗೆ ಸಹಕಾರಿಯಾಗುತ್ತವೆ. ತೋಳು, ರೆಕ್ಕೆ, ಈಜುರೆಕ್ಕೆ ಮೊದಲಾದ ಅಂಗಗಳು ಸಂಪೂರ್ಣ ಇಲ್ಲವಾಗಿವೆ. ಎಡಭಾಗದ ಉಪಾಂಗಗಳು ಅವನತವಾಗಿರುತ್ತವೆ. ಉದರದ ಉಪಾಂಗಗಳಲ್ಲಿ ಕೊನೆಯ ಜೋಡಿ ಮತ್ತು ಬಾಲದ ಬಳಿಯಿರುವ ಪಾದ ಗಾಳದ ಕೊಕ್ಕೆಯಂತೆ (ಮೀನುಗಾಳ) ಇವೆ. ಇವು ಶಂಖದ ಒಳಭಾಗಕ್ಕೆ ಚುಚ್ಚಿಕೊಂಡಿರುತ್ತವೆ. ಬಲಭಾಗದ ಮೊದಲನೆಯ ಕೊಂಡಿ ದೊಡ್ಡದು. ಅಪಾಯವುಂಟಾದಾಗ ಇಡೀ ಶರೀರವನ್ನು ಶಂಖದ ಒಳಭಾಗಕ್ಕೆ ಎಳೆದುಕೊಂಡು ಕೊಂಡಿಯಿಂದ ಅದರ ಬಾಯಿಯನ್ನು ಮುಚ್ಚುತ್ತದೆ.

ಕ್ಲೈಬನೇರಿಯಸ್ ಪ್ರಭೇದ ನಿಂತ ನೀರಿನಲ್ಲೂ ಡಯೋಜಿನಸ್ ಪ್ರಭೇದ ಸಮುದ್ರ ಮತ್ತು ನಿಂತ ನೀರಿನಲ್ಲೂ ಸಿಯೋನೊಬೈಟ್ ಕಡಲು ಮತ್ತು ನೀರಿನ ದಡಗಳಲ್ಲೂ ವಾಸಿಸುತ್ತವೆ. ಕ್ಲೈಬನರಿಯಸ್ ಪ್ರಭೇದದ ಕೊಂಡಿಗ ಳೆರಡೂ ಸಮಗಾತ್ರದವು.

ಸಂನ್ಯಾಸಿ ಏಡಿಗಳಿಗೂ ಕಂಟಕ ಚರ್ಮಿಗಳ ವರ್ಗದ ಕಡಲ ಪುಷ್ಪಗ ಳಿಗೂ (ಸೀಅನಿಮೋನ್) ಸಂಬಂಧವಿದೆ. ಕಡಲಪುಷ್ಪಗಳು ಸಂನ್ಯಾಸಿ ಏಡಿ ವಾಸಿಸುವ ಶಂಖಕ್ಕೆ ಅಂಟಿಕೊಂಡಿದ್ದು ಏಡಿ ಚಲಿಸುವಾಗ ಇವು ಒಯ್ಯಲ್ಪಡುತ್ತವೆ. ಸಹಜವಾಗಿ ಕಡಲಪುಷ್ಪಕ್ಕೆ ಆಹಾರ ಸಂಗ್ರಹಕ್ಕೆ ಹೊಸಹೊಸ ತಾಣಗಳು ದೊರೆಯುತ್ತವೆ. ಕಡಲಪುಷ್ಪಗಳ ಕುಟುಕು ಕಣಗಳಿಂದ ನಳ್ಳಿಗೆ ರಕ್ಷಣೆಯೂ ದೊರೆಯುತ್ತದೆ. ಇಂಥ ಪರಸ್ಪರಾವ ಲಂಬೀ ಸಂಬಂಧಕ್ಕೆ ಸಹಭುಂಜನ (ಕಮ್ಮೆನ್ಸಲಿಸಮ್) ಎಂದು ಹೆಸರು.

(ಟಿ.ಎಮ್.ಆರ್)