ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಂಪಿಗೆ

ವಿಕಿಸೋರ್ಸ್ದಿಂದ

ಸಂಪಿಗೆ - ಮ್ಯಾಗ್ನೊಲಿಯೇಸೀ ಕುಟುಂಬಕ್ಕೆ ಸೇರುವ ಮೈಕೇಲಿಯ ಚಂಪಕ ಪ್ರಭೇದದ ಸಸ್ಯ. ಎತ್ತರವಾದ, ನೇರವಾದ ಸ್ತಂಭಾಕೃತಿಯ ಕಾಂಡದ ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣದ ಮರ. ನುಣುಪು ತೊಗಟೆ ಎಳೆಬೂದಿ ಬಣ್ಣವಿರುವುದು. ಹಿಮಾಲಯ ತಪ್ಪಲು, ಅಸ್ಸಾಮ್, ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಇದೆ. ಸುವಾಸನೆಯ ಹೂಗಳಿಗೋಸ್ಕರ, ಅಲ್ಲಲ್ಲಿ ದೇವಾಲಯದ ಆವರಣ, ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.

ಚೌಬೀನೆಯ ಬಿಳಿಮರ ಕಿರಿದಾಗಿದ್ದು ಮಾಸಲು ಬಣ್ಣದ್ದಾಗಿರುತ್ತದೆ. ಕಚ್ಚಾ ಹಳದಿ ಮಿಶ್ರಕಂದು. ಹದಮಾಡಲು ಸುಲಭ. ತಕ್ಕಮಟ್ಟಿಗೆ ಬಲಯುತ ಹಾಗೂ ಬಾಳಿಕೆಯದಾಗಿರುತ್ತದೆ. ಹಗುರ ಕೊಯ್ತಕ್ಕೆ ಮರಗೆಲಸಗಳಿಗೆ ಸುಲಭ. ಸಿದ್ಧಪಡಿಸಿದಾಗ ಹೊಳಪಿನಿಂದ ಕೂಡಿ ಆಕರ್ಷಕವಾಗಿರುತ್ತದೆ.

ಹಗುರವಾದ ಪೀಠೋಪಕರಣಗಳಿಗೆ, ಪೆಟ್ಟಿಗೆ ತಯಾರಿಕೆಗೆ, ದೋಣಿ ತಯಾರಿಕೆಗೆ ಹಾಗೂ ಪದರ ಹಲಗೆಗಳ ತಯಾರಿಕೆಗೆ ಉತ್ತಮವಾಗಿರುತ್ತದೆ. ಮರ ರಕ್ಷಕ ಸಂಸ್ಕರಣೆಯಿಂದ ಇದನ್ನು ಹೆಚ್ಚು ಬಗೆಯಲ್ಲಿ ಉಪಯೋಗಿಸಬಹುದು. (ಎ.ಕೆ.ಎಸ್.)