ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸತುವು

ವಿಕಿಸೋರ್ಸ್ದಿಂದ

ಸತುವು - ಆವರ್ತಕೋಷ್ಟಕದ 2ಬಿ ಗುಂಪಿನ 4ನೆಯ ಆವರ್ತದ ಸಂಕ್ರಮಣ ಧಾತು (ಝಿಂಕ್). ವ್ಯಾಪಕ ಬಳಕೆಯಲ್ಲಿದೆ. ಇದೊಂದು ಸ್ಫಟಿಕೀಯ ಲೋಹಧಾತು. ಜೀವರಾಶಿಗೆ ಅತ್ಯಾವಶ್ಯಕ. ಪ್ರತೀಕ Zಟಿ. ಪರಮಾಣು ಸಂಖ್ಯೆ 30. ಪರಮಾಣು ತೂಕ 65.37. ದ್ರವನಬಿಂದು 4200 ಸೆ. ಕುದಿಬಿಂದು 9070 ಸೆ. 200 ಸೆನಲ್ಲಿ ಸಾಪೇಕ್ಷ ಸಾಂದ್ರತೆ 7.14. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2. ವೇಲೆನ್ಸಿ 2. ಸತುವು-64, 66, 67, 68 ಮತ್ತು 70 ಸ್ಥಿರ ಸಮಸ್ಥಾನಿಗಳು. ಇನ್ನೂ 4 ಸಮಸ್ಥಾನಿಗಳು ಲಭ್ಯ.

ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಭೂಚಿಪ್ಪಿನ 0.0065%ರಷ್ಟಿರುವ ಸತುವಿನ ಕ್ರಮಾಂಕ 24. ನಿಸರ್ಗದಲ್ಲಿ ಸತುವು ಸಂಯುಕ್ತರೂಪದಲ್ಲಿ ಮಾತ್ರ ಲಭ್ಯ. ಉದಾ: ಜಿóಂಕೈಟ್ ಅದುರಿನಲ್ಲಿ ಸತುವಿನ ಆಕ್ಸೈಡ್, ಹೆಮಿಮಾರ್ಫೈಟಿನಲ್ಲಿ ಸತುವಿನ ಸಿಲಿಕೇಟ್, ಸ್ಮಿತ್ಸೊನೈಟಿನಲ್ಲಿ ಸತುವಿನ ಕಾರ್ಬೊನೇಟ್, ಫ್ರಾಂಕ್ಲಿನೈಟಿನಲ್ಲಿ ಸತುವು ಹಾಗೂ ಕಬ್ಬಿಣದ ಮಿಶ್ರ ಆಕ್ಸೈಡ್ ಮತ್ತು ಸ್ಫಾಲೆರೈಟ್ ಅಥವಾ ಜಿóಂಕ್ ಬ್ಲೆಂಡಿನಲ್ಲಿ ಸತುವಿನ ಸಲ್ಫೈಡ್.

ಪ್ರಾಚೀನರಿಗೆ ಸತುವು ಅದುರಿನ ರೂಪದಲ್ಲಿಯೂ ಹಿತ್ತಾಳೆಯ ಒಂದು ಘಟಕವಾಗಿಯೂ ಪರಿಚಯವಿತ್ತೇ ವಿನಾ ಶುದ್ಧ ರೂಪದಲ್ಲಿ ಅಲ್ಲ. ಜರ್ಮನ್ ರಸಾಯನವಿಜ್ಞಾನಿ ಅಂಡ್ರಿಯಾಸ್ ಸಿಗ್ಗಿಸ್ಮಂಡ್ ಮ್ಯಾಗ್ರ್ರಾಫ್ (1709-82) ಎಂಬಾತ ಇದ್ದಲು ಮತ್ತು ಕ್ಯಾಲಮೈನನ್ನು ಕಾಸಿ ಸತುವನ್ನು ಪ್ರತ್ಯೇಕಿಸಿದ (1746). 13ನೆಯ ಶತಮಾನದ ಭಾರತೀಯ ಲೋಹವಿಜ್ಞಾನಿಗಳು ಸತುವನ್ನು ಪ್ರತ್ಯೇಕಿಸುವುದರಲ್ಲಿ ಮತ್ತು 16ನೆಯ ಶತಮಾನದಲ್ಲಿ ಚೀನೀಯರು ಅದರ ವಾಣಿಜ್ಯೋತ್ಪಾದನೆಯಲ್ಲಿ ಪರಿಣತರಾಗಿದ್ದಂತೆ ತೋರುತ್ತದೆ. 18ನೆಯ ಶತಮಾನದ ಮಧ್ಯಭಾಗದಲ್ಲಿ ವಿಲಿಯಮ್ ಚಾಂಪಿಯನ್ ಎಂಬಾತನ ನಾಯಕತ್ವದಲ್ಲಿ ವಾಣಿಜ್ಯೋತ್ಪಾ ದನೆ ಇಂಗ್ಲೆಂಡಿನಲ್ಲಿ ಆರಂಭವಾಯಿತು. ಸತುವಿನ ಆಹರಣವಾಗುವುದು ಸಾಮಾನ್ಯವಾಗಿ ಜಿóಂಕ್ ಬ್ಲೆಂಡ್ ಅಥವಾ ಸ್ಮಿತ್ಸೋನೈಟಿನಿಂದ. ಆಹರಣ ತಂತ್ರಗಳು: 1. ಅತಿ ಹೆಚ್ಚು ತಾಪದಲ್ಲಿ ಆಕ್ಸೈಡುಗಳಾಗಿ ಅದುರುಗಳ ಪರಿವರ್ತನೆ; ವಿದ್ಯುತ್ಕುಲುಮೆಯಲ್ಲಿ ಕಾರ್ಬನಿನಿಂದ ಅಪಕರ್ಷಿಸಿ ಬಟ್ಟಿಪಾತ್ರೆಯಲ್ಲಿ (ರಿಟಾರ್ಟ್) ಕುದಿಸಿ ಆಸವನ (ಡಿಸ್ಟಿಲೇಷನ್). ಆಸವಕ್ಕೆ ಸ್ಪೆಲ್ಟರ್ ಎಂಬ ಹೆಸರಿದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಕಬ್ಬಿಣ, ಆರ್ಸೆನಿಕ್, ಕ್ಯಾಡ್ಮಿಯಮ್ ಮತ್ತು ಸೀಸ ಇರುವುವು. 2. ಗಂಧಕಾಮ್ಲ ದಿಂದ ಹುರಿದ ಅದುರುಗಳ ನಿಕ್ಷಾಲನ (ಲೀಚಿಂಗ್); ಕಶ್ಮಲರಹಿತ ದ್ರಾವಣದ ವಿದುದ್ವಿಭಜನೆ. ಈ ತಂತ್ರದಿಂದ ಅಧಿಕ ಶುದ್ಧತೆಯ ಸತುವು ಲಭ್ಯ.

ನೀಲಿ ಛಾಯೆಯ ಬೆಳ್ಳಿಬಿಳುಪು ಹೊಸ ಸತುವಿನ ಮೇಲ್ಮೈ ಬಣ್ಣ. ಕಾಲಕ್ರಮೇಣ ಇದನ್ನು ಆಕ್ಸೈಡಿನ ಪೊರೆ ಆವರಿಸುವುದರಿಂದ ಇದು ಬೂದು ಬಣ್ಣ ತಳೆಯುತ್ತದೆ. ಆಲ್ಕಹಾಲ್, ಆಮ್ಲಗಳು ಮತ್ತು ಪ್ರತ್ಯಾಮ್ಲಗಳಲ್ಲಿ ಲೀನಿಸುತ್ತದೆ, ನೀರಿನಲ್ಲಿ ಇಲ್ಲ. 99.8% ಶುದ್ಧತೆಯ ಸತುವು ಸಾಮಾನ್ಯ ತಾಪಗಳಲ್ಲಿ ಅತಿ ಭಿದುರ, 1200-1500 ಸೆ ತಾಪವ್ಯಾಪ್ತಿಯಲ್ಲಿ ಪತ್ರಶೀಲ. 99.99% ಶುದ್ಧ ಸತುವು ತನ್ಯ. ಆದ್ರ್ರವಾಯುವಿನಲ್ಲಿ ಉತ್ಕರ್ಷಿತವಾಗುತ್ತದೆ, ಶುಷ್ಕವಾಯುವಿನಲ್ಲಿ ಇಲ್ಲ. ಉತ್ಕರ್ಷಣೆಯ ಫಲಿತವಾಗಿ ಸಂಕ್ಷಾರಣದ (ಕರೋಶನ್) ಎದುರುರಕ್ಷಣೆ ನೀಡುವ ಕಾರ್ಬೊನೇಟ್ ಪೊರೆಯಿಂದ ಆವೃತವಾಗುವುದು. ಸಂಕ್ಷಾರಕ ಮಾಧ್ಯಮದಲ್ಲಿ ಇಟ್ಟಿರುವ ಕಬ್ಬಿಣ ಮತ್ತು ಸತುವಿನ ಜೋಡಿ ವಿದ್ಯುದ್ವಿಭಜನೀಯ ಕೋಶವಾಗುತ್ತದೆ; ಸತುವು ತನ್ನ ಎಲೆಕ್ಟ್ರೋಡ್ ವಿಭವಾಧಿಕ್ಯದಿಂದಾಗಿ ಬೇಗನೆ Zಟಿ2+ ಅಯಾನುಗಳಾಗಿ ಉತ್ಕರ್ಷಿತವಾಗು ತ್ತದೆ. ನೈಸರ್ಗಿಕ ಸತುವು ಅದರ 5 ಸ್ಥಿರ ಸಮಸ್ಥಾನಿಗಳ ಮಿಶ್ರಣ. ರಾಸಾಯನಿಕ ಸಂಯುಕ್ತಗಳಲ್ಲಿ ಸತುವಿನ ಉತ್ಕರ್ಷಣ ಸ್ಥಿತಿ +2. ಅನೇಕ ಉಪಯುಕ್ತ ಲವಣಗಳಿವೆ.

ಸತುವು ಜೀವರಾಶಿಗೆ ಅತ್ಯಾವಶ್ಯಕವಾದ ಲೇಶಧಾತು (ಟ್ರೇಸ್ ಎಲಿಮೆಂಟ್). ಮಾನವ ದೇಹದ ಕೆಂಪು ರಕ್ತಕಣಗಳು, ಮೇದೋಜೀರ ಕಾಂಗ, ಕೆಲವು ಪಚನ ಸಹಾಯಕ ಕಿಣ್ವಗಳು ಇವುಗಳಲ್ಲಿ ಅತಿ ಸೂಕ್ಷ್ಮ ಪ್ರಮಾಣದಲ್ಲಿ ಇರಲೇಬೇಕು. ಈ ಲೋಹವೂ ಇದರ ಸಂಯುಕ್ತಗಳೂ ಬಹೂಪಯೋಗಿಗಳು. ಉದಾ: 1. ಉಕ್ಕು ಮತ್ತು ಕಬ್ಬಿಣದ ಗ್ಯಾಲ್ವನೀ ಕರಣಕ್ಕೆ, ವಿವಿಧ ಮಿಶ್ರಲೋಹಗಳ (ವಿಶೇಷತಃ ಹಿತ್ತಾಳೆಯ) ಘಟಕವಾಗಿ, ಶುಷ್ಕ ವಿದ್ಯುತ್ಕೋಶಗಳ ಕವಚವಾಗಿ, ಎರಕದಚ್ಚುಗಳಾಗಿ ಮತ್ತು ರಬ್ಬರ್ ಟೈರುಗಳಲ್ಲಿ ಪೂರಕವಾಗಿ (ಫಿಲ್ಲರ್) ಸತುವಿನ ವ್ಯಾಪಕ ಬಳಕೆ; 2. ರಬ್ಬರಿನ ವಲ್ಕನೀಕರಣದಲ್ಲಿ ವೇಗೋತ್ಕರ್ಷಕವಾಗಿ, ಬಣ್ಣದ (ಪೈಂಟ್) ಪೊರೆ ಬಿಗಿಯಾಗಿಸಿ ಅದು ಹಳದಿಯಾಗುವುದನ್ನು ಮತ್ತು ಅದರ ಮೇಲೆ ಬೂಷ್ಟು ಬೆಳೆಯುವುದನ್ನು ತಡೆಗಟ್ಟಲು, ದ್ಯುತಿನಕಲಿಸುವ (ಫೋಟೊಕಾಪಿಯಿಂಗ್) ಪ್ರಕ್ರಿಯೆಯಲ್ಲಿ, ಸಿರ್ಯಾಮಿಕ್‍ಗಳು, ಎನ್ಯಾಮೆಲ್‍ಗಳು ಮತ್ತು ಕೀಲೆಣ್ಣೆ ತಯಾರಿಯಲ್ಲಿ ಸತುವಿನ ಆಕ್ಸೈಡ್; 3. ಬಣ್ಣ ಹಾಗೂ ಮ್ಯಾಸ್ಟಿಕ್ ತಯಾರಿಯಲ್ಲಿ ಬಿಳಿ ವರ್ಣದ್ರವ್ಯವಾಗಿ ಲಿತೊಪೋನ್, ಅರ್ಥಾತ್ ಸತುವಿನ ಸಲ್ಫೈಡ್ ಮತ್ತು ಬೇರಿಯಮ್ ಸಲ್ಫೇಟುಗಳ ಮಿಶ್ರಣ; 4. ಯುಕ್ತ ರೀತಿಯಲ್ಲಿ ಕ್ರಿಯಾಶೀಲಗೊಳಿಸಿದ ಸತುವಿನ ಸಲ್ಫೈಡ್ ದೀಪ್ತಿ, ಸ್ಫುರದೀಪ್ತಿ ಮತ್ತು ಪ್ರತಿದೀಪ್ತಿ ಗುಣವುಳ್ಳದ್ದು. ಎಂದೇ, ದೀಪ್ತಬಣ್ಣ ತಯಾರಿ ಮತ್ತು ಕ್ಯಾಥೋಡ್‍ಕಿರಣ ಕೊಳವೆಗಳಲ್ಲಿ ಬಳಕೆ. 5. ಪೀಡೆನಾಶಕವಾಗಿ ಮತ್ತು ವಿಸ್ಕೋಸ್ ರೇಯಾನ್ ತಯಾರಿಯಲ್ಲಿ ಸತುವಿನ ಸಲ್ಫೇಟ್; 6. ಅಲ್ಯೂಮಿನಿಯಮಿನ ಸಂಸ್ಕರಣೆಯಲ್ಲಿ, ವಸ್ತ್ರೋದ್ಯಮದಲ್ಲಿ ಮತ್ತು ಬೆಸುಗೆ ಅಭಿವಾಹವಾಗಿ (ಸೋಲ್ಡರಿಂಗ್ ಫ್ಲಕ್ಸ್) ಸತುವಿನ ಕ್ಲೋರೈಡ್; 7. ಸಂಕ್ಷಾರಣ ನಿರೋಧಿಯಾಗಿ ಮತ್ತು ಉಜ್ಜ್ವಲ ಹಳದಿ ವರ್ಣದ್ರವ್ಯವಾಗಿ ಸತುವಿನ ಕ್ರೋಮೇಟ್.

(ಎಸ್.ಎನ್.ಆರ್.)