ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಧಿ ಭಾಷೆ ಮತ್ತು ಸಾಹಿತ್ಯ

ವಿಕಿಸೋರ್ಸ್ದಿಂದ

ಸಿಂಧಿ ಭಾಷೆ ಮತ್ತು ಸಾಹಿತ್ಯ

ಇಂಡೊ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖ ಭಾಷೆ. ಸಿಂಧಿ ಎಂಬ ಪದ ಸಿಂಧ್ ಎಂಬುದರ ವಿಶೇಷಣರೂಪ. ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತ್ಯದ ಭಾಷೆ ಸಿಂಧಿ. 1947ರಲ್ಲಿ ಭಾರತ ವಿಭಜನೆಯಾದ ಬಳಿಕ ಸಿಂಧಿ ಮಾತನಾಡುವ ಹಿಂದುಗಳು ಭಾರತಕ್ಕೆ ವಲಸೆ ಬಂದು, ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ, ರಾಜಾಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ನೆಲಸಿದ್ದಾರೆ. ಭಾರತ ಪಾಕಿಸ್ತಾನ ಹಾಗೂ ಇತರೆಡೆಗಳಲ್ಲಿ ಏಳು ಮಿಲಿಯಕ್ಕಿಂತ ಹೆಚ್ಚು ಜನರು ಈ ಭಾಷೆಯನ್ನು ಆಡುತ್ತಾರೆ.

ಸಿಂಧಿ ಭಾಷೆಯ ಉಗಮ ವಿಕಾಸದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಪೈಕಿ ಕೆಲವನ್ನಿಲ್ಲಿ ಗಮನಿಸಬಹುದು.

1. ಸಿಂಧಿ ಸಂಸ್ಕøತ ಗುಂಪಿಗೆ ಸೇರಿದ ಭಾಷೆ. ಇದರಲ್ಲಿ ಉತ್ತರ ಭಾರತದ ಇನ್ನಿತರ ದೇಶೀಯ ಭಾಷೆಗಳಿಗೆ ಹೋಲಿಸಿದರೆ ಅನ್ಯದೇಶ್ಯ ಅಂಶಗಳು ಕಡಿಮೆ ಪ್ರಮಾಣದಲ್ಲಿವೆ(ಟ್ರಂಪ್). ಇದೇ ಅಭಿಪ್ರಾಯವನ್ನು ಬೇಗ್ ಮಿರ್ಜಾ ಖಾಲಿಚ್, ಗುರುಭಕ್ಷಾನಿ, ಮೆಹರ್‍ಚಂದ್ ಭೇರುಮಲ್ ಮತ್ತಿತರರು ಸಮರ್ಥಿಸುತ್ತಾರೆ. ಇವರೆಲ್ಲ ಪ್ರಾಕೃತದ ಬ್ರಜದ ಅಪಭ್ರಂಶದಿಂದ ಸಿಂಧಿ ಜನ್ಮ ತಳೆದಿದೆಯೆಂದು ಸೂಚಿಸಿದ್ದಾರೆ.

2. ಸಿಂಧ್‍ನ ಪ್ರಾಚೀನ ಭಾಷಾರೂಪ ಬಹುಮಟ್ಟಿಗೆ ಸೆಮಿಟಿಕ್ ವರ್ಗಕ್ಕೆ ಸೇರಿದುದಾಗಿರಬೇಕು. ಅಲ್ಲದೆ ಸಿಂಧಿ ಭಾಷೆ ಸಂಸ್ಕøತಕ್ಕೆ ನೇರವಾಗಿ ಸಂಬಂಧಿಸಿದುದಲ್ಲ. ಬಹುಮಟ್ಟಿಗೆ ಇದು ಸಂಸ್ಕøತಕ್ಕಿಂತ ಪ್ರಾಚೀನವಾದ ಸಿಂಧೂಕಣಿವೆಯ ಭಾಷೆಗೆ ಸಂಬಂಧಿಸಿದುದಾಗಿರಬಹುದು. ಲಹಂದ, ಸಿರಯ್ಕಿ, ಮುಲ್ತಾನಿ, ದರ್ವಾಲಿ, ಬಹವಲ್ಪುರಿ, ಹಿಂದ್‍ಕೋ, ಕಾಶ್ಮೀರಿ ಮತ್ತು ದಾರ್ದಿಕ್ ಭಾಷೆಗಳು ಇದರ ಸೋದರ ಭಾಷೆಗಳು. ಪ್ರಾಚೀನ ಸಿಂಧ್‍ಭಾಷೆಯಲ್ಲಿ ಸುಮೇರಿಯನ್ ಮತ್ತು ಬ್ಯಾಬಿಲೋನಿಯನ್ ನಾಗರಿಕತೆಯ ಮತ್ತು ಸೆಮಿಟಿಕ್ ಭಾಷಾಂಶಗಳು ಇವೆ (ಬಲೋಚ್, ನಬಿ ಬಕ್ಷ್).

3. ಪ್ರತ್ಯಕ್ಷವಾಗಲ್ಲವಾದರೂ ಪರೋಕ್ಷವಾಗಿ ಸಂಸ್ಕøತವೇ ಸಿಂಧ್‍ನಲ್ಲಿ ಜನಿಸಿದ ಭಾಷೆ (ಸೆರಾಜ್, ಉಲ್ ಹಕ್)

4. ಸಿಂಧಿಭಾಷೆ ಆರ್ಯೇತರ ಭಾಷೆ. ಇದರ ಮೂಲವನ್ನು ಪ್ರಾಚೀನ ಮೊಹೆಂಜೊದಾರೋದ ಪ್ರಾಚೀನ ನಾಗರಿಕತೆಗಳಲ್ಲಿಯೇ ಗುರುತಿಸಬೇಕು. ಇದು ಮೊಹೆಂಜೊದಾರೊದ ಪ್ರಾಚೀನಭಾಷೆ. ಇದನ್ನು ಸೈಂಧವ, ಸೈಂಧವಿ, ಸಿಂಧ್ವಿ ಎಂದು ಕರೆಯುತ್ತಿದ್ದು ಅನಂತರದ ದಿನಗಳಲ್ಲಿ ಸಿಂಧಿ ಎಂದಾಗಿದೆ. (ಅಲ್ಲಾನ, ಜಿ.ಎ.)

ಸಿಂಧಿ ಶಬ್ದಕೋಶವು ವೈದಿಕ ಸಂಸ್ಕøತಕ್ಕೆ ಹತ್ತಿರವಾಗಿದೆ. ಉದಾಹರಣೆಗೆ: ಸಿಂಧಿ ವೈದಿಕ ಸಂಸ್ಕøತ ಕ್ಲಾಸಿಕಲ್ ಸಂಸ್ಕøತ ಅರ್ಥ ಜಂಘ ಜಂಘ ಜಂಘ ಕಾಲು ಜರುತರು ಜರತರ ಜಲಸ್ಥಲ ನೀರತಾಣ ಝರು ಝರೇಹ ಜಿರನ್ ಹಳೆಯ ಮಿನ್ಹು ಮೋಹ ಮೇಘ ಮಳೆ

ಧ್ವನಿವ್ಯವಸ್ಥೆ ಮತ್ತು ವ್ಯಾಕರಣ: ಸಿಂಧಿಭಾಷೆಯ ಧ್ವನಿವ್ಯವಸ್ಥೆ ಇಂಡೊಆರ್ಯನ್ ವ್ಯವಸ್ಥೆಯನ್ನೇ ಹೋಲುತ್ತದೆ. ಆದರೂ ಕಾಶ್ಮೀರಿಭಾಷೆಯೊಂದಿಗೆ ಒಂದು ವೈಶಿಷ್ಟ್ಯವನ್ನು ಹಂಚಿಕೊಂಡಿದೆ. ಅದೆಂದರೆ ಏಕವ್ಯಂಜನದ ಬದಲು ವ್ಯಂಜನ ಮತ್ತು ಘೋಷರಹಿತ ಸ್ವರ ಒಟ್ಟಿಗೆ ಇರುವುದು. ಉದಾಹರಣೆಗೆ: ಚೋಕರು ಹುಡುಗ. ಈ ಭಾಷೆಯ ಮತ್ತೊಂದು ವೈಶಿಷ್ಟ್ಯ ಪುನರಾವರ್ತಿತ ವ್ಯಂಜನಗಳ ಮಾಲೆ. ಶ್ವಾಸವನ್ನು ಒಳಗೆಳೆದುಕೊಂಡು, ಮೃದತಾಲುವನ್ನು ಕೆಳಗಿಳಿಸಿ, ಗಲಕುಹಲವನ್ನು ಮುಚ್ಚಿ ಇವನ್ನು ಉಚ್ಚರಿಸಲಾಗುತ್ತದೆ. ಸಿಂಧಿಯ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಇತರ ಇಂಡೊಆರ್ಯನ್ ಭಾಷೆಗಳಲ್ಲಿ ಎಲ್ಲೆಲ್ಲಿ ದಂತ್ಯಾಕ್ಷರಗಳು ಬರುತ್ತವೆಯೋ ಅಲ್ಲೆಲ್ಲ ಮೂರ್ಧನ್ಯಾಕ್ಷರಗಳು ಬರುವುದು.

ಸಿಂಧಿಯಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬ ಭೇದಗಳಿವೆ. ಏಕ ಮತ್ತು ಬಹು ಎಂಬ ಎರಡು ವಚನಗಳುಂಟು. ಪ್ರಕೃತಿಗೆ ಉಪಸರ್ಗಗಳನ್ನು ಸೇರಿಸುವುದರಿಂದ ವಿಭಕ್ತಿ ಸಂಬಂಧವನ್ನು ಗುರುತಿಸಲಾಗುತ್ತದೆ. ವಿಶೇಷಣವು, ನಾಮಪದದ ಲಿಂಗ-ವಚನ, ವಿಭಕ್ತಿಗಳನ್ನು ಹೊಂದಿರುತ್ತದೆ. ಕೃದಂತ ನಾಮಪದಗಳಿಗೆ ಸರ್ವನಾಮ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಕಾಶ್ಮೀರಿ ಭಾಷೆಯಲ್ಲಿ ಇವನ್ನು ಕ್ರಿಯಾಪದಗಳಿಗೆ ಮಾತ್ರ ಹಚ್ಚಲಾಗುವುದು. ಸಿಂಧಿಯಲ್ಲಿ ಸಕರ್ಮಕ ಮತ್ತು ನಕರ್ಮಕ ಎಂಬ ಕ್ರಿಯಾರಚನೆಗಳಿವೆ. ಅಪೂರ್ಣಕ್ರಿಯೆಯೊಡನೆ ಸಹಾಯಕ ಕ್ರಿಯಾಪದವನ್ನು ಸೇರಿಸಿ ಸಂಯುಕ್ತ ಕಾಲವನ್ನು ನಿರ್ದೇಶಿಸಲಾಗುವುದು. ಶಬ್ದಕೋಶ: ಸಿಂಧಿ ಶಬ್ದಕೋಶದಲ್ಲಿ ನಾಲ್ಕು ಬಗೆಯ ಪದಗಳಿವೆ:

1. ತತ್ಸಮ: ಅಂದರೆ ಸಂಸ್ಕøತದಿಂದ ಸ್ವೀಕೃತವಾದ ಸಂಸ್ಕøತದ್ದೇ ಆದ ಪದಗಳು.

2. ತದ್ಭವ: ಸಂಸ್ಕøತದಿಂದ ರೂಪ ಬದಲಾವಣೆಗೊಂಡು ಬಂದ ಪದಗಳು. ಸಿಂಧಿ, ತದ್ಭವಗಳಿಂದ ತುಂಬಿ ಹೋಗಿದೆ. ಕೆಲವು ತದ್ಭವಗಳಂತೂ ಎಷ್ಟರಮಟ್ಟಿಗೆ ರೂಪಾಂತರ ಹೊಂದಿವೆಯೆಂದರೆ, ಅವು ಸಿಂಧೀ ಪದಗಳಂತೆಯೇ ತೋರುತ್ತವೆ.

3. ದೇಸಿ: ಅಂದರೆ ಈ ಪ್ರದೇಶಕ್ಕೆ ಆರ್ಯರ ಆಗಮನಕ್ಕಿಂತ ಮೊದಲೇ ಅಥವಾ ಅನಂತರವೂ ಇದ್ದ ಪದಗಳು. ಇವು ಸಂಸ್ಕøತದಿಂದ ಬಂದವಲ್ಲ. ಇತರ ದೇಸಿ ಮೂಲಗಳಿಂದ ಬಂದವುಗಳು. ಇದರ ಜೊತೆಗೆ, ಪೂರ್ವಕಾಲದಿಂದಲೇ ಸಿಂಧ್ ಮತ್ತು ಮಲಬಾರ್ ಕರಾವಳಿಗಳ ನಡುವೆ ವ್ಯಾಪಾರ ವಾಣಿಜ್ಯ ವ್ಯವಹಾರಗಳು ನಡೆಯುತ್ತಿದ್ದುದರಿಂದ ಕೆಲವು ದ್ರಾವಿಡ ಶಬ್ದಗಳೂ ಇಲ್ಲಿ ಸೇರಿವೆ.

4. ವಿದೇಶಿ: ಇವು ಅನ್ಯದೇಶ್ಯ ಮೂಲದವು. ಸಿಂಧಿ ಅನೇಕ ಅರಾಬಿಕ್ ಮತ್ತು ಪರ್ಷಿಯನ್ ಪದಗಳನ್ನು ಹೊಂದಿದೆ. ಈ ಪದಗಳು ಕ್ರಿ.ಶ. 711ರಲ್ಲಿ ಸಿಂಧ್ ಪ್ರಾಂತ್ಯವನ್ನು ಅರಬರು ಜಯಸಿದ ಅನಂತರ ಹೆಚ್ಚು ಪ್ರಮಾಣದಲ್ಲಿ ಬಂದು ಸೇರಿದವು. ಅಂದಿನಿಂದ ಅರಾಬಿಕ್ ಮತ್ತು ಪರ್ಷಿಯನ್ ಭಾಷೆಯ ಶಬ್ದಗಳು ಬಂದು ಸೇರುವುದು ನಿರಂತರವಾಗಿದೆ. ಈ ಎರಡು ವಿದೇಶಿ ಭಾಷೆಗಳ ಪೂರ್ವಪ್ರತ್ಯಯಗಳನ್ನು, ಪ್ರತ್ಯಯಗಳನ್ನು, ನಾಮಪದಗಳನ್ನು, ಕೃನ್ನಾಮಗಳನ್ನು, ವಿಶೇಷಣಗಳನ್ನು, ಕ್ರಿಯಾವಿಶೇಷಗಳನ್ನು ಸಿಂಧಿಭಾಷೆ ಎರವಲು ಪಡೆದಿದೆ. ಬ್ರಿಟಿಷರು ಸಿಂಧನ್ನು ಕ್ರಿಶ. 1843ರಲ್ಲಿ ವಶಪಡಿಸಿಕೊಂಡರು. ಅಂದಿನಿಂದ ಇಂಗ್ಲಿಷ್ ಮತ್ತಿತರ ಐರೋಪ್ಯ ಭಾಷೆಗಳು, ತಮ್ಮ ಭಾಷಾ ಶ್ರೀಮಂತಿಕೆಯಿಂದ ಸಿಂಧಿಯನ್ನು ಶ್ರೀಮಂತಗೊಳಿಸಿವೆ. ಸಿಂಧಿಯಲ್ಲಿ ಗಮನಾರ್ಹ ಸಂಖ್ಯೆಯ ಗಾದೆಗಳೂ ನುಡಿಗಟ್ಟುಗಳೂ ಒಗಟುಗಳೂ ಇವೆ. ಸಿಂಧಿಯನ್ನು ಮಾತಾಡುವ ಮಂದಿ ಭಾರತಾದ್ಯಂತ ಇರುವುದರಿಂದ, ಆಯಾಯ ಪ್ರದೇಶದ, ಪ್ರಾದೇಶಿಕ ಶಬ್ದರೂಪಗಳು ಸಿಂಧಿಯನ್ನು ಸೇರಿ ವಿಶಿಷ್ಟತೆಯನ್ನು ತಂದುಕೊಟ್ಟಿವೆ.

ಲಿಪಿ: ಸಿಂಧಿಯನ್ನು ಬರೆಯಲು, ದೇವನಾಗರಿ ಲಿಪಿಯನ್ನು ಬಳಸಲಾಗಿದೆ. ಸಿಖ್‍ಗುರು ಅಂಗದ್‍ನಿಂದ 1538-52ರ ಅವಧಿಯಲ್ಲಿ ರಚಿತವಾಗಿದ್ದ ಗುರ್ಮುಖಿ ಲಿಪಿಯನ್ನು ಸಿಂಧೀ ಹಿಂದು ಸ್ತ್ರೀಯರು ಧಾರಾಳವಾಗಿ ಬಳಸುತ್ತಿದ್ದರು. 1843ರಲ್ಲಿ ಬ್ರಿಟಿಷರು ಸಿಂಧನ್ನು ವಶಪಡಿಸಿಕೊಂಡ ತರುವಾಯ, ಸಿಂಧಿಗೆ ಒಂದು ನಿರ್ದಿಷ್ಟ ಪ್ರಮಾಣೀಕೃತ ಲಿಪಿ ಬಳಕೆಯಾಗುವ ಬಗ್ಗೆ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯ ಶಿಫಾರಸಿನಂತೆ 1853ರಲ್ಲಿ ಹೊಸ ಪರ್ಷೋ-ಅರಾಬಿಕ್ ಲಿಪಿಯನ್ನು ಸಿಂಧಿಲಿಪಿ ಎಂದು ಒಪ್ಪಿಕೊಂಡು ಮಾನ್ಯಮಾಡಲಾಯಿತು. ಅಂದಿನಿಂದ ಸಹಸ್ರಾರು ಸಿಂಧಿ ಗ್ರಂಥಗಳು ಪುಸ್ತಕಗಳು ಪತ್ರಿಕೆಗಳು ಆ ಲಿಪಿಯಲ್ಲಿ ಪ್ರಕಟಗೊಂಡಿವೆ. ಸಿಂಧ್ ಪ್ರದೇಶದ ಅಲ್ಪಸಂಖ್ಯಾತರು ಈ ಲಿಪಿಗೆ ವಿರೋಧ ವ್ಯಕ್ತಪಡಿಸಿದರೂ ಜನಸಾಮಾನ್ಯರಿಗೆ ಇದು ಇಷ್ಟವಾಯಿತು. ಹೀಗಿದ್ದರೂ ಈ ಲಿಪಿ ಕೆಲವು ಐರೋಪ್ಯ ವಿದ್ವಾಂಸರಿಗೆ ಮೆಚ್ಚುಗೆಯಾಗಲಿಲ್ಲವೆಂಬುದು ಗಮನಾರ್ಹ ವಿಷಯ. ಅವರು ಸಿಂಧಿ-ಇಂಗ್ಲಿಷ್, ಇಂಗ್ಲಿಷ್-ಸಿಂಧಿ ನಿಘಂಟುಗಳನ್ನು ದೇವನಾಗರಿ ಲಿಪಿಯಲ್ಲೆ ಪ್ರಕಟಿಸಿದರು. ಈ ನಿಘಂಟುಗಳನ್ನು ಕ್ಯಾಪ್ಟನ್ ಸ್ಟ್ಯಾಕ್ ಎಂಬಾತ ಸ್ಥಳೀಯ ಪಂಡಿತರುಗಳ ಸಹಾಯದಿಂದ ಸಿದ್ಧಪಡಿಸಿದನೆಂದು ತಿಳಿದುಬಂದಿದೆ. ದೇವನಾಗರಿ ಮತ್ತು ಪರ್ಷೋ-ಅರಾಬಿಕ್ ಲಿಪಿಯಲ್ಲಿ ಟ್ರಂಪ್ ಎಂಬಾತ 1858ರಲ್ಲಿ ಸಿಂಧಿಪಾಠಾವಲಿಯನ್ನು ಹೊರತಂದ. ಭಾರತದ ವಿಭಜನೆಯ ತರುವಾಯ ಹಲವಾರು ಪುಸ್ತಕಗಳು ದೇವನಾಗರಿಯಲ್ಲಿ ಪ್ರಕಟವಾದರೂ ಪರ್ಷೋ-ಅರಾಬಿಕ್ ಲಿಪಿಯಲ್ಲಿ ಪ್ರಕಟಗೊಂಡಿರುವುವೇ ಗಮನಾರ್ಹಸಂಖ್ಯೆಯಲ್ಲಿವೆ. ಉಪಭಾಷೆಗಳು: ಸಿಂಧಿಯಲ್ಲಿ ಪ್ರಮುಖವಾಗಿ ಆರು ಉಪಭಾಷೆಗಳಿವೆ.

1. ಸಿರೇಲಿ: ಉತ್ತರ ಸಿಂಧ್ ಪ್ರಾಂತ್ಯದಲ್ಲಿ ಬಳಕೆಯಲ್ಲಿದೆ. ಸಿರೋ ಎಂದರೆ ತೊರೆಯ ಮೇಲ್ಭಾಗ ಎಂದರ್ಥ. ಇದರಿಂದ ಸಿರೇಲಿ ಎಂಬುದು ರೂಪುಗೊಂಡಿದೆ. ಉತ್ತರದಲ್ಲಿ ಮುಲ್ತಾನಿ ಇರುವುದರಿಂದ, ಸಹಜವಾಗಿಯೇ ಮುಲ್ತಾನಿ ಮತ್ತು ಸಿರೇಲಿ ವಾಕ್ಯರಚನಾ ವಿಧಾನಗಳಲ್ಲಿ ಸಾಮ್ಯವುಂಟು. ಸರ್ವನಾಮ ಪ್ರತ್ಯಯಗಳನ್ನು ಈ ಉಪಭಾಷೆಯಲ್ಲಿ ಕಾಣಬಹುದಾದ್ದರಿಂದ, ಇದು ಇನ್ನಿತರ ಉಪಭಾಷೆಗಳಿಗಿಂತ ಭಿನ್ನತೆ ಪಡೆದಿದೆ. ಸ್ವರೋನ್ನತಿ ಮತ್ತು ನಾದಯುಕ್ತ ಸ್ವರಭಾರ ಈ ಭಾಷಾರೂಪದಲ್ಲಿ ಹೆಚ್ಚಾಗಿದೆ.

2. ಲಾರಿ: ಲಾರ್ ಎಂದರೆ ಇಳಿಜಾರಿನ ಪ್ರದೇಶ ಎಂದರ್ಥ. ಇದರಿಂದ ಲಾರಿ ಎಂಬುದು ರೂಪು ತಳೆದಿದೆ. ಇದು ಸಿಂಧೂನದಿಯ ಬಯಲು ಪ್ರದೇಶದಲ್ಲಿ ಬಳಕೆಯಲ್ಲಿದೆ. ಗ್ರಿಯರ್‍ಸನ್ ಎಂಬವನ ಪ್ರಕಾರ, ಸ್ಥಳೀಯರು ಈ ಉಪಭಾಷೆಯನ್ನು ಒಂದು ರೀತಿಯ ಒರಟುನುಡಿ, ಅನಾಗರಿಕನುಡಿ ಎಂದು ಭಾವಿಸುತ್ತಾರಾದರೂ ಭಾಷಾವಿಜ್ಞಾನಿಗೆ ಈ ಉಪಭಾಷೆಯನ್ನು ಕುರಿತು ವಿಶೇಷ ಆಸಕ್ತಿ ಮೂಡುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ಉಪಭಾಷೆ ಕೆಲವು ದಾರ್ದಿಕ್ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ ಎನ್ನುವುದು.

3. ವಿಭೋಲಿ: ವಿಚ್ ಎಂದರೆ ಕೇಂದ್ರ ಎಂದರ್ಥ. ಇದರಿಂದ ವಿಭೋಲಿ ರೂಪು ತಳೆದಿದೆ. ಇದನ್ನು ವಿಭೋಲೋ `ಮಧ್ಯಭಾಗದಲ್ಲಿ ಮಾತಾಡುತ್ತಾರೆ. ಈ ಪ್ರಭೇದವನ್ನು ವಿದ್ಯಾವಂತರ ಮಾತಿನಲ್ಲಿ ಹಾಗೂ ಸಾಹಿತ್ಯದಲ್ಲಿ ಬಳಸುವ ಪ್ರಮಾಣ ಅಥವಾ ಶಿಷ್ಟ ಪ್ರಭೇದವೆಂದು ಸ್ವೀಕರಿಸಲಾಗಿದೆ.

4. ತ್ರರೇಲಿ: ಥರ್>ಥಲ್>ಸ್ಥಲ್ ಎಂದರೆ ಮರುಭೂಮಿ. ಈ ಪ್ರಭೇದವನ್ನು ಸಿಂಧ್‍ನ ಪೂರ್ವಭಾಗವಾದ ಥಾರ್‍ಮರುಭೂಮಿ ಪ್ರದೇಶದಲ್ಲಿ-ಅಂದರೆ ಸಿಂಧ್, ರಾಜಸ್ತಾನದ ಮಾರ್ವಾರ್‍ನಿಂದ ಬೇರೆಯಾಗುವ ಪ್ರದೇಶದಲ್ಲಿ ಮಾತಾಡುವ ಮಂದಿಯಿದ್ದಾರೆ. ಈ ಪ್ರಭೇದಕ್ಕೆ ಥರೇಚಿ ಎಂಬ ಮತ್ತೊಂದು ಹೆಸರುಂಟು. ಇದರ ಪ್ರಭೇದವೇ ಧಾತ್ಕಿ.

5. ಕಾಛಿ (ಕಾಛ್ಕಿ): ಇದನ್ನು ಗುಜರಾತ್‍ನ ಕಛ್ ಮತ್ತು ಕಥಿಯವಾರ್ ಎಂಬಲ್ಲಿ ಮಾತಾಡುವ ಜನರಿದ್ದಾರೆ. ಈ ಉಪಭಾಷೆಯ ಮೇಲೆ ಗುಜಾರಾತಿ ಮತ್ತು ರಾಜಸ್ತಾನಿ ಭಾಷೆಗಳ ಪ್ರಭಾವ ಕಂಡುಬರುತ್ತದೆ.

6. ಲಾಸಿ: ಬಲೂಚಿಸ್ಥಾನದ ಲಾಸ್‍ಬೇಲಾ ಎಂಬಲ್ಲಿ ಮಾತಾಡುವ ಉಪಭಾಷೆಯಿದು.

ಸಾಹಿತ್ಯ: ಸಿಂಧಿ ಜನಪದ ಸಾಹಿತ್ಯ ಸಾಕಷ್ಟು ವೈವಿಧ್ಯವನ್ನು ಒಳಗೊಂಡಿದೆ. ಜನಪದ ಹಾಡುಗಳು, ಗಾದೆಗಳು, ಒಗಟುಗಳು, ರಹಸ್ಯ ಅನ್ಯೋಕ್ತಿಗಳು, ಮಂತ್ರಗಳು, ಬೈಗುಳಗಳು, ನಿಷಿದ್ಧ ಪದಗಳು, ನಾಟಕಗಳು ಸಿಂಧಿ ಜನರ ಜೀವನ ಶೈಲಿಯೊಂದಿಗೆ ಹೊಂದಿಕೊಂಡಿದೆ. ಇವು ಸಿಂಧಿ ಜನಪದ ಸಂಸ್ಕøತಿಯನ್ನು ಯಥಾವತ್ತಾಗಿ ಬಿಂಬಿಸುತ್ತವೆ. ಜನಪದ ನಂಬಿಕೆಗಳು, ಆಚರಣೆಗಳು, ಮನೋರಂಜನೆ, ಜನಪದ ಕಲೆ, ಕೈಕಸಬುಗಳ ಮೂಲಕವಾಗಿಯೂ ಸಿಂಧಿ ಜನರ ಬದುಕಿನ ಗತಿಯನ್ನು ಗುರುತಿಸಬಹುದು.

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಈ ತನಕ ಉಳಿದು ಬಂದಿರುವ ಸಿಂಧಿಕಾವ್ಯದ ಮೊತ್ತಮೊದಲ ಮಾದರಿಯೆಂದರೆ-ಇಮಾಮ್ ಹಾಫಿಜ್ ಅಬೂ ಹಾತಿಮ್ ಅಲ್ಬುಸ್ತಿ (?-965) ತನ್ನ ಅರಬ್ಬೀ ಕೃತಿ ರಾವುಜತುಲ್ ಉಕ್‍ಲಾ ವ ನುಜ್‍ಹತುಲ್ ಫುಜಲಾ (ಬುದ್ಧಿವಂತರ ತೋಟ ಮತ್ತು ಪಂಡಿತರ ಸಂತೋಷ)ದಲ್ಲಿ ಉದಾಹರಿಸಿದ ಸ್ತೋತ್ರಪದ್ಯ. ಮುಜ್ಮಿಲತುಲ್ ತವಾರೀಖ್ ವ ಅಲ್ಖಿಸಸ್ (ಚರಿತ್ರೆ ಮತ್ತು ಕಥೆಗಳ ಸಂಗ್ರಹ) ಎಂಬ ಪರ್ಷಿಯನ್ ಗ್ರಂಥದಲ್ಲಿ ಅದನ್ನು ಯಥಾವತ್ತಾಗಿ ನಿರೂಪಿಸಲಾಗಿದೆ. ಈ ಪದ್ಯದ ಅರ್ಥ ಅರಬ್ಬಿಯಲ್ಲಿ ದೊರೆಯುತ್ತಿದ್ದರೂ ಅದರ ಲಿಪಿಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಅದರ ರಚನೆಯ ಕಾಲ 801 ಇರಬೇಕೆಂದು ಊಹಿಸಲಾಗಿದೆ. ದೇಶೀ ದಳವಾಯಿಗಳು ಅರಬರಿಂದ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ತರುವಾಯ ಸಿಂಧಿ ಕಾವ್ಯ, ಸೂಮ್ರಾಸ್ ಶಕದ ಅವಧಿಯಲ್ಲಿ (1050-1350) ಅರಳ ತೊಡಗಿತೆಂದು ಹೇಳಬಹುದು. ಈ ಕಾಲದಲ್ಲಿ ಸ್ಥಳೀಯ ರಮ್ಯಕಥೆಗಳು ಸಿಂಧಿಕಾವ್ಯಕ್ಕೆ ಪ್ರೇರಣೆಯನ್ನೊದಗಿಸಿದವು. ಪೀರ್ ಸದ್ರುದ್ದೀನ್ (1290-1409) ಎಂಬಾತ ಸಿಂಧಿ ಧಾರ್ಮಿಕ ಕಾವ್ಯದ ಆದಿಕವಿಯೆಂದು ಪರಿಗಣಿತನಾಗಿದ್ದಾನೆ. ಇವನ ಗ್ನಾನ್ ಎಂಬ ಪದ್ಯಗಳು ಹೆಚ್ಚಾಗಿ ಧಾರ್ಮಿಕ ವಸ್ತುವನ್ನು ಕುರಿತಂಥವು. ಇವನ ಮಗ ಪೀರ್ ಹಸನ್ ಕಬೀರುದ್ದೀನ್ (1341-1449) ಕೂಡ ಗ್ನಾನ್ ಪದ್ಯಗಳನ್ನು ರಚಿಸಿದ್ದಾನೆ. ಈಗಲೂ ಚಾಲ್ತಿಯಲ್ಲಿರುವ ಈ ಕವಿತೆಗಳ ಭಾಷೆ, ಪೂರ್ಣವಾಗಿ ಸಿಂಧಿಯೆನ್ನಲು ಸಾಧ್ಯವಿಲ್ಲ.

ಸಮ್ಮಾ ಆಡಳಿತ ಕಾಲದಲ್ಲಿ (1350-1520) ಸಾಮೂಯೀ ಫಕೀರರ ಮುಂಡವಿಲ್ಲದ ಏಳು ರುಂಡಗಳು ಸಿಂಧಿಯಲ್ಲಿ ಏಳು ಒಗಟುಗಳನ್ನು ಉಚ್ಚರಿಸಿದವೆಂದು ಹೇಳಲಾಗಿದೆ.

ಸಿಂಧಿಯ ಆದಿ ಮತ್ತು ಅಗ್ರಸೂಫಿ ಕವಿಯೆಂದರೆ ಕಜಿ ಕಜನ್ (ಕಾಜೀ ಕಾಜನ್ ಅಥವಾ ಕೌದನ್: ಸು. 1465-1551) ಇವನ ಏಳು ಪದ್ಯಗಳನ್ನು ಬಯಾನುಲ್ ಅರಿಫೀನ್ (ಅನುಭಾವಿಗಳ ವರ್ಣನೆ)ಯನ್ನು ಮುಂದಿನ ತಲೆಮಾರಿನವರಿಗಾಗಿ ಸಂರಕ್ಷಿಸಿಡಲಾಗಿದ್ದು, ಸಿಂಧಿ ಸಾಹಿತ್ಯದ ಮಿನುಗುವ ನಕ್ಷತ್ರಗಳೆಂದು ಅವನ್ನು ವರ್ಣಿಸಲಾಗಿದೆ. ಕಜಿ ಕಜನ್ ಸೂರ್‍ದಾಸ್ (1450-1575), ಗುರುನಾನಕ್ (1469-1538) ಮತ್ತು ಮೀರಾ (1504-1546), ಸಮಕಾಲೀನ ಹಿಂದಿ ನಿರ್ಗುಣ ಕಾವ್ಯದ ಪ್ರಮುಖ ಪ್ರತಿಪಾದಕ ಕಬೀರರ (1398-1494) ಹಿರಿಯ ಸಮಕಾಲೀನನಾಗಿದ್ದ.

ಸಿಂಧಿಯ ಪ್ರಥಮ ಕವಿ ಷಾಹ್ ಅಬ್ದುಲ್ ಲತೀಫ್ ಭಿತಿಯ (ಷಾಹ್ ಅಬ್ದುಲ್ ಲತೀಫ್ ಭಿಟಾಯೀ 1689-1752) ಮಧ್ಯಯುಗದ ಮಹಾಕವಿಗಳ ಪೈಕಿ ಕೊನೆಯವನು. ಇವನ ಕವನ ಸಂಗ್ರಹ ರಸಾಲೊ (ಸಂದೇಶ,1866) ಹೆಚ್ಚಿನ ಕಾವ್ಯಕೌಶಲವನ್ನು ಹೊಂದಿದ ಅತ್ಯುತ್ತಮ ಸಿಂಧಿ ಚಿಂತನ ಭಂಡಾರ, ಷಾಹ್ ಅಬ್ದುಲ್ ಲತೀಫ್‍ನ ಜೊತೆಗೆ ಸಚಲ್ ಸರ್ಮಸ್ತ್ (1739-1826) ಮತ್ತು ಸಾಮಿ (1743-1850) ಕೂಡಿ, ಸಿಂಧಿ ಕಾವ್ಯದ ರತ್ನತ್ರಯರೆನಿಸಿದ್ದಾರೆ. ಸಚಲ್‍ನನ್ನು ಪ್ರತಿಭಟನೆಯ ಕವಿಯೆಂದು ನಿರ್ದೇಶಿಸಲಾಗಿದೆ. ಇವನ ವಿಶಿಷ್ಟ ರಚನೆಯನ್ನು ಕಾಪಿóüೀ (ಲಾವಣಿ) ಎಂದು ಕರೆಯುತ್ತಾರೆ.

ರೋಹಲ್ (1734-1804) ಗ್ಯಾನ್-ಮಾರ್ಗಿ ಕವಿ. ಇವನ ಮಾರ್ಗವನ್ನು ಅನುಸರಿಸಿದವರು ಮುರಾದ (1743-1796), ಷಾಹೂ, ಘುಲಾಮ್ ಅಲೀ, ಮತ್ತು ದರ್ಯಾಖಾನ್ (19ನೆಯ ಶತಮಾನ). ವೇದಾಂತ ಮಾರ್ಗದ ಕವಿಗಳ ಪೈಕಿ ಚೇನ್‍ರಾಯಿ ಸಾಮಿಗೆ (1743-1850) ವಿಶೇಷ ಸ್ಥಾನವಿದೆ. ಇವನು ತನ್ನ ಶ್ಲೋಕಗಳಲ್ಲಿ ಭಗವದ್ಗೀತಾ, ಯೋಗದರ್ಶನ, ಬ್ರಹ್ಮಸೂತ್ರಗಳು ಮತ್ತು ಉಪನಿಷತ್ತುಗಳನ್ನು ಅರ್ಥೈಸಿದ್ದಾನೆ. ಸೂಫಿ ಕವಿಗಳಲ್ಲಿ ಅಬ್ದುಲ್ ಕಾದೆರ್ ಬೆದಿಲ್ (1814-1872) ಮಹತ್ತ್ವದ ಕವಿ. ತನ್ನ ಲಾವಣಿ ಮತ್ತು ದೋಹಾಗಳಿಂದ ಸಿಂಧಿಕಾವ್ಯವನ್ನು ಇವನು ಶ್ರೀಮಂತಗೊಳಿಸಿದ.

ಬೇತ್ ಅಥವಾ ದೋಹಾ ರೂಪವನ್ನು ಸಿಂಧಿಕವಿಗಳು ಎಲ್ಲ ಬಗೆಯ ಕಾವ್ಯ ಪ್ರಕಾರಕ್ಕೂ ಬಳಸಿಕೊಂಡಿದ್ದಾರೆ. ತಾತ್ತ್ವಿಕ, ಅನುಭಾವಿಕ, ಭಾವಗೀತಾತ್ಮಕ, ಸ್ತುತಿ, ರಮ್ಯ ಇತ್ಯಾದಿ. ಬ್ರಿಟಿಷರ ಅವಧಿಯಲ್ಲಿ ಅದರ ಜನಪ್ರಿಯತೆ ಕುಗ್ಗಿದ್ದರೂ ಸ್ವಾತಂತ್ರ್ಯಾನಂತರ ಅದು ಮತ್ತೆ ಬಳಕೆಗೆ ಬಂದಿದೆ. ದೋಹಾ ರೂಪವೇ ಅಲ್ಲದೆ ಕಾಫಿóೀ ಎಂಬ ರೂಪವೂ ಬಳಕೆಯಲ್ಲಿದೆ. ಇನ್ನುಳಿದ ರೂಪಗಳಾದ ಗಝಲ್, ರುಬಾಯಿ (ಚೌಪದಿ) ಮತ್ತು ಕಿಟ (ತುಣುಕು)- ಇವನ್ನು ಪರ್ಷಿಯನ್ ಛಂದಸ್ಸಿನಿಂದ ತೆಗೆದುಕೊಂಡು ಕಾವ್ಯ ರಚಿಸಿದ ಕವಿಗಳಿದ್ದಾರೆ. ಪ್ರಗತಿಶೀಲ, ನವ್ಯಮಾರ್ಗದ ಕವಿಗಳೂ ಉಂಟು. ಪಂಜಾಬಿ ಭಾಷೆಯ ಟಪ್ಪಾ, ಜಪಾನೀ ಭಾಷೆಯ ಹೈಕು ಪ್ರಭೇದವನ್ನು ಬಳಸಿದವರಿದ್ದಾರೆ. ಅಲ್ಲದೆ ತನ್ಹಾ (ಒಂದು ಸಾಲಿನ ಪದ್ಯ) ಪ್ರಕಾರದಲ್ಲೂ ಕವಿತೆ ರಚಿಸಿದವರು ಅನೇಕರಿದ್ದಾರೆ.

ಸಿಂಧಿಯ ಮೊದಲ ಗಣನೀಯ ಕಾದಂಬರಿಯೆಂದರೆ ಮಿರ್ಜಾಖಾಲಿಕ್ ಬೇಗ್‍ನ ಜೀóನತ್ (1890). ಪ್ರೀತಮ್‍ದಾಸ್ ಹುಕೂಮತ್‍ರಾಯ್ ಅವರ ಅಜಬ್‍ಭೇತ್ (ವಿಚಿತ್ರ ಹೋಲಿಕೆ, 1892), ಲಾಲ್‍ಚಂದ್ ಅಮರ್ ದಿನೋಮಲ್ (1885-1954) ಅವರ ಕೋತ್ ಜೋ ಚಂದ್ (ಚೌತಿಚಂದ್ರ 1906), ಭೆರೂಮಲ್ ಮೆಹ್ರ್‍ಚಂದ್ (1875-1950) ಅವರ ಆನಂದ ಸುಂದ್ರಿಕಾ (1910) ಮತ್ತು ಮೋಹಿನೀ ಬಾಯಿ (1917), ಗುರುಭಕ್ಷಾನಿ (1883-1947) ಅವರ ನೂರ್‍ಜಹಾನ್ (1915), ಅಬ್ದುಲ್ ರಜಾಕ್ ಮೆಮೋನ್ ಜಹಾನ್ ಆರಾ(1931) ಮೊದಲಾದವು ಹೆಸರಾಂತ ಕಾದಂಬರಿಗಳೆಂದು ಪ್ರಸಿದ್ಧವಾಗಿವೆ.

ಬಂಗಾಳದ ವಿಭಜನೆಯ ತರುವಾಯ ಎದ್ದ ರಾಷ್ಟ್ರೀಯತೆಯ ಅಲೆ ಸಿಂಧಿಗೂ ವ್ಯಾಪಿಸಿತು. ಲೇಖಕರು ಮತ್ತು ಓದುಗರು ತಮ್ಮ ಗಮನವನ್ನು ಪಶ್ಚಿಮದಿಂದ ಪೂರ್ವದೆಡೆಗೆ ಹರಿಸಿದರು. ಅದುವರೆಗೆ ಅನುವಾದಗಳು ಹೆಚ್ಚಾಗಿ ಇಂಗ್ಲಿಷ್, ಪರ್ಷಿಯನ್ ಮತ್ತು ಉರ್ದು ಭಾಷೆಗಳಿಂದ ಆಗುತ್ತಿದ್ದವು. ಅನಂತರದ ದಿನಗಳಲ್ಲಿ ಬಂಕಿಮಚಂದ್ರ ಚಟರ್ಜಿ, ರವೀಂದ್ರನಾಥ ಠಾಕೂರ್ ಮೊದಲಾದವರ ಕೃತಿಗಳ ಅನುವಾದ ಹೇರಳವಾಗಿ ಮೂಡಿಬಂತು. ಗೋಬಿಂದ್ ಮಾಲ್ಹೀ (ಜ.1921) ಮಹತ್ತ್ವದ ಕಾದಂಬರಿಕಾರ. ಆಂಸೂ (ಕಂಬನಿ,1952), ಜಿಂದಗೀಯ ಜೆ ರಾಹ್ ತೆ (ಜೀವನದ ದಾರಿಯಲ್ಲಿ 1952), ಜೀವನ್ ಸಾಥೀ(1952) ಪಖೀಯರ ವಲ್ಲರ್ ಖಾನ್ ವಿಚುರಿಯ (ಗುಂಪು ತೊರೆದ ಹಕ್ಕಿಗಳು 1953), ಶಂಬೂಟಿ (ನಾಚುಪೊದೆ 1955) ಮೊದಲಾದ ಕಾದಂಬರಿಗಳನ್ನು ರಚಿಸಿ ಹೆಸರು ಗಳಿಸಿದ್ದಾರೆ. ಅಜ್ವಾನಿಯವರ ದೇಸೀ ಸೇಣಾಕಜನ್ ಒಂದು ಪ್ರಮುಖ ಕಾದಂಬರಿ. ಮಹಿಳೆಯರ ಜೀವನ ಮತ್ತು ಅಂತರಂಗದ ತುಮುಲಗಳನ್ನು ಕುರಿತು ಬರೆದಿರುವ ಸ್ತ್ರೀಯರ ಪೈಕಿ ಗುಲೀ ಕೃಪಲಾನೀ (ಸಾಧನಾ ಜೊಸಪ್ಪೋ, ಸಾಧನಾಳ ಸ್ವಪ್ನ 1960) ಮತ್ತು ತಾರಾ ನೀರ್‍ಚಂದಾನಿ (ಉಷಾ, ಬೆಳಗು 1988 ಮತ್ತು ಕೂಮೊಯಿಯಲ್ ಕಲ್ಯೂನ್, ಸೊರಗಿದ ಮೊಗ್ಗುಗಳು 1994) ಪ್ರಸಿದ್ಧರಾಗಿದ್ದಾರೆ. ಇವರೇ ಅಲ್ಲದೆ ರಾಮ್ ಪಂಜ್ವಾನಿ, ಚಂದೂಲಾಲ್ ಜೈ ಸಿಂಘಾನಿ, ಕನ್ಯಾಹನ್ಸ್‍ರಾಜಾನೀ, ಕಲಾ ಪ್ರಕಾಶ್, ಕ್ರಿಶೀನ್ ಖಟ್ಟಾನಿ, ಪೋಪಟಿ ಹೀರಾನಂದಾನಿ (ಬಂಡಾಯಗಾರ್ತಿ), ಪರಮ್ ಅಖಿಚಂದಾನಿ, ಗುನೋ ಸಾಮ್ತಾಣೀ, ಶ್ಯಾಮ್ ಜೈ ಸಿಂಘಾನೀ, ಲಾಲ್‍ಪುಷ್ಪ್ ಆನಂದಖೇಮಾಣಿ, ವಿಷ್ಣು ಭಾಟಿಯಾ ಮೊದಲಾದವರ ಕಾದಂಬರಿ, ಕತೆಗಳು ಸಿಂಧಿ ಕಾದಂಬರಿ ಪ್ರಪಂಚವನ್ನು ಹಿರಿದುಗೊಳಿಸಿವೆ.

ಲೈಲಾಮಜ್ನು (1880), ಸಿಂಧಿಯ ಮೊತ್ತಮೊದಲ ನಾಟಕ, ಇದರ ಕರ್ತೃ ಮಿರ್ಜಾಖಾಲಿಕ್ ಬೇಗ್. ಸಿಂಧಿ ನಾಟಕಕ್ಕೆ ಹೊಸದಿಕ್ಕು ತೋರಿದವರಲ್ಲಿ ಖಾನ್‍ಚಂದ್ ದರ್ಯಾನಿ (1898-1965) ಅವರದು ಮುಂಚೂಣಿಯ ಪಾತ್ರ. ಅವರು ಸಾಮಾಜಿಕ ವಸ್ತುವನ್ನುಳ್ಳ ಸು. 25 ಸ್ವತಂತ್ರ ಹಾಗೂ ರೂಪಾಂತರ ನಾಟಕಗಳನ್ನು ರಚಿಸಿದ್ದಾರೆ. ಲೇಖ್‍ರಾಜ್‍ಕಿಷನ್ ಚಂದ್ ಅಜೀಜ್ (1905-71), ಮುಹಮ್ಮದ್ ಇಸ್ಮಾಯಿಲ್ ಉರ್ಸಾನೀ (ಜನನ 1906), ಲಾಲ್ ಚಂದ್ ಅಮರ್ಡಿನೋಮಲ್ ಜಗತಿಯಾನೀ (1885-1954). 1920-47ರ ಸಿಂಧಿ ಮಧ್ಯಕಾಲದ ಹೆಸರಾಂತ ನಾಟಕಕಾರರು. 1947ರ ತರುವಾಯ ಕಾಣಿಸಿಕೊಳ್ಳುವ ಸಿಂಧಿ ಆಧುನಿಕ ಕಾಲದ ನಾಟಕಕಾರರಲ್ಲಿ ಗೋವರ್ಧನ್ ಮೆಹಬೂಬಾನಿ (ಬಿಗ್ರಿಯಾಲ್ ಘರ್- ಒಡೆದ ಮನೆ, 1959), ಹರಿಕಾಂತ್ ಜೇಠವಾನಿ (ಮೂಖೆ ಕುಂವಾರ್ ಖಾಪೆ-ವಧು ಬೇಕಾಗಿದೆ, 1964), ಮೋತಿ ಪ್ರಕಾಶ್ (ರಾತ್ ಹಿಕ್ ತೂಫ್‍ನ್ ಜಿ- ಬಿರುಗಾಳಿಯ ರಾತ್ರಿ, 1967), ಅವರನ್ನು ಹೆಸರಿಸಬಹುದು. ಉತ್ತಮ ನಾಟಕಗಳನ್ನು ಆಗಾಗ ಪ್ರದರ್ಶಿಸುತ್ತಿರುವ ಅನೇಕ ಹವ್ಯಾಸಿ ನಾಟಕ ತಂಡದವರು ಸಿಂಧಿ ಸಮುದಾಯದಲ್ಲಿ ನಾಟಕ ನೋಡುವ ಆಸಕ್ತಿಯನ್ನು ಉಳಿಸಿ, ಸಿಂಧಿ ನಾಟಕ ರಂಗಭೂಮಿಗೆ ಉತ್ತೇಜನ ನೀಡುತ್ತಿದ್ದಾರೆ. (ಆರ್.ಎಮ್.ಕೆ.)