ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಡುಬು

ವಿಕಿಸೋರ್ಸ್ದಿಂದ

ಸಿಡುಬು

ಜ್ವರ, ಅಸಹನೀಯ ತಲೆಬೇನೆ, ಕಟಿಭಾಗಗಳಲ್ಲಿ ನೋವು, ಮೊದಲು ಚರ್ಮದ ಮೇಲೆ ದದ್ದುಗಳೆದ್ದು ಕ್ರಮೇಣ ಗುಳ್ಳೆ, ಸಂಚಿ ಮತ್ತು ಕೀವು ತುಂಬಿದ ಮಣಿಗಳಾಗಿ ರೂಪುಗೊಂಡು ಹೊರಮೈಯನ್ನು ಆಕ್ರಮಿಸುವ ಕೂರಾದ ತೀವ್ರ ಸೋಂಕಿನ ರೋಗ (ಸ್ಮಾಲ್‍ಪಾಕ್ಸ್). 1977ಕ್ಕೆ ಮೊದಲು ಇದೊಂದು ಮಾರಕ ಸಾಂಕ್ರಾಮಿಕ ವ್ಯಾಧಿ ಆಗಿತ್ತು. ಪ್ರಪಂಚಾದ್ಯಂತ ಪ್ರಾಯ, ಲಿಂಗ, ಆರ್ಥಿಕ ಸ್ಥಿತಿಗತಿ ಯಾವ ತರತಮವನ್ನೂ ಎಣಿಸದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದ್ದ ಮಾರಿಬೇನೆ ಇದು. ವೇರಿಯೋಲ ಮೇಜರ್ ಮತ್ತು ವೇರಿಯೋಲ ಮೈನರ್ ಎಂಬ ವೈರಸುಗಳು ಈ ರೋಗವಾಹಕಗಳು. ಇವುಗಳಲ್ಲಿ ಮೊದಲನೆಯ ಬಗೆಯದು ಅತ್ಯಂತ ಮಾರಕ: ಹಠಾತ್ತನೆ ಜ್ವರ, ತಲೆನೋವು, ಬೆನ್ನುಸೆಳೆತ, ವಾಂತಿ ಮುಂತಾದವು ಆರಂಭವಾಗಿ ಮರುದಿನವೇ ಕೀವು ತುಂಬಿದ ಚರ್ಮಗುಳ್ಳೆಗಳು ಮೈಯಲ್ಲೆಲ್ಲ ಏಳುತ್ತವೆ. ಇವು ಒಣಗಿ ಸಿಬರು ಉದುರಿದ ಬಳಿಕ ಕಲೆಗಳು ಉಳಿದಿರುತ್ತವೆ. ಸಿಡುಬಿನಲ್ಲಿ ರಕ್ತಸ್ರಾವಕ (ಹೆಮರೇಜಿಕ್) ಗುಳ್ಳೆಗಳು, ಕಲೆತುಹೋಗುವ(ಕಾನ್‍ಫ್ಲುಯೆಂಟ್) ಗುಳ್ಳೆಗಳು, ವಿವಿಕ್ತ(ಡಿಸ್ಕ್ರೀಟ್) ಗುಳ್ಳೆಗಳು ಮತ್ತು ಮಾರ್ಪಟ್ಟ (ಮಾಡಿಫೈಡ್) ಸಿಡುಬು ಎಂಬ ನಾಲ್ಕು ಬಗೆಗಳಿವೆ. ಈ ಪೈಕಿ ಮೊದಲನೆಯದು ಪ್ರಾಣಾಂತಕ ಸಿಡುಬು - ಇದು ತಾಗಿದವರು ಮರಣ ಅಪ್ಪುವುದು ಶತಸ್ಸಿದ್ಧ.

ಸಿಡುಬುಲಸಿಕೆ (ಸ್ಮಾಲ್‍ಪಾಕ್ಸ್ ವ್ಯಾಕ್ಸಿನ್): ಮೊತ್ತಮೊದಲು 18ನೆಯ ಶತಮಾನದ ಕೊನೆಗೆ ಜೆನ್ನರ್‍ನಿಂದ ತಯಾರಿಸಲಾದ ಲಸಿಕೆ ಇದು (ನೋಡಿ - ಲಸಿಕೆ; ಜೆನ್ನರ್, ಎಡ್ವರ್ಡ್-1749-1823). 1967-79 ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಿಂದಲೇ ಸಿಡುಬನ್ನು ಉತ್ಪಾಟಿಸಲು ಸರ್ವತ್ರ ಲಸಿಕೆ ಹಾಕುವ ಕಾರ್ಯಕ್ರಮವನ್ನು (ವ್ಯಾಕ್ಸಿನೇಶನ್) ಹಮ್ಮಿಕೊಂಡಿತು. ಫಲವಾಗಿ ಭಾರತದಲ್ಲಿ 1977 ಎಪ್ರಿಲ್ ತಿಂಗಳಿನಲ್ಲಿ ಸಿಡುಬು ಪೂರ್ತಿ ನಿರ್ಮೂಲನವಾಗಿದೆ ಎಂದು ಘೋಷಿಸಲಾಯಿತು. 1977 ಅಕ್ಟೋಬರ್ 26ರಂದು ಸೋಮಾಲಿಯದಲ್ಲಿ ಒಬ್ಬ ಸಿಡುಬುರೋಗಿಯನ್ನು ಗುರುತಿಸಲಾಯಿತು. ಇದೇ ಕಟ್ಟಕಡೆಯ ನಿದರ್ಶನ. ಮುಂದೆ 1980 ಮೇ 8ರಂದು ವಿಶ್ವಸಂಸ್ಥೆ ಪ್ರಪಂಚಾದ್ಯಂತ ಸಿಡುಬು ನಿರ್ಮೂಲನವಾಗಿದೆ ಎಂದು ಘೋಷಿಸಿತು. ಹೀಗೆ ಇಂದು (2004) ನಾವು ಸಿಡುಬುಮುಕ್ತ ಪ್ರಪಂಚದ ಪ್ರಜೆಗಳು. ವರ್ಷವಿಡೀ ಲಕ್ಷಾಂತರ ಮಂದಿಯ ಪ್ರಾಣಹರಣವನ್ನೂ ಹಲವರಲ್ಲಿ ಅಂಗವಿಕಲತೆಯನ್ನೂ ಉಂಟುಮಾಡುತ್ತಿದ್ದ ಖಂಡಾಂತರ ಪಿಡುಗು ಈ ತೆರನಾಗಿ ತನ್ನ ಸಮಾಧಿ ಕಂಡಿತು.

1982ರ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಕೈಬಿಡಲಾಯಿತು. ಆದರೆ ಇಂದಿಗೂ ಅಮೆರಿಕದ ಅಟ್ಲಾಂಟದಲ್ಲಿ ಮತ್ತು ರಷ್ಯದ ಮಾಸ್ಕೋದಲ್ಲಿ ಸಿಡುಬು ಲಸಿಕೆಯನ್ನು ದಾಸ್ತಾನು ಇಡಲಾಗಿದೆ. 1999 ಜೂನ್ 30ರಂದು ಈ ದಾಸ್ತಾನುಗಳನ್ನು ನಾಶಗೊಳಿಸಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆದೇಶವಾಗಿತ್ತು. ಆದರೆ ಆಧುನಿಕ ವೈಜ್ಞಾನಿಕ ಚಿಂತನೆ ಈ ಪುರಾತನ ಪಿಡುಗಿನ ವೈರಸನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನದ ಸಲುವಾಗಿ ಉಳಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಸಿಡುಬು ವೈರಸನ್ನು ಮಾರಕ ಜೀವವೈಜ್ಞಾನಿಕ ಅಸ್ತ್ರವಾಗಿ ಪ್ರಯೋಗಿಸುವ ಸಾಧ್ಯತೆಯನ್ನು ಅಮೆರಿಕ ಹಾಗೂ ರಷ್ಯ ಮರೆತಿಲ್ಲ. ಈ ವಿವಾದದ ಕಾರಣ ಸಿಡುಬು ವೈರಸ್‍ನ ಪೂರ್ಣನಾಶ ಇನ್ನೂ ಕೈಗೊಂಡಿಲ್ಲ. (ವಿ.ಎನ್.ಕೆ.; ಸಿ.ಎಸ್.ಕೆ.; ಎಸ್.ಕೆ.ಎಚ್.)