ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀಮೆಹುಣಿಸೆ

ವಿಕಿಸೋರ್ಸ್ದಿಂದ

ಸೀಮೆಹುಣಿಸೆ ಲೆಗ್ಯುಮಿನೋಸೀ ಕುಟುಂಬಕ್ಕೆ ಸೇರಿದ ಪಿಥೆಕೊಲೋಬಿಯಂ ಡುಲ್ಸ್ ಪ್ರಭೇದದ ಮರ. ಮೆಕ್ಸಿಕೊ ಮೂಲದ ಮರ ಇದು. ಮೊದಲು ಬೇಲಿಗೂ ಸೌದೆಗೂ ಭಾರತದಲ್ಲಿ ಸಾಗುವಳಿ ಮಾಡಲಾಯಿತು. ಪೂರ್ವ ಕರಾವಳಿ ಪ್ರದೇಶಗಳಲ್ಲಿ ಸರುವೆ ಮರಗಳಿಗೆ ಬೂಸ್ಟಿನ ಸೋಂಕು ಬಂದು ಹಾಳಾದ ಪ್ರಯುಕ್ತ ಸೀಮೆಹುಣಿಸೆ ಮರವನ್ನು ಸೌದೆ ಮತ್ತು ಇತರ ಉಪಯೋಗಗಳಿಗೆ ಬಳಸಿಕೊಳ್ಳಲಾಯಿತು. ರೋಗತಗಲದಂತೆ, ಇದನ್ನು ಸರುವೆ ಮರದೊಂದಿಗೆ ಬೆಳೆಸುತ್ತಾರೆ. ಶೀಘ್ರಗತಿಯಲ್ಲಿ ಬೆಳೆಯುತ್ತದೆ. ಸಣ್ಣ ಬಿಳಿಯ ಹೂಗಳು ಜನವರಿ-ಫೆಬ್ರವರಿಯಲ್ಲಿ ಮೂಡಿ, ಡೊಂಕುಡೊಂಕಿನ ಕಾಯಿಗಳು ಏಪ್ರಿಲ್-ಜೂನ್‍ನಲ್ಲಿ ಮಾಗುತ್ತವೆ. ಕಾಯಿಯ ಬಿಳಿಯ ತಿರುಳು ತಿನ್ನಲು ಯೋಗ್ಯ. ಬೀಜಬಿತ್ತಿ ಬೆಳೆಸಬಹುದು. ಕತ್ತರಿಸಿದಾಗ ಚೆನ್ನಾಗಿ ಚಿಗುರೊಡೆಯುವುದು.

	(ಎ.ಕೆ.ಎಸ್.)