ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಡಾನ್

ವಿಕಿಸೋರ್ಸ್ದಿಂದ

ಸುಡಾನ್ ಆಫ್ರಿಕ ಖಂಡದ ಈಶಾನ್ಯ ಭಾಗದಲ್ಲಿ ಉಕಅ. 40 — 230 ಮತ್ತು ಪೂ.ರೇ. 220 — 390 ನಡುವೆ ಇರುವ ಗಣರಾಜ್ಯ. ವಿಸ್ತೀರ್ಣ 25,05,823 ಚ.ಕಿಮೀ (9,67 ,500 ಚ.ಮೈ.), ಇದು ಆಫ್ರಿಕದ 1/10 ಭಾಗದಷ್ಟಿದೆ. ಜನಸಂಖ್ಯೆ 3.26 ಕೋಟಿ. ಉತ್ತರದಲ್ಲಿ ಈಜಿಪ್ಟ್, ಪೂರ್ವದಲ್ಲಿ ಕೆಂಪು ಸಮುದ್ರ ಮತ್ತು ಇಥಿಯೋಪಿಯ, ದಕ್ಷಿಣದಲ್ಲಿ ಕೆನ್ಯಾ, ಉಗಾಂಡ ಮತ್ತು ಜಾಯಿರೆ ದೇಶಗಳು, ಪಶ್ಚಿಮದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ಜಾಡ್ ಮತ್ತು ಲಿಬಿಯ ದೇಶಗಳಿವೆ. ರಾಜಧಾನಿ ಖಾರ್ಟೂಮ್. ಇತರ ದೊಡ್ಡ ನಗರಗಳು ಒಮ್ಡುರ್ಮನ್, ಪೋರ್ಟ್‍ಸುಡಾನ್, ಭಾಷೆ ಅರಬ್ಬಿ, ಇಂಗ್ಲಿಷ್, ಡಿನ್‍ಕಾ, ನೂಬಿಮನ್ ಇತ್ಯಾದಿ. ಸಾಕ್ಷರತೆ 46%. ನಾಣ್ಯ ದಿನಾರ್.

ಮೇಲ್ಮೈ ಲಕ್ಷಣ : ನೈಲ್ ನದಿ ಹಾಗೂ ಅದರ ಉಪನದಿಗಳನ್ನೊಳ ಗೊಂಡ ಸುಡಾನ್ ನ ಹೆಚ್ಚಿನ ಭಾಗ (ಉತ್ತರದಲ್ಲಿ) ಮರುಭೂಮಿ. ಇದು ಶಿಲಾಪದರು ಹಾಗೂ ತೆಳುವಾದ ಮಣ್ಣಿನ ಪದರಿನಿಂದ ಕೂಡಿದೆ. ಇಲ್ಲಿನ ಪರ್ವತ ಶ್ರೇಣಿಗಳು ಸಮುದ್ರಮಟ್ಟದಿಂದ ಸು. 2,133ಮೀ. ಉತ್ತರವಾಗಿವೆ. ಕಾeóï ಎಂಬ, ಏರುತಗ್ಗುಗಳಿಂದ ಕೂಡಿದ ಮರಳು ಭೂಮಿಯು ಸುಡಾನ್‍ನ ಪಶ್ಚಿಮ ಭಾಗದಿಂದ ಪೂರ್ವದ ಕೆಂಪು ಸಮುದ್ರ ತೀರದ ಪರ್ವತಗಳವರೆಗೆ ವಿಸ್ತರಿಸಿದೆ. ದಕ್ಷಿಣ ಭಾಗ ಸಮತಟ್ಟಾದ ಮೈದಾನ ಪ್ರದೇಶ. ಇದರ ಸ್ವಲ್ಪ ಭಾಗ ಜೌಗು ನೆಲ. ನೈಲ್ ಪ್ರಮುಖ ನದಿ. ಇದರ ಉಪನದಿಗಳಿಂದ ನೀಲಿ ನೈಲ್ ಹಾಗೂ ಬಿಳಿ ನೈಲ್ ಸೇರುವ ಸ್ಥಳದಲ್ಲಿ ದೇಶದ ರಾಜಧಾನಿಯಾದ ಖಾರ್ಟೂಮ್ ಇದೆ. ಕಿನೈತಿ ಪರ್ವತ ಶ್ರೇಣಿಯ ಎತ್ತರ 3,186ಮೀ. ಕೆಂಪು ಸಮುದ್ರ ತೀರದ ಬಂದರುಗಳು. ಪೋರ್ಟ್ ಸುಡಾನ್ ಮತ್ತು ಸವಾಕಿನ್ ಇವು ಸ್ವಾಭಾವಿಕ ಬಂದರುಗಳು.

ವಾಯುಗುಣ : ಸುಡಾನ್ ಗಣರಾಜ್ಯದ್ದು ಖಂಡಾಂತರ ವಾಯುಗುಣ. ಕೆಂಪು ಸಮುದ್ರದ ತೀರ ಪ್ರದೇಶ ಸಾಗರಿಕ ವಾಯುಗುಣದಿಂದ ಕೂಡಿದೆ. ವರ್ಷದ ಎಲ್ಲ ಕಾಲದಲ್ಲಿ ಉಷ್ಣತೆ ಅಧಿಕ, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಅತಿ ಹೆಚ್ಚು. ಬೇಸಗೆಯಲ್ಲಿ ಸಾಮಾನ್ಯವಾಗಿ ಮಳೆ ಬೀಳುತ್ತದೆ. ಉತ್ತರದಿಂದ ದಕ್ಷಿಣದ ಕಡೆಗೆ ಬಂದಂತೆ ಮಳೆಯ ಪ್ರಮಾಣ ಹೆಚ್ಚುತ್ತದೆ. ವಾರ್ಷಿಕ ಸರಾಸರಿ ಮಳೆ 60``. ಈಜಿಪ್ಟ್ ಗಡಿಯ ಬಳಿ 4`` ಗಳಿಗಿಂತಲೂ ಕಡಿಮೆ.

ಸಂವಿಧಾನ ಮತ್ತು ಸರ್ಕಾರ : 1989ರಲ್ಲಿ ಸುಡಾನ್ ಸಂವಿಧಾನ ರದ್ದಾಗಿ 12 ಸದಸ್ಯರ ಕ್ರಾಂತಿಕಾರಿ ಮಂಡಳಿ ಅಧಿಕಾರಕ್ಕೆ ಬಂತು. 1992ರಲ್ಲಿ 300 ಸದಸ್ಯರ ತಾತ್ಕಾಲಿಕ ರಾಷ್ಟ್ರೀಯ ಸಭೆಯ ನೇಮಕವಾಯಿತು. 1996ರಲ್ಲಿ ರಾಷ್ಟ್ರೀಯ ಸಭೆ ಅಥವಾ ಮಜ್ಲಿಸ್ ವತಾನಿ ರದ್ದಾಯಿತು. 1998ರ ಮೇ 26ರಂದು ಒಮರ್ ಹುಸ್ಸೇನ್ ಅಹ್ಮದ್ ಅಲ್-ಬಷೀರ್ ಅಧ್ಯಕ್ಷನಾದ. 400 ಸದಸ್ಯರ ಪ್ರತಿನಿಧಿ ಸಭೆಯಲ್ಲಿ 275 ಸದಸ್ಯರು ಏಕಪೀಠ ಸಂವಿಧಾನದಡಿಯಲ್ಲಿ 4 ವರ್ಷದ ಅಧಿಕಾರಾವಧಿಗೆ ನೇರವಾಗಿ ಚುನಾಯಿತರಾಗುತ್ತಾರೆ. ಉಳಿದ 125 ಸದಸ್ಯರು ರಾಷ್ಟ್ರೀಯ ಸಮ್ಮೇಳನದಿಂದ ಆಯ್ಕೆ ಹೊಂದುತ್ತಾರೆ. ಸುಡಾನಿನ ಅಧ್ಯಕ್ಷನ ಅಧಿಕಾರಾವಧಿ 5 ವರ್ಷ. ಸಾರ್ವಜನಿಕರಿಂದ ಅವರು ಚುನಾಯಿತರಾಗುತ್ತಾರೆ.

ಇತಿಹಾಸ : ಸುಡಾನ್ 1821ರಲ್ಲಿ ಈಜಿಪ್ಟಿನ ಆಕ್ರಮಣಕ್ಕೆ ಒಳಗಾಗಿತ್ತು. ಅನಂತರ 1881ರಲ್ಲಿ ಮೊಹಮ್ಮದ್ ಅಹ್ಮದ್ ಎಂಬುವನು ಬಂಡಾಯ ಎದ್ದು, ಆಡಳಿತದ ಚುಕ್ಕಾಣಿ ಹಿಡಿದ. 1899ರಲ್ಲಿ ಆಂಗ್ಲೊ-ಈಜಿಪಿಯನ್ ಸೇನೆ ಮೇಲುಗೈ ಪಡೆದು ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತಂದಿತು. 1956 ಜನವರಿ 1ರಂದು ಸುಡಾನ್ ಸಾರ್ವಭೌಮ ಗಣರಾಜ್ಯವೆಂದು ಘೋಷಿಸಲಾಯಿತು. 1958-64 ರವರೆಗೆ ಇಲ್ಲಿ ಮಿಲಿಟರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಅನಂತರ 1964ರಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂತು. ಸುಡಾನ್‍ನ ದಕ್ಷಿಣ ರಾಜ್ಯಗಳಲ್ಲಿ ಪ್ರಕ್ಷುಬ್ಧತೆಯಿಂದಾಗಿ ಪದೇ ಪದೇ ಅಸ್ಥಿರ ಪರಿಸ್ಥಿತಿ ಉದ್ಭವಿಸುತ್ತಲೇ ಇತ್ತು. 1989 ಜೂನ್ 30ರಂದು ಬ್ರಿಗೇಡಿಯರ್-ಜನರಲ್ ಒಮರ್ ಹಸನ್ ಅಹ್ಮದ್ ಅಲ್-ಬಷೀರ್ ನೇತೃತ್ವದಲ್ಲಿ ನಾಗರಿಕ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಈ ಮಧ್ಯೆ ಸುಡಾನಿನ ಉತ್ತರದ ಮುಸ್ಲಿಮರು ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ ಆಡಳಿತವನ್ನು ವಿರೋಧಿಸಿದಾಗ, ದಕ್ಷಿಣದ ಮುಸ್ಲಿಮೇತರ ದಂಗೆಕೋರರು ಸುಡಾನ್ ಪ್ರಜಾ ವಿಮೋಚನಾ ಸೇನೆಯ ನೇತೃತ್ವದಲ್ಲಿ ಗೆರಿಲ್ಲಾ ಕಾರ್ಯಾಚರಣೆಯಲ್ಲಿ ತೊಡಗಿದರು. 1999ರಲ್ಲಿ ಅಧ್ಯಕ್ಷ ಅಲ್-ಬಷೀರ್ ರಾಷ್ಟ್ರೀಯ ಶಾಸನ ಸಭೆಯನ್ನು ವಿಸರ್ಜಿಸಿ ತುರ್ತು ಪರಿಸ್ಥಿತಿ ಘೋಷಿಸಿದ. 2000ರಲ್ಲಿ ನಡೆದ ಚುನಾವಣೆಯಲ್ಲಿ ಒಮರ್ ಹಸನ್ ಅಹ್ಮದ್ ಅಲ್-ಬಷೀರ್ ಸೇ.86.5 ಮತಗಳಿಂದ ಅಧ್ಯಕ್ಷನಾಗಿ ಮತ್ತೆ ಚುನಾಯಿತನಾದ. ಇವನದು ಮಿಲಿಟರಿ ಸರ್ಕಾರ.

ಕೃಷಿ : ಸುಡಾನ್‍ನಲ್ಲಿ ವ್ಯವಸಾಯಕ್ಕೆ ಅನುಕೂಲವಾದ ವಾಯುಗುಣವಿದೆ. ಇಲ್ಲಿ ಹುಲ್ಲುಗಾವಲು ವ್ಯಾಪಕವಾಗಿದೆ. ಸೇ.80 ರಷ್ಟು ಮಂದಿ ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ನಿರತರಾಗಿದ್ದಾರೆ. ಭೂಮಿಯ ಒಡೆತನ ಸರ್ಕಾರದ್ದು. ನೈಲ್ ನದಿ ಹಾಗೂ ಅದರ ಉಪನದಿಗಳು ಇಲ್ಲಿನ ನೀರಾವರಿಗೆ ಪೂರಕವಾಗಿವೆ. ಹತ್ತಿ, ಕಬ್ಬು, ಖರ್ಜೂರ, ಕಿತ್ತಳೆ, ಮಾವು, ಕಾಫಿ, ತಂಬಾಕು ಮುಖ್ಯ ಬೆಳೆಗಳು. ಸೇಂಗಾ, ಎಳ್ಳು, ಬಟಾಣಿ, ಗೋದಿ, ಜೋಳ, ಕಾಳುಗಳು ಮತ್ತು ಬಾರ್ಲಿ ಇವೂ ಬೆಳೆಯುತ್ತವೆ. ದೇಶದ ರಫ್ತುಗಳಲ್ಲಿ ಹತ್ತಿ ಪ್ರಧಾನ.

ಅರಣ್ಯ ಸಂಪತ್ತು : ಸುಡಾನಿನದು ಉಷ್ಣವಲಯದ ಅರಣ್ಯ. ಅಕೇಶಿಯ, ತೇಗ, ಪ್ರಮುಖ ವಾಣಿಜ್ಯ ವೃಕ್ಷಗಳು.

ಮೀನುಗಾರಿಕೆ : ಸುಡಾನಿನ ನದಿಗಳಲ್ಲಿ ಸು. 110 ಜಾತಿಯ ಮೀನುಗಳಿವೆ. ದಕ್ಷಿಣ ಪ್ರಾಂತ್ಯದಲ್ಲಿ ನೈಲ್ ಪರ್ಕ್ ಎಂಬುದು ಮುಖ್ಯ ಆಹಾರ ಮೀನಾಗಿದೆ. ಕೆಂಪುಸಮುದ್ರದಲ್ಲಿ ಉಪ್ಪು ನೀರಿನ ಮೀನುಗಳು ಮತ್ತು ಮೃದ್ವಂಗಿಗಳು ಹೇರಳವಾಗಿ ದೊರೆಯುತ್ತವೆ. ಇವುಗಳನ್ನು ಈಜಿಪ್ಟ್, ಬೆಲೆಗೈನ್ ಮತ್ತು ಕಾಂಗೋ ಗಣರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ.

ಕೈಗಾರಿಕೆ : ಸುಡಾನಿನ ಕೈಗಾರಿಕೆಗಳು ಅಭಿವೃದ್ಧಿಯ ಹಂತದಲ್ಲಿವೆ. ಸಣ್ಣ ಕೈಗಾರಿಕೆಗಳಾದ ಸಿಮೆಂಟ್, ಸಕ್ಕರೆ ಸಂಸ್ಕರಣ, ಸೋಪು, ನೇಯ್ಗೆ, ಚರ್ಮ ಹದ ಮಾಡುವುದು ಮತ್ತು ಸಿದ್ಧ ಉಡುಪುಗಳ ತಯಾರಿಕಾ ಘಟಕಗಳಿವೆ. ಅಭಿವೃದ್ಧಿಗಾಗಿ ದೇಶೀ ಹಾಗೂ ವಿದೇಶೀ ಬಂಡವಾಳಗಳನ್ನು ಸುಡಾನ್ ಆಹ್ವಾನಿಸುತ್ತಿದೆ.

ವಿದ್ಯುಚ್ಛಕ್ತಿ: ಕಲ್ಲಿದ್ದಲಿನ ಕೊರತೆ ಇರುವ ಸುಡಾನಿನಲ್ಲಿ ಜಲವಿದ್ಯುತ್ತಿಗೆ ಅವಕಾಶವಿದೆ. ವಿದ್ಯುತ್ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

ಅನಿಲ ಮತ್ತು ತೈಲ : ಈಚಿನ ವರ್ಷಗಳಲ್ಲಿ ಇಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳ ಸರ್ವೇಕ್ಷಣೆ ನಡೆದು ಇವುಗಳ ಉತ್ಪಾದನೆಗೂ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಖನಿಜಗಳು : ತಾಮ್ರ ಇಲ್ಲಿಯ ಅತ್ಯಂತ ಮುಖ್ಯ ಖನಿಜ. ಪೋರ್ಟ್‍ಸುಡಾನ್ ಬಳಿ ಇದರ ನಿಕ್ಷೇಪವಿದೆ. ಕೆಂಪುಸಮುದ್ರದ ನೆರೆಯ ಪರ್ವತ ಶ್ರೇಣಿಗಳಲ್ಲಿ ಕಾಗೆಬಂಗಾರ, ಮ್ಯಾಂಗನೀಸ್, ಗ್ರಾಫೈಟ್, ಕಬ್ಬಿಣ, ಸಲ್ಫರ್, ಕ್ರೋಮಿಯಂ, ಸತು, ಜಿಪ್ಸಂ, ಚಿನ್ನ ಮತ್ತು ಸುಣ್ಣಕಲ್ಲು ಖನಿಜಗಳು ಮತ್ತು ಗಣಿಗಳು ಕಂಡುಬರುತ್ತವೆ.

ಬ್ಯಾಂಕಿಂಗ್ ಮತ್ತು ಹಣಕಾಸು : 1960ರಲ್ಲಿ ಬ್ಯಾಂಕ್ ಆಫ್ ಸುಡಾನ್ 1.5 ಮಿ. ಸುಡಾನೀಸ್ ಫಂಡ್ ಬಂಡವಾಳದೊಂದಿಗೆ 2 ಅಧಿಕೃತ ಶಾಖೆಗಳಲ್ಲಿ ಕಾರ್ಯಾರಂಭ ಮಾಡಿತು. 1974ರಲ್ಲಿ ವಿದೇಶೀ ಬ್ಯಾಂಕುಗಳು ಸುಡಾನ್‍ನಲ್ಲಿ ಶಾಖೆ ತೆರೆಯಲು ಅವಕಾಶ ನೀಡಲಾಗಿ ಇವುಗಳಲ್ಲಿ 7 ಬ್ಯಾಂಕುಗಳು ಇಸ್ಲಾಮಿಕ್ ತತ್ತ್ವಗಳನ್ನು ಆಧರಿಸಿವೆ. 1994ರಲ್ಲಿ 27 ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳು ರಾಷ್ಟ್ರೀಕರಣವಾದವು. ಅನಂತರ 1995ರಲ್ಲಿ ರಾಜಧಾನಿ ಖಾರ್ಟೂಮ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ತೆರೆಯಲಾಯಿತು. ಸುಡಾನ್‍ನ ತೂಕ ಮತ್ತು ಅಳತೆ ವ್ಯವಸ್ಥೆ ಮೆಟ್ರಿಕ್ ಪದ್ಧತಿಯಲ್ಲಿದೆ.

ಅಂತಾರಾಷ್ಟ್ರೀಯ ವ್ಯಾಪಾರ : ಸುಡಾನ್ ಗಣರಾಜ್ಯವು ಹೇರಳವಾಗಿ ಕೃಷಿ ಮತ್ತು ಪ್ರಾಣಿಗಳ ಉತ್ಪನ್ನಗಳನ್ನು ರಫ್ತು ಹಾಗೂ ಆಮದು ಮಾಡುತ್ತದೆ. ಹತ್ತಿ ಮತ್ತು ಹತ್ತಿ ಬೀಜದ ಒಟ್ಟು ರಫ್ತು ಪ್ರಮಾಣದ ಸೇ.55 ರಷ್ಟಿದ್ದು, ಸೇಂಗಾ, ಪಾನೀಯ ಮತ್ತು ತಂಬಾಕು ವಸ್ತುಗಳನ್ನು ರಫ್ತು ಮಾಡುತ್ತದೆ. ಜವಳಿ, ಯಂತ್ರಗಳು ಮತ್ತು ಅವುಗಳ ಬಿಡಿಭಾಗಗಳು, ವಾಹನಗಳು ಹಾಗೂ ಪೆಟ್ರೋಲಿಯಂ ಆಮದು ವಸ್ತುಗಳಾಗಿವೆ. ಪ್ರಮುಖ ಆಮದು ಮಾರುಕಟ್ಟೆಗಳಿವು : ಸೌದಿ ಅರೇಬಿಯ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ. ಸುಡಾನ್‍ನ ಮುಖ್ಯ ರಫ್ತು ಮಾರುಕಟ್ಟೆಗಳು : ಸೌದಿ ಅರೇಬಿಯ, ಬ್ರಿಟನ್, ಇಟಲಿ ಮತ್ತು ಥೈಲೆಂಡ್.

ಅಂತಾರಾಷ್ಟ್ರೀಯ ಸಂಬಂಧ : ಸುಡಾನ್ ಗಣರಾಜ್ಯ ವಿಶ್ವಸಂಸ್ಥೆ, ಅರಬ್ ಒಕ್ಕೂಟ, ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್, ಕೊಮೆಸಾ, ಇಸ್ಲಾಮ್ ರಾಷ್ಟ್ರಗಳ ಸಂಘ ಮತ್ತು ಅರಬ್ ರಾಜ್ಯಗಳ ಲೀಗ್‍ನ ಸದಸ್ಯ ದೇಶವಾಗಿದ್ದು ಉತ್ತಮ ವಿದೇಶೀ ಸಂಬಂಧ ಹೊಂದಿದೆ.

ಸುಡಾನಿನ ಕೃಷಿ ಉತ್ಪಾದನೆಯಲ್ಲಿ ಒಟ್ಟು ಉತ್ಪಾದನೆಯ ಸೇ. 39.2 ರಷ್ಟಿದ್ದು ಕೈಗಾರಿಕೆ ಸೇ. 18.2 ಮತ್ತು ಸೇವೆಗಳು ಸೇ. 42.6.

ಧರ್ಮ : ಇಸ್ಲಾಮ್ ಸುಡಾನ್‍ನ ಪ್ರಮುಖ ಧರ್ಮ. ಸುನ್ನಿ ಮುಸಲ್ಮಾನರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಸಂಪರ್ಕ ವ್ಯವಸ್ಥೆ: ಸುಡಾನಿನಲ್ಲಿ 11,900 ಕಿಮೀ ರಸ್ತೆ ಮಾರ್ಗಗಳಿವೆ. ಸು. 7484 ಕಿಮೀ ರೈಲು ಮಾರ್ಗಗಳು ಇವೆ (1996). ಖಾರ್ಟೂಮ್‍ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಪೋರ್ಟ್ ಸುಡಾನ್, ಸಾಕಿನ್ - ಇವು ಮುಖ್ಯ ಬಂದರುಗಳು.

(ಕೆ.ಎಲ್.ಪಿ.)