ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಪ

ವಿಕಿಸೋರ್ಸ್ದಿಂದ

ಸುಪ ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಕಾಳಿನದಿಗೆ, ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನಿಂದ ಸುಪ ಮುಳುಗಿ ಹೋದದ್ದ ರಿಂದ ಜೋಯಿಡಾವನ್ನು 1981 ರಿಂದ ಸುಪ ತಾಲ್ಲೂಕಿನ ಆಡಳಿತ ಕೇಂದ್ರವಾಗಿ ಮಾಡಲಾಗಿದೆ. ಈ ತಾಲ್ಲೂಕಿನ ಪೂರ್ವದಲ್ಲಿ ಹಳಿಯಾಳ, ಆಗ್ನೇಯದಲ್ಲಿ ಯಲ್ಲಾಪುರ, ದಕ್ಷಿಣದಲ್ಲಿ ಕಾರವಾರ ತಾಲ್ಲೂಕುಗಳೂ ಪಶ್ಚಿಮಕ್ಕೆ ಗೋವ ರಾಜ್ಯವೂ ಉತ್ತರದಲ್ಲಿ ಬೆಳಗಾಂವಿ ಜಿಲ್ಲೆಯ ಖಾನಾಪುರ ತಾಲ್ಲೂಕೂ ಸುತ್ತುವರಿದಿವೆ. ಕುಂಬಾರವಾಡ, ಸುಪ ಮತ್ತು ಕ್ಯಾಸಲ್‍ರಾಕ್ ಹೋಬಳಿಗಳು. ಒಟ್ಟು 139 ಗ್ರಾಮಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 1,871 ಚ.ಕಿ.ಮೀ. ಜನಸಂಖ್ಯೆ 48,901.

ಇದು ಅರಣ್ಯಸಮೃದ್ಧ ಪ್ರದೇಶ. ತಾಲ್ಲೂಕಿನ ಸೇಕಡಾ 95 ಭಾಗ ಕಾಡುಗಳಿಂದ ಕೂಡಿದೆ. ಈ ಕಾಡುಗಳಲ್ಲಿ ಬೆಲೆ ಬಾಳುವ ಉಪಯುಕ್ತ ಮರಗಳಾದ ತೇಗ, ಮತ್ತಿ, ಕರಿಮರ, ಶ್ರೀಗಂಧ, ಹೊನ್ನೆ ಹಲಸು ಮುಂತಾದವುಗಳಲ್ಲದೆ ಕೆಲವು ಮೃದು ಮರಗಳೂ ಔಷಧೋಪಯೋಗಿ ಗಿಡ ಮೂಲಿಕೆಗಳೂ ಬೆಳೆಯುತ್ತವೆ. ದಾಲಚಿನ್ನಿ, ಅಳಲೇಕಾಯಿ, ಶ್ರೀಗಂಧ, ಜೇನು ಇತರ ಅರಣ್ಯ ಉತ್ಪನ್ನಗಳು. ಅರಣ್ಯಗಳಿಂದ ಉರುವಲಿಗೆ ಸೌದೆ, ಕಟ್ಟಡಗಳಿಗೆ ಮರಮಟ್ಟು, ರೈಲ್ವೆ ಸ್ಲೀಪರುಗಳು, ಬೆಂಕಿಕಡ್ಡಿ ತಯಾರಿಕೆಗೆ ಮೃದುಮರ ದೊರೆಯುತ್ತವೆ. ಈ ಕಾಡುಗಳಲ್ಲಿ ಆನೆ, ಕಾಡೆಮ್ಮೆ, ಹಂದಿ, ಜಿಂಕೆ ಮುಂತಾದ ವನ್ಯಮೃಗಗಳನ್ನು ಕಾಣಬಹುದು.

ಕಾಳಿ (ನೋಡಿ- ಕಾಳೀನದಿ) ಈ ತಾಲ್ಲೂಕಿನಲ್ಲಿ ಹರಿಯುವ ಮುಖ್ಯ ನದಿ. ಇದು ತಾಲ್ಲೂಕಿನ ಪಶ್ಚಿಮದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಸುಪ, ದಾಂಡೇಲಿ ಮುಖಾಂತರ ಹರಿದು ಹಳಿಯಾಳ ತಾಲ್ಲೂಕಿನಲ್ಲಿ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ಹರಿದು, ಅನಂತರ ದಕ್ಷಿಣ ಮುಖವಾಗಿ ಪ್ರವಹಿಸಿ ಯಲ್ಲಾಪುರ, ಕಾರವಾರ ತಾಲ್ಲೂಕನ್ನು ಸುಪದಿಂದ ಪ್ರತ್ಯೇಕಿಸುವ ಎಲ್ಲೆಯಾಗಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದ ಬಳಿ ಅರಬ್ಬೀಸಮುದ್ರವನ್ನು ಸೇರುವುದು. ಈ ನದಿಗೆ ಪಂಡರಿ, ವಾಕಿ, ಕಾನೇರಿ ಮುಂತಾದ ಉಪನದಿಗಳ ಜೊತೆಗೆ ಅನೇಕ ತೊರೆಗಳು ಸೇರಿಕೊಳ್ಳುತ್ತವೆ. ವಾರ್ಷಿಕ ಸರಾಸರಿ ಮಳೆ 2,667.09 ಮಿಮೀ.

ಈ ತಾಲ್ಲೂಕಿನ ಉತ್ತರ ಮತ್ತು ಪೂರ್ವಭಾಗಗಳಲ್ಲಿ ಫಲವತ್ತಾದ ಕರಿಮಣ್ಣಿನ ಭೂಪ್ರದೇಶವೂ ದಕ್ಷಿಣ ಮತ್ತು ಪಶ್ಚಿಮದಲ್ಲಿ ಅರೆಕೆಂಪು, ಅರೆಬಿಳುಪು ಮಣ್ಣಿನ ಅಷ್ಟೇನೂ ಫಲವತ್ತಲ್ಲದ ಭೂಪ್ರದೇಶವೂ ಇದೆ. ತಾಲ್ಲೂಕಿನ ಕಣಿವೆ ಮತ್ತು ನದಿ ಪ್ರದೇಶಗಳಲ್ಲಿ ಬತ್ತದ ಬೆಳೆ ಹೆಚ್ಚು. ಕಬ್ಬು ಮತ್ತು ಇತರ ಧಾನ್ಯಗಳ ಜೊತೆಗೆ ತೋಟಗಳಲ್ಲಿ ಅಡಕೆ, ಮೆಣಸು, ತೆಂಗು ಬೆಳೆಯುತ್ತಾರೆ.

ಈ ತಾಲ್ಲೂಕಿನ ಉತ್ತರದ ಕೊನೆಯಲ್ಲಿ ಲೋಂಡದಿಂದ ಕ್ಯಾಸಲ್ ರಾಕ್ ಮುಖಾಂತರ ಗೋವವನ್ನು ಪ್ರವೇಶಿಸುವ ಸು. 17 ಕಿಮೀ ರೈಲುಮಾರ್ಗವಿದೆ. ಇಲ್ಲಿಗೆ ಸಮೀಪವಿರುವ ಇನ್ನೊಂದು ರೈಲುನಿಲ್ದಾಣವೆಂದರೆ ಸುಪದ ಪೂರ್ವಕ್ಕಿರುವ ದಾಂಡೇಲಿಯ ರೈಲುನಿಲ್ದಾಣ. ಇಲ್ಲಿಂದ ಹಳಿಯಾಳ, ಕ್ಯಾಸಲ್‍ರಾಕ್, ದಾಂಡೇಲಿ ಮುಂತಾದ ಕಡೆಗಳಿಗೆ ಸಾರಿಗೆ ವ್ಯವಸ್ಥೆಯಿದೆ.

ಈ ತಾಲ್ಲೂಕಿನ ಮುಖ್ಯಸ್ಥಳಗಳಲ್ಲಿ ಉಳುವಿ (ನೋಡಿ- ಉಳುವಿ) ಒಂದು ಯಾತ್ರಾಸ್ಥಳ. ಕ್ಯಾಸಲ್ ರಾಕ್‍ನಲ್ಲಿ ರೈಲ್ವೆನಿಲ್ದಾಣವಿದ್ದು ಇದು ಬೇಸಗೆಯ ವಿಶ್ರಾಂತಿ ಧಾಮವಾಗಿದೆ.

ಜೋಯಿಡಾ ಒಂದು ಮುಖ್ಯ ಪಟ್ಟಣವೂ ಆಗಿದೆ. ಕಾರವಾರಕ್ಕೆ ಈಶಾನ್ಯದಲ್ಲಿ ಕಾಳಿ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ಪಟ್ಟಣದ ವಾಯವ್ಯಕ್ಕೆ ಕ್ಯಾಸಲ್‍ರಾಕ್ ರೈಲ್ವೆ ನಿಲ್ದಾಣವೂ ಪೂರ್ವಕ್ಕೆ ದಾಂಡೇಲಿ ರೈಲುನಿಲ್ದಾಣವೂ ಇವೆ.

ಈ ಪ್ರದೇಶದಲ್ಲಿ ಹಿಂದೆ ರಾವಣನ ತಂಗಿ ಶೂರ್ಪನಖಿ ವಾಸಮಾಡು ತ್ತಿದ್ದಳೆಂದೂ ಅದರಿಂದಾಗಿ ಈ ಪಟ್ಟಣಕ್ಕೆ ಸುಪ ಎಂಬ ಹೆಸರು ಬಂತೆಂದೂ ಐತಿಹ್ಯ. ಇಲ್ಲಿ ರಾಮಲಿಂಗ ದೇವಾಲಯವಿದೆ. ಊರ ಸಮೀಪ ಕೆಲವು ಬೌದ್ಧಗುಹೆಗಳಿವೆ ಎನ್ನಲಾಗಿದೆ. ಈ ಪಟ್ಟಣ ಸ್ವಾದಿ ರಾಜರ ಆಳಿಕೆಗೆ ಸೇರಿತ್ತೆಂದು ತಿಳಿದುಬರುತ್ತದೆ. (ಎಮ್.ವಿ.)