ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಶ್ರುತ

ವಿಕಿಸೋರ್ಸ್ದಿಂದ

ಸುಶ್ರುತ ಕ್ರಿ.ಪೂ.ಸು. 6-7ನೆಯ ಶತಮಾನ. ಪ್ರಾಚೀನ ಭಾರತದ ಆಯುರ್ವೇದ ವೈದ್ಯ. ವಿಶ್ವಾಮಿತ್ರ ಋಷಿಯ ಮಗ. ವೈದ್ಯಶಾಸ್ತ್ರದ ಅಧಿದೇವತೆಯಾದ ಧನ್ವಂತರಿಯ ಅವತಾರ ರೂಪನೆಂದು ಪರಿಗಣಿ ಸಲ್ಪಟ್ಟಿದ್ದ ಕಾಶೀರಾಜ ದಿವೋದಾಸನಿಂದ ಈ ಶಾಸ್ತ್ರವನ್ನು ಕಲಿತ. ಋಷಿ ಜೀವನ ನಡೆಸಿದ ಸುಶ್ರುತ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸುಶ್ರುತ ಸಂಹಿತೆ ಎಂಬ ಕೃತಿ ರಚಿಸಿದ್ದಾನೆ.

ಪ್ರಕೃತ ಉಪಲಬ್ಧವಿರುವ ಸುಶ್ರುತ ಸಂಹಿತೆ ಬೌದ್ಧಭಿಕ್ಷು ನಾಗಾರ್ಜುನನಿಂದ ಕ್ರಿ.ಶ 2ನೆಯ ಶತಮಾನದಲ್ಲಿ ಪ್ರತಿಸಂಸ್ಕರಿಸಲ್ಪಟ್ಟು ದೆಂದು ವಿದ್ವಾಂಸರ ಮತ. ಮೂಲಸಂಹಿತೆ 5 ಸ್ಥಾನಗಳಿಂದ ಕೂಡಿದ್ದು ಶಸ್ತ್ರಚಿಕಿತ್ಸಾ ವಿಷಯಗಳನ್ನು ಒಳಗೊಂಡಿದೆ. ನೇತ್ರ, ಕರ್ಣ, ನಾಸಾ ಮತ್ತು ಕಾಯರೋಗಗಳ ನಿದಾನ ಹಾಗೂ ಚಿಕಿತ್ಸೆ ತಿಳಿಸುವ ಉತ್ತರತಂತ್ರವನ್ನು ತರುವಾಯದ ಗ್ರಂಥಕರ್ತೃವೊಬ್ಬ ಸೇರಿಸಿರಬಹುದಾಗಿ ತಿಳಿದುಬರುತ್ತದೆ.

ಪ್ರತಿಸಂಸ್ಕಾರದ ವೇಳೆ ಗ್ರಂಥ ಏನೇ ಬದಲಾವಣೆ ಹೊಂದಿದ್ದರೂ ಇದು ಶಸ್ತ್ರ ಚಿಕಿತ್ಸಾ ವಿಧಾನ ತಿಳಿಸುವ ಉತ್ಕøಷ್ಟ ಗ್ರಂಥವಾಗಿ ಉಳಿದಿದೆ. ಯಂತ್ರ ಶಸ್ತ್ರಗಳ ವರ್ಣನೆ, ಶಸ್ತ್ರ ಚಿಕಿತ್ಸೆಯ ವಿವರ, ಪಶ್ಚಾತ್ಕರ್ಮ ಮತ್ತು ತತ್ಸಂಬಂಧಿಯಾದ ಇತರ ಅಧ್ಯಾಯಗಳು ವಿಶದವಾಗಿ ವಿವರಿಸಲ್ಪಟ್ಟಿವೆ.

ಚರಕ ಸಂಹಿತೆಯ ಭೌಗೋಳಿಕ ಕ್ಷೇತ್ರ ಮುಖ್ಯವಾಗಿ ಭಾರತದ ವಾಯವ್ಯ ಪ್ರಾಂತ ಮಾತ್ರ. ಸುಶ್ರುತನಿಗೆ ಇಡೀ ಭಾರತದ ಪರಿಚಯ ವಿದ್ದುದು ಆತನ ಕೃತಿಯಿಂದಲೇ ವೇದ್ಯವಾಗುತ್ತದೆ. ಈ ಕೃತಿಯಲ್ಲಿ ಪೂರ್ವದಲ್ಲಿ ಕಳಿಂಗ ದೇಶದ ಉಲ್ಲೇಖವೂ ಉತ್ತರದಲ್ಲಿ ಕಾಶ್ಮೀರ ಮತ್ತು ಉತ್ತರ ಕುರುಪ್ರಾಂತಗಳ ಉಲ್ಲೇಖವೂ ಬರುತ್ತವೆ. ಹಿಮಾಲಯ, ಸಹ್ಯಾದ್ರಿ, ಮಹೇಂದ್ರಪರ್ವತ, ಮಲಯಾಚಲ, ಶ್ರೀಪರ್ವತ, ದೇವಗಿರಿ, ಸಿಂಧೂನದಿ ಮೊದಲಾದವೂ ಉಲ್ಲೇಖಗೊಂಡಿವೆ. ಚರಕ ಸಂಹಿತೆಯಲ್ಲಿ ಇಷ್ಟು ವಿಸ್ತøತ ಭೂಗೋಳದ ಪರಿಚಯವಿಲ್ಲ.

ಶ್ರೀಪರ್ವತ, ಸಹ್ಯಾದ್ರಿ, ದೇವಗಿರಿ, ಮಲಯಾಚಲ ಮೊದಲಾದವನ್ನು ಸುಶ್ರುತ ವಿಶೇಷವಾಗಿ ಹೇಳಿದ್ದಾನೆ. ದಕ್ಷಿಣಪಥವೆಂಬ ಹೆಸರೂ ಕಂಡುಬರುತ್ತದೆ. ಈತ ದಕ್ಷಿಣ ಭಾರತದ ಅನೇಕ ಶಬ್ದಗಳನ್ನು ಬಳಸಿದ್ದಾನೆ. ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ತುವರಕವನ್ನು ವಿವರಿಸಿದ್ದಾನೆ.

ಸುಶ್ರುತ ಸಂಹಿತೆಯಲ್ಲಿ 120 ಅಧ್ಯಾಯಗಳಿವೆ (ಉತ್ತರತಂತ್ರ ಹೊರತಾಗಿ). ಈ ಸಂಖ್ಯೆ ಮನುಷ್ಯನ ಆಯುರ್ಮಾನ ಸೂಚಕವಾಗಿದೆ. ಸೂತ್ರ ಸ್ಥಾನದಲ್ಲಿ 46, ನಿದಾನ ಸ್ಥಾನದಲ್ಲಿ 16, ಶಾರೀರ ಸ್ಥಾನದಲ್ಲಿ 10, ಚಿಕಿತ್ಸಾ ಸ್ಥಾನದಲ್ಲಿ 40, ಕಲ್ಪದಲ್ಲಿ 8 ಮತ್ತು ಉತ್ತರ ಸ್ಥಾನದಲ್ಲಿ 66. ಪ್ರಮುಖ ಶಲ್ಯ ತಂತ್ರ ವಿಷಯಗಳು ಮೊದಲ 5 ಸ್ಥಾನಗಳಲ್ಲಿ ವಿವರಿಸಲ್ಪಟ್ಟಿವೆ. ಸುಶ್ರುತನ ಕಾಲದ ಅಧ್ಯಯನ ಉಪನಿಷತ್ತುಗಳಲ್ಲಿದ್ದಂತೆ ಅಂತೇ ವಾಸೀ ರೂಪದ್ದಾಗಿತ್ತು. ತರಬೇತಿಯಲ್ಲಿ ಉಪನ್ಯಾಸ, ಪ್ರತ್ಯಕ್ಷ ಮತ್ತು ಪ್ರಾಯೋಗಿಕ ವಿಧಾನಗಳಿಗೆ ಮಹತ್ತ್ವ ಕೊಟ್ಟಿರುವುದು ಈತನ ವೈಶಿಷ್ಟ್ಯವೆಂದು ಹೇಳಬಹುದು. ಈತ ಸಾಂಖ್ಯದ 25 ತತ್ತ್ವಗಳನ್ನು ಅಂಗೀಕರಿಸಿದ್ದರೂ ಕೆಲವು ವ್ಯತ್ಯಾಸಗಳನ್ನೂ ಇದರಲ್ಲಿ ಮಾಡಿಕೊಂಡಿ ದ್ದಾನೆ. ಈತನ ಪ್ರಕಾರ ಇಂದ್ರಿಯಗಳು ಪಂಚ ಭೌತಿಕಗಳು. ಸಾಂಖ್ಯದಲ್ಲಿ ಇಂದ್ರಿಯಗಳು ಅಹಂಕಾರ ತತ್ತ್ವಜನ್ಯಗಳು. ಈತನ ಕಾಲದಲ್ಲಿ ಸೃಷ್ಟಿಯ ಉತ್ಪತ್ತಿ, ಲಯಕ್ಕೆ ಸಂಬಂಧಿಸಿದಂತೆ ವಿವಿಧ ವಾದಗಳು ಪ್ರಚಲಿತವಿದ್ದು ವೈದ್ಯಶಾಸ್ತ್ರದಲ್ಲಿ ಈ ಎಲ್ಲ ವಾದಗಳನ್ನು ಮಾನ್ಯ ಮಾಡಿರುವುದು ಸ್ವಭಾವಂ ಈಶ್ವರಂ ಕಾಲಂ ಯದೃಚ್ಛಾಂ ನಿಯತಿಂ ತಥಾ | ಪರಿಣಾಮಂ ಚ ಮಾನ್ಯಂತೇ ಪ್ರಕೃತಿಂ ಪೃಥುದರ್ಶಿನಃ|| (ವೈದ್ಯಕೇತು) ಎಂಬುದರಿಂದ ವ್ಯಕ್ತವಾಗುತ್ತದೆ.

ಶಲ್ಯತಂತ್ರಕ್ಕೆ ಕ್ರಿಯಾತ್ಮಕ e್ಞÁನದೊಡನೆ ಹೆಚ್ಚು ಸಂಬಂಧ ಇರುವುದ ರಿಂದ ಕ್ರಿಯಾತ್ಮಕ ಜ್ಞಾನದ ಶಿಕ್ಷಣ ಕೊಡಲು ಯೋಗ್ಯಾಸೂತ್ರೀಯ ಅಧ್ಯಾಯ ಸುಶ್ರುತದಲ್ಲಿ ಹೇಳಲ್ಪಟ್ಟಿದೆ. ಇದರಲ್ಲಿ ಯಾವ ಕರ್ಮವನ್ನು ಯಾವ ವಸ್ತುವಿನ ಮೇಲೆ ಅಭ್ಯಾಸ ಮಾಡಬೇಕೆಂಬುದರ ವಿಶೇಷ ಉಲ್ಲೇಖವಿದೆ. ಹೇಗೆಂದರೆ ಕೂಷ್ಮಾಂಡ, ಸೌತೆ, ಕಲ್ಲಂಗಡಿಹಣ್ಣು ಮೊದಲಾದ ವಸ್ತುಗಳಲ್ಲಿ ಛೇದನಕರ್ಮದ ಅಭ್ಯಾಸ ಮಾಡಬೇಕು. ಊಧ್ರ್ವ ಛೇದನ, ಅಧೋ ಛೇದನಗಳನ್ನೂ ಇವೇ ವಸ್ತುಗಳ ಮೇಲೆ ಅಭ್ಯಾಸ ಮಾಡಬೇಕು. ಜಲ, ಕೆಸರನ್ನು ತುಂಬಿದ ಬಸ್ತಿ, ಚರ್ಮದ ಚೀಲಾದಿಗಳ ಮೇಲೆ ಭೇದನ ಕರ್ಮವನ್ನೂ ರೋಮವುಳ್ಳ ತೊಗಲಿನ ಮೇಲೆ ಲೇಖನ ಕರ್ಮವನ್ನೂ ಮೃತ ಪಶುಗಳ ಶಿರ ಹಾಗೂ ಕಮಲನಾಳದ ಮೇಲೆ ವ್ಯಧನ ಕರ್ಮವನ್ನೂ ಮಾಡಬೇಕು. ಕುಟ್ಟೆಹುಳು ತಿಂದಿರುವ ಮರದ ರಂಧ್ರದಲ್ಲಿ, ಒಣ ಸೋರೆಕಾಯಿ ಮುಖದಲ್ಲಿ ಏಷಣಕರ್ಮವನ್ನೂ ಹಲಸು, ಬಿಂಬೀ, ಬಿಲ್ವಫಲಗಳ ಮಜ್ಜಾ ಮತ್ತು ಮೃತ ಪಶುಗಳ ದಂತಗಳ ಮೇಲೆ ಆಹಾರ್ಯ ಕರ್ಮವನ್ನೂ ಮಾಡಬೇಕು. ವಸ್ತ್ರದ ಎರಡು ಅಂಚುಗಳ ಮೇಲೆಯೂ ಕೋಮಲ ತ್ವಚೆಯ ಮೇಲೆಯೂ ಸೀವನ ಕಾರ್ಯದ ಅಭ್ಯಾಸ ಮಾಡಬೇಕು. ಮಣ್ಣು, ಮರಗಳಿಂದ ಮಾಡಿದ ಬೊಂಬೆಗಳ ಅಂಗ, ಪ್ರತ್ಯಂಗಗಳ ಮೇಲೆ ಬಂಧನಗಳ ಅಭ್ಯಾಸಮಾಡಬೇಕು. ಮೃದುಮಾಂಸದ ತುಂಡುಗಳ ಮೇಲೆ ಅಗ್ನಿ ಮತ್ತು ಕ್ಷೌರಕರ್ಮದ ಅಭ್ಯಾಸಮಾಡಬೇಕು.

ಶವಚ್ಛೇದನ : ಶವಚ್ಛೇದನ ವಿಧಾನದ ಬಗ್ಗೆ ದೊರೆಯುವ ವಿವರಣೆ ಅತಿ ಪ್ರಾಚೀನವಾದ್ದರಿಂದ ಸುಶ್ರುತನನ್ನು ಶರೀರರಚನಾಶಾಸ್ತ್ರದ ಪಿತಾಮಹನೆಂದು ಹೇಳಬಹುದು. ಚರ್ಮ ಮತ್ತು ಪದರ, ಮೂಳೆ ಮತ್ತು ಸಂಧಿ, ಮಾಂಸಪೇಶಿ ಮತ್ತು ರಕ್ತನಾಳ ಇವನ್ನು ವಿಸ್ತಾರ ವಾಗಿಯೂ ಸೂಕ್ಷ್ಮವಾಗಿಯೂ ವಿವರಿಸಿದ್ದಾನೆ.

ಶವಚ್ಛೇದನ ಅಭ್ಯಾಸದ ಉಪಾಯವನ್ನು ಹೀಗೆ ತಿಳಿಸಿದ್ದಾನೆ : ಶಲ್ಯಶಾಸ್ತ್ರದ ಸಂಪೂರ್ಣಜ್ಞಾನವನ್ನು ಸಂಶಯಾತೀತವಾಗಿ ತಿಳಿಯಲಿಚ್ಛಿಸುವ ವಿದ್ಯಾರ್ಥಿ ಮೃತಶರೀರ ಶೋಧಿಸಿ ಅಂಗಪ್ರತ್ಯಂಗಗಳ ನಿಶ್ಚಯe್ಞÁನ ಪಡೆಯುವುದು ಆವಶ್ಯಕ. ಶಾಸ್ತ್ರe್ಞÁನ ಮತ್ತು ಶಾಸ್ತ್ರೋಕ್ತ ವಿಷಯಗಳ ಪ್ರತ್ಯಕ್ಷ e್ಞÁನ - ಹೀಗೆ ಎರಡೂ ರೀತಿಯಿಂದ ತಿಳಿಯುವುದು e್ಞÁನವೃದ್ಧಿ ಕಾರಣ. ಆದ್ದರಿಂದ ಸಂಪೂರ್ಣ ಅಂಗವುಳ್ಳ ವಿಷದಿಂದ ಮೃತವಾಗಿರದ, ಜೀರ್ಣ ವ್ಯಾಧಿಯಿಂದ ಸತ್ತಿರದ 100ವರ್ಷಕ್ಕಿಂತ ಕಡಮೆ ಆಯುಷ್ಯದ ವ್ಯಕ್ತಿಯ ಶವದಿಂದ ಅಂತ್ರ ಮತ್ತು ಮಲವನ್ನು ತೆಗೆದುಹಾಕಿ ಶರೀರವನ್ನು ದರ್ಭೆ, ಮರದ ತೊಗಟೆ, ಸೆಣಬು ಮೊದಲಾದವುಗಳಿಂದ ಸುತ್ತಿ ಏಕಾಂತ ಸ್ಥಳದಲ್ಲಿ ಪಂಜರದಲ್ಲಿ ಹರಿಯುವ ನದಿಯ ನೀರಿನಲ್ಲಿ ಮುಳುಗಿಸಿ ಶಿಥಿಲಗೊಳಿಸಬೇಕು. ಸಮ್ಯಕ್ ಮೃದು ಅಥವಾ ಶಿಥಿಲವಾದ ಅನಂತರ ಶವವನ್ನು ಹೊರತೆಗೆದು ಲಾಮಂಚ, ಕೇಶ, ಬಿದಿರುಗಳಿಂದ ಮಾಡಲ್ಪಟ್ಟ ಯಾವುದಾದರೂ ಒಂದರ ಕೂರ್ಚದಿಂದ ಏಳುದಿನ ಪರ್ಯಂತ ನಿಧಾನವಾಗಿ ಘರ್ಷಣೆ ಮಾಡುತ್ತ ತ್ವಚದಿಂದ ಪ್ರಾರಂಭಿಸಿ ಅಭ್ಯಂತರ ಹಾಗೂ ಬಾಹ್ಯದ ಪ್ರತ್ಯೇಕ ಅಂಗ ಪ್ರತ್ಯಂಗಗಳನ್ನು ನೋಡಿ ತಿಳಿಯಬೇಕು.

ವ್ರಣಿತಾಗಾರ : ರೋಗಿಗೆ ಸರ್ವ ಪ್ರಥಮ ವಸತಿಯೊಂದು ಅಗತ್ಯ. ಪೀಡಾರಹಿತ, ಪರ್ಯಾಪ್ತ ಉದ್ದ ಅಗಲ ಇರುವ ಸುಂದರ ದಿಂಬಿನಿಂದ ಕೂಡಿದ ಶಯ್ಯೆ ಇರಬೇಕು. ತಲೆಯ ಭಾಗ ಪೂರ್ವದ ಕಡೆಗೆ ಇರಬೇಕು. ಇದರ ಮೇಲೆ ಶಸ್ತ್ರವನ್ನಿಟ್ಟಿರಬೇಕು. ಶಯ್ಯೆಯ ಹತ್ತಿರ ರೋಗಿಯ ಮಿತ್ರರು ಹೊಸ ಹೊಸ ಹಾಗೂ ಮನೋಹರ ವಿಚಾರಗಳನ್ನು ಮಾತಾಡುತ್ತ ರೋಗಿಯ ವ್ರಣದ ತಾಪವನ್ನು ಕಡಿಮೆ ಮಾಡುತ್ತ ರೋಗಿಗೆ ಸಾಂತ್ವನ ನೀಡುತ್ತಿರಬೇಕು. ರೋಗಿಯ ಹತ್ತಿರ ಸ್ತ್ರೀಯರು (ಸ್ತ್ರೀ ಪರಿಚಾರಿಕೆಯರು) ಹೋಗುವುದನ್ನು ಸುಶ್ರುತದಲ್ಲಿ ನಿಷೇಧಿಸಲಾಗಿದೆ. ವಿಶೇಷವಾಗಿ ಗಮ್ಯ ಸ್ತ್ರೀಯರ ದರ್ಶನ, ಅವರೊಡನೆ ಮಾತು ಮತ್ತು ಅವರ ಸ್ಪರ್ಶವನ್ನು ಸರ್ವಥಾ ಬಿಡಬೇಕೆಂದು ಆದೇಶಿಸಿದೆ.

ರೋಗಿಗೆ ಆಹಾರ ವಿಧಾನವನ್ನು ಹೇಳಿ ಅವನಿಗೆ ಆದಿದೈವಿಕ ಚಿಕಿತ್ಸೆಯನ್ನೂ ಹೇಳಿದೆ. ಇದು ಮನಸ್ಸು ಮತ್ತು ಶರೀರದ ಪಾವಿತ್ರ್ಯದೊಡನೆ ಸಂಬಂಧ ಹೊಂದಿರುತ್ತದೆ. ರೋಗಿ ನಖ, ಕೇಶಗಳನ್ನು ಕತ್ತರಿಸಿ ಶ್ವೇತವಸ್ತ್ರ ಧರಿಸಿರಬೇಕು. ಮನಸ್ಸು ಶಾಂತವಾಗಿದ್ದು ಮಂಗಳ, ದೇವತಾ, ಬ್ರಾಹ್ಮಣ ಮತ್ತು ಗುರುತತ್ಪರವಾಗಿರಬೇಕು. ಶುಚಿತ್ವ ಕ್ರಿಮಿ ಸಂಕ್ರಮಣವನ್ನು ತಡೆಯಲೂ ಮಂಗಳ ಮತ್ತು ದೇವತಾ ತತ್ಪರತೆ ಆತ್ಮಬಲವೃದ್ಧ್ಯರ್ಥವೂ ಆಗಿರುತ್ತವೆ.

ಯಂತ್ರ ಶಸ್ತ್ರ : ಶಸ್ತ್ರ ಕರ್ಮೋಪಯೋಗಿಯಾದ ಸಾಧನಗಳನ್ನು ಯಂತ್ರ, ಶಸ್ತ್ರ, ಕ್ಷಾರ, ಅಗ್ನಿ ಮತ್ತು ಜಲೌಕ ಎಂಬ ರೂಪಗಳಲ್ಲಿ 4 ಅಧ್ಯಾಯಗಳಲ್ಲಿ ವರ್ಣಿಸಿರುದ್ದಾನೆ. ಯಂತ್ರ ಮತ್ತು ಶಸ್ತ್ರಗಳನ್ನು ಉಪಯೋಗಕ್ಕೆ ಅನುಗುಣವಾಗಿ ರಚಿಸಿ ಅವುಗಳ ಆಕಾರಕ್ಕೆ ತಕ್ಕಂತೆ ಪ್ರಾಣಿ ಪಕ್ಷಿಗಳ ಹೆಸರನ್ನು ಕೊಟ್ಟಿರುವುದು ಕಂಡುಬರುತ್ತದೆ. ಈತ 101 ಯಂತ್ರಗಳನ್ನು ಹೇಳಿದ್ದು ಅವುಗಳ ಪೈಕಿ ಹಸ್ತವನ್ನು ಪ್ರಧಾನ ಯಂತ್ರವಾಗಿ ಪರಿಗಣಿಸಿದ್ದಾನೆ. ಮನಸ್ಸು ಮತ್ತು ಶರೀರದಲ್ಲಿ ಯಾವುದು ಕಷ್ಟ ಉಂಟುಮಾಡುತ್ತದೋ ಅದನ್ನು ಶಲ್ಯವೆಂದು ಕರೆದಿದ್ದಾನೆ. ಈತನ ಮತದಂತೆ ಶೋಕ ಮತ್ತು ಚಿಂತೆ ಕೂಡ ಶಲ್ಯವಾಗಿರುತ್ತವೆ. ಈ ಶಲ್ಯಗಳನ್ನು ನಿವಾರಿಸಲು ಯಂತ್ರಗಳಿವೆ.

ಸ್ವಸ್ತಿಕ, ಸಂದಂಶ, ಕಾಲ, ನಾಡೀಶಲಾಕಾ ಮತ್ತು ಉಪಯಂತ್ರ ಹೀಗೆ ಯಂತ್ರಗಳು 6 ಪ್ರಕಾರ. ಯಂತ್ರ ಕರ್ಮ 24 ವಿಧ. ಆದರೆ ಚಿಕಿತ್ಸಕ ತನ್ನ ಬುದ್ಧಿಕೌಶಲದಿಂದ ಹೊಸ ಕರ್ಮಗಳನ್ನು ಯೋಚಿಸಿ ಕೊಳ್ಳಲು ಅವಕಾಶ ಉಂಟು. ಯಂತ್ರಗಳಲ್ಲಿ ಅತಿಸ್ಥೂಲಾದಿ 12 ದೋಷಗಳಿರುತ್ತವೆ. ಶಸ್ತ್ರಗಳು 20. ಇವು ಸುಗ್ರಾಹ್ಯಾದಿ ಗುಣಗಳಿಂದ ಕೂಡಿರಬೇಕು. ಬೀಭತ್ಸ, ವಕ್ರಾದಿ ದೋಷರಹಿತವಾಗಿರಬೇಕು. ಶಸ್ತ್ರಧಾರೆ 4 ಪ್ರಕಾರವಾಗಿರುತ್ತದೆ. ಭೇದನ ಕರ್ಮೋಪಯೋಗಿ ಶಸ್ತ್ರಧಾರೆ ಮಸೂರ ಪತ್ರದಷ್ಟು ದಪ್ಪವೂ ಲೇಖನ ಕರ್ಮೋಪಯೋಗಿ ಶಸ್ತ್ರಧಾರೆ ಅರೆಮಸೂರು ಪತ್ರದಷ್ಟು ದಪ್ಪವೂ ಛೇದನ (ವ್ಯಧನ) ಮತ್ತು ವಿಸ್ರಾವಣ ಶಸ್ತ್ರಧಾರೆ ಕೂದಲಿನಷ್ಟು ದಪ್ಪವೂ ಛೇದನ ಶಸ್ತ್ರಗಳ ಧಾರೆ ಅರ್ಧ ಕೂದಲಿನಷ್ಟು ದಪ್ಪವೂ ಇರಬೇಕು. ಈ ಶಸ್ತ್ರಗಳ ಪಾಯನ ಮೂರು ಪ್ರಕಾರವಾಗಿರುತ್ತದೆ : ಕ್ಷಾರ, ಜಲ ಮತ್ತು ತೈಲ ಪಾಯನ. ಶಸ್ತ್ರಗಳನ್ನು ಹರಿತಮಾಡಲು ಸ್ನಿಗ್ಧ ಶಿಲೆಯನ್ನು ಹೇಳಿರುದ್ದಾನೆ. ಇದು ಮಾಷದಂತೆ ಕೃಷ್ಣವರ್ಣವಿರುತ್ತದೆ. ಶಸ್ತ್ರಧಾರೆಯನ್ನು ಸುರಕ್ಷಿತವಾಗಿಡಲು ಕೋಶ ಕೂಡ ಹೇಳಲ್ಪಟ್ಟಿದೆ.

ಶಸ್ತ್ರದ ತೀಕ್ಷ್ಣತೆಯನ್ನು ತಿಳಿಯುವಿಕೆ : ಚೆನ್ನಾಗಿ ಹರಿತಗೊಳಿಸಿದ ಶಸ್ತ್ರ ರೋಮಗಳನ್ನು ಕತ್ತರಿಸುವಂತಿರಬೇಕು. ಇಂಥ ಶಸ್ತ್ರವನ್ನು ಉಚಿತ ರೂಪದಲ್ಲಿ ಗ್ರಹಣಮಾಡಿ ಶಸ್ತ್ರಕರ್ಮದಲ್ಲಿ ಬಳಸಬೇಕು. ಇವನ್ನು ಉತ್ತಮ ಲೋಹದಿಂದ ಮಾಡಿರಬೇಕು.

ಕ್ಷಾರವನ್ನು ತಯಾರಿಸುವುದು ಮತ್ತು ಹಚ್ಚುವುದು, ಅಗ್ನಿಕರ್ಮ ಮಾಡುವುದು, ಜಲೌಕಾವಚರಣ ಮತ್ತು ಜಲೌಕಗಳ ರಕ್ಷಣಾದಿ ವಿಷಯದಲ್ಲಿ ಪೂರ್ಣ ವಿವರಣೆ ಗ್ರಂಥದಲ್ಲಿ ಕೊಡಲ್ಪಟ್ಟಿದೆ. ಇದರ ಅನಂತರ ಕರ್ಣಬಂಧನದ ಉಲ್ಲೇಖವಿದೆ. ಈ ವಿಷಯ ಚಿಕಿತ್ಸಾಸ್ಥಾನ ದಲ್ಲೂ ಬಂದಿದೆ. ಆ ಕಾಲದಲ್ಲಿ ಕರ್ಣವ್ಯಧನ ಮತ್ತು ಕರ್ಣಪಾಲಿಯನ್ನು ದೊಡ್ಡದು ಮಾಡುವ ಪ್ರತೀತಿ ಹೆಚ್ಚಿದ್ದುದಾಗಿ ವ್ಯಕ್ತವಾಗುತ್ತದೆ. ಕರ್ಣಪಾಲಿಯನ್ನು ದೊಡ್ಡದು ಮಾಡಲು ಇದನ್ನು ವ್ಯಧನಮಾಡಿ ರಂಧ್ರದಲ್ಲಿ ವರ್ಧನಕ ಉಂಗುರಗಳನ್ನು ಧರಿಸುತ್ತಿದ್ದರು. ಈ ಉಂಗುರ ಗಳಿಂದ ಕೆಲವು ಸಾರಿ ಪಾಲಿ ಕತ್ತರಿಸಿ ಹೋಗುತ್ತಿತ್ತು. ಇದನ್ನು ಜೋಡಿಸಲು 15 ವಿಧವಾದ ಬಂಧನ ಹಾಗೂ ತೈಲಾದಿಗಳನ್ನು ಹೇಳಿದ್ದಾನೆ. ಕರ್ಣಪಾಲಿಯನ್ನು ದೊಡ್ಡದು ಮಾಡುವ ವಿಸ್ತøತ ಉಲ್ಲೇಖ, ಇದರಲ್ಲಿ ಉಂಟಾಗುವ ಉಪದ್ರವ, ಇವುಗಳಿಗೆ ಪ್ರತೀಕಾರ (ಚಿಕಿತ್ಸೆ) ಸುಶ್ರುತದಲ್ಲಿ ಇರುವಷ್ಟು ವಿಸ್ತಾರವಾಗಿ ಸುಶ್ರುತ ಪೂರ್ವದ ಮತ್ತು ಅನಂತರದ ಸಂಹಿತೆಗಳಲ್ಲಿ ಇಲ್ಲ.

ಅಭಿಘಟನ ಶಲ್ಯ (ಪ್ಲಾಸ್ಟಿಕ್ ಸರ್ಜರಿ) : ಈ ಪ್ರಸಂಗದಲ್ಲಿ ಅನ್ಯಸ್ಥಾನದಿಂದ ಮಾಂಸವನ್ನು ಕತ್ತರಿಸಿ ಅಥವಾ ಕಪೋಲದ ಮಾಂಸದಿಂದ ನಾಸಾಬಂಧ ಮಾಡುವ ಉಲ್ಲೇಖವಿದೆ. ನಾಸಾಸಂಧಾನ ವಿಧಿಯ ಅನುಸಾರ ಓಷ್ಠ ಸಂಧಾನ ವಿಧಿಯ ಉಲ್ಲೇಖವೂ ಇದೆ. ಕರ್ಣವ್ಯಧನದಂತೆ ನಾಸಿಕ ವ್ಯಧನ ಮಾಡಿ ಇದರಲ್ಲಿ ಆಭರಣಗಳನ್ನು ಧರಿಸುತ್ತಿದ್ದರು. ಬಹುಶಃ ಓಷ್ಠದಲ್ಲೂ ಆಭರಣ ಧರಿಸುತ್ತಿದ್ದಿರಬಹುದು. ಜನ್ಮದಿಂದ ಅಥವಾ ಯಾವುದೇ ಕಾರಣದಿಂದ ಛೇದನ ಉಂಟಾದರೆ ಅದನ್ನು ಜೋಡಿಸುವ ವಿಧಿಯ ಉಲ್ಲೇಖವಿದೆ. ಚಿಕಿತ್ಸಾ ಶಾಸ್ತ್ರದಲ್ಲಿ ಸುಶ್ರುತ ಸಂಹಿತೆಯಲ್ಲೇ ಸರ್ವಪ್ರಥಮವಾಗಿ ಪ್ಲಾಸ್ಟಿಕ್ ಸರ್ಜರಿ ಸಂಬಂಧವಾದ ಲಿಖಿತ ಪ್ರಮಾಣ ದೊರೆಯುತ್ತದೆ. ಪ್ಲಾಸ್ಟಿಕ್ ಸರ್ಜರಿ ಸುಶ್ರುತನ ಮಹತ್ತ್ವದ ಕೊಡುಗೆಯಾಗಿದ್ದು ಪ್ರಪಂಚ ಈ ವಿಷಯದಲ್ಲಿ ಈತನಿಗೆ ಋಣಿಯಾಗಿದೆ.

ಸುಶ್ರುತ ಸಂಹಿತೆಯಲ್ಲಿ ಅಶ್ಮರೀ, ಆರ್ಶ, ಉದರರೋಗ, ಮೂಢಗರ್ಭ ಹಾಗೂ ವ್ರಣಗಳ ಉಪಕ್ರಮವೇ ಮೊದಲಾದ ಶಸ್ತ್ರಕರ್ಮ ಸಂಬಂಧೀ ವಿವರಣೆ ಸ್ಪಷ್ಟ ರೂಪದಲ್ಲಿದೆ. ಭಯಂಕರ ಶಲ್ಯಕರ್ಮದಲ್ಲಿ ಅಂದರೆ ಎಲ್ಲಿ ಪ್ರಾಣರಕ್ಷಣೆಯ ಸಂಶಯವಿರುತ್ತದೋ ಅಲ್ಲಿ ರೋಗಿಯ ಸಂಬಂಧಿಕರ ಒಪ್ಪಿಗೆ ಪಡೆದು ಹಾಗೂ ಬೇರೆಯವರಿಗೆ (ರಾಜನಿಗೆ) ತಿಳಿಸಿ ಶಸ್ತ್ರಕರ್ಮ ಮಾಡಬೇಕು. ಶಸ್ತ್ರಕರ್ಮದ ಪೂರ್ವಕರ್ಮ, ಪ್ರಧಾನಕರ್ಮ ಮತ್ತು ಪಶ್ಚಾತ್ಕರ್ಮಗಳ ಸ್ಪಷ್ಟ ನಿರೂಪಣೆ ಇದೆ. ಕಲ್ಪಸ್ಥಾನದಲ್ಲಿ ವಿಷದಿಂದ ರಾಜರ ರಕ್ಷಣೆಯನ್ನು ಹೇಗೆ ಮಾಡಬೇಕು, ವಿಷ ಪ್ರಯೋಗ ಯಾವ ಯಾವ ಸ್ಥಾನಗಳಲ್ಲಿ ಮತ್ತು ಯಾವ ಯಾವ ರೀತಿ ಆಗುತ್ತದೆ ಎಂಬ ಪೂರ್ಣ ವಿವರಣೆ ಕಂಡುಬರುತ್ತದೆ. ಅಡುಗೆ ಮನೆಯ ವ್ಯವಸ್ಥೆ, ಆಹಾರ ಪರೀಕ್ಷೆ, ಧೂಪ, ವಾಯು, ಮಾರ್ಗ, ಜಲ, ವಸ್ತ್ರ, ಮಾಲಾ, ಪಾದುಕೆ, ಬಾಚಣಿಗೆ ಮೊದಲಾದವುಗಳಲ್ಲಿ ವಿಷ ಸೇರಿದರೆ ಇದನ್ನು ಹೇಗೆ ಶುದ್ಧಿ ಮಾಡಬೇಕು ಇವೆಲ್ಲ ವಿಷಯಗಳೂ ಇವೆ. ಈ ಪ್ರಕರಣದಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ವಾಯು ಮಂಡಲದಲ್ಲಿ ಯಾವಾಗ ವಿಷ ಸಂಚಾರವಾಗುತ್ತದೋ ಆಗ ದುಂದುಭಿಯ ಮೇಲೆ ವಿಷನಾಶಕ ಔಷಧಿಗಳ (ಅಗದ) ಲೇಪಮಾಡಿ ಇದನ್ನು ಬಾರಿಸಬೇಕು. ಹೀಗೆ ಬಾರಿಸುವುದರಿಂದ ಉಂಟಾದ ಶಬ್ದ ವಾಯುವಿನಲ್ಲಿ ಗತಿಯನ್ನುಂಟುಮಾಡುತ್ತದೆ. ಅದರಿಂದ ವಾಯುವಿನ ವಿಷ ನಷ್ಟವಾಗುತ್ತದೆ. ಎಷ್ಟು ದೂರ ಈ ಶಬ್ದ ಪ್ರಸಾರವಾಗುತ್ತದೋ ಅಷ್ಟು ದೂರ ವಿಷ ನಷ್ಟವಾಗುತ್ತದೆ.

ಸುಶ್ರುತ ಸಂಹಿತೆಯಲ್ಲಿ ಮೊದಲ ಬಾರಿಗೆ ಗ್ರಹಗಳ ಹೆಸರು, ಅವುಗಳ ಉತ್ಪತ್ತಿ ಹಾಗೂ ತತ್ಸಂಬಂಧಿಯಾದ ಇತರ ಅಂಶಗಳು ವ್ಯಕ್ತವಾಗಿವೆ. ಗ್ರಹಶಾಂತಿಗಾಗಿ ಬಲಿ, ಚತುಷ್ಪಥದಲ್ಲಿ ಸ್ನಾನ ಮೊದಲಾದ ಕರ್ಮಗಳು ಹೇಳಲ್ಪಟ್ಟಿವೆ. ಭಿನ್ನ ಭಿನ್ನ ಗ್ರಹಗಳ ಪೂಜೆ ವರ್ಣಿಸಲ್ಪಟ್ಟಿದೆ. ಚರಕ ಸಂಹಿತೆಯಲ್ಲಿ ಪೂತನಾ ಗ್ರಹದ ಹೆಸರಿದೆ; ಆದರೆ ಸುಶ್ರುತ ಸಂಹಿತೆಯಲ್ಲಿ ಪೂತನಾ, ಅಂಧಪೂತನಾ, ಶೀತ ಪೂತನಾ ಎಂಬ ಮೂರು ಹೆಸರುಗಳಿವೆ. ಗ್ರಹಗಳಲ್ಲದೆ ಅಮಾನುಷೋಪಸರ್ಗ ಪ್ರತಿಷೇಧ ಅಧ್ಯಾಯದಲ್ಲಿ ನಿಶಾಚರರ ಸಂಬಂಧದಲ್ಲಿ ವಿಶೇಷ ಉಲ್ಲೇಖವಿದೆ. ಇದರಲ್ಲಿ ಅದೃಶ್ಯ ವಸ್ತುವಿನ ಭವಿಷ್ಯe್ಞÁನ, ಅದರ ಅಸ್ಥಿರತೆ ಕುರಿತು ಹೇಳಲ್ಪಟ್ಟಿದೆ. ಮನುಷ್ಯರಿಗಿಂತ ಅಧಿಕ ಕ್ರಿಯೆ ಮತ್ತು ಶಕ್ತಿ ಯಾವ ರೋಗಿಯಲ್ಲಿ ಕಂಡುಬರುತ್ತದೋ ಅವನನ್ನು ಗ್ರಹಾಕ್ರಾಂತನೆಂದು ತಿಳಿಯಬೇಕೆಂದು ಹೇಳಿದೆ. ಹೀಗೆ ಗ್ರಹe್ಞÁನ ಮೊತ್ತಮೊದಲಿಗೆ ಸುಶ್ರುತ ಸಂಹಿತೆಯಲ್ಲಿ ದೊರೆಯುತ್ತದೆ. ಸುಮಾರು ಇದೇ ಕಾಲದ ಕಾಶ್ಯಪ ಸಂಹಿತೆಯಲ್ಲಿಯೂ ಗ್ರಹವಿe್ಞÁನದ ವಿಷಯ ವಿಸ್ತಾರವಾಗಿ ದೊರೆಯುತ್ತದೆ.

ಸುಶ್ರುತ ಸಂಹಿತೆ ಪ್ರಧಾನವಾಗಿ ಶಲ್ಯತಂತ್ರ ಸಂಬಂಧಿಯಾಗಿದೆ. ಶಲ್ಯ ಚಿಕಿತ್ಸೆಯಲ್ಲಿ ಜೀವಾಣು ಒಂದು ಮುಖ್ಯ ಪದಾರ್ಥವಾಗಿದ್ದು ಸುಶ್ರುತ ಇದನ್ನು ನಿಶಾಚರ ರೂಪದಲ್ಲಿ ಹೆಸರಿಸಿದ್ದಾನೆ. ಇದರ ಕಾರ್ಯ ಸರಿಯಾಗಿ ತಿಳಿಯದ ಕಾರಣ ಮತ್ತು ಇದರ ಪ್ರತ್ಯಕ್ಷ e್ಞÁನವಾಗದ ಕಾರಣ ಇದನ್ನು ಗ್ರಹ ಹಾಗೂ ದೇವತೆಗಳೊಡನೆ ಸಂಬಂಧಿಸಲಾಗಿದೆ. ಎಲ್ಲಿ ವಿಚಿತ್ರವೂ ಮನುಷ್ಯನಿಗಿಂತ ಅಧಿಕ ಪರಾಕ್ರಮವೂ ಕಂಡು ಬರುತ್ತದೋ ಅಲ್ಲಿ ದೇವತಾ ಅಥವಾ ಗ್ರಹಗಳ ಸಂಬಂಧವಿರುತ್ತದೆಂದು ಹೇಳಬಹುದು.

ಸುಶ್ರುತ ಸಂಹಿತೆಗೆ ಜೇಜ್ಜಟ, ಗಯದಾನ (ಪಂಜಿಕಾ ಅಥವಾ ನ್ಯಾಯ ಚಂದ್ರಿಕಾ), ಡಲ್ಹಣರು ಟೀಕೆ ಬರೆದಿದ್ದಾರೆ. ಡಲ್ಹಣಕೃತ ನಿಬಂಧ ಸಂಗ್ರಹ ಪ್ರಸಿದ್ಧವಾಗಿದ್ದು, ಸುಶ್ರುತ ಸಂಹಿತೆಗಿರುವ ಸಂಪೂರ್ಣ ಟೀಕೆ ಯಾಗಿದೆ. ಇದು ಸರಳವೂ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವೂ ಆದ ಟೀಕೆ. ಇದನ್ನು ಎನ್.ಎಲ್. ಭಟ್ಟಾಚಾರ್ಯ ಮತ್ತು ಎಮ್.ಆರ್.ಭಟ್ ಕನ್ನಡಕ್ಕೆ ಅನುವಾದಿಸಿದ್ದಾರೆ. (ಎನ್.ಎ.ಆರ್.)