ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೆಲ್ಯುಲೋಸ್

ವಿಕಿಸೋರ್ಸ್ದಿಂದ

ಸೆಲ್ಯುಲೋಸ್ ಸಸ್ಯ ಕೋಶಭಿತ್ತಿಯ ಸಂರಚನ-ಘಟಕ; ಕನಿಷ್ಠ 3000 ಗ್ಲೂಕೋಸ್ ಘಟಕಗಳ ಸಂಕೀರ್ಣ ಕಾರ್ಬೊಹೈಡ್ರೇಟ್, ಅರ್ಥಾತ್ ಪಾಲಿಸ್ಯಾಕರಯ್ಡ್ (ಲ್ಯಾಟಿನ್, ಸೆಲ್ಯುಲ: ಪುಟ್ಟ ಕೋಶ). ಎಲ್ಲ ಸಸ್ಯದ್ರವ್ಯದ ಸೇ. 33ರಷ್ಟಿರುವ (ಹತ್ತಿಯಲ್ಲಿ 99%, ಕಟ್ಟಿಗೆಯಲ್ಲಿ 50%) ಇದಕ್ಕೆ ನೈಸರ್ಗಿಕ ಕಾರ್ಬನಿಕ ಸಂಯುಕ್ತಗಳ ಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಅಗ್ರಸ್ಥಾನ. ಸಸ್ಯಗಳಲ್ಲಿ ಇದು ದಾರು (ವುಡ್), ಮೇದಸ್ಸು, ಗೋಂದು ಮುಂತಾದವುಗಳ ಸಂಯೋಗದಲ್ಲಿರುವುದು ಸಾಮಾನ್ಯ. ಪ್ರಾಣಿ ಊತಕಗಳಲ್ಲಿ ಸಾಮಾನ್ಯವಾಗಿ ಅಲಭ್ಯ.

ಮಾನವನಿಗಿದು ಪಚನೀಯವಲ್ಲ. ತಿಂದದ್ದನ್ನು ಪಚನಾಂಗ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಇಟ್ಟುಕೊಳ್ಳಬಲ್ಲ ಸಸ್ಯಾಹಾರಿ ಪ್ರಾಣಿಗಳಿಗೆ ಮಾತ್ರ ಪಚನೀಯ, ಕಾರಣ, ಇವುಗಳಲ್ಲಿ ಇರುವ ಸೂಕ್ಷ್ಮ ಜೀವಿಗಳು ಸೆಲ್ಯುಲೋಸನ್ನು ವಿಘಟಿಸಬಲ್ಲವು. ಗೆದ್ದಲುಗಳ ಕರುಳುವಾಸೀ ಆದಿಜೀವಿಗಳಿಗೂ (ಪ್ರೋಟೊeóÉೂೀವ) ಈ ಸಾಮಥ್ರ್ಯವಿದೆ. ಎಂದೇ, ಗೆದ್ದಲುಗಳಿಗೂ ಇದು ಪಚನೀಯ.

ಸಾಮಾನ್ಯ ದ್ರಾವಕಗಳಲ್ಲಿ ಸೆಲ್ಯುಲೋಸ್ ಲೀನಿಸುವದಿಲ್ಲ, ಸಸ್ಯದ ಇತರ ಘಟಕಗಳಿಂದ ಇದನ್ನು ಪ್ರತ್ಯೇಕಿಸುವುದು ಸುಲಭ. ಗಂಧಕಾಮ್ಲ ಸೆಲ್ಯುಲೋಸಿನೊಂದಿಗೆ ವರ್ತಿಸುತ್ತದೆ;ಅದರ ಸಾರ ಆಧರಿಸಿ ಗ್ಲೂಕೋಸಿನ ಅಥವಾ ವಿಲೇಯ ಪಿಷ್ಟದ (ಸ್ಟಾರ್ಚ್) ಉತ್ಪಾದನೆ. ಪಾರ್ಚ್‍ಮೆಂಟ್ ಕಾಗದಕ್ಕೆ ಇದರದೇ ಲೇಪ. ಸೆಲ್ಯುಲೋಸನ್ನು ಕ್ಷಾರದಿಂದ ಉಪಚರಿಸಿ ಕಾರ್ಬನ್ ಡೈ-ಸಲ್ಫೈಡಿನ ಧೂಮಕ್ಕೆ ಒಡ್ಡಿದರೆ ಲಭಿಸುವ ದ್ರಾವಣಗಳಿಂದ ರೇಯಾನ್ ಹಾಗೂ ಸೆಲ್ಲೊಫೇನ್‍ಗಳನ್ನು ತಯಾರಿಸುತ್ತಾರೆ. ನವುರಾದ ತಂತುವಾಗಿ ಎಳೆಯಬಹುದಾದ ಸೆಲ್ಯುಲೋಸ್ ಅಸಿಟೇಟುಗಳು ಕೆಲವು ಬಗೆಯ ವಸ್ತ್ರ ನೇಯ್ಗೆ, ಸುರಕ್ಷಾ ಗಾಜು ತಯಾರಿ, ಎರಕದಚ್ಚು ತಯಾರಿಗೆ ಉಪಯುಕ್ತ. ಅಂಟುಪದಾರ್ಥ, ಸಾಬೂನು ಮತ್ತು ಕೃತಕ ರಾಳ ತಯಾರಿಗೆ ಸೆಲ್ಯುಲೋಸ್ ಈಥರ್‍ಗಳು, ಜ್ವಲನಶೀಲ ಹಾಗೂ ಆಸ್ಫೋಟಕ ಗುಣವುಳ್ಳ ನೈಟ್ರೊಸೆಲ್ಯುಲೋಸ್ ತಯಾರಿಗೆ ನೈಟ್ರಿಕಾಮ್ಲ, ಗಂಧಕಾಮ್ಲ ಮತ್ತು ಸೆಲ್ಯುಲೋಸ್ ಮಿಶ್ರಣ, ಪ್ಲಾಸ್ಟಿಕ್, ಲ್ಯಾಕರ್, ಔಷಧಿ, ಕೃತಕ ಚರ್ಮ, ಕೋವಿಹತ್ತಿ (ಗನ್ ಕಾಟನ್) ಮುಂತಾದವುಗಳ ತಯಾರಿಗೆ ಸೆಲ್ಯುಲೋಸಿನ ವಿಭಿನ್ನ ನೈಟ್ರೇಟುಗಳ ಬಳಕೆ ಇದೆ. (ಎಸ್.ಎನ್.ಆರ್.)