ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಡಿಯಮ್

ವಿಕಿಸೋರ್ಸ್ದಿಂದ

ಸೋಡಿಯಮ್ ಆವರ್ತಕೋಷ್ಟಕದ 1ಎ ಗುಂಪಿನ 3ನೆಯ ಆವರ್ತದ ಮೊದಲನೆಯ ಕ್ಷಾರೀಯ ಲೋಹ ಧಾತು. ಪ್ರತೀಕ ಓಚಿ. ಪರಮಾಣು ಸಂಖ್ಯೆ 11. ಪರಮಾಣು ತೂಕ 22.99. ದ್ರವನಬಿಂದು 980 ಸೆ. ಕುದಿಬಿಂದು 8800 ಸೆ. ಸಾಪೇಕ್ಷ ಸಾಂದ್ರತೆ 0.97. ಎಲೆಕ್ಟ್ರಾನ್ ವಿನ್ಯಾಸ 1s22s22p63s1 . ವೇಲೆನ್ಸಿ 1. ಏಳು ಸಮಸ್ಥಾನಿಗಳ ಪೈಕಿ ಸೋಡಿಯಮ್-23 ಸ್ಥಿರ, ಉಳಿದವು ಕೃತಕ ವಿಕಿರಣಪಟು ಸಮಸ್ಥಾನಿಗಳು. ವಿಕಿರಣಪಟು ಸಮಸ್ಥಾನಿಗಳ ಪೈಕಿ ಸೋಡಿಯಮ್-24 (ಅರ್ಧಾಯು 15ಗಂ) ಮತ್ತು ಸೋಡಿಯಮ್-22 (ಅರ್ಧಾಯು 2.6 ವರ್ಷ) ಉಪಯುಕ್ತ.

ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಭೂಚಿಪ್ಪಿನ 2.8%ರಷ್ಟಿರುವ ಸೋಡಿಯಮಿನ ಕ್ರಮಾಂಕ 6. ಕ್ಷಾರಲೋಹಗಳ ಪೈಕಿ ಸಮೃದ್ಧ ಲಭ್ಯ. ನಿಸರ್ಗದಲ್ಲಿ ಸೋಡಿಯಮ್ ಸಂಯುಕ್ತರೂಪದಲ್ಲಿ ಮಾತ್ರ ಲಭ್ಯ. ಸಮುದ್ರನೀರಿನಲ್ಲಿ ಲೀನಿಸಿರುವ ಪದಾರ್ಥಗಳ ಪೈಕಿ ಇದರ ಸಂಯುಕ್ತ ಸೋಡಿಯಮ್ ಕ್ಲೋರೈಡಿಗೆ ಅಗ್ರಸ್ಥಾನ (80%). ಸೋಡಿಯಮ್ ಕ್ಲೋರೈಡ್ (ಕಲ್ಲುಪ್ಪು, ರಾಕ್ ಸಾಲ್ಟ್), ಕಾರ್ಬೊನೇಟ್ (ಸೋಡ), ನೈಟ್ರೇಟ್ (ಚಿಲಿ ಪೆಟ್ಲುಪ್ಪು, ಚಿಲಿ ಸಾಲ್ಟ್ ಪಿಟರ್), ಬೋರೇಟ್ (ಬೋರಾಕ್ಸ್) ಮತ್ತು ಸಲ್ಫೇಟ್ ರೂಪಗಳಲ್ಲಿಯೂ ಲಭ್ಯ. ಪ್ರಾಣಿ ಮತ್ತು ಸಸ್ಯ ಊತಕಗಳಲ್ಲಿಯೂ ಇದೆ. ಸಮುದ್ರನೀರು, ಲವಣ ಮತ್ತು ಕ್ಷಾರ ಸರೋವರಗಳು, ಖನಿಜ ಚಿಲುಮೆಗಳು ಪ್ರಧಾನ ಆಕರಗಳು. ಸೂರ್ಯ ಹಾಗೂ ಇತರ ನಕ್ಷತ್ರಗಳಲ್ಲಿ ಲೇಶಧಾತು (ಟ್ರೇಸ್ ಎಲಿಮೆಂಟ್). ವಿದ್ಯುದ್ವಿಭಜನೆ ತಂತ್ರದಿಂದ ಸೋಡಿಯಮ್ ಹೈಡ್ರಾಕ್ಸೈಡಿನಿಂದ ಧಾತು ಸೋಡಿಯಮನ್ನು ಪ್ರತ್ಯೇಕಿಸಿದ್ದು (1807) ಬ್ರಿಟಿಷ್ ರಸಾಯನವಿಜ್ಞಾನಿ ಹಂಫ್ರಿ ಡೇವಿ (1778-1829). ಸಂಲಯಿತ(ಫ್ಯೂಸ್ಡ್) ಸೋಡಿಯಮ್ ಕ್ಲೋರೈಡಿನ ವಿದ್ಯುದ್ವಿಭಜನೆ ಯಿಂದ ಈಗ ಇದರ ವಾಣಿಜ್ಯೋತ್ಪಾದನೆ.

ನೀರಿನಲ್ಲಿ ತೇಲುವ ಬೆಳ್ಳಿಬಿಳುಪಿನ ಮೃದುಲೋಹ. 0.4 ಕಾಠಿಣ್ಯಾಂಕ ವುಳ್ಳ ಧಾತು ಸೋಡಿಯಮನ್ನು ಕೊಠಡಿತಾಪದಲ್ಲಿ ಚಾಕಿನಿಂದ ಕತ್ತರಿಸಬಹುದು. ಅತಿ ಕಡಿಮೆ ತಾಪಗಳಲ್ಲಿ ಭಿದುರ. ಉತ್ತಮ ಉಷ್ಣ ಮತ್ತು ವಿದ್ಯುದ್ವಾಹಕ. ರಾಸಾಯನಿಕವಾಗಿ ಅತಿ ಪಟು ಲೋಹ. ವಾಯುವಿನಲ್ಲಿರುವ ಆಕ್ಸಿಜನ್ನಿನೊಂದಿಗೆ ಸುಲಭವಾಗಿ ವರ್ತಿಸಿ ಸನ್ನಿವೇಶಾನುಸಾರ ಸೋಡಿಯಮಿನ ಆಕ್ಸೈಡ್, ಡೈಆಕ್ಸೈಡ್ ಅಥವಾ ಪೆರಾಕ್ಸೈಡನ್ನು ರೂಪಿಸುತ್ತದೆ. ಎಂದೇ, ಇದನ್ನು ನೈಟ್ರೊಜನ್ನಿನಂಥ ಜಡಾನಿಲಗಳಲ್ಲಿ ಅಥವಾ ಕೆರೊಸಿನ್ (ಸೀಮೆ ಎಣ್ಣೆ), ನ್ಯಾಫ್ತಗಳಂಥ ಜಡದ್ರವಗಳಲ್ಲಿ ಇಡಬೇಕು.

ನೀರಿನೊಂದಿಗೆ ಸೋಡಿಯಮ್ ಬಿರುಸಾಗಿ ವರ್ತಿಸಿ ಸೋಡಿಯಮ್ ಹೈಡ್ರಾಕ್ಸೈಡ್ ಮತ್ತು ಹೈಡ್ರೊಜನ್ ರೂಪಿಸುತ್ತದೆ. ಇದು ಬಹಿರುಷ್ಣಕ ಕ್ರಿಯೆಯಾದುದರಿಂದ ಹೈಡ್ರೊಜನ್ನಿಗೆ ಬೆಂಕಿಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚು.

ಉಚ್ಚಪಟುತ್ವದ ಧಾತು ಸೋಡಿಯಮ್. ಹೆಚ್ಚುಕಡಿಮೆ ಎಲ್ಲ ಕಾರ್ಬನಿಕ ಮತ್ತು ಅಕಾರ್ಬನಿಕ ಅಯಾನುಗಳೊಂದಿಗೆ ಸಂಯೋಗವಾಗಿ ಸಂಯುಕ್ತಗಳನ್ನು ರೂಪಿಸುವುದೇ ಇದಕ್ಕೆ ಸಾಕ್ಷಿ. ಇರುವ ಒಂದು ವೇಲೆನ್ಸ್ ಎಲೆಕ್ಟ್ರಾನನ್ನು ಸುಲಭವಾಗಿ ಕಳೆದುಕೊಂಡು ಬಣ್ಣವಿಲ್ಲದ ಸೋಡಿಯಮ್ ಆಯಾನಾಗುವುದೇ (ಓಚಿ+) ಇದಕ್ಕೆ ಕಾರಣ.

ಸಾಮಾನ್ಯ ಉಪ್ಪು ಎಂದು ಪರಿಚಿತವಾಗಿರುವ ಸೋಡಿಯಮ್ ಕ್ಲೋರೈಡ್ ಇದರ ಪ್ರಮುಖ ಸಂಯುಕ್ತ. ಸೋಡಿಯಮ್ ಬೈಕಾರ್ಬೊನೇಟ್ (ಓಚಿ2ಊಅಔ3, ಅಡುಗೆ ಸೋಡ), ಸೋಡಿಯಮ್ ಕಾರ್ಬೊನೇಟ್ , (ವಾಷಿಂಗ್ ಸೋಡ) ಇತರ ಚಿರಪರಿಚಿತ ಸಂಯುಕ್ತಗಳು. ಸೋಡಿಯಮಿನ ಇತರ ಉಪಯುಕ್ತ ಸಂಯುಕ್ತಗಳು: ಸಾಬೂನು, ರೇಯಾನ್, ಕಾಗದ, ತೈಲ ಸಂಸ್ಕರಣೆ, ವಸ್ತ್ರ, ರಬ್ಬರ್ ಮುಂತಾದ ಉದ್ಯಮಗಳಲ್ಲಿ ಬಳಕೆ ಇರುವ ಸೋಡಿಯಮ್ ಹೈಡ್ರಾಕ್ಸೈಡ್ , ಕಾಸ್ಟಿಕ್ ಸೋಡ). ಪೂತಿನಾಶಕವಾಗಿ, ಇಲಿ ಹಾಗೂ ಜಿರಲೆ ವಿಷವಾಗಿ ಮತ್ತು ಸಿರ್ಯಾಮಿಕ್ಸ್ ಉದ್ಯಮದಲ್ಲಿ ಬಳಕೆ ಇರುವ ಸೋಡಿಯಮ್ ಟೆಟ್ರಬೋರೇಟ್ (ಓಚಿ2ಃ4ಔ7.10ಊ2ಔ, ಬೋರಾಕ್ಸ್). ರಾಸಾಯನಿಕ ಗೊಬ್ಬರವಾಗಿ ಮತ್ತು ಡೈನಮೈಟ್ ಘಟಕವಾಗಿ ಬಳಕೆಯಿರುವ ಸೋಡಿಯಮ್ ನೈಟ್ರೇಟ್ (ಓಚಿಓಔ3, ಚಿಲಿ ಪೆಟ್ಲುಪ್ಪು). ಚೆಲುವೆಕಾರಕ ಮತ್ತು ಉತ್ಕರ್ಷಕ ಸೋಡಿಯಮ್ ಪೆರಾಕ್ಸೈಡ್ (ಓಚಿ2ಔ2). ಫೋಟೊಗ್ರಫಿಯಲ್ಲಿ ಬಳಸುವ ಸೋಡಿಯಮ್ ತಯೋಸಲ್ಫೇಟ್ (Na2S2O3.5H2O, ಹೈಪೊ). ಕಾಗದ ಮತ್ತು ವಸ್ತ್ರೋದ್ಯಮಗಳಲ್ಲಿ ಚೆಲುವೆಕಾರಿಯಾಗಿ, ನೀರಿನ ಕ್ಲೋರಿನೀಕರಣಕ್ಕೆ ಮತ್ತು ಕೆಲವು ಪೂತಿನಾಶಕ ಹಾಗೂ ಶಿಲೀಂಧ್ರನಾಶಕ ತಯಾರಿಯಲ್ಲಿ ಉಪಯೋಗಿಸುವ ಸೋಡಿಯಮ್ ಹೈಪೊಕ್ಲೋರೈಟ್ . ಕ್ರಾಫ್ಟ್ ಕಾಗದ, ರಟ್ಟು, ಗಾಜು, ಮಾರ್ಜಕಗಳು ಮತ್ತು ಅನೇಕ ರಾಸಾಯನಿಕಗಳ ತಯಾರಿಗೆ ಬೇಕಾದ ಸೋಡಿಯಮ್ ಸಲ್ಫೇಟ್ , ಇದರ ಸ್ಫಟಿಕರೂಪವೇ ಗ್ಲಾಬರನ ಲವಣ).

ಟೆಟ್ರಈಥೈಲ್ ಸೀಸ ತಯಾರಿಯಲ್ಲಿ; ಬೈಜಿಕ ರಿಯಾಕ್ಟರ್‍ಗಳಲ್ಲಿ ಶೈತ್ಯಕಾರಕವಾಗಿ, ಅನೇಕ ರಾಸಾಯನಿಕಗಳ ಮತ್ತು ಔಷಧಿಗಳ ತಯಾರಿಯಲ್ಲಿ, ಲೋಹೋದ್ಯಮದಲ್ಲಿ, ಸೋಡಿಯಮ್ ಬಾಷ್ಪ ವಿದ್ಯುದ್ದೀಪಗಳಲ್ಲಿ ಸೋಡಿಯಮಿನ ವ್ಯಾಪಕ ಬಳಕೆ ಇದೆ. ಸೋಡಿಯಮ್ ಹಾಗೂ ಅದರ ಲವಣಗಳನ್ನು ಜ್ವಾಲೆಗೆ ಒಡ್ಡಿದಾಗ ಉಂಟಾಗುವ ಹಳದಿಬಣ್ಣದಿಂದಾಗಿ ಸೋಡಿಯಮ್ ಇರುವಿಕೆಯನ್ನು ಪತ್ತೆಹಚ್ಚುವುದು ಸುಲಭ. (ಆರ್.ಎಸ್.)