ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಮೆಮರ

ವಿಕಿಸೋರ್ಸ್ದಿಂದ

ಸೋಮೆಮರ ಮೀಲಿಯೇಸೀ ಕುಟುಂಬದ ಸೊಯಿಮಿಡಾ ಫೆಬ್ರಿಪ್ಯೂಗ ಪ್ರಭೇದದ ನೇರ ಕಾಂಡದ ಮರ. ಎಲೆ 3 ರಿಂದ 6 ಉಪಪರ್ಣಗಳನ್ನೊಳಗೊಂಡ ಸಂಯುಕ್ತ ಮಾದರಿಯದು. ಬಂಜರು ಪ್ರದೇಶಗಳಲ್ಲಿಯೂ ಸುಣ್ಣಕಲ್ಲಿನ ಮಣ್ಣುಗಳಲ್ಲಿಯೂ ಜಂಬೆ ಮತ್ತು ಕರಲು ಮಣ್ಣಿನ ಜಾಗಗಳಲ್ಲಿಯೂ ಶುಷ್ಕತೆಯಿರುವ ಕಾಡುಗಳಲ್ಲಿಯೂ ಈ ಮರ ಬೆಳೆಯಬಲ್ಲದು. ಶುಷ್ಕತೆ ಮತ್ತು ಬೆಂಕಿಯ ಹಾನಿಯನ್ನು ತಕ್ಕಷ್ಟು ತಡೆಯಬಲ್ಲದು. ಸ್ವಾಭಾವಿಕ ಪುನರುತ್ಪತ್ತಿ ಅಲ್ಲಲ್ಲಿ ಕಂಡುಬಂದು, ಬೇರು ಸಸಿಗಳೂ ಸಾಮಾನ್ಯವಾಗಿರುತ್ತವೆ. ತೊಗಟೆಯಿಂದ ಅಂಟೂ ಕೆಂಪುನಾರೂ ಒದಗುವುವು. ತೊಗಟೆ ಚರ್ಮ ಹದ ಮಾಡಲೂ ಔಷಧಿಗೂ ಉಪಯುಕ್ತ.

ಚೌಬೀನೆ ಮನೆಕಟ್ಟಡಗಳಿಗೆ, ಅಂದವಾದ ಪೀಠೋಪಕರಣಗಳಿಗೆ ಕೆತ್ತನೆ ಕೆಲಸಗಳಿಗೆ, ಒನಕೆ ತಯಾರಿಕೆ ಇತ್ಯಾದಿಗಳಿಗೆ ಒದಗುತ್ತದೆ. (ಎ.ಕೆ.ಎಸ್.)